ಹೊಸದಿಲ್ಲಿ : ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ, ಭಾರತೀಯ ಪ್ರಜೆಗಳ ಆಧಾರ್ ಮಾಹಿತಿಗಳನ್ನು ರಹಸ್ಯವಾಗಿ ಕೆಲವು ನಿರ್ದಿಷ್ಟ ಪರಿಕರಗಳ ಮೂಲಕ ಪಡೆಯುತ್ತಿದೆ ಎಂದು ಹೇಳಿ ವಿಕಿಲೀಕ್ಸ್ ನಿನ್ನೆ ಶುಕ್ರವಾರ ಬಹಿರಂಗಪಡಿಸಿರುವ ದಾಖಲೆ ಪತ್ರಗಳನ್ನು ಕೇಂದ್ರ ಸರಕಾರ ತಿರಸ್ಕರಿಸಿದೆ.
ಸೈಬರ್ ಗೂಢಚರ್ಯೆ ನಡೆಸಲು ಅಮೆರಿಕದ ಕ್ರಾಸ್ ಮ್ಯಾಚ್ ಟೆಕ್ನಾಲಜೀಸ್ ವಿನ್ಯಾಸಗೊಳಿಸಿರುವ ಎಕ್ಸ್‌ಪ್ರೆಸ್ ಲೇನ್ ಎಂಬ ಸಲಕರಣೆಯನ್ನು ಬಳಸಿಕೊಂಡು ಸಿಐಎ, ಆಧಾರ್ ಮಾಹಿತಿ ಕಣಜಕ್ಕೆ ಕೈಹಾಕಿದೆ ಎಂದು ವಿಕಿಲೀಕ್ಸ್ ನಿನ್ನೆ ತನ್ನ ದಾಖಲೆ ಪತ್ರಗಳನ್ನು ಬಹಿರಂಗಪಡಿಸಿತ್ತು.
ಆಧಾರ್ ಕಾರ್ಯಕ್ರಮಕ್ಕಾಗಿ ಭಾರತದ ವಿಶಿಷ್ಟ ಗುರುತು ಪ್ರಾಧಿಕಾರವು ಸರ್ಟಿಫೈ ಮಾಡಿದ್ದ ಬಯೋಮೆಟ್ರಿಕ್ ಉಪಕರಣಗಳನ್ನು, ಬಯೋಮೆಟ್ರಿಕ್ ಸಾಫ್ಟ್ ವೇರ್‌ನಲ್ಲಿ ಪರಿಣತಿ ಹೊಂದಿರುವ ಅಮೆರಿಕದ ಕ್ರಾಸ್ ಮ್ಯಾಚ್ ಟೆಕ್ನಾಲಜೀಸ್ ಸಂಸ್ಥೆ ಪೂರೈಸಿತ್ತು.
ವಿಕಿಲೀಕ್ಸ್ ಪ್ರಕಟಿಸಿರುವ ಇನ್ನೊಂದು ದಾಖಲೆಪತ್ರದಲ್ಲಿ, “ಭಾರತದ ವಿಶಿಷ್ಟ ಗುರುತು ಪ್ರಾಧಿಕಾರವು ಅಮೆರಿಕದ ಕ್ರಾಸ್ ಮ್ಯಾಚ್ ಟೆಕ್ನಾಲಜೀಸ್‌ಗೆ ಪೂರೈಕೆ ಆದೇಶವನ್ನು ಸಲ್ಲಿಸುವ ಮುನ್ನ ಆ ಸಂಸ್ಥೆಯ ಪೂರ್ವಾಪರಗಳನ್ನು, ವೃತ್ತಿಪರತೆಯನ್ನು ಹಾಗೂ ಅದರ ಖಾಸಗಿ ಸಾಂಗತ್ಯವನ್ನು ಪರಿಶೀಲಿಸುವ ಗೋಜಿಗೇ ಹೋಗಿರಲಿಲ್ಲ’ ಎಂದು ಹೇಳಿದೆ.
ಆದರೆ ವಿಕಿಲೀಕ್ಸ್ ನ ಈ ಹೇಳಿಕೆಗಳನ್ನು ಕೇಂದ್ರ ಸರಕಾರ ಸಂಪೂರ್ಣವಾಗಿ ತಿರಸ್ಕರಿಸಿ ಇದೊಂದು ಕುಚೋದ್ಯದ ಹೇಳಿಕೆ ಎಂದು ಹೇಳಿದೆ.