ಬೆಳ್ತಂಗಡಿ: ಚಾರ್ಮಾಡಿ ಗ್ರಾ.ಪಂ. ವ್ಯಾಪ್ತಿಯ ಮಠದ ಮಜಲು ಪರಿಸರದಲ್ಲಿ ಮೇ 13ರ ತಡರಾತ್ರಿ ಕಾಡಾನೆಗಳ ಹಿಂಡು ತೋಟಗಳಿಗೆ ದಾಳಿ ನಡೆಸಿ ಅಪಾರ ಪ್ರಮಾಣದ ಕೃಷಿ ಹಾನಿ ಉಂಟು ಮಾಡಿದೆ.
ಆನೆಗಳು ಇಲ್ಲಿನ ರವೀಂದ್ರ ರಾವ್ ಅವರ ತೋಟದಲ್ಲಿ 120 ಅಡಿಕೆ ಮರ, 60ಕ್ಕಿಂತ ಅಧಿಕ ಬಾಳೆ ಗಿಡ, ಅನಂತ ರಾವ್ ಅವರ ತೋಟದ 25ಕ್ಕಿಂತ ಅಧಿಕ ಅಡಿಕೆ ಮರ, 18 ತೆಂಗಿನ ಮರ ಹಾಗೂ ಅಪಾರ ಪ್ರಮಾಣದ ಬಾಳೆಗಿಡಗಳನ್ನು ಧ್ವಂಸಗೊಳಿಸಿ ಲಕ್ಷಾಂತರ ರೂ. ಮೌಲ್ಯದ ಕೃಷಿ ಹಾನಿ ಉಂಟು ಮಾಡಿವೆ.
ಮರಿಯಾನೆ ಸಹಿತ 4 ರಿಂದ 5 ಆನೆಗಳು ಬಂದಿರುವ ಶಂಕೆ ವ್ಯಕ್ತವಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಠದ ಮಜಲು ಪ್ರದೇಶದಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿದ್ದು, ಮೂರು ತಿಂಗಳುಗಳಿಂದ ಹಲವಾರು ಬಾರಿ ಒಂಟಿ ಸಲಗ ಸಹಿತ ಕಾಡಾನೆಗಳ ಹಿಂಡು ದಾಳಿ ನಡೆಸಿ ಕೃಷಿಕರ ತೋಟಗಳನ್ನು ನಾಶ ಮಾಡುತ್ತಿವೆ. ಆನೆ ದಾಳಿಯಿಂದ ಕೃಷಿಕರು ಬೇಸತ್ತಿದ್ದಾರೆ.