Advertisement

ಮಾಜಿ ಪಿಎಂಗಳಿಗೆ ಸರಕಾರಿ ಬಂಗಲೆ ಕಷ್ಟ

10:20 AM Jan 08, 2018 | Karthik A |

ಹೊಸದಿಲ್ಲಿ: ಮಾಜಿ ಪ್ರಧಾನ ಮಂತ್ರಿಗಳಾದ ಎಚ್‌.ಡಿ.ದೇವೇಗೌಡ, ಎ.ಬಿ. ವಾಜಪೇಯಿ, ಡಾ| ಮನಮೋಹನ್‌ ಸಿಂಗ್‌, ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರಿಗೆ ಹೊಸ ದಿಲ್ಲಿಯ ಲ್ಯೂಟೆನ್ಸ್‌ ಪ್ರದೇಶದಲ್ಲಿ ನೀಡಲಾಗಿರುವ ಬಂಗಲೆಗಳನ್ನು ತೆರವುಗೊಳಿಸಬೇಕಾದ ದಿನಗಳು ಬರಲಿವೆಯೇ? ಮಾಜಿ ಅಟಾರ್ನಿ ಜನರಲ್‌ ಗೋಪಾಲ ಸುಬ್ರಹ್ಮಣ್ಯಂರ ಶಿಫಾರಸುಗಳನ್ನು ಸುಪ್ರೀಂಕೋರ್ಟ್‌ ಒಪ್ಪಿದ್ದೇ ಆದರೆ ಇಂಥ ಬೆಳವಣಿಗೆ ನಡೆಯಲಿದೆ. ಅದಕ್ಕೂ ಒಂದು ಕಾರಣವಿದೆ.

Advertisement

‘ಲೋಕ ಪ್ರಹಾರಿ’ ಎಂಬ ಎನ್‌ಜಿಒ ಉತ್ತರ ಪ್ರದೇಶ ಸರಕಾರ ಮಾಜಿ ಮುಖ್ಯಮಂತ್ರಿಗಳ ವಾಸ್ತವ್ಯಕ್ಕೆ ಬಂಗಲೆ ನೀಡಿದ್ದನ್ನು ಪ್ರಶ್ನಿಸಿ ಕಳೆದ ವರ್ಷದ ಆ.23ರಂದು ಮೊಕದ್ದಮೆ ಹೂಡಿತ್ತು. ನ್ಯಾಯಮೂರ್ತಿಗಳಾದ ರಂಜನ್‌ ಗೊಗೊಯ್‌ ಮತ್ತು ನವೀನ್‌ ಸಿನ್ಹಾ ನೇತೃತ್ವದ ಪೀಠ ಅದನ್ನು ಪರಿಶೀಲಿಸಿ “ಈ ಅರ್ಜಿಯಲ್ಲಿ ಸಲ್ಲಿಸಲಾಗಿರುವ ಅಂಶ ಪ್ರಮುಖವಾಗಿದೆ. ವಿವಿಧ ರಾಜ್ಯ ಮತ್ತು ಕೇಂದ್ರ ಸರಕಾರಗಳ ವ್ಯಾಪ್ತಿಯಲ್ಲಿ ಇದೇ ಮಾದರಿಯ ಕಾನೂನುಗಳು ಇವೆ. ಹೀಗಾಗಿ ಈ ಬಗ್ಗೆ ಅಧ್ಯಯನ ಅಗತ್ಯ’ ಎಂದು ಅಭಿಪ್ರಾಯಪಟ್ಟಿತ್ತು.

ಅದಕ್ಕೆ ಸಂಬಂಧಿಸಿದ ಕಾನೂನುಗಳ ಅಧ್ಯಯನಕ್ಕಾಗಿ ಮಾಜಿ ಸಾಲಿಸಿಟರ್‌ ಜನರಲ್‌ ಗೋಪಾಲ ಸುಬ್ರಹ್ಮಣ್ಯಂ ಅವರನ್ನು ಅಮಿಕಸ್‌ ಕ್ಯೂರಿಯನ್ನಾಗಿ ನೇಮಿಸಿತ್ತು. ಎಲ್ಲ ವಿಷಯಗಳನ್ನು ಪರಿಶೀಲಿಸಿದ ಸುಬ್ರಹ್ಮಣ್ಯಂ “ಸಾಂವಿಧಾನಿಕ ಹುದ್ದೆ (ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ)ಗಳಿಂದ ಹೊರಬಂದ ಬಳಿಕ ಅಂಥವರೂ ಸಾಮಾನ್ಯ ಜನರಂತೆ ಆಗುತ್ತಾರೆ. ಹೀಗಾಗಿ ಅವರಿಗೆ ಸರಕಾರಿ ವಸತಿ ವ್ಯವಸ್ಥೆಯ ಅಗತ್ಯವಿರುವುದಿಲ್ಲ. ಪಿಂಚಣಿ ಮತ್ತು ಇತರ ಸೌಲಭ್ಯಗಳು ಇದರಿಂದ ಹೊರತಾಗಿರುತ್ತವೆ’ ಎಂದು ಅಭಿಪ್ರಾಯಪಟ್ಟಿದ್ದರು. ಇವರ ವಾದವನ್ನು ಕೋರ್ಟ್‌ ಒಪ್ಪಿದರೆ, ಮಾಜಿ ಪ್ರಧಾನಿ, ರಾಷ್ಟ್ರಪತಿಗಳು ತಮ್ಮ ಬಂಗಲೆಗಳನ್ನು ತೆರವುಗೊಳಿಸಬೇಕಾಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next