ಜೈಪುರ: ರಾಜಸ್ಥಾನದಲ್ಲಿ ಈ ವರ್ಷ ವಿಧಾನಸಭೆಯ ಚುನಾವಣೆ ನಡೆಯಲಿದ್ದು, ಆಂತರಿಕವಾಗಿ ಎರಡು ಬಣಗಳಾಗಿ ವಿಭಜನೆಗೊಂಡಿರುವ ಕಾಂಗ್ರೆಸ್ ಎರಡು ಅಲುಗಿನ ಕತ್ತಿಯ ಮೇಲೆ ನಡೆಯುತ್ತಿದೆ. ಒಂದು ಸಚಿನ್ ಪೈಲಟ್ ನೇತೃತ್ವ ಮತ್ತು ಇನ್ನೊಂದು ಹಾಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದಲ್ಲಿ ಕಾಂಗ್ರೆಸ್ ಚುನಾವಣೆ ಎದುರಿಸುತ್ತಿದೆ. ಸಚಿನ್ ಪೈಲಟ್ ಮುಖ್ಯಮಂತ್ರಿ ಸ್ಥಾನಕ್ಕೆ ಕಣ್ಣಿಟ್ಟಿದ್ದಾರೆ ಎಂದು ಹೇಳಲಾಗಿದ್ದರೂ, ಗೆಹ್ಲೋಟ್ ಅವರು ಪೈಲಟ್ ಗೆ ದಾರಿ ಮಾಡಿಕೊಡುತ್ತಾರೆಯೇ ಎಂಬುದು ಪ್ರಶ್ನೆಯಾಗಿದೆ.
ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಇತ್ತೀಚೆಗೆ ಚುನಾವಣೆಗೆ ಮುನ್ನ ಜನಪ್ರಿಯ ಬಜೆಟ್ ಮಂಡಿಸಿದರು, ಟಿವಿ ಸಂದರ್ಶನವೊಂದರಲ್ಲಿ ತಮ್ಮ ನಿವೃತ್ತಿಯ ಬಗ್ಗೆ ಮಾತನಾಡಿದರು.
ಸಂದರ್ಶನದಲ್ಲಿ ಗೆಹ್ಲೋಟ್ ಅವರು ತಮ್ಮ ಕೊನೆಯ ಉಸಿರು ಇರುವವರೆಗೂ ರಾಜಕೀಯದಿಂದ ನಿವೃತ್ತಿ ಹೊಂದುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಪರ ಕೆಲಸ ಮಾಡುತ್ತೇನೆ ಮತ್ತು ವಿಧಾನಸಭಾ ಚುನಾವಣೆಯಲ್ಲೂ ಸ್ಪರ್ಧಿಸುತ್ತೇನೆ ಎಂದು ಗೆಹ್ಲೋಟ್ ಹೇಳಿದ್ದಾರೆ.
20 ನೇ ವಯಸ್ಸಿನಲ್ಲಿ ರಾಜಕೀಯಕ್ಕೆ ಸೇರಿದರು. ಎನ್ಎಸ್ ಯುಐ ನೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿ ಈಗ 50 ವರ್ಷಗಳ ಅನುಭವವನ್ನು ಹೊಂದಿದ್ದಾರೆ ಎಂದು ಗೆಹ್ಲೋಟ್ ಹೇಳಿದರು. ಈ ಅವಧಿಯಲ್ಲಿ ಅವರು ಮೂರು ಬಾರಿ ರಾಜಸ್ಥಾನದ ಮುಖ್ಯಮಂತ್ರಿಯಾದರು. ಅವರನ್ನು ಮುಖ್ಯಮಂತ್ರಿ ಮಾಡುವ ಮುನ್ನ ಪಕ್ಷದ ಹೈಕಮಾಂಡ್ ಯೋಚಿಸಿರಬೇಕು ಎಂದರು. ಇಂದಿರಾ ಗಾಂಧಿಯಾಗಲಿ, ರಾಜೀವ್ ಗಾಂಧಿಯಾಗಲಿ, ಈಗ ಸೋನಿಯಾ ಗಾಂಧಿಯಾಗಲಿ ಎಲ್ಲರೂ ಅವಕಾಶ ಕೊಟ್ಟಿದ್ದಾರೆ ಎಂದರು.