Advertisement
ದಟ್ಟ ಕಾಡಿಗೆ ಹೋದ ಅನುಭವ: ಅರಣ್ಯ ಇಲಾಖೆ ತೆರೆದಿರುವ ಮಳಿಗೆಯ ಒಳಗೆ ಕಾಲಿಟ್ಟೊಡನೆ ವನ್ಯಜೀವಿಗಳ ಸಂರಕ್ಷಣೆಯಿಂದಾಗುವ ಉಪಯೋಗ, ಅರಣ್ಯ ಇಲಾಖೆ ಕಾರ್ಯ, ಜೀವವೈಧ್ಯತೆ ಉಳಿಸಿಕೊಳ್ಳ ಬೇಕಾದ ಅಗತ್ಯತೆ ಬಗ್ಗೆ ಮಾಹಿತಿ ಲಭ್ಯವಾಗಲಿದೆ. ಹಾಗೆ ಮುಂದೆ ಸಾಗಿದರೆ ಯಾವುದೋ ದಟ್ಟ ಕಾಡಿಗೆ ಹೋದ ಅನುಭವ ಸಿಗಲಿದೆ.
Related Articles
Advertisement
ಪ್ರಾಣಿ ಪಕ್ಷಿಗಳ ಕಲರವ: ವಸ್ತು ಪ್ರದರ್ಶನ ವೀಕ್ಷಣೆಗೆ ಪ್ರವಾಸಿಗರು ಹೆಚ್ಚಾಗಿ ಸಂಜೆ ವೇಳೆ ಭೇಟಿ ನೀಡುತ್ತಾರೆ. ಆದ್ದರಿಂದ ಅರಣ್ಯ ಇಲಾಖೆ ಮಳಿಗೆಯ ಒಳಗೆ ವಿದ್ಯುತ್ ಬೆಳಕಿನ ವ್ಯವಸ್ಥೆ ಮಾಡಿದೆ. ಪ್ರತಿ ಪ್ರಾಣಿಗಳ ಬಳಿಯೂ ಬಣ್ಣ ಬಣ್ಣ ಲೈಟ್ ಅಳವಡಿಸಲಾಗಿದೆ. ಎಲ್ಲಾ ಪ್ರಾಣಿಗಳ ಪ್ರತಿಕೃತಿಗಳ ಬಳಿಯೂ ಆಯಾಯಾ ಪ್ರಾಣಿಗಳ ಘರ್ಜನೆಯ ಶಬ್ಧ ಹೊರ ಬರುವ ರೀತಿ ಮಾಡಲಾಗಿದೆ. ಹುಲಿಯ ಘರ್ಜನೆ, ಆನೆಯ ಘೀಳು, ಕೂತಿಗಳ ಕೂಗಾಟ, ಹಕ್ಕಿಗಳ ಚಿಲಿಪಿಲಿ ಸದ್ದು ವಿಶೇಷ ಅನುಭವ ನೀಡಲಿದೆ.
ಗಮನ ಸೆಳೆಯುತ್ತಿದೆ ಹಾಡಿ: ಮಳಿಗೆಯಲ್ಲಿ ಕಾಡು ಪ್ರಾಣಿ ಪಕ್ಷಿಗಳ ಪ್ರತಿಕೃತಿ ಜತೆಗೆ ಆದಿವಾಸಿಗಳ ಹಾಡಿಯ ಪ್ರತಿಕೃತಿ ವಿಶೇಷ ಆಕರ್ಷಣೆಯಾಗಿದೆ. ಹತ್ತಾರು ಆದಿವಾಸಿಗಳ ಗುಡಿಸಲು, ಗುಡಿಸಲು ಮುಂದೆ ಮತ್ತು ಒಳಗೆ ಬುಡಕಟ್ಟು ಜನರ ಪ್ರತಿಕೃತಿ, ಅವರು ಬಳಸುವ ವಸ್ತುಗಳು ಸೇರಿ ಜೀವನ ಕ್ರಮವನ್ನು ಚಿತ್ರಿಸಲಾಗಿದೆ.
ಫಾರೆಸ್ಟ್ ಗಾರ್ಡ್, ವಾಚರ್ ಕಣ್ಗಾವಲು: ಮಳಿಗೆಯಲ್ಲಿ ಅರಣ್ಯ ಇಲಾಖೆಯನ್ನು ಹಗಲಿರುಳು ಕಣ್ಣಲ್ಲಿ ಕಣ್ಣಿಟ್ಟು ಕಾಯುವ ಕಾಡಿನ ವಾಚರ್, ಗಾರ್ಡ್ ಗಳ ಪ್ರತಿಕೃತಿಗಳನ್ನು ನಿರ್ಮಿಸಲಾಗಿದ್ದು, ಮರಗಳವು, ಪ್ರಾಣಿಗಳ ಬೇಟೆಯನ್ನು ತಡೆಯುತ್ತಿರುವ ದೃಶ್ಯವನ್ನು ಚಿತ್ರಿಸಲಾಗಿದೆ. ಈ ಮೂಲಕ ಕಾಡು ಮತ್ತು ಪ್ರಾಣಿಗಳ ರಕ್ಷಣೆಗೆ ಅರಣ್ಯ ಇಲಾಖೆ ಸಿಬ್ಬಂದಿ ಪರಿಶ್ರಮವನ್ನು ಮಳಿಗೆಯಲ್ಲಿ ತಿಳಿಸಿಕೊಡಲಾಗುತ್ತಿದೆ.
ಅರಣ್ಯ ಸಂರಕ್ಷಣೆ ಬಗೆಗೆ ಅರಿವು: ಮಾನವ ಮತ್ತು ವನ್ಯಜೀವಿ ಸಂಘರ್ಷ ತಗ್ಗಿಸಲು ಅರಣ್ಯ ಇಲಾಖೆ ಕೈಗೊಂಡಿರುವ ಕ್ರಮಗಳು, ಕಾಡಿನೊಳಗಿನ ರಸ್ತೆಯಲ್ಲಿ ಸಂಚಾರ ನಿಯಮಗಳು, ಕಾಡನ್ನು ಬೆಂಕಿಯಿಂದ ರಕ್ಷಿಸುವ ಪರಿ ಏನು, ಕಾಡು ಪ್ರಾಣಿಗಳ ರಕ್ಷಣೆ ಬಗ್ಗೆ, ವನ್ಯಜೀವಿ ಸಂರಕ್ಷಣಾ ಕಾಯೆ-1972ರ ನಿಯಮ ಸೇರಿ ಅನೇಕ ಮಾಹಿತಿಯನ್ನು ಫಲಕಗಳ ಮೂಲಕ ಪ್ರದರ್ಶಿಸಲಾಗಿದೆ. ದೇಶದಲ್ಲಿ ಅಭಿವೃದ್ಧಿ ಮತ್ತು ಕಾಡು ಸಂರಕ್ಷಣೆ ಎರಡೂ ಒಟ್ಟಿಗೆ ನಡೆಯಬೇಕು ಎಂದು ಸಂದೇಶವನ್ನು ಅರಣ್ಯ ಇಲಾಖೆ ಮಳಿಗೆಯಲ್ಲಿ ಸಾರಲಾಗುತ್ತಿದೆ.
ಕಾಡಿನೊಳಗಿನ ರಸ್ತೆಯಲ್ಲಿ ವಾಹನ ಚಾಲನೆ ಮಾಡುವಾಗ ನಿಧಾನವಾಗಿ ಹಾಗೂ ಜಾಗರೂಕತೆ ಯಿಂದ ಚಾಲನೆ ಮಾಡುವಂತೆ ಅರಿವು ಮೂಡಿ ಸಲಾಗಿದೆ. ಕಾಡಿನಲ್ಲಿ ಹೇಗೆ ನಡೆದುಕೊಳ್ಳಬೇಕು, ಕಾಡಿನಲ್ಲಿ ಬೆಂಕಿ ನೋಡಿದ ತಕ್ಷಣ ಏನು ಮಾಡಬೇಕು ಎಂದು ತಿಳಿಸಲಾಗಿದೆ. ವನ್ಯ ಪ್ರಾಣಿ ಗಳನ್ನು ಬೇಟೆ ಯಾಡುವುದು, ಫೆನ್ಸಿಂಗ್‌ಗೆ ವಿದ್ಯುತ್ ಸಂಪರ್ಕ ನೀಡಿದರೆ ಏನೆಲ್ಲ ಶಿಕ್ಷೆ ಎದುರಿಸಬೇಕು ಎಂದು ತಿಳಿಸಲಾಗಿದೆ. ರೈಲು ಕಂಬಿಗಳ ಬೇಲಿ, ಲಂಟಾನಾ, ಯುಪ ಟೋರಿಯಂ ಕಳೆಗಳ ನಿರ್ಮಲನೆಗೆ ಕ್ರಮ, ಸೋಲಾರ್ ಬೋರ್‌ವೆಲ್‌ಗಳು, ವಿಶೇಷವಾಗಿ ಭಾರತದಲ್ಲಿ ಕಂಡು ಬರುವ ಮಂಗಟ್ಟೆ ಹಕ್ಕಿ ಬಗ್ಗೆ ವಿವಿರವಾಗಿ ತಿಳಿಸಲಾಗಿದೆ.
ಹುಲಿ ಯೋಜನೆ ಬಗ್ಗೆ, ಹುಲಿಗಳನ್ನು ಏಕೆ ಸಂರಕ್ಷಿಸಬೇಕು ಎಂಬ ವಿಷಯಗಳನ್ನು ವಿವರವಾಗಿ ತಿಳಿಸಲಾಗಿದೆ. ಒಟ್ಟಾರೆ ವಸ್ತುಪ್ರದರ್ಶನಲ್ಲಿ ಅತಿಹೆಚ್ಚು ಜನರನ್ನು ಆಕರ್ಷಿಸುವ ಮಳಿಗೆ ಇದಾಗಿದ್ದು, ನಿತ್ಯ ಸಾವಿರಕ್ಕೂ ಹೆಚ್ಚು ಜನರು ಭೇಟಿ ನೀಡಿ ವನ್ಯಜೀವಿ ಮತ್ತು ಅರಣ್ಯ ಸಂರಕ್ಷಣೆ ಬಗ್ಗೆ ಮಾಹಿತಿ ಪಡೆಯುತ್ತಿರುವುದು ವಿಶೇಷ.
ಅರಣ್ಯ ಇಲಾಖೆಯಿಂದ ಈ ಬಾರಿ ವಸ್ತು ಪ್ರದರ್ಶನದಲ್ಲಿ ಕಾಡು ಪ್ರಾಣಿಗಳು, ಅರಣ್ಯ ಸಂಪತ್ತಿನ ರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ವಿಶೇಷ ರೀತಿಯಲ್ಲಿ ಮಳಿಗೆ ಆರಂಭಿಸಲಾಗಿದೆ. ಮಳಿಗೆಯನ್ನು ಶೀಘ್ರದಲ್ಲೆ ಅಧಿಕೃತವಾಗಿ ಉದ್ಘಾಟಿಸಲಾಗುತ್ತದೆ. ಮಳಿಗೆಗೆ ಭೇಟಿ ನೀಡುವ ಸಾರ್ವಜನಿಕರಿಗೆ ಅರಣ್ಯ ಇಲಾಖೆ ಎಲ್ಲ ಯೋಜನೆಗಳನ್ನು ತಿಳಿಸುವ ಕೆಲಸ ಮಾಡಲಾಗುತ್ತದೆ.● ಕಮಲಾ ಕರಿಕಾಳನ್, ಡಿಸಿಎಫ್. ಸತೀಶ್ ದೇಪುರ