Advertisement

ನಾಡಿದ್ದು ಐಟಿ ವಿಚಾರಣೆಗೆ ಹಾಜರಾಗುವೆ

10:56 PM Oct 12, 2019 | Lakshmi GovindaRaju |

ಬೆಂಗಳೂರು: ಐಟಿ ಅಧಿಕಾರಿಗಳು ಎಲ್ಲೆಡೆ ಪರಿಶೀಲನೆ ನಡೆಸಿದ್ದು, ಮಂಗಳವಾರ ವಿಚಾರಣೆಗೆ ಕರೆದಿದ್ದಾರೆ. ವಿಚಾರಣೆಗೆ ಹಾಜರಾಗಿ ಸೂಕ್ತ ದಾಖಲೆಗಳನ್ನು ಒದಗಿಸುತ್ತೇನೆಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಸ್ಪಷ್ಟಪಡಿಸಿದ್ದಾರೆ. ಸದಾಶಿವನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೆಲವು ಮಾಧ್ಯಮದಲ್ಲಿ 3,500 ಕೋಟಿ ರೂ. ಕಿಕ್‌ಬ್ಯಾಕ್‌ ತೆಗೆದುಕೊಂಡಿದ್ದಾರೆ. 400 ಕೋಟಿ ರೂ. ನಗದು ಸಿಕ್ಕಿದೆ ಎಂದು ಪ್ರಸಾರ ಮಾಡಿದ್ದಾರೆ. ಇದು ಸಂಪೂರ್ಣ ಆಧಾರರಹಿತ ವಾದದ್ದು. ಮಾಧ್ಯಮಗಳು ಸುದ್ದಿ ಪ್ರಸಾರ ಮಾಡುವ ಮೊದಲು ಸತ್ಯಾಸತ್ಯತೆ ಅರಿಯಬೇಕು ಎಂದು ಹೇಳಿದರು.

Advertisement

“ಐಟಿ ಅಧಿಕಾರಿಗಳು ಮನೆ ಸೇರಿ ಕಾಲೇಜಿನಲ್ಲಿ ಪರಿಶೀಲನೆ ನಡೆಸಿದ್ದಾರೆ. ಅದಕ್ಕೆ ಸೂಕ್ತ ದಾಖಲಾತಿಯನ್ನು ನೀಡಿದ್ದೇನೆ. ಬಳಿಕ ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ನೀಡಿದ್ದೇನೆ. ವೈದ್ಯಕೀಯ ಸೀಟು ಹಂಚಿಕೆ ನೀಟ್‌ ಮೂಲಕ ಆಗಲಿದೆ. ನಾನು ಮೂವತ್ತು ವರ್ಷ ಕಾಲೇಜು ಮಂಡಳಿಯಲ್ಲಿ ಸದಸ್ಯನಿದ್ದರೂ ಹೆಚ್ಚಾಗಿ ಕಾಲೇಜಿನ ಕಾರ್ಯ ಚಟುವಟಿಕೆಯಲ್ಲಿ ಭಾಗಿಯಾಗುತ್ತಿರಲಿಲ್ಲ. ನನ್ನ ಸಹೋದರನ ನಿಧನದ ಬಳಿಕ ಜವಾಬ್ದಾರಿ ನನ್ನ ಮೇಲಿದೆ. ದಾಖಲಾತಿ ವಿಷಯದಲ್ಲಿ ನನಗೆ ಹೆಚ್ಚು ಮಾಹಿತಿ ಇರಲಿಲ್ಲ. ಸಹೋದರನ ಮಗ ಆನಂದ್‌ ಕೂಡ ಇರುತ್ತಿದ್ದರು. ದಾಖಲಾತಿ ವಿಷಯದಲ್ಲಿ ನೇರ ಹೊಣೆಗಾರಿಕೆ ಇರಲಿಲ್ಲ’ ಎಂದರು.

“ಐಟಿ ದಾಳಿ ವಿಷಯಕ್ಕೆ ರಾಜಕೀಯ ಲೇಪ ಬಳಿ ಯುವುದಿಲ್ಲ. ಮೊದಲು ಅಧಿಕಾರಿಗಳಿಗೆ ಉತ್ತರ ನೀಡುವೆ. ಕೆಲವು ವಿದ್ಯಾರ್ಥಿಗಳ ದೂರಿನ ಆಧಾರದ ಮೇಲೆ ಪರಿಶೀಲನೆ ನಡೆಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ನಾನು ಸಂಪೂರ್ಣ ರಾಜಕೀಯದಲ್ಲಿ ತೊಡಗಿದ್ದರಿಂದ ಕಾಲೇಜು ಮಂಡಳಿ ಕಡೆ ಹೆಚ್ಚು ಗಮನ ನೀಡಿರಲಿಲ್ಲ. ಮಂಗಳವಾರ ವಿಚಾರಣೆಗೆ ಹಾಜರಾಗಿ ಎಲ್ಲದಕ್ಕೂ ಉತ್ತರ ನೀಡುತ್ತೇನೆ’ ಎಂದು ಹೇಳಿದರು.

ಐಟಿ ದಾಳಿ ಮುಕ್ತಾಯ
ಬೆಂಗಳೂರು: ವೈದ್ಯಕೀಯ ಸೀಟು ಬ್ಲಾಕಿಂಗ್‌ ಅಕ್ರಮ ಸಂಬಂಧ ಮೂರು ದಿನಗಳಿಂದ ಮಾಜಿ ಡಿಸಿಎಂ ಪರಮೇಶ್ವರ್‌ ಮತ್ತು ಮಾಜಿ ಸಚಿವ ಆರ್‌.ಎಲ್‌.ಜಾಲಪ್ಪ ಅವರ ನಿವಾಸ ಹಾಗೂ ಶಿಕ್ಷಣ ಸಂಸ್ಥೆಗಳ ಮೇಲೆ ನಡೆಸುತ್ತಿದ್ದ ದಾಳಿಯನ್ನು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಶನಿವಾರ ಮುಕ್ತಾಯಗೊಳಿಸಿದ್ದಾರೆ.

ಈ ಮಧ್ಯೆ, ಪತ್ತೆಯಾದ 100 ಕೋಟಿ ರೂ.ಅಘೋಷಿತ ಆಸ್ತಿ ಕುರಿತು ಇಬ್ಬರು ನಾಯಕರೂ ದಾಖಲೆಗಳನ್ನು ಸಲ್ಲಿಸುವಲ್ಲಿ ವಿಫ‌ಲರಾಗಿದ್ದು, ಅ.15ರಂದು ವಿಚಾರಣೆಗೆ ಹಾಜರಾಗುವಂತೆ ಐಟಿ ನೋಟಿಸ್‌ ಜಾರಿ ಮಾಡಿದೆ. ಸದಾಶಿವನಗರದಲ್ಲಿರುವ ಪರ ಮೇಶ್ವರ್‌ ಮನೆಯಲ್ಲಿ ಐಟಿ ಅಧಿಕಾರಿಗಳು ಶನಿವಾರ ನಸುಕಿನ ಜಾವ ನಾಲ್ಕು ಗಂಟೆ ವರೆಗೆ ಪರಿಶೀಲನೆ ನಡೆಸಿ, ದಾಳಿ ಮುಕ್ತಾಯಗೊಳಿಸಿದರು. ದಾಳಿ ವೇಳೆ ಪತ್ತೆಯಾದ ದಾಖಲೆಗಳ ಬಗ್ಗೆ ಪರಮೇಶ್ವರ್‌ ಮನೆಯಲ್ಲಿಯೇ ಅವರಿಂದ ಹೇಳಿಕೆ ಪಡೆದಿದ್ದಾರೆ.

Advertisement

ಹೇಳಿಕೆ ವೇಳೆ ಪತ್ತೆಯಾದ ಅಘೋಷಿತ ಆಸ್ತಿ ಬಗ್ಗೆ ಪರಮೇಶ್ವರ್‌ ಗೊಂದಲದ ಹೇಳಿಕೆ ನೀಡಿದ್ದರು. ಜಾಲಪ್ಪ ಅವರ ಪುತ್ರ ರಾಜೇಂದ್ರ ಕೂಡ ಸಮಂಜಸ ಹೇಳಿಕೆ ನೀಡಿಲ್ಲ. ಹೀಗಾಗಿ ಸೂಕ್ತ ದಾಖಲೆಗಳೊಂದಿಗೆ ಅ.15ರಂದು ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತರಾತುರಿಯಲ್ಲಿ ತೆರಳಿದರು: ನಸುಕಿನ 4 ಗಂಟೆಯಲ್ಲಿ ತಮ್ಮ ದಾಳಿಯನ್ನು ಮುಕ್ತಾಯ ಗೊಳಿಸಿದರಾದರೂ ಬಳಿಕ 10 ಗಂಟೆಯಿಂದ ಮತ್ತೆ ಶೋಧ ಕಾರ್ಯ ಆರಂಭಿಸಿದ್ದರು. ಈ ಮಧ್ಯೆ, ರಮೇಶ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಸುದ್ದಿ ಹರಡುತ್ತಿದ್ದಂತೆ ಸುರಕ್ಷತೆ ದೃಷ್ಟಿಯಿಂದ ತಮ್ಮ ಕಾರುಗಳನ್ನು ಕರೆಸಿಕೊಂಡು, ದಾಖಲೆಗಳ ಸಮೇತ ದಾಳಿ ಸ್ಥಳದಿಂದ ತೆರಳಿದ್ದಾರೆ. ರಮೇಶ್‌ ಆತ್ಮಹತ್ಯೆ ಬೆನ್ನಲ್ಲೇ ಮುನ್ನೆಚ್ಚರಿಕಾ ಕ್ರಮವಾಗಿ ಆದಾಯ ತೆರಿಗೆ ಇಲಾಖೆ, ಕೆಲ ಐಟಿ ಅಧಿಕಾರಿಗಳ ನಿವಾಸಗಳಿಗೆ ಪೊಲೀಸ್‌ ಭದ್ರತೆ ಒದಗಿಸಲಾಗಿದೆ.

ಯಾರು ತಪ್ಪು ಮಾಡಿಲ್ಲ ಹೇಳಿ?: ರಾಜಣ್ಣ
ತುಮಕೂರು: ಮೆಡಿಕಲ್‌ ಕಾಲೇಜು ಇರುವವರು ಯಾರು ತಪ್ಪು ಮಾಡಿಲ್ಲ ಹೇಳಿ, ಎಲ್ಲಾ ಮಹಾಶಯರೂ ಒಂದಲ್ಲಾ ಒಂದು ರೀತಿ ತಪ್ಪು ಮಾಡಿದ್ದಾರೆ. ಸ್ವಾಮೀಜಿಗಳು ತಪ್ಪು ಮಾಡಿಲ್ಲವೇ?. ಗ್ರಹಚಾರ ಕೆಟ್ಟಾಗ ಎಲ್ಲವೂ ಬರುತ್ತದೆ. ನನ್ನ ಮೇಲೂ ದಾಳಿ ನಡೆಸಬಹುದು, ನಡೆಸಲಿ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌.ರಾಜಣ್ಣ ತಿಳಿಸಿ ದ್ದಾರೆ. ಸುದ್ದಿಗಾರರ ಜತೆ ಮಾತನಾಡಿ, “ನನಗೆ ಇ.ಡಿ. ಬರುವಂತೆ ಸೂಚಿಸಿತ್ತು, ನಾನು ಹೋಗಿದ್ದೆ. ಮತ್ತೆ ದಾಖಲೆಗಳೊಂದಿಗೆ ಬರಲು ತಿಳಿಸಿದ್ದಾರೆ. ಅ.15 ಅಥವಾ 16 ರಂದು ಹೋಗುತ್ತೇನೆ. ಮಾಧ್ಯಮಗಳಲ್ಲಿ ಬಂದಿರುವಂತೆ ಶಾಸಕಿ ಲಕ್ಷ್ಮೀ ಹೆಬ್ಟಾಳ್ಕರ್‌ಗೆ 300-400 ಕೋಟಿ ರೂ.ಸಾಲ ನೀಡಿಲ್ಲ. ಎಲ್ಲಾ ಬ್ಯಾಂಕುಗಳು ಸೇರಿ 215 ಕೋಟಿ ರೂ.ಗಳನ್ನು ಸಾಲವಾಗಿ ನೀಡಿದ್ದೇವೆ, ಅವರೂ ಸಾಲವನ್ನು ಕಟ್ಟುತ್ತಿದ್ದಾರೆ ಎಂದರು.

ಐಟಿ ದಾಳಿಗೆ ಖಂಡನೆ: ಪ್ರತಿಭಟನೆ
ಬೆಂಗಳೂರು: ಡಾ.ಜಿ.ಪರಮೇಶ್ವರ್‌ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಆರ್‌.ಎಲ್‌.ಜಾಲಪ್ಪ ಹಾಗೂ ಅವರ ಕುಟುಂಬ ಸದಸ್ಯರ ಮನೆಗಳ ಮೇಲಿನ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಖಂಡಿಸಿ ಶನಿವಾರ ರಾಜ್ಯದ ವಿವಿಧೆಡೆ ಪ್ರತಿಭಟನೆಗಳು ನಡೆದವು. ಕಾಂಗ್ರೆಸ್‌ ಹಾಗೂ ದಲಿತ ಸಂಘಟನೆಯ ಕಾರ್ಯಕರ್ತರು ಮಂಡ್ಯ ಜಿಲ್ಲೆ ಕೆ.ಆರ್‌.ಪೇಟೆಯ ಪ್ರವಾಸಿ ಮಂದಿರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಮದ್ದೂರಿನಲ್ಲಿ ಸಾರಿಗೆ ಸಂಸ್ಥೆ ಬಸ್‌ ನಿಲ್ದಾಣದ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು, ಮೈಸೂರು- ಬೆಂಗಳೂರು ಹೆದ್ದಾರಿ ತಡೆದು, ಆಕ್ರೋಶ ವ್ಯಕ್ತಪಡಿಸಿದರು.

ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ನಡೆದ ಹೆದ್ದಾರಿ ತಡೆಯಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡು ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಪರಮೇಶ್ವರ್‌ ಸ್ವಕ್ಷೇತ್ರವಾದ ತುಮಕೂರು ಜಿಲ್ಲೆ ತುರುವೆಕೆರೆಯಲ್ಲಿ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು, ಮುಖಂಡರು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತುಮಕೂರಿನಲ್ಲಿಯೂ ಕಾಂಗ್ರೆಸ್‌ ಕಾರ್ಯಕರ್ತರು, ರಸ್ತೆ ತಡೆದು, ಪ್ರತಿಭಟನೆ ನಡೆಸಿದರು. ಇದೇ ವೇಳೆ, ಕುಣಿಗಲ್‌, ನೆಲಮಂಗಲ ಸೇರಿ ಇತರೆಡೆಯೂ ಪ್ರತಿಭಟನೆಗಳು ನಡೆದಿವೆ.

ಹೆಜ್ಜೆನು ದಾಳಿ: ತುರುವೆಕೆರೆಯಲ್ಲಿ ಪ್ರತಿಭಟನೆ ನಡೆಸಿ, ತಹಶೀಲ್ದಾರ್‌ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸುವ ವೇಳೆ, ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ಹೆಜ್ಜೆನು ದಾಳಿ ನಡೆಸಿತು. ಇದರಿಂದ ಭಯಗೊಂಡು ನೂರಾರು ಕಾರ್ಯಕರ್ತರು, ಪೊಲೀಸರು ಮತ್ತು ಪತ್ರಕರ್ತರು ಚೆಲ್ಲಾಪಿಲ್ಲಿಯಾಗಿ ಪ್ರತಿಭಟನಾ ಸ್ಥಳದಿಂದ ಓಡಿ ಹೋದರು.

Advertisement

Udayavani is now on Telegram. Click here to join our channel and stay updated with the latest news.

Next