ಕನಕಪುರ: ಹೊಸ ಕಬ್ಟಾಳು ಗ್ರಾಮದ ಸುತ್ತಮುತ್ತಲು ಕಾಡಾನೆಗಳ ಹಿಂಡು ದಾಳಿ ನಡೆಸಿ ಕಟಾವು ಮಾಡಿದ್ದ ರಾಗಿ ಬೆಳೆಯನ್ನು ತುಳಿದು ತಿಂದು ನಾಶ ಮಾಡಿವೆ. ತಾಲೂಕಿನ ಸಾತನೂರು ಹೋಬಳಿ ಕಬ್ಟಾಳು ವ್ಯಾಪ್ತಿಯ ಸುತ್ತಮುತ್ತಲ ಗ್ರಾಮಗಳಲ್ಲಿ ನಾಲ್ಕೈದು ಕಾಡಾನೆಗಳು ಹಿಂಡು ದಾಳಿ ನಡೆಸಿ ರಾಗಿ ಫಸಲು ನಾಶ ಪಡಿಸಿಡಿವೆ.
ಹೊಸ ಕಬ್ಟಾಳು ಗ್ರಾಮದ ನಿಂಗೇಗೌಡ ರಾಜಣ್ಣ ಹಾಗೂ ಚಿಕ್ಕಮರಿಗೌಡ ರೈತರಿಗೆ ಸೇರಿದ ರಾಗಿ ಬೆಳೆ ನಾಶವಾಗಿವೆ. ಪ್ರಸ್ತುತ ವರ್ಷ ತಾಲೂಕಿನಲ್ಲಿ ಅಬ್ಬರಿಸಿ ಬೊಬ್ಬರಿದ ವರುಣನ ಅರ್ಭಟದಿಂದ ಈ ಬಾರಿ ಕೃಷಿ ಬೆಳೆಗಳು ಕೈಸೇರುವುದಿಲ್ಲ ಎಂದು ರೈತರು ಕಂಗಾಲಾಗಿದ್ದರು. ಆದರೂ, ಕೆಲ ರೈತರು ಬಿತ್ತನೆ ಮಾಡಿದ್ದ ರಾಗಿ ಸೋಂಪಾಗಿ ಬೆಳೆದು ಉತ್ತಮ ಫಸಲು ಬಂದಿತ್ತು. ರೈತರು ಹಾಕಿದ ಬಂಡವಾಳವಾದರೂ ಕೈಗೆ ಸಿಗಬಹುದು ಎಂದುಕೊಂಡಿದ್ದ ರೈತರಿಗೆ ಕಾಡು ಪ್ರಾಣಿಗಳ ಹಾವಳಿ ತೊಡಕಾಗಿ ಪರಿಣಮಿಸಿವೆ.
ಈ ಬಾರಿ ಸುರಿದ ಮಳೆಯಿಂದ ಕೊಚ್ಚಿ ಹೋಗಿ ಅಳಿದುಳಿದಿರುವ ರಾಗಿ ಬೆಳೆ ಹಣ್ಣಾಗಿ ಬಹುತೇಕ ರೈತರು ಕಟಾವು ಮಾಡಿ ಹಾಕಿದ್ದಾರೆ. ಆದರೆ, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ ಅಳಿದುಳಿದಿರುವ ರಾಗಿ ಬೆಳೆಯ ಮೇಲೆ ಕಾಡಾನೆಗಳು ದಾಳಿ ಮಾಡಿ ನಾಶ ಮಾಡು ತ್ತಿರುವುದು ರೈತರನ್ನು ಕಂಗಾಲಾಗಿಸಿದೆ.
ರಾಗಿ ಫಸಲು ಸಂಪೂರ್ಣ ನಾಶ: ಹೊಸ ಕಬ್ಟಾಳು ಗ್ರಾಮದ ಸುತ್ತಮುತ್ತಲೂ ಹತ್ತಾರು ಎಕರೆಯಲ್ಲಿ ಕಟಾವು ಮಾಡಿ ಹಾಕಿದ್ದ ರಾಗಿ ಬೆಳೆಯ ಮೇಲೆ ದಾಳಿ ಮಾಡಿರುವ ಕಾಡಾನೆಗಳ ಗುಂಪು ರಾಗಿಯನ್ನು ತುಳಿದು ತಿಂದು ಚಿಲ್ಲಾಪಿಲ್ಲಿ ಮಾಡಿ ನಾಶ ಮಾಡಿವೆ. ಕಾಡಾನೆ ದಾಳಿಯಿಂದ ನಿಂಗೇಗೌಡರ 2 ಎಕರೆ, ರಾಜಣ್ಣರ ಮೂರು ಎಕರೆ, ಚಿಕ್ಕ ಮರೀಗೌಡರ 2 ಎಕರೆ, ಜಮೀನಿನಲ್ಲಿದ್ದಂತಹ ರಾಗಿ ಫಸಲು ಸಂಪೂರ್ಣ ನಾಶವಾಗಿದೆ.
ಕಾಡಾನೆಗಳ ಹಾವಳಿ: ನಿರಂತರವಾಗಿ ನಡೆ ಯುತ್ತಿರುವ ಕಾಡಾನೆಗಳ ಹಾವಳಿಯಿಂದ ರೈತರು ಹಗಲು-ರಾತ್ರಿ ಎನ್ನದೆ ಕಾವಲು ಇದ್ದು, ತಮ್ಮ ಬೆಳೆಗಳನ್ನು ಜೀವ ಒತ್ತೆಯಿಟ್ಟು ರಕ್ಷಣೆ ಮಾಡಿಕೊಳ್ಳುವ ಅನಿವಾರ್ಯತೆ ಬಂದೊದಗಿದೆ. ಇಷ್ಟಾದರೂ, ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ಕಾಡಾನೆಗಳ ಹಾವಳಿಗೆ ನಿಯಂತ್ರಣ ಹಾಕುವ ಯಾವುದೇ ಕ್ರಮಗಳನ್ನು ಕೈಗೊಳ್ಳದೆ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ರೈತರಿಗೆ ಸೂಕ್ತ ಪರಿಹಾರ ನೀಡಿ: ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡು ರೈತರ ಬೆಳೆಗಳನ್ನು ರಕ್ಷಣೆ ಮಾಡಿ, ಬೆಳೆ ನಾಶವಾಗಿರುವ ರೈತರಿಗೆ ಸೂಕ್ತ ಪರಿಹಾರ ನೀಡಿಬೇಕು. ಕಾಡಾನೆ ಹಾವಳಿಗೆ ಕ್ರಮ ಕೈಗೊಳ್ಳದಿದ್ದರೆ, ಅರಣ್ಯ ಇಲಾಖೆ ಕಚೇರಿ ಮುಂದೆ ಸಾತನೂರು ಹೋಬಳಿ ರೈತರು ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.