Advertisement

ಪರಿಸರ ಪ್ರೇಮಿಗಳನ್ನು ಆಕರ್ಷಿಸುತ್ತಿದೆ ವನ್ಯಧಾಮ

07:29 AM Jun 05, 2019 | Lakshmi GovindaRaj |

ಸಂತೆಮರಹಳ್ಳಿ: ಹಸಿರು ಹೊದ್ದು ಮಲಗಿರುವ ಗಿರಿಸಾಲುಗಳು, ಮೈಚಳಿಯನ್ನು ಬಿಟ್ಟು ನೀರಿನಲ್ಲಿ ಆಟವಾಡುವ ಆನೆಗಳ ಹಿಂಡು, ಭೂ ಮೇಲೆ ಹಾಸಿರುವ ಹಸಿರಿನ ಭೋಜನವನ್ನು ಮೆಲ್ಲುತ್ತಿರುವ ಕಾಡೆಮ್ಮೆಗಳ ಹಿಂಡು, ಎಲ್ಲಕ್ಕಿಂತ ಮಿಗಿಲಾಗಿ ತೊರೆ, ಕೆರೆಗಳ ಅಕ್ಕಪಕ್ಕ ಪಟಪಟ ರೆಕ್ಕೆ ಬಡಿಯುತ ಹಾರುವ ಬಣ್ಣಬಣ್ಣದ ಪಾತರಗಿತ್ತಿಗಳ ಗುಂಪು..

Advertisement

ಇವು ಎಲ್ಲೋ ಸಿನಿಮಾದಲ್ಲಿ ತೋರುವ ಗ್ರಾಫಿಕ್‌ ಅಥವಾ ಪುಸಕ್ತದಲ್ಲಿ ವರ್ಣನೆಯಾಗುವ ಚಿತ್ರಣವಲ್ಲ. ಬದಲಿಗಿ ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ವನ್ಯಧಾಮವಾಗಿರುವ ಬಿಳಿಗಿರಿರಂಗನಾಥಸ್ವಾಮಿ ವನ್ಯಧಾಮ (ಬಿಆರ್‌ಟಿ) ಮಳೆ ಬಂದ ಮೇಲೆ ವನಸಿರಿ ಪರಿಸರ ಪ್ರಿಯರಿಗೆ ಉಣಬಡಿಸುತ್ತಿರುವ ಪ್ರಾಕೃತಿಕ ಸೊಬಗು. ಜೂನ್‌ 5 ವಿಶ್ವ ಪರಿಸರ ದಿನ ನಮ್ಮ ಪರಿಸರ ಹೇಗಿದೆ ಎಂಬ ಸೊಬಗನ್ನು ನೋಡಬೇಕಾದರೆ ಬಿಆರ್‌ಟಿಗೆ ಬನ್ನಿ.

ಪ್ರಾಕೃತಿಕ ವೈಭವ: ಯಳಂದೂರು ತಾಲೂಕಿನ ಬಿಆರ್‌ಟಿ ಹುಲಿಧಾಮದ ಈಗ ಪ್ರಕೃತಿಗೆ ಸೀರೆ ಉಟ್ಟ ಸಂಭ್ರಮವನ್ನು ಅನುಭವಿಸುತ್ತಿದೆ. ಹಸಿರು ಹೊದ್ದ ಬೆಟ್ಟ ಸಾಲಿನಲ್ಲಿ ಸಾಗುವುದೇ ಒಂದು ಚೆಂದದ ಅನುಭವ. ಪೂರ್ವ, ಪಶ್ಚಿಮ ಘಟ್ಟಗಳನ್ನು ಸಂಧಿಸುವ ಬಿಳಿಗಿರಿ ವನ್ಯಧಾಮ ಅಪರೂಪದ ವೃಕ್ಷ ಹಾಗೂ ಪ್ರಾಣಿ ಸಂಪತ್ತನ್ನು ತನ್ನ ತೆಕ್ಕೆಯಲ್ಲಿಟ್ಟುಕೊಂಡಿದೆ. ನಿತ್ಯಹರಿದ್ವರ್ಣ, ಅರೆನಿತ್ಯ ಹರಿದ್ವರ್ಣ, ಶೋಲಾ, ಎಲೆಉದುರುವ, ಕುರುಚಲು ಕಾಡು ಹೀಗೆ ಹೆಜ್ಜೆ ಹೆಜ್ಜೆಗೂ ಇಲ್ಲಿನ ವಿಭಿನ್ನತೆ ಭಾಸವಾಗುತ್ತದೆ. ಪೂರ್ವ ಮುಂಗಾರು ಮಳೆಯಿಂದ ಕಾಡಿಗೆ ಜೀವಕಳೆ ಬಂದಿದೆ. ಕೆರೆ ಕಟ್ಟೆಗಳು, ತೊರೆಗಳು ತುಂಬಿವೆ.

ಚಿಟ್ಟೆಗಳ ಚೈತ್ರಯಾತ್ರೆ: ಜೂನ್‌ ತಿಂಗಳು ಚಿಟ್ಟೆಗಳಿಗೆ ಚೈತ್ರಕಾಲ. ಆದರೆ, ಬಿಳಿಗಿರಿ ಬನದಲ್ಲಿ ಹಿಂಡು ಹಿಂಡಾಗಿ ಕಾಣಿಸಿಕೊಳ್ಳುವ ಚಿಟ್ಟೆಗಳ ವರ್ಣನೆ ಅವಾರ್ಣಾತೀತ. ಗುಂಪು ಗುಂಪಾಗಿ ಕಾಣಿಸಿಕೊಳ್ಳುವ ಪಾತರಗಿತ್ತಿಗಳು ಹಸಿರೆಲೆಗಳಂತೆ ಗೋಚರಿಸಿ, ಕ್ಷಣಕಾಲ ಬೆರಗು ಮೂಡಿಸುತ್ತದೆ. ಇದರ ನಡುವೆ, ಕಡುನೀಲಿ, ತಿಳಿಬಿಳಿ ಬಣ್ಣದ ಚಿಟ್ಟೆಗಳು ಹಾರಾಡುವುದನ್ನು ಕಣ್ತುಂಬಿಕೊಳ್ಳುವ ಸೊಬಗೇ ಬೇರೆ.

ನೀರಾಟವಾಡುವ ಆನೆಗಳು: ಮಳೆಯಿಂದ ಬೆಟ್ಟದಲ್ಲಿನ ಬಹುತೇಕ ಕೆರೆಗಳಲ್ಲಿ ನೀರು ಸಮೃದ್ಧವಾಗಿದೆ. ನೀರಿನಲ್ಲಿ ಮಿಂದೇಳುವ ಆನೆಗಳು, ಇಲ್ಲೇ ಹಲವು ಗಂಟೆಗಳು ಬೀಡು ಬಿಟ್ಟು ತನ್ನ ಬಳಗದೊಡನೆ ಚಿಣ್ಣಾಟವಾಡುವ ದೃಶ್ಯ ಪ್ರಕೃತಿ ಪ್ರಿಯರನ್ನು ತುದಿಗಾಲಲ್ಲಿ ನಿಲ್ಲಿಸುತ್ತದೆ. ಆದರೆ, ಇಂತಹ ದೃಶ್ಯಗಳನ್ನು ರಸ್ತೆ ಬದಿಯಲ್ಲಿ ಕಂಡುಕೊಳ್ಳಲು ಅದೃಷ್ಟವೂ ಬೇಕು. ಇದರೊಂದಿಗೆ ಅರಣ್ಯ ಇಲಾಖೆಯ ನಿಯಮಗಳನ್ನು ಮೀರಬಾರದೆಂಬ ಷರತ್ತನ್ನು ಪ್ರವಾಸಿಗ ಹೊತ್ತಯ್ಯಯಬೇಕು.

Advertisement

ಹಸಿರು ಮೆಲ್ಲುವ ವನ್ಯ ಪರಿವಾರ: ಮಳೆಯಿಂದ ಕಾಡೆಲ್ಲಾ ಹಸಿರುಮಯವಾಗಿದೆ. ರಸ್ತೆ ಬದಿಯಲ್ಲೇ ಕಾಡುಕೋಣ, ಎಮ್ಮೆ, ಚಿಗರೆಗಳ ಹಿಂಡು, ಕಾಡುಕುರಿ, ಆನೆಗಳು ತಮಗೆ ಭೂರಮೆ ಬಡಿಸಿರುವ ಹಸಿರನ್ನು ಮೆಲ್ಲುವ ದೃಶ್ಯ. ಇದರ ನಡುವೆಯೇ, ಕೀಟ ಅರಸಿ ಬರುವ ನವಿಲುಗಳ ಹಿಂಡು, ಕಾಡು ಕೋಳಿಗಳು, ವಿವಿಧ ಜಾತಿಯ ಹಕ್ಕಿ ಪಕ್ಷಿಗಳು ಹೊರಡಿಸುವ ನಿನಾದ ಇಡೀ ಕಾಡನ್ನೇ ಆವರಿಸಿ ಸಂಗೀತದ ರಸದೌತಣ ಉಣಬಿಡುಸುತ್ತಿದೆ.

ಅಪಾಯವೂ ಇದೆ: ಬಿಆರ್‌ಟಿ ಹುಲಿಧಾಮವಾದ ಮೇಲೆ ಇಲ್ಲಿ ಅರಣ್ಯ ಇಲಾಖೆಯ ನಿಯಮಗಳು ಕಠಿಣವಾಗಿವೆ. ಇದನ್ನು ಪ್ಲಾಸ್ಟಿಕ್‌ ಮುಕ್ತ ಪ್ರದೇಶ ಎಂದು ಘೋಷಿಸಿದ ಮೇಲೂ ಸಂಪೂರ್ಣವಾಗಿ ನಿಷೇಧಿಸುವಲ್ಲಿ ಇಲಾಖೆ ವಿಫ‌ಲವಾಗಿದೆ. ಬೆಟ್ಟದಲ್ಲಿ ಅವ್ಯಾಹತವಾಗಿ ಪ್ಲಾಸ್ಟಿಕ್‌ ಮಾರಾಟ ನಡೆಯುತ್ತಿದೆ. ಬರುವ ಪ್ರವಾಸಿಗರು ನೀರಿನ ಬಾಟಲಿಗಳು, ಕವರ್‌ಗಳನ್ನು ಇಲ್ಲೇ ಬೀಸಾಡುವುದರಿಂದ ಮಳೆ ಬಂದರೆ ಇದು ಕಾಡು ಪ್ರಾಣಿಗಳ ಹೊಟ್ಟೆಯೊಳಗೆ ಹೊಕ್ಕುವ ಸಾಧ್ಯತೆಗಳೂ ಇವೆ. ಈ ಬಗ್ಗೆ ಇಲಾಖೆ ಹಾಗೂ ಸ್ಥಳೀಯ ಆಡಳಿತ ಕ್ರಮ ವಹಿಸಬೇಕಿದೆ ಎನ್ನುತ್ತಾರೆ ಪರಿಸರ ಪ್ರೇಮಿ ಮನು ಹಾಗೂ ಮಹೇಶ್‌.

* ಪೈರೋಜ್‌ ಖಾನ್‌

Advertisement

Udayavani is now on Telegram. Click here to join our channel and stay updated with the latest news.

Next