Advertisement

ಇನ್ನೊಂದು ವರ್ಷದಲ್ಲಿ ಉತ್ತುಂಗ ಸ್ಥಾನಕ್ಕೇರುವೆ: ರೆಡ್ಡಿ

01:15 AM Jan 20, 2019 | Team Udayavani |

ಬಾಗಲಕೋಟೆ: “ನಾನು ಜೀವನದಲ್ಲಿ ಹಣ, ಅಧಿಕಾರ,ಅಂತಸ್ತು ಎಲ್ಲವನ್ನೂ ನೋಡಿದ್ದೇನೆ. ಜೀವನದಲ್ಲಿ ಅತ್ಯಂತ ಕೆಟ್ಟ ದಿನಗಳನ್ನೂ ಅನುಭವಿಸಿದ್ದೇನೆ. ನನಗೆ ರಾಜಕೀಯ ಒಂದೇ ಮುಖ್ಯವಲ್ಲ. ನಾನು ಇನ್ನು ಮುಂದೆ ಸಮಾಜಕ್ಕಾಗಿ ಬದುಕಬೇಕೆಂದು ನಿರ್ಧರಿಸಿದ್ದೇನೆ. ನನಗೂ ಒಳ್ಳೆಯ ಕಾಲ ಬರುತ್ತದೆ. ರಾಜಕೀಯ ಉತ್ತುಂಗ ಸ್ಥಾನಕ್ಕೇರಲು ನನಗೆ ಬಹಳ ಸಮಯ ಬೇಡ. ಒಂದು ವರ್ಷ ಸಾಕು’ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದರು.

Advertisement

ತಾಲೂಕಿನ ಸಂಗಮ ಕ್ರಾಸ್‌ನಲ್ಲಿ ನಡೆದ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, “ನನ್ನ ಜೀವನದಲ್ಲಿ ಕಾರು, ಹೆಲಿಕಾಪ್ಟರ್‌, ವಿಮಾನ, ಹಣ, ಅಧಿಕಾರ ಎಲ್ಲವನ್ನೂ ಅನುಭವಿಸಿದ್ದೇನೆ. ಇನ್ನು ಜೀವನದ ಮುಂದಿನ ದಿನಗಳಲ್ಲಿ ಸಮಾಜಕ್ಕೆ ದುಡಿಯುವ ಸಂಕಲ್ಪ ಮಾಡಿದ್ದೇನೆ. ಹಿಂದೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ನಾನೊಬ್ಬ ರೆಡ್ಡಿಯಾಗಿ ಕೆಲಸ ಮಾಡಿದ್ದೆ. ರಾಜಕೀಯದಲ್ಲಿ ಉನ್ನತ ಸ್ಥಾನ ಪಡೆಯಲು ಬಹಳ ವರ್ಷ ಬೇಕಾಗಿಲ್ಲ. ಕೇವಲ ಒಂದು ವರ್ಷದಲ್ಲಿ ಅದನ್ನು ಪಡೆಯಬಹುದು. ಆದರೆ, ಅದಕ್ಕಾಗಿ ಹಂಬಲಿಸದೆ ಸಮಾಜ ಕೆಲಸಕ್ಕಾಗಿ ದುಡಿಯುತ್ತೇನೆ. ನನಗೂ ಒಂದು ಕಾಲ ಬರುತ್ತದೆ. ಮುಂದೆ ತಾನಾಗಿಯೇ ಉತ್ತುಂಗದ ಸ್ಥಾನ ದೊರೆಯಲಿದೆ’ ಎಂದರು.

ಹರಕೆ ತೀರಿಸಿದ ರೆಡ್ಡಿ: ರೆಡ್ಡಿಯವರು 12 ವರ್ಷಗಳ ಬಳಿಕ ದಂಪತಿ ಸಮೇತ ಬಾಗಲಕೋಟೆಗೆ ಆಗಮಿಸಿ ಹರಕೆ ತೀರಿಸಿದರು. ತಾಲೂಕಿನ ಬೆನಕಟ್ಟಿ ಗ್ರಾಮ (ರೆಡ್ಡಿ ಸಮಾಜ ಬಾಂಧವರೇ ಹೆಚ್ಚಿರುವ ಗ್ರಾಮ)ದಲ್ಲಿ 1969ರಿಂದಲೂ ವೇಮನ ಜಯಂತಿ ಆಚರಿಸುತ್ತಿದ್ದು, ಈ ಗ್ರಾಮದಲ್ಲಿ ವೇಮನರ ಸುಂದರ ದೇವಸ್ಥಾನವೂ ಇದೆ. ಈ ದೇವಸ್ಥಾನದ ಜಾತ್ರೆ, ವೇಮನ ಜಯಂತಿ ಕಾರ್ಯಕ್ರಮಕ್ಕೆ ಪ್ರತಿ ವರ್ಷವೂ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಆಹ್ವಾನ ನೀಡಲಾಗುತ್ತಿತ್ತು. ಆದರೆ, ಹಲವು ಕಾರಣಗಳಿಂದ ಅವರಿಗೆ ಆಗಮಿಸಲು ಆಗಿರಲಿಲ್ಲ. ಶನಿವಾರ, ಜನಾರ್ದನ ರೆಡ್ಡಿ ಮತ್ತು ಪತ್ನಿ ಅರುಣಾಲಕ್ಷ್ಮಿ ಅವರೊಂದಿಗೆ ಆಗಮಿಸಿ, 9 ಕಿ.ಮೀ.ವರೆಗೆ ಪಾದಯಾತ್ರೆ ನಡೆಸಿದರು. ಬಳಿಕ ವೇಮನ ರಥೋತ್ಸವ ಕೂಡ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next