ಆಲೂರು: ರೈತರೊಬ್ಬರು ತೋಟಕ್ಕೆ ಹೋಗುವಾಗ ಕಾಡಾನೆ ದಾಳಿ ನಡೆಸಿದ ಹಿನ್ನೆಲೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ತಾಲೂಕಿನ ಗಡಿಗ್ರಾಮ ನಿಡನೂರು ಗ್ರಾಮದ ದೇವರಾಜು (50) ಗಾಯಗೊಂಡ ರೈತ.
ದೇವರಾಜು ಎಂಬವರು ಎಂದಿನಂತೆ ಕಾಫಿ ತೋಟಕ್ಕೆ ಹೋಗುತ್ತಿದ್ದಾಗ ಏಕಾಏಕಿ ಕಾಡಾನೆ ಎದುರಾಗಿ ಅವರ ಮೇಲೆ ದಾಳಿ ನಡೆಸಿದೆ. ಇದರಿಂದ ಗಂಭೀರ ಗಾಯಗೊಂಡ ಅವರನ್ನು ಆಲೂರು ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಮುಖದ ಭಾಗಕ್ಕೆ ಹೆಚ್ಚಿನ ಗಾಯವಾಗಿದ್ದು, ಮಾತನಾಡಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.
ಗ್ರಾಮದಲ್ಲಿ ಕಳೆದ ಒಂದು ತಿಂಗಳಿಂದ ಬೀಡು ಬಿಟ್ಟಿರುವ ಕಾಡಾನೆಗಳು ಅಪಾರ ಪ್ರಮಾಣದ ಬೆಳೆ ನಷ್ಟದ ಜೊತೆಗೆ ಮನುಷ್ಯರ ಮೇಲು ದಾಳಿ ನಡೆಸುತ್ತಿರುವುದರಿಂದ ಜನರು ಭಯ ಭೀತರಾಗಿದ್ದಾರೆ.
ಘಟನಾ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಬಾರದಿರುವುದರ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.