ಪುಂಜಾಲಕಟ್ಟೆ: ಕಾಡಿನಿಂದ ಊರಿಗೆ ಬಂದ ಕಾಡುಕೋಣವೊಂದು ಗೋಬರ್ ಗ್ಯಾಸ್ ಗುಂಡಿಯೊಳಗೆ ಬಿದ್ದ ಘಟನೆ ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾ.ಪಂ. ವ್ಯಾಪ್ತಿಯ ಕಾಡಬೆಟ್ಟು ಗ್ರಾಮದ ಕಾಡಬೆಟ್ಟು-ಪೂರ್ಲೊಟ್ಟುವಿನಲ್ಲಿ ಶನಿವಾರ ಸಂಭವಿಸಿದ್ದು, ಕಾಡುಕೋಣವನ್ನು ರಕ್ಷಿಸಲಾಗಿದೆ. ಆದರೆ ಬಳಿಕ ಕಾಡುಕೋಣ ಬಾಲಕಿಯೊಬ್ಬಳಿಗೆ ತಿವಿದು ಗಾಯಗೊಳಿಸಿದೆ.
ಇಲ್ಲಿನ ನಿವಾಸಿ ವಿಲ್ಫೆ†ಡ್ ಡಿ’ಸೋಜಾ ಅವರ ತೋಟದಲ್ಲಿದ್ದ ಗೋಬರ್‌ಗ್ಯಾಸ್‌ನ ಗುಂಡಿಗೆ ಕಾಡುಕೋಣ ಬಿದ್ದಿದ್ದು, ಅರಣ್ಯ ಇಲಾಖೆಯ ಹರಸಾಹಸದಿಂದ ಪ್ರಾಣಾಪಾಯದಿಂದ ಪಾರಾಗಿದೆ.
ವಿಲ್ಫೆ†ಡ್ ವಿದೇಶದಲ್ಲಿದ್ದು, ಎರಡು ತಿಂಗಳ ಹಿಂದಷ್ಟೆ ಮನೆ ಖರೀದಿಸಿದ್ದರು. ಮನೆ ಮಂದಿ ಮಂಗಳೂರಿನಲ್ಲಿ ವಾಸ ವಾಗಿದ್ದು, ಕೆಲಸಗಾರರು ತೋಟ ನೋಡಿ ಕೊಳ್ಳುತ್ತಿದ್ದರು. ತೋಟದಲ್ಲಿದ್ದ ಗೋಬರ್‌ಗ್ಯಾಸ್ ಘಟಕ ನಿರುಪಯುಕ್ತ ವಾಗಿದ್ದು, ಫೈಬರ್ ಮುಚ್ಚಿಗೆ ಹರಿದಿತ್ತು. ರಾತ್ರಿ ಕಾಡು ಕೋಣ ನೀರನ್ನರಸಿ ಬರುವಾಗ ಈ ಗುಂಡಿಗೆ ಬಿದ್ದಿರಬೇಕು ಎಂದು ಅಂದಾಜಿಸಲಾಗಿದೆ. ಬೆಳಗ್ಗೆ ಕೆಲಸದವರಿಗೆ ಕಾಡುಕೋಣದ ಆಕ್ರಂದನ ಕೇಳಿ ಬಂದ ವೇಳೆ ಈ ಘಟನೆ ಬೆಳಕಿಗೆ ಬಂದಿತ್ತು.
ಕೆಲಸದವರು ಮನೆಮಂದಿಗೆ ಮಾಹಿತಿ ನೀಡಿದ್ದರು. ಅವರು ಆಗಮಿಸಿ ಬಂಟ್ವಾಳ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಬಂಟ್ವಾಳ ಉಪವಲಯ ಸಂರಕ್ಷಣಾಧಿಕಾರಿ ಸುರೇಶ್ ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರ ಸಹಾಯದಿಂದ ಕಾಡುಕೋಣವನ್ನು ಮೇಲಕ್ಕೆತ್ತುವ ಪ್ರಯತ್ನ ನಡೆಸಿದರು. ಬಳಿಕ ಜೆಸಿಬಿ ಯಂತ್ರ ತರಿಸಿ ಗೋಬರ್‌ಗ್ಯಾಸ್ ಗುಂಡಿಯ ಸುತ್ತ ಮಣ್ಣು ತೆಗೆದು ಗುಂಡಿಯನ್ನು ಅಗೆದು ಮುಕ್ತಗೊಳಿಸಿದ ಕೂಡಲೇ ಕಾಡುಕೋಣ ಕಾಡಿನತ್ತ ಓಟಕ್ಕಿತ್ತಿತು.
ಕಾವಳಪಡೂರು ಗ್ರಾ.ಪಂ. ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಅರಣ್ಯ ಇಲಾಖೆಯ ಸಿಬಂದಿ ವಿನಯ್, ಭಾಸ್ಕರ್, ಸ್ಮಿತಾ, ಅನಿತಾ, ಅನಿಲ್, ಪರಿಸರ ಸ್ನೇಹಿ ಕಿರಣ್ ಪಿಂಟೋ ಮತ್ತು ಗ್ರಾಮಸ್ಥರು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಕಾಡುಕೋಣ ದಾಳಿ
ಮಧ್ಯಾಹ್ನ ಬಳಿಕ ಮತ್ತೆ ಕಾಡಬೆಟ್ಟು ಬಳಿ ಕಾಡುಕೋಣ ಕಾಣಿಸಿಕೊಂಡಿದ್ದು, ಕಾಡಬೆಟ್ಟು ಬಳಿಯ ಕಾಂದಾಡಿಯಲ್ಲಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಬಾಲಕಿ ಹರ್ಷಾ ಮತ್ತು ಅವರ ಚಿಕ್ಕಮ್ಮ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಚಂದ್ರಾವತಿ ಅವರ ಮೇಲೆ ದಾಳಿ ಮಾಡಿದೆ. ಇದರಿಂದ ಬಾಲಕಿಯ ಕೈ ಮುರಿತಕ್ಕೊಳಗಾಗಿದ್ದು, 108 ಆ್ಯಂಬುಲೆನ್ಸ್‌ನಲ್ಲಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ವೆನಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.