ಮೀರತ್: ಅದು ಸೇನೆಯ ನಿವೃತ್ತ ಅಧಿಕಾರಿಯೊಬ್ಬರ ಮನೆ. ಅವರ ಪುತ್ರ ರಾಷ್ಟ್ರ ಮಟ್ಟದ ಶೂಟರ್. ಶನಿವಾರ ಸಂಜೆ ಉತ್ತರಪ್ರದೇಶದ ಮೀರತ್‌ನಲ್ಲಿರುವ ಇವರ ನಿವಾಸದ ಮೇಲೆ ಕಂದಾಯ ಗುಪ್ತಚರ ನಿರ್ದೇಶನಾಲಯ ಮತ್ತು ಅರಣ್ಯ ಅಧಿಕಾರಿಗಳ ತಂಡವು ದಾಳಿ ನಡೆಸಿದಾಗ ಸಿಕ್ಕಿದ್ದೇನು ಗೊತ್ತೇ?
ಬರೋಬ್ಬರಿ 117 ಕೆ.ಜಿ. ನೀಲಿಜಿಂಕೆ (ನೀಲ್‌ಗಾಯ್)ಯ ಮಾಂಸ, ವನ್ಯಜೀವಿಗಳ ಚರ್ಮ, ದಂತ, 140 ಶಸ್ತ್ರಾಸ್ತ್ರಗಳು, ವಿದೇಶಿ ನಿರ್ಮಿತ 50 ಸಾವಿರ ಕಾಟ್ರಿìಡ್ಜ್ ಗಳು, 1 ಕೋಟಿ ರೂ. ನಗದು!
ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ತಂಡವು ನಿವೃತ್ತ ಕರ್ನಲ್ ದೇವೀಂದ್ರ ಕುಮಾರ್ ಅವರ ಮನೆ ಮೇಲೆ ದಾಳಿ ನಡೆಸಿದಾಗ, ಅಲ್ಲಿ ಅಕ್ರಮ ವನ್ಯಜೀವಿ ಬೇಟೆ ಹಾಗೂ ಶಸ್ತ್ರಾಸ್ತ್ರ ಕಳ್ಳಸಾಗಣೆ ನಡೆಯುತ್ತಿರುವ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ಮನೆಯೊಳಗಿರುವ ದಾಸ್ತಾನು ಮಳಿಗೆಯಲ್ಲಿ ಜಿಂಕೆಗಳ 5 ತಲೆಬುರುಡೆಗಳು, ಸಂಬಾರ್(ದೊಡ್ಡ ಜಿಂಕೆಯ ತಳಿ) ಜಿಂಕೆಯ ಕೊಂಬುಗಳು, ಚಿಗರೆ ಮತ್ತು ಕೃಷ್ಣಮೃಗಗಳ ಕವಲುಗೊಂಬುಗಳು, ಪ್ರಾಣಿಗಳ ಚರ್ಮ ಹಾಗೂ ದಂತ, 50 ಸಾವಿರ ಸಿಡಿಮದ್ದುಗಳು, ಲೈಸೆನ್ಸ್ ಹೊಂದಿರುವ ಮತ್ತು ಹೊಂದಿಲ್ಲದ 140 ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದು, ಅಧಿಕಾರಿಗಳನ್ನೇ ದಂಗುಬಡಿಸಿದೆ.
17 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ತಂಡ, ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಈ ದಂಧೆಯಲ್ಲಿ ವಿದೇಶಿ ವ್ಯಕ್ತಿಯೊಬ್ಬರೂ ಭಾಗಿಯಾಗಿರುವ ಶಂಕೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಿವೃತ್ತ ಕರ್ನಲ್ ದೇವೀಂದ್ರ ಕುಮಾರ್ ಅವರು ಬರೇಲಿಯಲ್ಲಿ ಕಾಲೇಜುವೊಂದನ್ನು ಹೊಂದಿದ್ದಾರೆ.
ಪುತ್ರ ರಾಷ್ಟ್ರಮಟ್ಟದ ಶೂಟರ್
ಕ.ದೇವೀಂದ್ರ ಕುಮಾರ್ ಅವರ ಪುತ್ರ ಪ್ರಶಾಂತ್ ಬಿಷ್ಣೋಯ್ ರಾಷ್ಟ್ರಮಟ್ಟದ ಸ್ಕೀಟ್ ಶೂಟರ್ ಆಗಿದ್ದು, ಕಳೆದ ವರ್ಷದ ನವೆಂಬರ್‌ನಲ್ಲಿ ನಡೆದ 60ನೇ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ, 65ನೇ ಸ್ಥಾನ ಪಡೆದಿದ್ದರು. ನ್ಯಾಶನಲ್ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ(ಎನ್‌ಆರ್‌ಎಐ)ವು ಪ್ರಶಾಂತ್‌ರನ್ನು “ಖ್ಯಾತ ಶೂಟರ್’ ಎಂದು ಗುರುತಿಸಿತ್ತು. ಹೀಗಾಗಿ, ಅವರಿಗೆ ತಲಾ 12 ಬೋರ್‌ಗಳಿರುವ ಎರಡು ರೈಫಲ್‌ಗಳಿಗೆ ಪರವಾನಿಗೆಯನ್ನೂ ನೀಡಲಾಗಿತ್ತು. ವಿಶೇಷವೆಂದರೆ, ಇತ್ತೀಚೆಗೆ ನೀಲಿಜಿಂಕೆಗಳು ಬೆಳೆ ನಾಶ ಮಾಡುತ್ತವೆಂದು ಅವುಗಳನ್ನು ಬೇಟೆಯಾಡಲು ಬಿಹಾರ ಸರಕಾರ ಅವಕಾಶ ಕಲ್ಪಿಸಿತ್ತು. ಅದಕ್ಕಾಗಿ, ಬಿಹಾರಕ್ಕೆ ಬೇಟೆಗೆಂದು ಕಳುಹಿಸಲಾಗಿದ್ದ ಬೇಟೆಗಾರರ ತಂಡದಲ್ಲೂ ಪ್ರಶಾಂತ್ ಒಬ್ಬನಾಗಿದ್ದ.