ಚನ್ನಪಟ್ಟಣ: ತಾಲೂಕಿನ ಬಿವಿ ಹಳ್ಳಿ ಗ್ರಾಮದ ತೆಂಗಿನಕಲ್ಲು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಪುಂಡಾಟ ನಡೆಸುತ್ತಿದ್ದ ಮತ್ತೂಂದು ಕಾಡಾನೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಶುಕ್ರವಾರ ನಡೆದ ಎರಡನೇ ಹಂತದ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಭಾಗವಹಿಸಿ ಪುಂಡಾಟ ನಡೆಸುತ್ತಿದ್ದ ಮತ್ತೂಂದು ಆನೆಯನ್ನು ಪತ್ತೆ ಹಚ್ಚಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ವೈದ್ಯರು ಹಾಗೂ 5 ಸಾಕಾನೆಗಳ ಸಹಾಯದಿಂದ ಸುರಕ್ಷಿತವಾಗಿ ರೈತರಿಗೆ ಉಪಟಳ ನೀಡುತ್ತಿದ್ದ ಪುಂಡನೆ ಸೆರೆ ಹಿಡಿಯುವಲ್ಲಿ ಯಶಸ್ಸು ಕಂಡಿದ್ದಾರೆ. ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ ಸುಮಾರು 25 ವರ್ಷ ವಯೋಮಾನದ ಪುಂಡಾನೆಯನ್ನು ಸೆರೆಹಿಡಿದಿದ್ದು, ಆನೆಯ ಎರಡು ಕಾಲುಗಳಿಗೆ ಹಾಗೂ ಕುತ್ತಿಗೆಗೆ ಹಗ್ಗ ಸರಪಳಿಯಿಂದ ಕಟ್ಟಿ ಇನ್ನೆರಡು ಸಾಕು ಆನೆಗಳ ಸಹಾಯದಿಂದ ವೈದ್ಯರು ಹಾಗು ಅರಣ್ಯ ಇಲಾಖೆ ಸಿಬ್ಬಂದಿಗಳು ಅರಣ್ಯ ಇಲಾಖೆ ಕ್ಯಾಂಪ್ ಬಳಿಗೆ ಪುಂಡಾನೆಯನ್ನು ಕರೆತದ್ದಿದ್ದಾರೆ.
ಆನೆ ಸೆರೆಗೆ ಅನುಮತಿ: ಈಗಾಗಲೇ ಈ ಭಾಗದಲ್ಲಿ ಇನ್ನೊಂದು ಪುಂಡಾನೆಗಳನ್ನು ಹಿಡಿಯಲು ಅನುಮತಿ ದೊರೆತ್ತಿದೆ. ಒಂದು ಕಾಡಾನೆಯನ್ನು ಕಳೆದ ಐದಾರು ದಿನಗಳ ಹಿಂದೆ ಸೆರೆ ಹಿಡಿಯಲಾಗಿತ್ತು. ಶುಕ್ರವಾರದ ಕಾರ್ಯಾಚರಣೆ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿ, ಮತ್ತೂಂದು ಪುಂಡಾನೆ ಪತ್ತೆ ಹಚ್ಚಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
9 ದಿನದಿಂದ ಕಾರ್ಯಾಚರಣೆ: ಸತತ 9 ದಿನಗಳಿಂದ ಅರಣ್ಯ ಅಧಿಕಾರಿಗಳು ಕಾಡಾನೆ ಹಿಡಿಯುವ ಕಾರ್ಯಾಚರಣೆ ನಡೆಸಿ, ಎರಡನೇ ಪುಂಡಾನೆ ಸೆರೆ ಹಿಡಿದಿದ್ದಾರೆ. ಕಾಡಿಗೆ ಹೋಗಿ ಮರಿ ಆನೆ ಹಿಡಿದಿರುವುದರಿಂದ ಗ್ರಾಮಸ್ಥರು ಈ ಆನೆ ಬಿಟ್ಟು ಬೇರೆ ಆನೆ ಹಿಡಿಯಬೇಕೆಂದು ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ಒತ್ತಾಯ ಮಾಡುತ್ತಿದ್ದಾರೆ. ಮರಿ ಆನೆ ಬಿಟ್ಟು ಬೇರೆ ಆನೆ ಹಿಡಿಯದಿದ್ದರೆ, ನಾವು ಇಲ್ಲೇ ಕೂತು ಹೋರಾಟ ನಡೆಸುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಸಿದ ಬೆನ್ನಲ್ಲೆ ಮತ್ತೂಂದು ಆನೆ ಸೆರೆ ಹಿಡಿಯುವುದಾಗಿ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಸೆರೆ ಸಿಕ್ಕ ಆನೆಯನ್ನ ಮಲೈ ಮಹದೇಶ್ವರಬೆಟ್ಟದ ಮೀಸಲು ಅರಣ್ಯ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಕಳೆದ 9 ದಿನದಿಂದ ಪುಂಡಾನೆ ಸೆರೆಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈಗಾಗಲೇ ಎರಡು ಪುಂಡಾನೆಯನ್ನು ಮಲೈ ಮಹದೇಶ್ವರ ಬೆಟ್ಟದ ಮೀಸಲು ಅರಣ್ಯ ವಲಯಕ್ಕೆ ಸ್ಥಳಾಂತರ ಮಾಡಲಾಗಿದೆ. ಇನ್ನೊಂದು ಆನೆ ಹಿಡಿಯಲು ಸರ್ಕಾರದಿಂದ ಅನುಮತಿ ಸಿಕ್ಕಿದೆ. ಶೀಘ್ರದಲ್ಲೇ ಆ ಪುಂಡಾನೆಯನ್ನು ಕೂಡ ಸೆರೆ ಹಿಡಿಯಲಾಗುವುದು.
– ದಿನೇಶ್, ಅರಣ್ಯಾಧಿಕಾರಿ