ಶಿರಸಿ: ಚುನಾವಣೆ ಸಮೀಪ ಆಗುತ್ತಿರುವದರಿಂದ ಇನ್ನು ಮುಂದೆ ಪಕ್ಷದ ಸಭೆ ಸಮಾರಂಭದಲ್ಲಿ ಪಾಲ್ಗೊಳ್ಳುವದಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ಸೋಮವಾರ ಸುದ್ದಿಗಾರರ ಜೊತೆ ಅನೌಪಚಾರಿಕವಾಗಿ ಮಾತನಾಡಿ, ಈವರೆಗೆ ಹಾಗೂ ಮುಂದಿನ ವಿಧಾನ ಸಭೆಯ ಅಸ್ತಿತ್ವದ ತನಕ ಸ್ಪೀಕರ್ ಜವಬ್ದಾರಿ ನಿರ್ವಹಿಸಬೇಕು. ಆದರೆ, ಚುನಾವಣೆ ಬಂದ ಕಾರಣದಿಂದ ಎಲ್ಲ ಹಿರಿಯರ ಹಾಗೂ ಸಂವಿಧಾನದ ತಜ್ಞರ, ಎಲ್ಲ ಹಿರಿಯ ಜನಪ್ರತಿನಿಧಿಗಳ ಜೊತೆ ಮಾತುಕತೆ ನಡೆಸಿ ವಿಧಾನ ಮಂಡಳದ ಕೊನೇಯ ಅಧಿವೇಶನ ಮುಗಿದ ಬಳಿಕ ಚುನಾವಣೆ ಅಖಾಡದ ಸಿದ್ಧತೆ ಮಾಡಿಕೊಳ್ಳುವ ಬಗ್ಗೆ ಮಾತನಾಡಿದ್ದೆ. ಈಗ ಆ ಕಾಲ ಸಮೀಪವಾಗಿದೆ ಎಂದರು.
ಪಕ್ಷಾತೀತವಾಗಿ ಸ್ಪೀಕರ್ ಕಾರ್ಯ ಪೂರ್ಣಗೊಳಿಸಿದ್ದೇನೆ.ಇನ್ನು ಕಾರ್ಯಾಲಯದ ಸಿಬಂದಿ ಸಂಬಳದಿಂದ ಹಿಡಿದು ಉಳಿದ ಜವಬ್ದಾರಿ ಇವೆ. ಅವನ್ನು ಮುಂದಿನ ಜವಬ್ದಾರಿ ತನಕ ನಿಭಾಯಿಸುವೆ. ಆದರೆ, ಪಕ್ಷದ ಸಭೆಗಳಲ್ಲಿ ಭಾಗವಹಿಸುವದಾಗಿ ತಿಳಿಸಿದರು.
ಶಿರಸಿ-ಸಿದ್ದಾಪುರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವಲ್ಲಿ ಗೊಂದಲ ಬೇಡ ಎಂದೂ ಹೇಳಿದ ಕಾಗೇರಿ, ಕ್ಷೇತ್ರದ ಮತದಾರರ ಒಡನಾಟ ಇದೆ. ಆದರೆ, ಪಕ್ಷದ ರ‍್ಯಾಲಿ, ಸಭೆ ಹಾಗೂ ಇತರ ಸಂದರ್ಭದಲ್ಲಿ ಭಾಗವಹಿಸಲು ಆಗಿರಲಿಲ್ಲ ಎಂದೂ ಹೇಳಿದರು.