ಸಕಲೇಶಪುರ: ಕಾಡಾನೆ ಸಮಸ್ಯೆ ಬಗೆಹರಿಯದ ಹಿನ್ನೆಲೆ ವಳಲಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ಬೃಹತ್ ಪ್ರತಿಭಟನೆಗೆ ಸಿದ್ಧರಾಗುತ್ತಿದ್ದಾರೆ.
ತಾಲೂಕಿನ ಹೆತ್ತೂರು ಹೋಬಳಿ ವಳಲಹಳ್ಳಿ ಗ್ರಾಪಂನಲ್ಲಿ ಕಳೆದ ಎರಡು ವಾರಗಳಿಂದ ಕಾಡಾನೆ ಹಾವಳಿ ಹೆಚ್ಚಿದೆ. ಈಗ ಕಟಾವಿಗೆ ಬಂದ ಭತ್ತ ಕಾಫಿ, ಫಸಲಿಗೆ ಕಾಡಾ ನೆ ಹಿಂಡು ಕಂಟಕವಾಗಿದೆ.
ಇದು ರೈತರ ಆತಂಕಕ್ಕೆ ಕಾರಣವಾಗಿದೆ. ಆನೆ ದಾಳಿಯಿಂದ ಬೆಳೆ ರಕ್ಷಣೆ ಮಾಡಿಕೊಳ್ಳುವುದೇ ರೈತರಿಗೆ ದೊಡ್ಡ ಸವಾಗಿದೆ. ಜತೆಗೆ ಗದ್ದೆ- ತೋಟದ ಕಡೆ ಹೋಗಲು ಸಹ ರೈತರು ಜೀವ ಭಯದಲ್ಲಿದ್ದಾರೆ. ಫಸಲು ಅಚ್ಚುಕಟ್ಟಾಗಿ ಬಂದರೂ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 12 ಆನೆಗಳು ಬಿಡು ಬಿಟ್ಟಿವೆ. ಪ್ರತಿದಿನ ಊರಿಂದ ಊರಿಗೆ ಹೋಗಿ ತೋಟ-ಗದ್ದೆ ನಾಶ ಮಾಡುತ್ತಾ ತಿರುಗುತ್ತಿವೆ. ರಾತ್ರಿ ಗದ್ದೆ ಯಲ್ಲಿ ಭತ್ತ ತಿಂದು ಬೆಳಗ್ಗೆ ಕಾಫಿ ತೋಟಕ್ಕೆ ನುಗ್ಗಿ ಅಲ್ಲೇ ಬಿಡು ಬಿಟ್ಟು, ತೋಟದಲ್ಲಿ, ಬೈನೆ, ಅಡಕೆ ಮರಗಳನ್ನು ನೆಲಸಮ ಮಾಡುವುದರ ಜತೆಗೆ ಕೊಯ್ಲಿಗೆ ಬಂದ ಕಾಫಿ ಗಿಡಗಳನ್ನು ನಾಶ ಮಾಡಿ ರಂಪಾಟ ನಡೆಸಿವೆ.
ಇಷ್ಟೆಲ್ಲ ಸಮಸ್ಯೆಯಿದ್ದರೂ ಯಾವೊಬ್ಬ ಜನಪ್ರತಿನಿಧಿಗಳು ಹಾಗೂ ಉನ್ನತಮಟ್ಟದ ಅಧಿಕಾರಿಗಳು ಬಂದಿಲ್ಲದಿರುವುದು ಹಾಗೂ ಹೊಸದಾಗಿ ರಚಿತವಾದ ಕಾಡಾನೆ ಟಾಸ್ಕ್ ಫೋರ್ಸ್ ಕೂಡ ಈ ಕಡೆ ಗಮನಹರಿಸದೇ ಇರುವುದು ರೈತರಿಗೆ ತಲೆ ನೋವಾಗಿದೆ. ನೊಂದ ರೈತರು ರೋಸಿ ಹೋಗಿದ್ದು, ವಳಲಹಳ್ಳಿ ಗ್ರಾಪಂನ ರೈತರು ಸರ್ಕಾರದ ಈ ನಿರ್ಲಕ್ಷ್ಯ ಖಂಡಿಸಿ ಡಿ.2ರಂದು ಬೆಳಗ್ಗೆ 10 ರಿಂದ ಹಿರಿಯೂರು ಕೂಡಿಗೆಯಲ್ಲಿ ಪಕ್ಷಾತೀತವಾಗಿ ಎಲ್ಲ ಗ್ರಾಮದ ರೈತರು, ಸರ್ವಪಕ್ಷಗಳ ಸ್ಥಳೀಯ ನಾಯಕರು, ಬೆಳೆಗಾರ ಸಂಘದವರು, ಸ್ಥಳೀಯ ಹೋರಾಟಗಾರರು, ಸ್ತ್ರೀಶಕ್ತಿ ಸಂಘದವರು, ವಿದ್ಯಾರ್ಥಿಗಳು ಹಾಗೂ ವರ್ತಕರು ಸೇರಿದಂತೆ ಬೃಹತ್ ಮಟ್ಟದಲ್ಲಿ ರಸ್ತೆ ತಡೆ ಹಾಗೂ ಪ್ರತಿಭಟನೆ ಮಾಡುವ ಮೂಲಕ ಸರ್ಕಾರದ ಗಮನವನ್ನು ಇತ್ತ ಸೆಳೆಯುವ ಕೆಲಸಕ್ಕೆ ಮುಂದಾಗಿದ್ದಾರೆ. ವಿಧಾನಸೌಧಕ್ಕೂ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ. ಒಟ್ಟಿ ನಲ್ಲಿ ಈ ಭಾಗದ ರೈತರ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರದ ಬೇಡಿಕೆ ಈಡೇರುತ್ತಾ ಕಾದು ನೋಡಬೇ ಕಾಗಿದೆ.
ಕಾಡಾನೆ ಸಮಸ್ಯೆ ನಮ್ಮ ಭಾಗದಲ್ಲಿ ಮಿತಿ ಮೀರಿರುವ ಹಿನ್ನೆಲೆ ಪಕ್ಷಾತೀತವಾಗಿ ಶುಕ್ರವಾರ ಹಿರಿಯೂರು ಕೂಡಿಗೆಯಲ್ಲಿ ರಾಜ್ಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ಮಾಡಲಾಗುತ್ತದೆ.
– ಅರುಣ್ ಗ್ರಾಮಸ್ಥರು ವಳಲಹಳ್ಳಿ