Advertisement

ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಕ್ರಮ ಅಗತ್ಯ

12:14 AM Aug 01, 2023 | Team Udayavani |

ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಾಡಾನೆಗಳು ನಾಡಿಗೆ ಲಗ್ಗೆ ಇಡುತ್ತಿರುವ ಸುದ್ದಿಗಳು ಸಾಮಾನ್ಯವಾಗಿವೆ. ಹಾಗೆ ನೋಡಿದರೆ, ಕಳೆದ ಎರಡು ದಶಕಗಳಿಂದಲೂ ಈ ಸಮಸ್ಯೆ ಮಲೆನಾಡು ಮತ್ತು ಕಾಡಿಗೆ ಹೊಂದಿಕೊಂಡ ಜಿಲ್ಲೆಗಳಲ್ಲಿ ವರದಿಯಾಗುತ್ತಲೇ ಇವೆ. ಈ ಪ್ರಮಾಣ ಹೆಚ್ಚಾಗಿದೆ ಬಿಟ್ಟರೆ ಯಾವುದೇ ರೀತಿಯಲ್ಲಿ ನಿಯಂತ್ರಣಕ್ಕೆ ಬಂದಿಲ್ಲ.

Advertisement

ಆನೆ ಮತ್ತು ಮಾನವ ಸಂಘರ್ಷ ಕೊಡಗು, ಹಾಸನ, ಮೈಸೂರು, ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಿತಿ ಮೀರುತ್ತಿರುವುದು ಇತ್ತೀಚೆಗಿನ ವರದಿಗಳಿಂದ ಸ್ಪಷ್ಟ. ಮೊನ್ನೆಯಷ್ಟೇ ಕೊಡಗಿನ ಸುಂಟಿಕೊಪ್ಪದಲ್ಲಿ ಆನೆಯೊಂದು ನಿಗೂಢವಾಗಿ ಸಾವನ್ನಪ್ಪಿದ್ದು, ಇದನ್ನು ಹತ್ಯೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಸಹಜವಾಗಿಯೇ ಅರಣ್ಯ ಇಲಾಖೆ ಕೆಲವರ ಮೇಲೆ ಪ್ರಕರಣ ದಾಖಲಿಸಿ ಕೈ ತೊಳೆದುಕೊಂಡುಬಿಡುತ್ತಾರೆ. ಇದು ಲಾಗಾಯ್ತಿನಿಂದಲೂ ನಡೆದುಕೊಂಡು ಬಂದ ಪದ್ಧತಿಯಾಗಿಬಿಟ್ಟಿದೆ. ಆನೆಯನ್ನು ಹತ್ಯೆ ಮಾಡುವಷ್ಟರ ಮಟ್ಟಿಗೆ ಮನುಷ್ಯ ಮುಂದಾಗುತ್ತಾನೆ ಎಂದರೆ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ ಎಂದೇ ವಿಶ್ಲೇಷಿಸಬೇಕಾಗುತ್ತದೆ.

ಒಂದೆಡೆ ಆನೆಗಳ ನಿಗೂಢ ಸಾವು ಸಂಭವಿಸುತಿದ್ದರೆ, ಇನ್ನೊಂದೆಡೆ ಬೆಳೆಗಳ ನಾಶ ಹಾಗೂ ಮಾನವ ಪ್ರಾಣಹಾನಿ ವರದಿಯಾಗುತ್ತಿವೆ. ಈ ಸಂಘರ್ಷಕ್ಕೆ ಮೂಲವನ್ನು ಹುಡುಕಿ ಅಂತ್ಯ ಹಾಡದೆ ಇದ್ದರೆ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತದೆ.

ಈ ನಿಟ್ಟಿನಲ್ಲಿ ಮೊದಲಿಗೆ ಅರಣ್ಯ ಇಲಾಖೆಯನ್ನು ಬಲಪಡಿಸುವ ಅಗತ್ಯವಿದೆ. ಸಿಬ್ಬಂದಿ ಕೊರತೆಯಿಂದ ಬಳಲುತ್ತಿರುವ ಅರಣ್ಯ ಇಲಾಖೆಗೆ ಅಗತ್ಯ ಸಿಬ್ಬಂದಿ ಹಾಗೂ ಮೂಲಸೌಕರ್ಯವನ್ನು ಒದಗಿಸದೆ ಇದ್ದರೆ ಸರ್ಕಾರದ ಯಾವ ಪ್ರಯತ್ನವೂ ಕೈಗೂಡದು. ಆನೆಗಳ ಹಾವಳಿ ತಾರಕಕ್ಕೆ ಏರಿದಾಗ ಕಳೆದ ವರ್ಷ ಆಗಿನ ಸರ್ಕಾರ ಹಾಸನ, ಚಿಕ್ಕಮಗಳೂರು, ಕೊಡಗು ಹಾಗೂ ಮೈಸೂರು ಜಿಲ್ಲೆಗಳಲ್ಲಿ ಟಾಸ್ಕ್ ಫೋರ್ಸ್‌ ರಚಿಸಿತ್ತು. ಈ ಟಾಸ್ಕ್ಫೋರ್ಸ್‌ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕೆಂದರೆ ಇಲಾಖೆಗೆ ಅಗತ್ಯ ಸೌಲಭ್ಯ ನೀಡುವುದು ಅನಿವಾರ್ಯ. ಆದರೆ ವಾಸ್ತವ ಹಾಗಿಲ್ಲ. ಅನುದಾನದ ಕೊರತೆ, ಸಿಬ್ಬಂದಿ ಸಮಸ್ಯೆ, ಆಧುನಿಕ ಶಸ್ತ್ರಗಳಿಲ್ಲದೆ ಸೊರಗಿರುವ ಇಲಾಖೆ.. ಈ ಎಲ್ಲ ಸಮಸ್ಯೆಗಳಿಂದಾಗಿ ಟಾಸ್ಕ್ಫೋರ್ಸ್‌ ಕಾರ್ಯನಿರ್ವಹಣೆ ಅಸಮರ್ಪಕವಾಗಿದೆ. ಇನ್ನೊಂದು ಆಶ್ಚರ್ಯಕರ ಸಂಗತಿ ಎಂದರೆ, ಈ ಕಾರ್ಯಪಡೆಯಲ್ಲಿ ಇರುವ ಬಹುತೇಕ ಸಿಬ್ಬಂದಿ ನಿವೃತ್ತಿ ಅಂಚಿನಲ್ಲಿರುವವರು. ಇದರಿಂದ ಕಾರ್ಯಪಡೆ ಕಾರ್ಯಾಚರಣೆ ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಉತ್ತರ ಇಲ್ಲ.

ಒಂದು ಅಂದಾಜಿನ ಪ್ರಕಾರ, ಕೊಡಗು ಜಿಲ್ಲೆಯ ಕಾಫಿ ತೋಟಗಳಲ್ಲಿಯೇ ಸುಮಾರು 200ಕ್ಕೂ ಹೆಚ್ಚು ಕಾಡಾನೆಗಳು ತಿರುಗಾಡುತ್ತಿವೆ ಎಂಬ ಮಾಹಿತಿ ಇದೆ. ತನ್ನ ಹೊಟ್ಟೆ ಹೊರೆಯಲು ಕಾಡು ತೊರೆದು ಈಗಿನ ನಾಡಿಗೆ ಲಗ್ಗೆ ಇಡುವ ಆನೆಗಳ ನಿಯಂತ್ರಣ ಹಾಗೂ ಪುನರ್ವಸತಿಗೆ ಸರ್ಕಾರ ಆದ್ಯತೆ ನೀಡಲೇಬೇಕಾಗಿದೆ. ಸದ್ಯದ ಮಟ್ಟಿಗೆ ಸುಮಾರು 500 ಕೋಟಿ ರೂ ವೆಚ್ಚದಲ್ಲಿ ರೈಲ್ವೆ ಬ್ಯಾರಿಕೇಡ್‌ಗಳನ್ನು ನಿರ್ಮಿಸುವ ಪ್ರಯತ್ನ ನಡೆಯುತ್ತಿದೆ. ಸದ್ಯದ ಮಟ್ಟಿಗೆ 641 ಕಿಮೀ ಉದ್ದದ ಬ್ಯಾರಿಕೇಡ್‌ ಅಗತ್ಯ ಇದ್ದು, ಕೇವಲ 310 ಕಿಮೀ ಉದ್ದದ ಕಾಮಗಾರಿ ಮಾತ್ರ ಪೂರ್ಣಗೊಂಡಿದೆ ಎಂದು ಇಲಾಖೆ ಹೇಳುತ್ತದೆ, ಉಳಿದ ಕಾಮಗಾರಿಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸದೆ ಇದ್ದರೆ ಆನೆಗಳ ನಿಯಂತ್ರಣ ಹಾಕುವುದು ದುಸ್ತರ. ಬ್ಯಾರಿಕೇಡ್‌ ನಿರ್ಮಾಣಕ್ಕೆ ಮಂಜೂರಾಗಿರುವ ಹಣವನ್ನೂ ಕೂಡ ಸ್ಥಗಿತಗೊಳಿಸಲಾಗಿದೆ ಎಂಬ ವರದಿಗಳೂ ಬರುತ್ತಿದ್ದು, ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕಾಗುತ್ತದೆ.

Advertisement

ಈ ಸಮಸ್ಯೆಯನ್ನು ಆದ್ಯತೆಯಲ್ಲಿ ಸರ್ಕಾರ ಬಗೆಹರಿಸುವುದು ಅಗತ್ಯವಾಗಿದೆ. ಇಲ್ಲದೆ ಇದ್ದರೆ ಮಲೆನಾಡಿನ ಜನರ ಬದುಕು ಮತ್ತಷ್ಟು ದುಸ್ತರವಾಗುವುದು ಖಚಿತ.

Advertisement

Udayavani is now on Telegram. Click here to join our channel and stay updated with the latest news.

Next