ಸಕಲೇಶಪುರ: ಕಾಡಾನೆ ಸಮಸ್ಯೆಯಿಂದ ಬೇಸತ್ತು ಗ್ರಾಮಸ್ಥರೆ ಮರಿಕಾಡಾನೆಯೊಂದನ್ನು ಖೆಡ್ಡಾಗೆ ಕೆಡವಿದ ಘಟನೆ ತಾಲೂಕಿನ ಬೆಳಗೋಡು ಹೋಬಳಿ ಹೊಸಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಮಲೆನಾಡು ಭಾಗದಲ್ಲಿ ಮಾನವ- ಕಾಡಾನೆ ನಡುವಿನ ಸಂಘರ್ಷ ಹೆಚ್ಚಾಗಿದೆ. ಅನೇಕ ವರ್ಷದಿಂದ ಸಕಲೇಶಪುರ, ಆಲೂರು, ಬೇಲೂರು ಭಾಗದಲ್ಲಿ ಕಾಡಾನೆಗಳ ದಾಂದಲೆ ವಿಪರೀತವಾಗಿದೆ. ಕಾಡಾನೆ ಹಿಡಿದು ಸ್ಥಳಾಂತರಿಸಿ ಇಲ್ಲಾ, ಆನೆ ಕಾರಿಡಾರ್ ನಿರ್ಮಾಣ ಮಾಡಿ ಶಾಶ್ವತ ಪರಿಹಾರ ಕಂಡುಹಿಡಿಯುವಂತೆ ನೂರಾರು ಹೋರಾಟ ನಡೆಸಿದರು, ಸರ್ಕಾರ ಪರಿಹಾರ, ಭರವಸೆ ನೀಡಿ ಕಣ್ಣೊರೆಸುವ ತಂತ್ರ ಮಾಡಿದೆ ಹೊರತು, ಶಾಶ್ವತ ಪರಿಹಾರ ಕಂಡು ಹಿಡಿಯುವಲ್ಲಿ ಸಂಪೂರ್ಣ ವಿಫಲವಾಗಿವೆ.
ಕಾಡಾನೆ ಹಾವಳಿಯಿಂದ ಬೇಸತ್ತ ಹೊಸಕೊಪ್ಪಲಿನ ಗ್ರಾಮಸ್ಥರು ಸರ್ಕಾರ ಹಾಗೂ ಅರಣ್ಯ ಇಲಾಖೆಗೆ ಸೆಡ್ಡು ಹೊಡೆದು ಹೊಸಕೊಪ್ಪಲು ಗ್ರಾಮದ ಅಮೃತ್ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಡಿ.26ರಂದು 20 ಅಡಿ ಉದ್ದ, ಅಗಲದ ಕಂದಕ ತೋಡಿದ್ದರು. ಡಿ.27ರಂದು ಕಂದಕವನ್ನು ಮರದ ಬೊಂಬು, ಸೊಪ್ಪಿನಿಂದ ಮುಚ್ಚಿದ್ದರು. ಭಾನುವಾರ ತಡರಾತ್ರಿ 2 ಗಂಟೆಯಲ್ಲಿ 8ರಿಂದ 10 ವರ್ಷದ ಗಂಡು ಮರಿಯಾನೆ ಆಹಾರ ಅರಸಿ ಬರುತ್ತಿದ್ದ ವೇಳೆ ಗುಂಪಿನಲ್ಲಿದ್ದ ಗಂಡು ಮರಿಯಾನೆ ಬಿದ್ದಿದೆ. ಬೆಳಗ್ಗೆ 7.30ರಲ್ಲಿ ಅಮೃತ್ ತಮ್ಮ ಜಮೀನಿನ ಬಳಿ ತೆರಳಿದಾಗ ಖೆಡ್ಡಾಕ್ಕೆ ಕಾಡಾನೆ ಬಿದ್ದಿರುವುದು ಕಂಡಿದೆ. ಕೂಡಲೇ ಅರಣ್ಯ ಇಲಾಖೆ ಮಾಹಿತಿ ನೀಡಿದ್ದಾರೆ. ಕಾಡಾನೆ ಕಂದಕಕ್ಕೆ ಬಿದ್ದಿರುವ ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ನೂರಾರು ಮಂದಿ ಜಮಾಯಿಸಿದರು.
ಹಿಗ್ಗಾಮುಗ್ಗಾ ತರಾಟೆಗೆ: ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳನ್ನು ಗ್ರಾಮಸ್ಥರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ನಿಮ್ಮ ಭರವಸೆ, ಪರಿಹಾರ ಸಾಕು. ಕಾಡಾನೆ ಹಿಡಿಯಲು 25 ಲಕ್ಷ ಖರ್ಚು ಮಾಡ್ತಿರಿ, ನಮಗೆ 25 ಸಾವಿರ ಕೊಡಿ ಎಲ್ಲಾ ಕಾಡಾನೆಗಳನ್ನು ಖೆಡ್ಡಾಕ್ಕೆ ಕೆಡವುತ್ತೇವೆ. ಆಗ ನೀವು ಸ್ಥಳಾಂತರ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಡಾನೆ ಮೇಲೆ ಹತ್ತಲು ಜೆಸಿಬಿ ಬಂದಿದ್ದು, ಗ್ರಾಮಸ್ಥರು ಮಧ್ಯದಲ್ಲೇ ತಡೆದು ವಾಪಾಸ್ ಕಳುಹಿಸಿದರು. ಸ್ಥಳೀಯರ ಆಕ್ರೋಶಕ್ಕೆ ಏನು ಉತ್ತರಿಸಲಾಗದೆ ಮೌನಕ್ಕೆ ಶರಣರಾದರು. ಇತ್ತ ಗುಂಡಿಯಲ್ಲಿ ಬಿದ್ದಿದ್ದ ಮರಿಯಾನೆ ಮೇಲೆ ಹತ್ತಲು ಪರದಾಡಿದ ದೃಶ್ಯ ಮನಕಲಕುವಂತಿತ್ತು.
ಮೇಲೆ ಹತ್ತಲು ಪರದಾಟ: ಸುಮಾರು 14 ಗಂಟೆಗಳಿಂದ ಗುಂಡಿಯಲ್ಲಿ ಬಿದ್ದಿದ್ದ ಕಾಡಾನೆ ಮೇಲೆ ಹತ್ತಲು ಪರದಾಡಿತು. ಸೊಂಡಲು, ಮುಂದಿನ, ಹಿಂದಿನ ಕಾಲುಗಳಲ್ಲಿ ಮಣ್ಣನ್ನು ಕೆರೆದು ಮೇಲೆ ಬರಲು ಹರಸಾಹಸಪಟ್ಟಿತ್ತು. ಗುಂಡಿಯಲ್ಲಿ ಬಿದ್ದಿದ್ದ ಮರದ ಕೊಂಬೆ, ಸೊಪ್ಪುನ್ನು ಎಸೆದಾಡಿ ಘೀಳಿಟ್ಟಿತು. ಕೆಸರನ್ನು ಮೈಮೇಲೆ ಎರಚಿಕೊಂಡು ಅತ್ತಿಂದ ಇತ್ತ ಇತ್ತಿಂದ ಅತ್ತ ಓಡಾಡುವ ದೃಶ್ಯ ನಿಜಕ್ಕೂ ಮನಕಲುಕಿತು. ಕೊನೆಗೆ ಗ್ರಾಮಸ್ಥರೊಂದಿಗೆ ಸಭೆ ನಡೆಸಿದ ಅಧಿಕಾರಿಗಳು, ದಾಂದಲೆ ನಡೆಸುತ್ತಿರುವ 5 ಕಾಡಾನೆಗಳನ್ನು ಹಿಡಿಯಲು ಅನುಮತಿ ಪಡೆಯುತ್ತೇವೆ. ಜಮೀನಿನ ಮಾಲೀಕ ಸೇರಿ ಯಾರ ಮೇಲೂ ಕೇಸ್ ದಾಖಲು ಮಾಡಲ್ಲ. ಬೆಳೆ ನಷ್ಟಕ್ಕೆ ಶೀಘ್ರ ಪರಿಹಾರ ನೀಡುತ್ತೇವೆ. ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಿ, ಎಲ್ಲಾ ಕಾಡಾನೆಗಳನ್ನು ಸ್ಥಳಾಂತರ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಇದಕ್ಕೆ ಗ್ರಾಮಸ್ಥರು ಒಪ್ಪಿಗೆ ನೀಡಿ, ಜೆಸಿಬಿ ಬರಲು ಅವಕಾಶ ಮಾಡಿಕೊಟ್ಟರು. ನಂತರ ಜೆಸಿಬಿಯಿಂದ ಟ್ರಂಚ್ ತೆಗೆದು ಕಾಡಾನೆ ಮರಿ ಹತ್ತಲು ದಾರಿ ಮಾಡಲಾಯಿತು. ಟ್ರಂಚ್ ಮೂಲಕ ಮೇಲೆ ಬಂದ ಮರಿಯಾನೆ ಬಡ ಜೀವ ಬದುಕಿತು ಎಂದು ಕಾಫಿ ತೋಟದೊಳಗೆ ಓಡಿ ಹೋಯಿತು. ರೈತ ಮಹೇಂದ್ರ ಎಂಬುವವರು ಎಸಿ ಕಾಲಿಗೆ ಬಿದ್ದ ಘಟನೆ ನಡೆಯಿತು. 3 ಲಕ್ಷ ಸಾಲ ಮಾಡಿ ಅಡಿಕೆ ತೋಟ ಮಾಡಿದ್ದು, ಬ್ಯಾಂಕ್‌ನಿಂದ ನೋಟೀಸ್ ಬಂದಿದೆ ಎಂದು ಅಳಲು ತೋಡಿಕೊಂಡರು.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದರಿಂದ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ವಲಯ ಅರಣ್ಯಾಧಿಕಾರಿ ಶಿಲ್ಪಾ, ಸಕಲೇಶಪುರ ಉಪವಿಭಾಗಾಧಿಕಾರಿ ಅನ್ಮೋಲ್ ಜೈನ್, ಎಸಿಎಫ್ ರಘು, ಅರಣ್ಯ ಇಲಾಖೆ ಅರವಳಿಕೆ ತಜ್ಞರು, ಅಪರ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕಾಡಾನೆ ಮೇಲೆ ಹತ್ತುವ ಕಾರ್ಯಾಚರಣೆ ಮುಗಿಯುವವರೆಗು ಸ್ಥಳದಲ್ಲೇ ಬೀಡುಬಿಟ್ಟಿದ್ದರು. ಕಾಂಗ್ರೆಸ್ ಮುಖಂಡ ಮುರಳಿ ಮೋಹನ್ ಸ್ಥಳಕ್ಕೆ ಭೇಟಿ ನೀಡಿದ್ದರು.