Advertisement

ಬೇಟೆನಾಯಿಗಳಿಂದ ವನ್ಯಜೀವಿಗಳಿಗೆ ಆಪತ್ತು

09:20 PM Apr 28, 2019 | Lakshmi GovindaRaju |

ಸಕಲೇಶಪುರ: ತಾಲೂಕಿನಲ್ಲಿ ಬೇಟೆಗಾರರ ಹಾವಳಿ ನಿಯಂತ್ರಕ್ಕೆ ಬಂದರೂ ಬೇಟೆನಾಯಿಗಳು ಹಾಗೂ ನಾಯಿಗಳ ಹಾವಳಿ ನಿಲ್ಲದಾಗಿದೆ.

Advertisement

ಅರಣ್ಯ ಇಲಾಖೆಯ ಕಟ್ಟುನಿಟ್ಟಿನ ಕ್ರಮದಿಂದಾಗಿ ತಾಲೂಕಿನಲ್ಲಿ ಬೇಟೆಗಾರರ ಹಾವಳಿ ಕಡಿಮೆಯಾಗಿದ್ದರಿಂದ ಕಾಫಿ ತೋಟಗಳಲ್ಲಿ ಕಾಟಿ, ಜಿಂಕೆ, ನವಿಲು, ಕಾಡುಕುರಿ, ಕಾಡುಬೆಕ್ಕುಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ.

ಆದರೆ ತಾಲೂಕಿನಲ್ಲಿ ಬೇಟೆಗಾರಿಕೆ ನಿಯಂತ್ರಣಕ್ಕೆ ಬಂದಿದ್ದರೂ ಬೇಟೆಗೆ ಕರೆದೊಯ್ಯುತ್ತಿದ್ದ ಬೇಟೆನಾಯಿಗಳಿಗೆ ಮಾತ್ರ ಬೇಟೆಯ ರುಚಿ ಮರೆಯದಾಗಿದೆ. ಬೇಟೆ ನಾಯಿಗಳ ಜೊತೆಗೆ ಇತರೆ ಬೀದಿನಾಯಿಗಳು ಸಹ ಕಾಡುಪ್ರಾಣಿಗಳ ಮೇಲೆ ದಾಂಧಲೆ ನಡೆಸುತ್ತಿದ್ದು ಕೆಲವೊಂದು ಪ್ರಾಣಿಗಳಿಗೆ ಇದರಿಂದ ರಕ್ಷಣೆ ಇಲ್ಲದಂತಾಗಿದೆ.

ಬೀದಿ ನಾಯಿಗಳ ಹಾವಳಿ: ಪಟ್ಟಣ ವ್ಯಾಪ್ತಿಯಲ್ಲಿ ಕೆಲವು ಹೋರಾಟಗಾರರ ಕಿರುಕುಳದಿಂದ ಬೀದಿ ನಾಯಿಗಳನ್ನು ಹಿಡಿಯಲು ಪುರಸಭೆ ನಿಲ್ಲಿಸಿದ್ದು ಇದರಿಂದ ತಾಲೂಕಿನಲ್ಲೆಡೆ ನಾಯಿಗಳ ಹಾವಳಿ ಹೆಚ್ಚಿದೆ. ಕಾಡು, ಕಾಫಿತೋಟಗಳಲ್ಲಿ ಕಾಡುಪ್ರಾಣಿಗಳನ್ನು ಹುಡುಕಿ ಅಲೆಯುವ ಈ ಬೇಟೆನಾಯಿಗಳಿಗೆ ಕಾಡುಪ್ರಾಣಿಗಳು,

ಜನ,ಜಾನುವಾರುಗಳ ಪಾಲಿಗೆ ಮೃತ್ಯುಸ್ವರೂಪವಾಗಿದ್ದು. ಕಳೆದ ಒಂದು ತಿಂಗಳ ಅವಧಿಯಲ್ಲಿ ಈ ಬೇಟೆನಾಯಿಗಳು ಒಂದು ಮಗುವನ್ನು ಕಚ್ಚಿಗಾಯಗೊಳಿಸಿದ್ದರೆ, ನಾಲ್ಕು ಜಿಂಕೆಗಳು , ಒಂದು ನವಿಲು ಹಾಗೂ ಒಂದು ಜಾನುವಾರು ಬಲಿಯಾಗಿರುವುದು ಬೆಳಕಿಗೆ ಬಂದಿದೆ.

Advertisement

ವನ್ಯ ಜೀವಿಗಳು ಬಲಿ: ತಾಲೂಕಿನ ಮಠಸಾಗರ ಗ್ರಾಮ ಸಮೀಪ ಕಾಫಿ ತೋಟದಲ್ಲಿ ಜಿಂಕೆಯನ್ನು ಬೇಟಿಯಾಡಿದ್ದ ನಾಯಿಗಳನ್ನು ತೋಟದ ಮಾಲೀಕರು ಗುಂಡುಹಾರಿಸಿ ಓಡಿಸಿ ಜಿಂಕೆ ರಕ್ಷಿಸಿದರೂ ತೀವ್ರವಾಗಿ ಗಾಯಗೊಂಡಿದ್ದ ಜಿಂಕೆ ಸಾವಿಗೀಡಾಗಿತ್ತು. ಇದಾದ ಎರಡು ದಿನಗಳಲ್ಲಿ ಕಿರೆಹಳ್ಳಿ ಕೃಷ್ಣಪ್ಪ ಎಂಬುವವರ ಕಾಫಿ ತೋಟದಲ್ಲಿ ಜಿಂಕೆಯನ್ನು ಬೇಟೆಯಾಡಿ ಭಾಗಶಃ ತಿಂದು ಹಾಕಿದ್ದವು.

ಬೆಳಗೋಡು ಹೋಬಳಿ ಗೊಳಗೊಂಡೆ ಗ್ರಾಮದ ಕಾಫಿ ಎಸ್ಟೇಟ್‌ನಲ್ಲಿ ಬೀದಿನಾಯಿಗಳ ಗುಂಪಿಗೆ ಜಿಂಕೆ ಸಿಲುಕಿದ್ದು ತಕ್ಷಣವೇ ಕಾರ್ಮಿಕರು ಜಿಂಕೆ ರಕ್ಷಿಸಿ ಪಶು ವೈದ್ಯಶಾಲೆಗೆ ಕರೆತಂದರೂ ಯಾವುದೇ ಪ್ರಯೋಜವಾಗಲಿಲ್ಲ. ಇದಾಗಿ ಎರಡು ದಿನಗಳಲ್ಲಿ ರಾಟೇಮನೆ ಗ್ರಾಮ ಸಮೀಪದ ಐಬಿಸಿ ಕಾಫಿ ತೋಟದಲ್ಲಿ ಬೀದಿನಾಯಿಗಳಿಂದ ತಪ್ಪಿಸಿಕೊಳ್ಳುವ ಭರದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಬಂದ ಜಿಂಕೆ ವಾಹನಕ್ಕೆ ಸಿಲುಕಿ ಗಾಯಗೊಂಡಿತ್ತು.

ಈ ಜಿಂಕೆಯನ್ನು ರಕ್ಷಿಸಿ ಹಾಸನ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಕೊಂಡೊಯ್ಯಲಾಗಿದೆ. ಇದೆ ಐಬಿಸಿ ಕಾಫಿ ತೋಟದಲ್ಲಿ ನವೀಲು ಬೇಟೆಯಾಡಿದ್ದ ನಾಯಿಗಳು ತಿಂದು ಮುಗಿಸಿವೆ. ಇದಲ್ಲದೇ ತಾಲೂಕಿನ ಬನ್ನಹಳ್ಳಿ ಗ್ರಾಮದ ರಮೇಶ್‌ ಎಂಬುವವರ ಮೇಯಲು ಕಟ್ಟಿಹಾಕಿದ್ದ ಜಾನುವಾರುಗಳ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದು ಜಾನುವಾರು ಸ್ಥಳದಲ್ಲೇ ಮೃತಪಟ್ಟಿದೆ.

ಮಕ್ಕಳ ಮೇಲೆ ನಾಯಿಗಳ ದಾಳಿ: ಕೋಗರವಳ್ಳಿ ಗ್ರಾಮದಲ್ಲಿ ತೋಟದಲ್ಲಿ ಆಟವಾಡುತ್ತಿದ್ದ ಕಾರ್ಮಿಕರ ಮಗುವಿನ ಮೇಲೆ ದಾಳಿ ಮಾಡಿದ ನಾಯಿಗಳ ಗುಂಪು ಕಚ್ಚಿಗಾಯಗೊಳಿಸಿದೆ ಅದೃಷ್ಟವಶಾತ್‌ ಕುಟುಂಬಸ್ಥರು ಸಕಾಲಕ್ಕೆ ಗಮನಿಸಿದ್ದರಿಂದ ಮಗುವಿನ ಜೀವ ಉಳಿದಿದೆ.

ಕಾಫಿ ಗಿಡಗಳ ಮದ್ಯೆ ಉದ್ದ ಕೋಡಿನ ಜಿಂಕೆಗಳು ಓಡಲು ಸಾಧ್ಯವಿಲ್ಲ ಇದರಿಂದ ಸುಲುಭವಾಗಿ ನಾಯಿಗಳಿಗೆ ತುತ್ತಾಗುತ್ತಿವೆ.
-ರವೀಂದ್ರ, ವಲಯ ಅರಣ್ಯಾಧಿಕಾರಿ.

ಕೂಡಲೇ ನಾಯಿಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜಿಂಕೆ, ನವಿಲಿನಂತಹ ಪ್ರಾಣಿ ಪಕ್ಷಿಗಳು ಉಳಿಯುವುದು ಸಾಧ್ಯವಿಲ್ಲ.
-ಕೃಷ್ಣಪ್ಪ, ಕಾಫಿ ಬೆಳೆಗಾರರು, ಕಿರೇಹಳ್ಳಿ

* ಸುಧೀರ್‌ ಎಸ್‌.ಎಲ್‌

Advertisement

Udayavani is now on Telegram. Click here to join our channel and stay updated with the latest news.

Next