Advertisement

ಚಿತ್ರಕಲಾ ಪರಿಷತ್ತಿನಲ್ಲಿ ವನ್ಯಜೀವಿಗಳ ಕಲರವ

12:54 PM Oct 17, 2018 | |

ಬೆಂಗಳೂರು: ಸದಾ ಚಿತ್ರಕಲೆಗಳ ಸೌಂದರ್ಯದಿಂದ ಕೂಡಿದ್ದ ಚಿತ್ರಕಲಾ ಪರಿಷತ್ತಿನಲ್ಲಿ ವನ್ಯಜೀವಿಗಳ ಕಲರವ ಕೇಳುವಂತಾಗಿದೆ. ಗ್ರೌಂಡ್‌ ಥಷ್‌, ಬುಲ್‌ ಬುಲ್‌, ರೀವರ್‌ ಟರ್ನ್, ಕಿಂಗ್‌ ಫಿಷರ್‌, ರಾತ್ರಿ ಬಕ, ಮಲಬಾರ್‌ ಟ್ರೋಗನ್‌ ಬರ್ಡ್‌, ಕೆಂಪು ಮುನಿ ಹಕ್ಕಿ, ಸೂರಹಕ್ಕಿ, ಟಿಟಿಬಾ ಸೇರಿದಂತೆ ದೇಸಿ ಮತ್ತು ವಿದೇಶಿ ಹಕ್ಕಿಗಳ ಸಂಗಮವಾಗಿದೆ. ಜತೆಗೆ ವನ್ಯ ಮೃಗಗಳ ದರ್ಶನವೂ ಸಿಗುತ್ತದೆ.

Advertisement

ಗೂಡಿಕಟ್ಟಿ ಸಂಸಾರ ಹೂಡಲೆಂದೇ ಎಲ್ಲೋ ಇರುವ ಜೇಡರ ಬಲೆಯನ್ನು ಹುಡುಕಿ ಕೊಕ್ಕಿನಲ್ಲಿ ಹೆಕ್ಕಿ ಸಾಗುತ್ತಿರುವ ಸೂರಹಕ್ಕಿ  ಹಾಗೂ ತನ್ನ ಪುಟ್ಟ ಮರಿಗಳಿಗಾಗಿ ಹುಲ್ಲಿನ ತೆನೆಯನ್ನು ಕೊಕ್ಕಿನಲ್ಲಿರಿಸಿಕೊಂಡು ಗೂಡಿಗೆ ಮರಳುತ್ತಿರುವ ಕೆಂಪುಮುನಿ ಹಕ್ಕಿ ಸೇರಿದಂತೆ  ನೂರಾರು ಖಗಸಂಕುಲಗಳ ಪ್ರಕೃತಿಯೊಂದಿಗಿನ ಒಡನಾಡಿ ತನದ ಬದುಕಿನ ಪುಟಗಳು ಇಲ್ಲಿ ಹರವಿಕೊಂಡಿದ್ದು, ವನ್ಯಜೀವಿ ಆಸಕ್ತರನ್ನು ಸೆಳೆಯುತ್ತಿದೆ.

ನಗರದ ಕುಮಾರ ಕೃಪಾ ರಸ್ತೆಯಲ್ಲಿರುವ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಮಂಗಳವಾರದಿಂದ ಭಾನುವಾರದವರೆಗೆ ವ‌ನ್ಯಜೀವಿ ಛಾಯಾಗ್ರಾಹಕ ಲೋಕೇಶ್‌ ಮೊಸಳೆ ಸೆರೆಹಿಡಿದಿರುವ ವನ್ಯಜೀವಿಗಳ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದ್ದು, ಹಿಮಾಲಯದಿಂದ ಕನ್ಯಾಕುಮಾರಿವರೆಗೂ ವಾಸಿಸುವ ಪ್ರಾಣಿ ಮತ್ತು ಪಕ್ಷಿ ಸಂಕುಲಗಳನ್ನು ವೀಕ್ಷಿಸಬಹುದಾಗಿದೆ.

ಸಂಕ್ರಾಂತಿ ವೇಳೆ ದೂರದ ಮಂಗೋಲಿಯಾದಿಂದ ರಾಜ್ಯಕ್ಕೆ ವಲಸೆ ಬರುವ ಪರ್ವತ ಹಕ್ಕಿ, ಹಿಮಾಲಯದಲ್ಲಿ ಯಾವಗಲೂ ಬಿಲದಲ್ಲೇ ಅವಿತುಕೊಳ್ಳುವ ಮಾರ್ಮೂಟ್‌, ಪಶ್ಚಿಮ ಘಟ್ಟದಲ್ಲಿ ಹೆಚ್ಚಾಗಿ ಕಾಣಸಿಕೊಳ್ಳುವ ಮಲಬಾರ್‌ ಟ್ರೋಗನ್‌, ಉತ್ತರ ಭಾರತದ ಹಲವು ಕಡೆಗಳಲ್ಲಿ ಕಂಡು ಬರುವ ಕಾಡುಕೋಳಿ, ಕೊಡಗು ಮತ್ತು ಆಗುಂಬೆ ಭಾಗದಲ್ಲಿ ಜೀವಿಸುವ  ಹಾಗೂ ಅಳಿವಿನಂಚಿನಲ್ಲಿರುವ ಸಿಂಗಳಿಕ, ಹೊಸಪೇಟೆ ವ್ಯಾಪ್ತಿಯಲ್ಲಿ ಕಂಡು ಬರುವ ವಿದೇಶಿ ಮೂಲದ ರಾಜಹಂಸ ಸೇರಿದಂತೆ ಹಲವು ಜಾತಿಯ ವನ್ಯಜೀವಿಗಳನ್ನು ಕಾಣಬಹುದಾಗಿದೆ.

ಮೊಸಳೆ ಕಾಯಕಕ್ಕೆ ಪ್ರಶಂಸೆ: “ಬನದ ಬದುಕು’ ಶೀರ್ಷಿಕೆಯಡಿ ಆರಂಭವಾಗಿರುವ ವನ್ಯಜೀವಿಗಳ ಕುರಿತ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಲೋಕೇಶ್‌ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು. ಇವರ ಕಾಫಿಟೇಬಲ್‌ ಪುಸ್ತಕ ವನ್ಯಜೀವಿಗಳ ಬಗ್ಗೆ ಪರಿಚಯ ನೀಡಲಿದ್ದು, ಯುವ ಪೀಳಿಗೆಗೆ  ಖಗ ಸಂಕುಲಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ಕಟ್ಟಿಕೊಡಲಿದೆ. ಈ ಕ್ಷೇತ್ರದಲ್ಲಿ ಲೋಕೇಶ್‌ ಮತ್ತಷ್ಟು ಸಾಧನೆ ಮಾಡಲಿ ಎಂದು ಆಶಿಸಿದರು.

Advertisement

ಮಾಜಿ ಸಚಿವ ಪಿ.ಜಿ.ಆರ್‌.ಸಿಂಧ್ಯಾ ಮಾತನಾಡಿ, ಕೃಪಾಕರ-ಸೇನಾನಿ, ಪೂರ್ಣಚಂದ್ರ ತೇಜಸ್ವಿ, ಎಂ.ವೈ.ಘೋರ್ಪಡೆ ಅವರುಗಳು ವನ್ಯಜೀವಿ ಛಾಯಾಚಿತ್ರ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಅವರ ನಂತರದ ಸಾಲಿಗೆ ಲೋಕೇಶ್‌ ಮೊಸಳೆ ಸೇರುತ್ತಾರೆ. ಸಾಕಷ್ಟು ಪ್ರತಿಭೆ ಇವರಲ್ಲಿದ್ದು, ರಾಷ್ಟ್ರ ಮಟ್ಟದವರೆಗೂ ಹೆಸರು ಮಾಡಲಿ ಎಂದರು. 

ಭಾರತೀಯ ವಿಜ್ಞಾನ ಕಾಂಗ್ರೆಸ್‌ನ ಅಧ್ಯಕ್ಷ ಕೆ.ಎಸ್‌.ರಂಗಪ್ಪ, ಕವಯಿತ್ರಿ ಎಚ್‌.ಆರ್‌.ಸುಜಾತ, ಗ್ರಾವಿಟಿ ಒನ್‌ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಧನಂಜಯ ಬಸವರಾಜ್‌ ಇತರರು ಹಾಜರಿದ್ದರು.

ಕಾಡಿನಲ್ಲಿ ಕ್ಯಾಮರಾದಲ್ಲಿ ವನ್ಯಜೀವಿಗಳ ಚಿತ್ರಗಳನ್ನು ಸೆರೆಹಿಡಿಯುವುದು ಸಾಮಾನ್ಯ ಕೆಲಸವಲ್ಲ. ಆದರೂ ತಾಳ್ಮೆ ವಹಿಸಿ ನಮ್ಮ ಪಕ್ಕದೂರಿನ ಹುಡುಗ ಲೋಕೇಶ್‌ ಖಗಸಂಕುಲಗಳ ಬದುಕನ್ನೇ ಕ್ಯಾಮರಾ ಕಣ್ಣಿನಲ್ಲಿ ಸೆರೆ ಹಿಡಿದಿದ್ದಾನೆ. ಅಲ್ಲದೆ ಅವುಗಳಿಗೆ ಪುಸ್ತಕ ರೂಪದಲ್ಲಿ ಜೀವ ನೀಡಿದ್ದಾನೆ. 
-ಎಚ್‌.ಡಿ.ದೇವೇಗೌಡ, ಮಾಜಿ ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next