Advertisement

ಅಲ್ಲಲ್ಲಿ ಏಳುತ್ತಲೇ ಇದೆ ಬೆಂಕಿ

12:30 AM Feb 25, 2019 | |

ಗುಂಡ್ಲುಪೇಟೆ/ಚಾಮರಾಜನಗರ: ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ ತನ್ನ ರುದ್ರ ನರ್ತನ ತೋರಿರುವ ಕಾಡ್ಗಿಚ್ಚು ಭಾನುವಾರ ಕೊಂಚ ನಿಯಂತ್ರಣಕ್ಕೆ ಬಂದಿದೆ. ಆದರೂ ಅಲ್ಲಲ್ಲಿ ಬೆಂಕಿ ಏಳುತ್ತಿದೆ. ಕಳೆದ ಮೂರು ದಿನಗಳಿಂದ ವ್ಯಾಪಿಸಿದ ಕಾಡ್ಗಿಚ್ಚಿಗೆ ಸಾವಿರಾರು ಎಕರೆ ಅರಣ್ಯ ಪ್ರದೇಶ ಸುಟ್ಟು ಬೂದಿಯಾಗಿದ್ದು, ವನ್ಯಜೀವಿಗಳು ಸಹ ಅಗ್ನಿಗಾಹುತಿಯಾಗಿವೆ.

Advertisement

ಶನಿವಾರ ರಾಷ್ಟ್ರೀಯ ಹೆದ್ದಾರಿಯ ಮೂಲಕ ಬೆಂಕಿಯು ಹಿಮವದ್‌ ಗೋಪಾಲಸ್ವಾಮಿ ಬೆಟ್ಟದ ದೇವಾಲಯದವರೆಗೂ ವ್ಯಾಪಿಸಿತ್ತು. ಶನಿವಾರ ಮಧ್ಯರಾತ್ರಿಯಾದರೂ ಬೆಂಕಿ ಧಗಧಗನೇ ಉರಿಯುತ್ತಿತ್ತು. ಬೆಟ್ಟದ ತಪ್ಪಲಿನ ಗ್ರಾಮಗಳಿಗೆ ಬೆಂಕಿ ಕಾಣಿಸುತ್ತಲೇ ಇತ್ತು. ಭಾನುವಾರ ಬೆಳಗ್ಗೆ ಹೊಗೆ ಆಕಾಶದೆತ್ತರಕ್ಕೆ ವ್ಯಾಪಿಸಿತ್ತು. ರಾತ್ರಿಯಿಂದ ಬೆಳಗಿನ ಜಾವದ ಕ್ಷಣದವರೆಗೂ ನಿಯಂತ್ರಣಕ್ಕೆ ಸಿಲುಕದ ಬೆಂಕಿಯ ಕೆನ್ನಾಲಿಗೆಯು ಭಾನುವಾರ ಮಧ್ಯಾಹ್ನದ ವೇಳೆಗೆ ಸ್ವಲ್ಪ ತಹಬದಿಗೆ ಬಂತು. ಈ ಬೆಂಕಿ ಹಿಮವದ್‌ಗೋಪಾಲಸ್ವಾಮಿ ದೇವಾಲಯದ ಮುಂದೆ 2 ಕಿ.ಮೀ. ವಿಸ್ತಾರದವರೆಗೂ ವ್ಯಾಪಿಸಿತ್ತು.

ಭಾನುವಾರ ಮೇಲು ಕಾಮನಹಳ್ಳಿ ಅರಣ್ಯ ವ್ಯಾಪ್ತಿ ಮತ್ತು ರಾಷ್ಟ್ರೀಯ ಹೆದ್ದಾರಿ 67 ಬಂಡೀಪುರ ಸ್ವಾಗತ ಕಚೇರಿಯವರೆಗೂ ಬೆಂಕಿ ಸಂಪೂರ್ಣವಾಗಿ ನಂದಿಹೋಗಿದೆ. ಆದರೆ, ಶನಿವಾರ ರಾತ್ರಿ ಬೀಸಿದ ಗಾಳಿಯ ರಭಸಕ್ಕೆ ಜಿ.ಎಸ್‌ .ಬೆಟ್ಟ ಅರಣ್ಯ ವ್ಯಾಪ್ತಿಯಲ್ಲಿನ ಹಿರಿಕೆರೆಯಿಂದ ಹಿಮವದ್‌ ಗೋಪಾಲಸ್ವಾಮಿ ಬೆಟ್ಟದ ದೇಗುಲದ ಸಮೀಪದವರೆಗೂ ಬೆಂಕಿಯ ಕೆನ್ನಾಲಿಗೆ ಚಾಚುತ್ತಿದೆ.

ಹಿಮವದ್‌ ಗೋಪಾಲಸ್ವಾಮಿ ಬೆಟ್ಟದಲ್ಲಿ ಅಗ್ನಿಯ ನರ್ತನ ಮುಂದುವರಿದ ಹಿನ್ನೆಲೆಯಲ್ಲಿ ಅದರ ಸಮೀಪದಲ್ಲಿರುವ ಮದ್ದೂರು ಅರಣ್ಯಪ್ರದೇಶದಲ್ಲಿ ಈಗಾಗಲೇ ಬೆಂಕಿ ರೇಖೆಯನ್ನು ನಿರ್ಮಿಸಿಕೊಳ್ಳಲಾಗಿದೆ. ಹಿಮವದ್‌ ಗೋಪಾಲಸ್ವಾಮಿ ಬೆಟ್ಟದಿಂದ ಬರುವ ಹುಲಿದಾರಿಯಲ್ಲಿನ ಬೆಂಕಿಗೆ ಅಡ್ಡ ಬೆಂಕಿಯನ್ನು ನೀಡಿ ಬೆಂಕಿಯನ್ನು ಹತೋಟಿಗೆ ತರಲು ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸ್ವಯಂಸೇವಕರು ಹಾಗೂ ಒಂದು ಅಗ್ನಿಶಾಮಕದಳದೊಂದಿಗೆ ಸಂಪೂರ್ಣವಾಗಿ ಸನ್ನದ್ಧರಾಗಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಬಂಡೀಪುರ ಅರಣ್ಯವಲಯದಲ್ಲಿ ಬೆಂಕಿಯು ಹತೋಟಿಗೆ ಬಂದಿದ್ದು ಹಿಮವದ್‌ ಗೋಪಾಲಸ್ವಾಮಿ ಬೆಟ್ಟದಲ್ಲಿ ಬೆಂಕಿ ವ್ಯಾಪಕವಾಗಿದೆ. ಇದನ್ನು ನಂದಿಸಲು ಇನ್ನೂರಕ್ಕೂ ಹೆಚ್ಚು ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಭಾನುವಾರ ಆಸಕ್ತ ಪರಿಸರ ಪ್ರೇಮಿಗಳು ಬೆಂಕಿ ನಂದಿಸಲು ಅರಣ್ಯ ಸಿಬ್ಬಂದಿಗಳಿಗೆ ಸಹಾಯ ಮಾಡಿದರು. ಸುಮಾರು 200 ಕ್ಕೂ ಹೆಚ್ಚಿನ ಅರಣ್ಯ ಸಿಬ್ಬಂದಿ, ಎರಡು ಅಗ್ನಿ ಶಾಮಕ ವಾಹನಗಳು ಮತ್ತು 20 ಮಂದಿ ಸಿಬ್ಬಂದಿ, 50 ಮಂದಿ ಸ್ವಯಂ ಸೇವಕರು, 40 ಜನರಷ್ಟಿದ್ದ ಸಾರ್ವಜನಿಕರು ಬೆಂಕಿ ಆರಿಸುವ ಕಾರ್ಯದಲ್ಲಿ ತೊಡಗಿದ್ದರು.

Advertisement

ಸಚಿವರ ಭೇಟಿ: ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಕಾಡ್ಗಿಚ್ಚಿನಿಂದ ಸುಟ್ಟುಹೋಗಿರುವ ಪ್ರದೇಶಗಳಿಗೆ ಅರಣ್ಯ ಸಚಿವ ಸತೀಶ್‌ ಜಾರಕಿಹೊಳಿ ಭೇಟಿ ನೀಡಿ ಪರಿವೀಕ್ಷಣೆ ನಡೆಸಿದರು. ಬಂಡೀಪುರ ಅರಣ್ಯ ವಲಯಕ್ಕೆ ಸೇರಿದ ಮೇಲುಕಾಮನಹಳ್ಳಿ ಅರಣ್ಯ, ಹಿಮವದ್‌ ಗೋಪಾಲಸ್ವಾಮಿ ಅರಣ್ಯ ವಲಯದಲ್ಲಿ ಕಾಡ್ಗಿಚ್ಚಿನಿಂದ ಹತ್ತಾರು ಸಾವಿರ ಎಕರೆಗಳಷ್ಟು ಅರಣ್ಯ ಸಂಪೂರ್ಣವಾಗಿ ನಾಶವಾಗಿರುವ ಪ್ರದೇಶಗಳಿಗೆ ಸಚಿವರು ಭೇಟಿ ನೀಡಿದರು. “ಕಾಡಿಗೆ ಬಿದ್ದಿರುವ ಬೆಂಕಿ ಪ್ರಕೃತಿ ಸಹಜವೋ ಅಥವಾ ಕಿಡಿಗೇಡಿಗಳ ಕೃತ್ಯವೋ ಎಂಬುದರ ಬಗ್ಗೆ ಸಂಪೂರ್ಣವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದಟಛಿ ಕಠಿಣ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದರು.

ಶಂಕಿತನ ಮೇಲೆ ದೂರು
ಕಾಡಂಚಿನ ಕಳ್ಳಿಪುರ ಗ್ರಾಮದ ನಿವಾಸಿ ಅರುಣ್‌ ಕುಮಾರ ಎಂಬಾತನ ಮೇಲೆ ಅರಣ್ಯಕ್ಕೆ ಬೆಂಕಿ ಹಚ್ಚಿದ್ದಾನೆ ಎಂದು ಆರೋಪಿಸಿ ಅರಣ್ಯಾಧಿಕಾರಿಗಳು ನೀಡಿರುವ ದೂರನ್ನು ಸ್ವೀಕರಿಸಿರುವ ಪೊಲೀಸರು ಎಫ್ಐಆರ್‌ ದಾಖಲಿಸಿದ್ದಾರೆ.

ಸಫಾರಿ ಬಂದ್‌
ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿಕಾಡ್ಗಿಚ್ಚಿನಿಂದ ಸುಟ್ಟುಹೋಗಿರುವ ಹಿನ್ನೆಲೆಯಲ್ಲಿ ಒಂದು ವಾರ ಸಫಾರಿಯನ್ನು ಬಂದ್‌ ಮಾಡಲಾಗಿದೆ. ಬಂಡೀಪುರ ಅರಣ್ಯ ವಲಯ ಮತ್ತು ಸಫಾರಿ ಅರಣ್ಯ ವಲಯದಲ್ಲಿಯೂ ಕಾಡ್ಗಿಚ್ಚಿನಿಂದ ಅರಣ್ಯ ಭಸ್ಮವಾಗಿರುವುದರಿಂದ ಬೆಳಗ್ಗೆ 7.30 ರಿಂದ 9 ಮತ್ತು ಸಂಜೆ 3.30 ರಿಂದ ಸಂಜೆ 6 ರವರೆಗೆ ನಡೆಸುತ್ತಿದ್ದ ಸಫಾರಿಯನ್ನು ಮಾ.3 ರವರೆಗೆ ಬಂದ್‌ ಮಾಡಲಾಗಿದೆ.

ಹುಲ್ಲುಗಾವಲು ಭಸ್ಮ
ಮೂಡಿಗೆರೆ: ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ತಾಲೂಕಿನ ಕಿರುಗುಂದ ಗ್ರಾಪಂ ವ್ಯಾಪ್ತಿಯ ಉದುಸೆ ಗ್ರಾಮದಲ್ಲಿನ ಸುಮಾರು 10 ಎಕರೆ ಹುಲ್ಲುಗಾವಲು ಮತ್ತು ಕುರುಚಲು ಅರಣ್ಯ ಸಂಪೂರ್ಣ ಭಸ್ಮವಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ನೀಲಗಿರಿ ಪ್ಲಾಂಟೇಶನ್‌ನಲ್ಲಿ ಕಾಡ್ಗಿಚ್ಚು: ಅಪಾರ ಹಾನಿ ಎನ್‌.ಆರ್‌.ಪುರ: ಚಿಕ್ಕಮಗಳೂರು ಜಿಲ್ಲೆ ಎನ್‌.ಆರ್‌.ಪುರ ತಾಲೂಕಿನ ಸಂಕ್ಸೆ ಗ್ರಾಮದ ಸಮೀಪದಲ್ಲಿರುವ ಕರ್ನಾಟಕ ಅರಣ್ಯ ಅಭಿವೃದಿಟಛಿ ನಿಗಮದ ನೀಲಗಿರಿ ಪ್ಲಾಟೇಂಶನ್‌ಗೆ ಬೆಂಕಿ ಬಿದ್ದು ಅಪಾರ ಹಾನಿಯಾಗಿದೆ. ಬೆಂಕಿ ಆರಿಸಲು ಮುಂದಾದ ಅರಣ್ಯ ರಕ್ಷಕರೊಬ್ಬರಿಗೆ ಸುಟ್ಟ ಗಾಯಗಳಾಗಿದ್ದು, ಬೈಕ್‌ಒಂದು ಬೆಂಕಿಗೆ ಆಹುತಿಯಾಗಿದೆ. ಸಂಕ್ಸೆ ಗ್ರಾಮದ ಸಮೀಪದಲ್ಲೇ ಸುಮಾರು 50 ಹೆಕ್ಟೇರ್‌ ಪ್ರದೇಶದಲ್ಲಿ ನೀಲಗಿರಿ ಪ್ಲಾಂಟೇಶನ್‌ ಇದ್ದು, ಭಾನುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ.

ಅರಣ್ಯ ರಕ್ಷಕ ಮಂಜುನಾಥ್‌ ಬೈಕ್‌ನಲ್ಲಿ ಸ್ಥಳಕ್ಕೆ ಆಗಮಿಸಿ ಬೆಂಕಿ ಹರಡದಂತೆ ತಡೆಯಲು ಮುಂದಾಗಿದ್ದಾರೆ. ಆದರೆ ಬೆಂಕಿಯ ಜ್ವಾಲೆ ಹೆಚ್ಚಾಗಿ ಇವರ ಮುಖ ಸುಟ್ಟಿದೆ. ಜೋರಾಗಿ ಗಾಳಿ ಬೀಸಿದ ಪರಿಣಾಮ ಬೆಂಕಿ ಹೆಚ್ಚಾಗಿದೆ. ಇದರಿಂದ ಜೀವ ಉಳಿಸಿಕೊಳ್ಳಲು ಮಂಜುನಾಥ್‌ ತಮ್ಮ ಬೈಕ್‌ ಬಿಟ್ಟು ಪ್ಲಾಂಟೇಶನ್‌ನಿಂದ ಹೊರಗೆ ಬಂದಿದ್ದು, ಬೈಕ್‌ ಬೆಂಕಿಗೆ ಆಹುತಿಯಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಕೊಪ್ಪ, ಎನ್‌.ಆರ್‌.ಪುರದ ಅಗ್ನಿಶಾಮಕ ದಳ, ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ಆರಿಸುವ ಕಾರ್ಯ ಮಾಡುತ್ತಿದ್ದಾರೆ. ಸಂಜೆಯವರೆಗೂ ನಿರಂತರ ಕಾರ್ಯಾಚರಣೆ ನಡೆಸಿದರೂ ಬೆಂಕಿ ಆರುತ್ತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next