ಆನೇಕಲ್: ನಮ್ಮ ಸುತ್ತ ಮುತ್ತಲಿನ ಕಾಡು, ವನ್ಯಜೀವಿಗಳ ಸಂರಕ್ಷಣೆ ನಮ್ಮ ಹೊಣೆಯಾಗಬೇಕು ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನ ಕಾರ್ಯ ನಿರ್ವಾಹಕ ನಿರ್ದೇಶಕ ವಿಪಿನ್‌ಸಿಂಗ್ ಹೇಳಿದರು. ತಾಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ವನ್ಯಜೀವಿ ಸಪ್ತಾಹದ ಅಂಗವಾಗಿ ಸಂರಕ್ಷಣೆಗಾಗಿ ನಡಿಗೆ ಎಂಬ ಧ್ಯೇಯದೊಂದಿಗೆ ಉದ್ಯಾನ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ಸುತ್ತ ಮುತ್ತಲಿನ ಪರಿಸರ, ಅರಣ್ಯ, ವನ್ಯಜೀವಿಗಳ ಸಂರಕ್ಷಣೆ ಕೇಲವ ಸರ್ಕಾರ ಮತ್ತು ಅರಣ್ಯ ಇಲಾಖೆಯದ್ದು, ಎಂದು ಭಾವಿಸದೆ ಅದರ ಸಂರಕ್ಷಣೆಗೆ ನಾಗರಿಕರು ಮುಂದಾಗಬೇಕು. ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದರು.
ಜೈವಿಕ ಉದ್ಯಾನವನ ಎಂದರೆ ಪ್ರವಾಸಿಗರಿಗೆ ಮನರಂಜನೆ ನೀಡುವ ತಾಣವಲ್ಲ. ಪ್ರಾಣಿ, ಪಕ್ಷಿ, ಕೀಟಗಳ ಬಗ್ಗೆ ಮಾಹಿತಿ ನೀಡುವ ಸ್ಥಳ. ಮನುಷ್ಯ ನೆಮ್ಮದಿಯಾಗಿರ ಬೇಕಾದರೆ ನಮ್ಮ ಪರಿಸರದಲ್ಲಿ ಜೀವಿ, ಜಲಚರ, ಪ್ರಾಣಿ ಪಕ್ಷಿಗಳು ಸಮತೋಲನದಲ್ಲಿರ ಬೇಕು. ಅದರಲ್ಲೂ ಇತ್ತೀಚೆಗೆ ಹಲವು ಪಕ್ಷಗಳ ಸಂಕುಲ ನಶಿಸಿ ಹೋಗುತ್ತಿವೆ ಹಾಗಾಗಿ ಅವುಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಜವಾಬ್ದಾರಿ ಪೋಷಕರ ಮೇಲಿದೆ ಎಂದರು.
ವನ್ಯಜೀವಿ ಸಪ್ತಾಹದ ಹಿನ್ನಲೆಯಲ್ಲಿ ಉದ್ಯಾನವಲ್ಲಿ ನಡಿಗೆ ಸೇರಿದಂತೆ ವನ್ಯಜೀವಿ ಚಿತ್ರಕಲಾ, ಛಾಯಾಚಿತ್ರ ಸ್ಪರ್ಧೆ, ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇಂದು ಸುಮಾರು 50 ಕ್ಕೂ ಹೆಚ್ಚು ಪರಿಸರ ಆಸಕ್ತರು ಆಗಮಿಸಿದ್ದು, ಉದ್ಯಾನವನದ ಸಸ್ಯಹಾರಿ ಪ್ರಾಣಿಗಳ ಸಫಾರಿಯಲ್ಲಿ ಐದು ಕೀ.ಮೀ ನಡಿಗೆಯಲ್ಲಿ ಪಕ್ಷಿಗಳ ವೀಕ್ಷಣೆ, ಚಿಟ್ಟೆಗಳ ಮಾಹಿತಿ ನೀಡಲಾಯಿತು ಎಂದು ತಿಳಿಸಿದರು.
ನಡಿಗೆಯಲ್ಲಿ ಉಪ ನಿರ್ದೇಶಕ ಕುಶಾಲಪ್ಪ, ವಲಯ ಅರಣ್ಯಾಧಿಕಾರಿಗಳಾದ ಚಂದ್ರೇಗೌಡ, ಪ್ರವೀಣ್, ಭಾಗ್ಯಲಕ್ಷ್ಮೀ, ಶಿಕ್ಷಣಾಧಿಕಾರಿ ಅಮಲ, ಸಾರ್ವಜನಿಕ ಸಂಪರ್ಕಅಧಿಕಾರಿ ಶ್ರೀನಿವಾಸ್, ಅಕ್ಷರಸ್ತ ಸಹಾಯಕ ಮಧು, ಸುರೇಶ್ ಇನ್ನಿತರರಿದ್ದರು.