ಮಾಗಡಿ: ಒಂಟಿ ಸಲಗದ ಹಾವಳಿಯಿಂದಾಗಿ ರೈತರು ಕಂಗಾಲಾಗಿದ್ದಾರೆ.
ಮಾಗಡಿ ತಾಲೂಕಿನ ಸಿಂಗದಾಸನಹಳ್ಳಿಯ ನಿವಾಸಿ ನರಸೇಗೌಡರ ಎಂಬ ರೈತರೊಬ್ಬರ ತೋಟಕ್ಕೆ ನುಗ್ಗಿರುವ ಒಂಟಿ ಸಲಗ ತೋಟದ ಗೇಟ್ ಮುರಿದು ತೆಂಗಿನ ಫಸಲು ಮತ್ತು ಬಾಳೆ ಗಿಡ ನಾಶ ಮಾಡಿದೆ.
ಇದರ ಪರಿಣಾಮ ರೈತ ಕಷ್ಟಪಟ್ಟು ಬೆಳೆದ ತೆಂಗು-ಬಾಳೆ ಬೆಲೆ ಕೈಗೆ ಬಾರದ ತುತ್ತಾಗಿದೆ. ಈ ಒಂಟಿ ಸಲಗದ ಸಂಚಾರದಿಂದ ರೈತರು ತಮ್ಮ ಹೊಲ-ಗದ್ದೆ ತೋಟಗಳಿಗೆ ಹೋಗಲಾರದ ಪರಿಸ್ಥಿತಿ ಎದುರಿಸುವಂಥಾಗಿದೆ.
ಅರಣ್ಯ ಇಲಾಖೆ ಒಂಟಿ ಸಲಗವನ್ನು ದೂರದ ಕಾಡಿಗೆ ಓಡಿಸಲು ಕ್ರಮ ಕೈಗೊಳ್ಳಬೇಕಿದೆ. ಇಲ್ಲದಿದ್ದರೆ ಇದರಿಂದ ರೈತರ ಸಾಕಷ್ಟು ಬೆಳೆಗಳು ನಷ್ಟವಾಗುವ ಸಂಭವವಿದ್ದು, ರೈತರು ಆತಂಕಗೀಡಾಗಿದ್ದಾರೆ.
ಕರ್ಲಮಂಗಲ ಗುಡ್ಡಳ್ಳಿಯ ಗಂಗಣ್ಣ ಎಂಬವರ ತೋಟಕ್ಕೂ ಒಂಟಿ ಸಲಗ ಲಗ್ಗೆ ಇಟ್ಟಿದ್ದು, ಅಡಿಕೆ ಗಿಡವನ್ನು ದ್ವಂಸ ಮಾಡಿದೆ. ಮಾವಿನ ಗಿಡಗಳ ಕೊಂಬೆ, ರೆಂಬೆಗಳನ್ನು ಮುರಿದಿದೆ. ಅದು ಮಾತ್ರವಲ್ಲದೇ ಹಲಸಿನ ಮರಕ್ಕೂ ಒಂಟಿ ಸಲಗ ಲಗ್ಗೆ ಇಡುತ್ತಿದೆ.
ಕಾಡಿನಲ್ಲಿ ನೀರು, ಮೇವು ಇಲ್ಲದ ಕಾರಣ ಒಂಟಿ ಸಲಗ ಗ್ರಾಮಗಳಲ್ಲಿ ಎಲ್ಲೆಡೆ ಸಂಚರಿಸುತ್ತಿದೆ. ಇದರಿಂದ ರೈತರು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಆಗುವ ಅನಾಹುತ ತಪ್ಪಿಸಲು ಒಂಟಿ ಸಲಗವನ್ನು ಕಾಡಿಗೆ ಓಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ರೈತರು ಮನವಿ ಮಾಡಿ ಆಗ್ರಹಿಸಿದ್ದಾರೆ.