Advertisement

ವನ್ಯಜೀವಿ, ಪರಿಸರ ಪ್ರಿಯರ ನೆಚ್ಚಿನ ತಾಣ: ಕೊಂಡುಕುರಿ ಅಭಯಾರಣ್ಯ

07:52 PM Jan 05, 2022 | Team Udayavani |

ದಾವಣಗೆರೆ: ಇದು ಕೇವಲ ಜೀವವೈವಿಧ್ಯದ ತಾಣವಷ್ಟೇ ಅಲ್ಲ, ಅಪರೂಪದ ಜೀವವೈವಿಧ್ಯದ ಕಣಜ ಎಂಬಂತಿರುವ ಜಿಲ್ಲೆಯ ಜಗಳೂರು ತಾಲೂಕಿನ ಹೊಸಕೆರೆಯ (ಗುರುಸಿದ್ದಾಪುರ) ರಂಗಯ್ಯನದುರ್ಗ ಕೊಂಡುಕುರಿ ಅಭಯಾರಣ್ಯವು ದಶಕದ ಅವಧಿಯಲ್ಲಿ ತನ್ನೊಡಲೊಳಗಿನ ಜೀವವೈವಿಧ್ಯವನ್ನು ಇಮ್ಮಡಿಸಿಕೊಂಡು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

Advertisement

ರಂಗಯ್ಯನದುರ್ಗ ಕೊಂಡುಕುರಿ ಅಭಯಾರಣ್ಯದಲ್ಲಿ ಅಪರೂಪದ ವನ್ಯಜೀವಿ ಕೊಂಡುಕುರಿ ಸೇರಿದಂತೆ ವಿವಿಧ ಪ್ರಾಣಿ, ಪಕ್ಷಿಗಳು, ಸಸ್ಯ ಸಂಕುಲಕ್ಕೆ ಆಶ್ರಯತಾಣವಾಗಿದೆ. ಈ ಅರಣ್ಯ ಪ್ರದೇಶ ಅಭಯಾರಣ್ಯ ಎಂದು ಘೋಷಣೆಯಾದ ಬಳಿ ಮಾನವನ ಹಸ್ತಕ್ಷೇಪಕ್ಕೆ ಸಂಪೂರ್ಣ ಕಡಿವಾಣ ಬಿದ್ದಿದ್ದು, ದಶಕದ ಅವಧಿಯಲ್ಲಿ ಇಲ್ಲಿರುವ ಪ್ರಾಣಿಗಳು, ಪಕ್ಷಿಗಳು, ವಿವಿಧ ಕೀಟಗಳು, ಸಸ್ಯ ಪ್ರಭೇದಗಳು ಇನ್ನಷ್ಟು ಸಮೃದ್ಧವಾಗಿದೆ. ರಂಗಯ್ಯನದುರ್ಗ ಕೊಂಡುಕುರಿ ಅಭ ಯಾರಣ್ಯ ದೇಶದ ಅಪರೂಪದ ಜೀವವೈವಿಧ್ಯ ತಾಣಗಳಲ್ಲಿ ಒಂದು. 1904ರಲ್ಲಿ ಮೀಸಲು ಅರಣ್ಯ ಪ್ರದೇಶವೆಂದು ಘೋಷಿಸಲಾಗಿದೆ. ಇದು 7723.63 ಹೆಕ್ಟೇರ್‌ ಅರಣ್ಯ ಪ್ರದೇಶ ಹೊಂದಿದೆ. ವಿಶ್ವದಲ್ಲಿ ವಿನಾಶದಂಚಿನಲ್ಲಿರುವ ಕೊಂಡುಕುರಿಗಳು ಇಲ್ಲಿ ಕಂಡು ಬಂದಿದ್ದರಿಂದ ರಾಜ್ಯ ಸರ್ಕಾರ ಅವುಗಳ ಸಂರಕ್ಷಣೆಗಾಗಿ ಈ ಅರಣ್ಯ ಪ್ರದೇಶವನ್ನು 2011ರಲ್ಲಿ “ರಂಗಯ್ಯನದುರ್ಗ ಕೊಂಡುಕುರಿ ಅಭಯಾರಣ್ಯ’ ಎಂದು ಘೋಷಿಸಿದೆ.

ಸಮೃದ್ಧ ಜೀವವೈವಿಧ್ಯ
ರಂಗಯ್ಯನದುರ್ಗ ಕೊಂಡುಕುರಿ ಅಭಯಾರಣ್ಯವು ಒಣ ಕುರುಚಲು ಅರಣ್ಯ ಪ್ರದೇಶ ಹೊಂದಿದೆ. ಕೊಂಡುಕುರಿ, ಚಿರತೆ, ಕಾಡುಹಂದಿ, ಕಿರುಬ, ಚಿಪ್ಪುಹಂದಿ, ನರಿ, ತೋಳ, ಮೊಲ ಹೀಗೆ ವಿವಿಧ ಪ್ರಾಣಿಗಳು ಅರಣ್ಯದಲ್ಲಿವೆ. ಅಳಿವಿನಂಚಿನಲ್ಲಿರುವ ಅಪರೂಪದ ಹುಲ್ಲೆ ಜಾತಿಗೆ ಸೇರಿದ ವನ್ಯಜೀವಿ ಚಿಂಕಾರ ಅಥವಾ ಸಣ್ಣಹುಲ್ಲೆ ಎಂದು ಕರೆಯಲ್ಪಡುವ ವನ್ಯಜೀವಿ ಸಹ ಇಲ್ಲಿ ಮೊದಲ ಬಾರಿ ಕ್ಯಾಮರಾ ಟ್ರ್ಯಾಪ್‌ನಲ್ಲಿ ದಾಖಲಾಗಿದೆ. ಇದು ಅತಿ ವಿರಳಜೀವಿಯಾಗಿದ್ದು, ಇದರ ವೈಜ್ಞಾನಿಕ ಹೆಸರು “ಗೆಜೆಲ್ಲಾ ಬೆನ್ನೆಟ್ಟಿ’. ನವಿಲು, ಮರಕುಟಿಕ ಸೇರಿದಂತೆ ಹತ್ತು ಹಲವು ಪಕ್ಷಿ ಪ್ರಬೇಧವೂ ಇಲ್ಲಿದೆ ಇನ್ನು ದಿಂಡುಗ, ಕಮರ, ಹೊನ್ನೆ, ಉದಯ, ತಾರೆ, ಆಲ, ಅರಳಿ, ಸೋಮೆ, ಜಾನಿ ಸೇರಿದಂತೆ ನಾನಾ ಜಾತಿಯ ಗಿಡ-ಮರಗಳು ಸಹ ಇಲ್ಲಿವೆ. ಅಮೃತಬಳ್ಳಿ, ಶತಾವರಿ, ಕಾಡುತುಳಸಿ, ನನ್ನಾರಿಯಂಥ ಔಷಧೀಯ ಸಸ್ಯಗಳೂ ಸಹ ಇಲ್ಲಿ ಕಂಡು ಬರುತ್ತವೆ.

ಅರಣ್ಯದ ರಕ್ಕಸಘಟ್ಟವನ್ನು ಏರುವ ವೇಳೆ ಹಸಿರು ಗಿಡ-ಮರಗಳು ಕಣ್ತುಂಬಿ ತಂಪು ಅನುಭವ ನೀಡಿದರೆ, ಕಲ್ಲಿನ ಬಂಡೆಗಳು ಬೆವರಿಳಿಸುತ್ತವೆ. ದಾರಿ ಮಧ್ಯೆ ಕಾಡುಬಿಕ್ಕೆ, ಕವಳಿ, ನಗಾರಿ, ಬೇಲ, ಮುರುಕಿ, ಕಾರೆ, ಹತ್ತಿಯಂಥ ಕಾಡಿನ ಹಣ್ಣಿನ ಗಿಡಲು ಬಾಯಲ್ಲಿ ನೀರೂರಿಸುತ್ತವೆ. ಇಲ್ಲಿಯ ಅಪಾರ ಜೀವ ವೈವಿಧ್ಯ ಪ್ರಾಣಿ, ಪಕ್ಷಿಗಳನ್ನು ವೀಕ್ಷಿಸಲು ಅಲ್ಲಲ್ಲಿ ವೀಕ್ಷಣಾ ಗೋಪುರ ವ್ಯವಸ್ಥೆಯಿದ್ದು ಪರಿಸರ ಪ್ರೇಮಿಗಳನ್ನು ಕೈಬೀಸಿ ಕರೆಯುತ್ತಿದೆ. ಆಕರ್ಷಕ ಯೋಜನೆ: ಕೊಂಡುಕುರಿ ಅಭಯಾರಣ್ಯವನ್ನು ಇನ್ನಷ್ಟು ಆಕರ್ಷಣೀಯವನ್ನಾಗಿ ಮಾಡಲು ಇಲಾಖೆ ಯೋಜನೆ ಹಾಕಿಕೊಂಡಿದೆ. ಇಲ್ಲೊಂದು ಥೀಮ್‌ ಪಾರ್ಕ್‌, ಮಕ್ಕಳ ಪಾರ್ಕ್‌, ಪ್ರಾಣಿ ಪಕ್ಷಿಗಳ ಶಿಲ್ಪ ಕಲಾಕೃತಿ, ವೀಕ್ಷಣಾ ಕೇಂದ್ರಗಳು, ಔಷಧಿ ಸಸ್ಯ ವನ, ಜೀವವೈವಿಧ್ಯದ ಕುರಿತು ಮಾಹಿತಿ ನೀಡುವ ಗ್ರಂಥಾಲಯ, ಕ್ಯಾಂಟೀನ್‌ ಹೀಗೆ ಹತ್ತು ಹಲವು ಸೌಲಭ್ಯಗಳನ್ನು ಕಲ್ಪಿಸಿ ಪ್ರವಾಸಿಗರನ್ನು ಆಕರ್ಷಿಸುವ ಯೋಜನೆ ಇದೆ ಎನ್ನುತ್ತಾರೆ ಅರಣ್ಯ ಇಲಾಖೆಯ ಅಧಿಕಾರಿ.ಒಟ್ಟಾರೆ ಬಲು ಅಪರೂಪದ ಈ ಜೀವವೈವಿಧ್ಯ ತಾಣವನ್ನು ಸಂರಕ್ಷಿಸುವಲ್ಲಿ ಅರಣ್ಯ ಇಲಾಖೆ ವಿಶೇಷ ಗಮನಹರಿಸಿದೆ. ಪರಿಸರ ಪ್ರೇಮಿಗಳು ಇಲ್ಲಿಗೆ ಭೇಟಿ ನೀಡಿ ಅಪರೂಪದ ಪ್ರಾಣಿ, ಪಕ್ಷಿ, ಸಸ್ಯ ಸಂಕುಲಗಳನ್ನು ಕಣ್ತುಂಬಿಸಿಕೊಳ್ಳಬಹುದಾಗಿದೆ.

ಮಾರ್ಗಸೂಚಿ-ಸೌಲಭ್ಯ

Advertisement

ರಂಗಯ್ಯನದುರ್ಗ ಕೊಂಡುಕುರಿ ಅಭಯಾರಣ್ಯ ಜಿಲ್ಲಾ ಕೇಂದ್ರ ದಾವಣಗೆರೆಯಿಂದ 28 ಕಿಮೀ (ಪಲ್ಲಾಗಟ್ಟೆ ಮಾರ್ಗ), ತಾಲೂಕು ಕೇಂದ್ರ ಜಗಳೂರಿನಿಂದ 22 ಕಿಮೀ ಅಂತರದಲ್ಲಿದೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಉಳಿದುಕೊಳ್ಳಲು ಅಭಯಾರಣ್ಯವಿರುವ ಗುರುಸಿದ್ದಾಪುರ ಗ್ರಾಮದಲ್ಲಿಯೇ ರಂಗಯ್ಯದುರ್ಗ ಅರಣ್ಯ ವಿಶ್ರಾಂತಿ ಗೃಹ, ಶ್ರೀ ಚೌಡೇಶ್ವರಿ ವಿಶ್ರಾಂತಿ ಗೃಹಗಳಿವೆ. ಹತ್ತಿರದಲ್ಲಿಯೇ ಇರುವ ಜಗಳೂರು ತಾಲೂಕು ಕೇಂದ್ರ ಹಾಗೂ ಜಿಲ್ಲಾ ಕೇಂದ್ರ ದಾವಣಗೆರೆಯಲ್ಲಿ ಅಪಾರ ಸಂಖ್ಯೆಯಲ್ಲಿ ಲಾಡ್ಜ್ಗಳಿವೆ.

ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next