Advertisement

ಊರುಗಳೇ ಕೊಚ್ಚಿ ಹೋದ್ರೂ ವನ್ಯಜೀವಿಗಳು ಸೇಫ್

06:00 AM Aug 24, 2018 | Team Udayavani |

ಬೆಂಗಳೂರು: ಭಾರೀ ಮಳೆ ಮತ್ತು ಪ್ರವಾಹಕ್ಕೆ ಮಲೆನಾಡಿನ ಸಾಕಷ್ಟು ಭಾಗ ಕೊಚ್ಚಿ ಹೋದರೂ ನಿಸರ್ಗದತ್ತ ಅರಣ್ಯ ಮತ್ತು ವನ್ಯಜೀವಿಗಳಿಗೆ ಹೆಚ್ಚಿನ ಹಾನಿಯಾಗಿಲ್ಲ.

Advertisement

ಹೌದು, ನೈಸರ್ಗಿಕ ಭೂ ಪ್ರದೇಶಕ್ಕೆ (ನ್ಯಾಚುರಲ್‌ ಲ್ಯಾಂಡ್‌ಸ್ಕೇಪ್‌) ಮಳೆಯಿಂದ ಯಾವುದೇ ತೊಂದರೆಯಾಗದ ಕಾರಣ ಸಂರಕ್ಷಿತ ಅರಣ್ಯ, ದಟ್ಟ ಅರಣ್ಯ,ವನ್ಯಜೀವಿ ಪ್ರದೇಶಗಳ ಮೇಲೆ ಯಾವುದೇ ದುಷ್ಪರಿಣಾಮ ಉಂಟಾಗಿಲ್ಲ. ಇದರಿಂದಾಗಿ ಆನೆ, ಹುಲಿ ಸೇರಿದಂತೆ ಇದುವರೆಗೆ ಸ್ವತಂತ್ರವಾಗಿ ಓಡಾಡುವ ಯಾವೊಂದು ವನ್ಯಜೀವಿಯೂ ಮೃತಪಟ್ಟಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಮಳೆ ಹಾನಿಗೊಳಗಾದ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.ಮಾನವರು ವಾಸ್ತವ್ಯವಿರುವ ಮತ್ತು ಅವರ ಹಸ್ತಕ್ಷೇಪಕ್ಕೆ ಒಳಗಾದ ಗುಡ್ಡಗಾಡು ಪ್ರದೇಶಗಳಲ್ಲಿ ಮಾತ್ರ ಭೂ ಕುಸಿತ, ಪ್ರವಾಹ, ಊರುಗಳೇ ಕೊಚ್ಚಿಹೋಗಿರುವುದು ಮುಂತಾದ ಅನಾಹುತಗಳು ಸಂಭವಿಸಿವೆ. ಆದರೆ, ಮೊದಲಿನಿಂದಲೂ ಅರಣ್ಯ ಪ್ರದೇಶ ಹೊಂದಿರುವ ನೈಸರ್ಗಿಕ ಭೂ ಪ್ರದೇಶಗಳಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ವನ್ಯಜೀವಿಗಳು ಮಾತ್ರವಲ್ಲ, ಅರಣ್ಯಕ್ಕೂ ಹಾನಿಯಾಗಿಲ್ಲ ಎಂದು ಈ ವೇಳೆ ಗೊತ್ತಾಗಿದೆ.

ಸೂಕ್ಷ್ಮಗ್ರಹಣ ಶಕ್ತಿ: ವನ್ಯಜೀವಿಗಳಿಗೆ ಮೊದಲೇ ಪ್ರಕೃತಿ ವಿಕೋಪದ ಮುನ್ಸೂಚನೆ ಸಿಗುವುದರಿಂದ ವಿಕೋಪ ಸಂಭವಿಸುವ ಮುನ್ನವೇ ಸುರಕ್ಷಿತ ಜಾಗಕ್ಕೆ ತೆರಳಿರುತ್ತವೆ. ಅಲ್ಲದೆ, ನೈಸರ್ಗಿಕ ಭೂ ಪ್ರದೇಶಕ್ಕೆ ತೊಂದರೆಯಾಗದ ಕಾರಣ ಅರಣ್ಯದ ಬಹುತೇಕ ಪ್ರಾಣಿಗಳು ಇಂತಹ ಪ್ರದೇಶಗಳಲ್ಲಿ ಉಳಿದುಕೊಳ್ಳುತ್ತವೆ. ಹೀಗಾಗಿ ಕೊಡಗು ಸೇರಿದಂತೆ ಮಲೆನಾಡಿನ ಯಾವುದೇ ಭಾಗದಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದ ವನ್ಯಜೀವಿಗಳು ಮೃತಪಟ್ಟಿಲ್ಲ ಎನ್ನುತ್ತಾರೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು. 

ಅನೆಗಳ ಕಾರಿಡಾರ್‌ ಸುಭದ್ರ: ಕೊಡಗು ಜಿಲ್ಲೆಯ ಹಲವು ಭಾಗ ಮತ್ತು ಸಕಲೇಶಪುರ ಅರಣ್ಯ ಪ್ರದೇಶದಲ್ಲಿ (ಆನೆ ಕಾರಿಡಾರ್‌) ಆನೆಗಳ ಓಡಾಟ ಜಾಸ್ತಿ. ಕೆಲವೊಮ್ಮೆ ಆಹಾರಕ್ಕಾಗಿ ಅವು ಮಾನವ ವಾಸ್ತವ್ಯ ವಿರುವ ಪ್ರದೇಶಗಳಿಗೆ ಲಗ್ಗೆ ಇಡುತ್ತದೆಯೇ ಹೊರತು ಬಹುತೇಕ ಸಮಯ ದಟ್ಟ ಅರಣ್ಯಗಳ ಮಧ್ಯೆಯೇ ಇರುತ್ತದೆ.ಅದರಲ್ಲೂ ಮಳೆಗಾಲದಲ್ಲಿ ಆನೆಗಳು ಸುರಕ್ಷಿತ ಪ್ರದೇಶವನ್ನು ಹುಡುಕಿಕೊಂಡಿರುತ್ತದೆ. ಅಲ್ಲದೆ, ಆನೆಗಳ ಕಾರಿಡಾರ್‌ ನೈಸರ್ಗಿಕ ಅರಣ್ಯ ವ್ಯಾಪ್ತಿಗೆ ಬರುವುದರಿಂದ ಅಲ್ಲಿ ಮಳೆಹಾನಿ ಸಂಭವಿಸದ ಕಾರಣ ಆನೆಗಳೆಲ್ಲವೂ ಸುರಕ್ಷಿತವಾಗಿ ಓಡಾಡುತ್ತಿವೆ ಎಂದೂ ತಿಳಿಸುತ್ತಾರೆ.

Advertisement

ಹುಲಿಗಳಿಗೂ ಅಪಾಯವಿಲ್ಲ: ಮಳೆ ಮತ್ತು ಪ್ರವಾಹದಿಂದಾಗಿ ಹುಲಿ ಮೀಸಲು ಅರಣ್ಯಗಳಾದ ಬಂಡೀಪುರ, ಭದ್ರಾ, ನಾಗರಹೊಳೆ, ದಾಂಡೇಲಿ, ಬಿಳಿಗಿರಿರಂಗನಬೆಟ್ಟ ಪ್ರದೇಶಗಳಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ. ಅದೇ ರೀತಿ ರಾಷ್ಟ್ರೀಯ ಉದ್ಯಾನಗಳಾದ ಕುದುರೆಮುಖ, ನಾಗರಹೊಳೆ, ಬಂಡೀಪುರ ಮತ್ತು ಆಣಶಿ ರಾಷ್ಟ್ರೀಯ ಉದ್ಯಾನಗಳೂ ಸುರಕ್ಷಿತವಾಗಿವೆ.ಇದು ಕೂಡ ವನ್ಯಜೀವಿಗಳು ಸುರಕ್ಷಿತವಾಗಿರಲು ಕಾರಣವಾಗಿದೆ ಎಂದು ಹೇಳಿದ್ದಾರೆ.

ಅರಣ್ಯ ಹಾನಿ ಶೇ.5ಕ್ಕಿಂತ ಕಮ್ಮಿ
ರಾಜ್ಯದಲ್ಲಿ ಒಟ್ಟು 43,35,694.80 ಹೆಕ್ಟೇರ್‌ ಪ್ರದೇಶ ಅರಣ್ಯಕ್ಕೆ ಸಂಬಂಧಿಸಿದ್ದಾಗಿದ್ದು, ಈ ಪೈಕಿ ಮೀಸಲು ಅರಣ್ಯ ಪ್ರಮಾಣ 29,55,022.37 ಹೆಕ್ಟೇರ್‌ ಇದೆ. ಇದು ಸೇರಿದಂತೆ ಅಧಿಸೂಚಿತ ಅರಣ್ಯ ಪ್ರದೇಶ 33,23,845.98 ಹೆಕ್ಟೇರ್‌ನಷ್ಟಿದೆ. ಈ ಪೈಕಿ ಶೇ. 5ರಷ್ಟು ಅರಣ್ಯಕ್ಕೂ ಮಳೆಯಿಂದ ಯಾವುದೇ ಸಮಸ್ಯೆಯಾಗಿಲ್ಲ. ಬೆಟ್ಟ ಗುಡ್ಡಗಳಲ್ಲಿ ಮಾನವ ವಸತಿ ಇದ್ದು, ಅಲ್ಲಿ ಮನೆ, ರಸ್ತೆ ನಿರ್ಮಾಣ ಸೇರಿದಂತೆ ಮೂಲ ಸೌಕರ್ಯಕ್ಕಾಗಿ ಮಣ್ಣು ಅಗೆದಿರುವುದರಿಂದ ಸಹಜವಾಗಿಯೇ ಭೂಮಿಯ ಮೇಲ್ಮೆ„ ಸಡಿಲಗೊಳ್ಳುತ್ತದೆ. ಹೀಗಾಗಿ ಬೆಟ್ಟದ ಮೇಲಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ಮತ್ತು ವೇಗವಾಗಿ ಹರಿದುಬಂದಾಗ ಸಡಿಲಗೊಂಡಿರುವ ಈ ಮಣ್ಣು ನೀರಿನೊಂದಿಗೆ ಕೊಚ್ಚಿ ಬರುತ್ತದೆ. ಇದು ಬೆಟ್ಟ ಪ್ರದೇಶವನ್ನು ಮತ್ತಷ್ಟು ಶಿಥಿಲಗೊಳ್ಳುವಂತೆ ಮಾಡುವುದರಿಂದ ಹೆಚ್ಚು ಕಾಲ ನೀರು ಹರಿದುಬಂದರೆ ಅವು ಕುಸಿಯುತ್ತದೆ. ಆದರೆ, ನೈಸರ್ಗಿಕ ಭೂ ಪ್ರದೇಶದಲ್ಲಿ ಅಂತಹ ಸಮಸ್ಯೆಯಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.

ಮಳೆ, ಪ್ರವಾಹದಿಂದ ನೈಸರ್ಗಿಕ ಭೂ ಪ್ರದೇಶಗಳಿಗೆ ಯಾವುದೇ ಹಾನಿಯಾಗಿಲ್ಲ. ಇದರಿಂದಾಗಿ ಅರಣ್ಯಕ್ಕೆ ಹೆಚ್ಚಿನ ಹಾನಿಯಾಗಿಲ್ಲ. ವನ್ಯಜೀವಿಗಳಿಗೆ ವಿಕೋಪದ ಮುನ್ಸೂಚನೆ ದೊರೆಯುವುದರಿಂದ ಅವು ಮೊದಲೇ ಸುರಕ್ಷಿತ ಪ್ರದೇಶಗಳನ್ನು ಸೇರುತ್ತವೆ. ಹೀಗಾಗಿ ಕೊಡಗು ಸೇರಿದಂತೆ ಮಲೆನಾಡು ಭಾಗದಲ್ಲಿ ಆಗಿರುವ ಅನಾಹುತದಿಂದ ವನ್ಯಜೀವಿಗಳು ಮೃತಪಟ್ಟಿಲ್ಲ.
– ಜಯರಾಂ,
ಪಿಸಿಸಿಎಫ್, ವನ್ಯಜೀವಿ ವಿಭಾಗ

ಬೆಂಗಳೂರಿನಿಂದ ನಮ್ಮ ಸಂಘಟನೆಯ ಕಾರ್ಯಕರ್ತರು ಯಾರೂ ಹೋಗಿಲ್ಲ.ಆದರೆ, ಕೊಡಗಿನಲ್ಲೇ ಇರುವ ಐದಾರು ಮಂದಿ ಕಾರ್ಯಕರ್ತರು ಕೂಡ ಘಟನೆಗಳ ಬಗ್ಗೆ ಸರಿಯಾಗಿ ಮಾಹಿತಿ ಕೊಡುತ್ತಿಲ್ಲ. ಹೀಗಾಗಿ,ಪ್ರಾಣಿಗಳ ಸಾವು-ನೋವಿನ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ.
– ಪುಷ್ಪವತಿ, ಕಾರ್ಯದರ್ಶಿ
ಪ್ರಾಣಿ ದಯಾ ಸಂಘ, ಹೆಬ್ಟಾಳ

– ಪ್ರದೀಪ್‌ಕುಮಾರ್‌ ಎಂ.

ಚಿತ್ರ: ಎಚ್‌. ಫ‌ಕ್ರುದ್ದೀನ್‌

Advertisement

Udayavani is now on Telegram. Click here to join our channel and stay updated with the latest news.

Next