Advertisement

ಗುತ್ತಿಗೆದಾರನಾಗಲು ಪತ್ನಿಯ ಒಡವೆ ಅಡವಿಟ್ಟಿದ್ದೆ

12:26 PM Nov 18, 2018 | Team Udayavani |

ಬೆಂಗಳೂರು: “ಗುತ್ತಿಗೆದಾರನಾಗಲು ಠೇವಣಿಗಾಗಿ ಪತ್ನಿ ಒಡವೆಯನ್ನು 1200 ರೂ.ಗೆ ಅಡವಿಟ್ಟಿದ್ದೆ. ಇದಾದ 9 ವರ್ಷದವರೆಗೂ ನನ್ನ ಪತ್ನಿ ಆ ಒಡವೆ ಹಾಕಿದ್ದೇ ಇಲ್ಲ. ಕಾರಣ ಪದೇ ಪದೇ ಬ್ಯಾಂಕ್‌ನಲ್ಲಿ ಅಡಮಾನ ಇಡಬೇಕಾದ ಪರಿಸ್ಥಿತಿ ಬರುತ್ತಿತ್ತು’. ತಮ್ಮ ರಾಜಕೀಯ ಪ್ರವೇಶದ ಆರಂಭದ ದಿನಗಳ ಬಗ್ಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಮೆಲುಕು ಹಾಕಿದ್ದು ಹೀಗೆ.

Advertisement

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಶಸ್ವಿ ಕಾರ್ಯಕ್ರಮವಾದ “ಮನೆಯಂಗಳದಲ್ಲಿ ಮಾತುಕತೆ’ಯ 204 ನೇ ಅತಿಥಿಯಾಗಿದ್ದª ಅವರು, ಬಾಲ್ಯದಿಂದ ರಾಜಕೀಯದವರೆಗೆ ಎಲ್ಲಾ ಏಳು-ಬೀಳು ಮುಕ್ತವಾಗಿ ಹಂಚಿಕೊಂಡರು. ಡಿಪ್ಲೊಮಾ ಮುಗಿಸಿ ಕಾಂಟ್ರ್ಯಾಕ್ಟರ್‌ ಕೆಲಸ ಸೇರಿದ್ದೆ. ಈ ವೇಳೆಗೆ ಮನೆಯಲ್ಲಿ 3 ಸಾವಿರ ರೂ. ಸಾಲ ಇತ್ತು. ಶ್ರೀನಿವಾಸ ಎಂಬ ಪ್ರಾಮಾಣಿಕ ಕಾಂಟ್ರ್ಯಾಕ್ಟರ್‌ ನನಗೆ 1 ಸಾವಿರ ರೂ.ಗಳ ಜಲ್ಲಿ ಒಡೆಯುವ ಕೆಲಸ ನೀಡಿದ್ದರು.

ನಂತರ ಬಂದ ಒಂದು ಗುತ್ತಿಗೆ ಪಡೆಯಲು ನನ್ನ ಬಳಿ ಹಣವೇ ಇರಲಿಲ್ಲ. ಹೆಂಡತಿ ಯಾರಿಗೂ ಗೊತ್ತಾಗದಂತೆ ತನ್ನೆಲ್ಲ ಒಡವೆ ಬಿಚ್ಚಿ ಕೊಟ್ಟಿದ್ದರು.  1200 ರೂ.ಗಳಿಗೆ ಅದನ್ನು ಅಡವಿಟ್ಟಿದ್ದೆ. ನಂತರ 9 ವರ್ಷ ಆ ಚಿನ್ನ ನನ್ನ ಪತ್ನಿ ಹಾಕಿರಲೇ ಇಲ್ಲ. ಆಗಾಗ ಬ್ಯಾಂಕ್‌ನಲ್ಲಿ ಇಡಬೇಕಾದ ಪರಿಸ್ಥಿತಿ ಬರುತ್ತಲೇ ಇತ್ತು ಎಂದು ಹಳೆಯ ಘಟನೆಗಳನ್ನು ಸ್ಮರಿಸಿಕೊಂಡರು.

ಮೈಸೂರು ಚಳುವಳಿ: ಮೈಸೂರು ಸಂಸ್ಥಾನ ಒಕ್ಕೂಟ ವ್ಯವಸ್ಥೆಗೆ ಸೇರಿಕೊಳ್ಳಲು ಸ್ವಲ್ಪ ವಿಳಂಬ ಮಾಡಿತ್ತು.  ಇದನ್ನು ಖಂಡಿಸಿ ಮೈಸೂರು ಚಳುವಳಿ ತೀವ್ರವಾಗಿತ್ತು. ಈ ವೇಳೆ ನಾನು ಕಾಲೇಜು ವಿದ್ಯಾರ್ಥಿಯಾಗಿದ್ದೆ. ಚಳ‌ವಳಿಯಲ್ಲಿ ಮುಂಚೂಣಿಯಲ್ಲಿದ್ದ ನನಗೆ ಪೊಲೀಸರು ಕಪಾಳಕ್ಕೆ ಹೊಡೆದಿದ್ದರು, ಪ್ರತಿಯಾಗಿ ನಾನೂ ಹೊಡೆದಿದ್ದೆ.  ಪೊಲೀಸರು ಬಂಧಿಸಿದ್ದರು. ಈ ಪ್ರಕರಣದಲ್ಲಿ ಮಲ್ಲಿಕಾರ್ಜುನ ಎನ್ನುವ ನ್ಯಾಯಾಧೀಶರು ನನಗೆ ಹೇಳಿದ್ದ ಬುದ್ಧಿವಾದ ಇಂದಿಗೂ ನೆನಪಿದೆ. ಘಟನೆಯ ನಂತರ 1952ರಲ್ಲಿ ಕಾಂಗ್ರೆಸ್‌ ಸೇರಿದೆ ಎಂದು ಹೇಳಿದರು.

ಮೈಸೂರು ಚಳವಳಿಯಲ್ಲಿ ಪೊ: ನಾನು ಪ್ರಧಾನಿಯಾಗುತ್ತೇನೆ ಎಂದು ಕನಸು ಕಂಡಿದ್ದಿಲ್ಲ. ಮುಖ್ಯಮಂತ್ರಿಯಾಗುವ ಕನಸು ಕಂಡಿದ್ದು ನಿಜ. ಅದರಂತೆ ಒಂದೂವರೆ ವರ್ಷ ಸಿಎಂ ಆಗಿದ್ದೆ. ವಾಜಪೇಯಿ ಅವರ 13 ದಿನ ಪ್ರಧಾನಮಂತ್ರಿ ಅವಧಿ ಕೊನೆಯಾದ ನಂತರ ಈ ದೇಶದ ಪ್ರಧಾನಿಯಾಗುವ ಅದೃಷ್ಟ ನನ್ನ ಪಾಲಿಗೆ ಬಂದಿತ್ತು. ಇದರ ಹಿಂದೆ ಜ್ಯೋತಿ ಬಸು ಮತ್ತಿತರ ನಾಯಕರ ಶ್ರಮವೂ ಇದೆ ಎಂದರು.

Advertisement

ಡೆನ್ಮಾರ್ಕ್‌ನಲ್ಲಿ ಬಸ್‌, ಮೆಟ್ರೊ ಹಾಗೂ ರೈಲಿಗೆ ಒಂದೇ ಪಾಸ್‌ ಸಾಕಾಗುತ್ತದೆ. ದಿನಪೂರ್ತಿ ಅದೊಂದೆ ಪಾಸ್‌ನಲ್ಲಿ ಸುತ್ತಾಡುವ ವ್ಯವಸ್ಥೆ ಇದೆ. ಇದೇ ಮಾದರಿ ಬೆಂಗಳೂರು ಸೌಂದರ್ಯ ಹಾಳಾಗದಂತೆ ಸಾರ್ವಜನಿಕರಿಗೆ ಅನುಕೂಲವಾಗವಂತೆ ಅಭಿವೃದ್ಧಿ ಪಡಿಸುವ ಕನಸು ನನ್ನದು ಎಂದು ಹೇಳಿದರು.

ಅನಾಯಾಸ ಮರಣ ಬೇಕು: ಶೃಂಗೇರಿ ಶಾರದಾಂಬೆಯನ್ನು ನಂಬುತ್ತೇವೆ. ಈಶ್ವರ ನಮ್ಮ ಮನೆ ದೇವರು. ಯಾವುದೇ ಜಾತಿ, ಧರ್ಮವನ್ನು ಕೀಳಾಗಿ ಭಾವಿಸಿಲ್ಲ, ವಿರೋಧಿಸಿಯೂ ಇಲ್ಲ. ಯಾರಿಗೂ ಮೋಸ, ಅನ್ಯಾಯ ಮಾಡಿಲ್ಲ. ಲಂಚ ಸ್ವೀಕರಿಸಿಲ್ಲ. ಅನಾಯಾಸ ಮರಣ ಬೇಕು ಎಂಬುದಷ್ಟೇ ಹೇಳಬಲ್ಲೆ ಎಂದು ತಿಳಿಸಿದರು.

ಬಿಜೆಪಿ ಯಾರನ್ನು ಸರಿಯಾಗಿ ನೋಡಿಕೊಂಡಿಲ್ಲ: ಬಂಗಾರಪ್ಪ ಸಹಿತವಾಗಿ ರಾಜ್ಯದ ಅನೇಕ ನಾಯಕರು ತಮ್ಮ ಪಕ್ಷ ಬಿಟ್ಟು ಬಿಜೆಪಿಗೆ ಹೋಗಿದ್ದರು. ಆದರೆ,  ಬಿಜೆಪಿ ಅವರ್ಯಾರನ್ನೂ ಚೆನ್ನಾಗಿ ನೋಡಿಕೊಂಡಿಲ್ಲ. ತಮಗೆ ಬೇಕೆಂದಾಗ ಅವರಿಂದ ಉಪಯೋಗ ಪಡೆದಿದ್ದಾರೆ. ಬೇಡ ಎಂದಾಗ ತಿರಸ್ಕರಿಸಿದ್ದಾರೆ. ಹೀಗಾಗಿಯೇ ಬಿಜೆಪಿಗೆ ಹೋದ ಅನೇಕರು ಕೆಲವೇ ವರ್ಷಗಳಲ್ಲಿ ವಾಪಾಸಾಗಿದ್ದಾರೆ ಎಂದು ದೇವೇಗೌಡರು ಹೇಳಿದರು.

ಬಿಎಸ್‌ವೈ ಮಿನಿಸ್ಟರ್‌ ಮಾಡಿ ಎಂದಿದ್ದಳು: ಶೋಭಾ ಕರಂದ್ಲಾಜೆಯವರು ಒಮ್ಮೆ ನಮ್ಮಲ್ಲಿ ಬಂದು, 23 ಶಾಸಕರು ನಮ್ಮ ಜತೆ ಇದ್ದಾರೆ. ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಬಿ.ಎಸ್‌.ಯಡಿಯೂರಪ್ಪ ಅವರನ್ನು ಸಚಿವರನ್ನಾಗಿ ಮಾಡಿ, ನಂತರ ನನ್ನನ್ನು ಮೇಲ್ಮನೆ ಸದಸ್ಯೆಯಾಗಿ ಮಾಡಿ ಕೋರಿಕೆ ಇಟ್ಟಿದ್ದರು. ದುಡುಕಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಅವರನ್ನು ವಾಪಾಸ್‌ ಕಳುಹಿಸಿದ್ದೆ ಎಂದು ನೆನಪಿಸಿಕೊಂಡರು.

ಅರಸು ವ್ಯಕ್ತಿತ್ವ ಇಷ್ಟವಾಗಿತ್ತು: ಡಿ.ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಪ್ರತಿಪಕ್ಷದ ನಾಯಕನಾಗಿದ್ದೆ. ಅವರ ವಿರುದ್ಧ ಎಷ್ಟೇ ಮಾತಾಡದರೂ ಕೋಪ ಮಾಡಿಕೊಳ್ಳುತ್ತಿರಲಿಲ್ಲ. ತಾಳ್ಮೆಯಿಂದ ಕೇಳಿ, ಅಧಿಕಾರಿಗಳಿಂದ ವಿಷಯ ಸಂಗ್ರಹಿಸಿ, ಮಾಹಿತಿ ನೀಡುತ್ತಿದ್ದರು. 1964ರಲ್ಲಿ ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ನಾನು ಮಾಡಿದ್ದ ಭಾಷಣವನ್ನು ದೇವರಾಜ ಅರಸು ಕೇಳಿ ಇಷ್ಟಪಟ್ಟಿದ್ದರು ಎಂದು ದೇವೇಗೌಡ ಸ್ಮರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next