ಮುಂಬಯಿ:ತನ್ನ ಪತ್ನಿ ಹೇಮಾ ಮತ್ತಾಕೆಯ ವಕೀಲರಾದ ಹರೀಶ್ ಭಂಬಾನಿಯನ್ನು ಹತ್ಯೆಗೈದ ಪ್ರಕರಣದಲ್ಲಿ ಆರೋಪಿಯಾಗಿ ಬಂಧಿತರಾಗಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಚಿತ್ರ ಕಲಾವಿದ ಚಿಂತನ್ ಉಪಾಧ್ಯಾಯ ರಚಿಸಿದ ಕಲಾಚಿತ್ರವೊಂದು ಬರೋಬ್ಬರಿ 4.5ಲ.ರೂ.ಗಳಿಗೆ ಮಾರಾಟವಾಗಿದೆ.
ಇತ್ತೀಚೆಗೆ ಆಯೋಜಿಸಲಾಗಿದ್ದ ಚಿತ್ರಕಲಾ ಪ್ರದರ್ಶನದ ವೇಳೆ ಬಾಲಿವುಡ್ ನಟ ಅಮೀರ್ ಖಾನ್ ಅವರ ಪತ್ನಿ ಕಿರಣ್ ರಾವ್ ಅವರು ಚಿಂತನ್ ಉಪಾಧ್ಯಾಯ ಅವರು ರಚಿಸಿದ ಕಲಾಚಿತ್ರವನ್ನು ಖರೀದಿಸಿದರು.
ಥಾಣೆ ಜೈಲಿನಲ್ಲಿ ಬಂಧಿಗಳಾಗಿರುವ ಕೈದಿಗಳು ರಚಿಸಿದ ಕಲಾಚಿತ್ರಗಳ ಪ್ರದರ್ಶನವನ್ನು ಈ ತಿಂಗಳ ಆರಂಭದಲ್ಲಿ ನಗರದ ಶಾಲೆಯೊಂದರಲ್ಲಿ “ಆರ್ಟ್ ಫ್ರ್‌ಮ್ ಬಿಹೈಂಡ್ ಬಾರ್’ಅಭಿಯಾನದಡಿ ಆಯೋಜಿಸಲಾಗಿತ್ತು. ಕೈದಿಗಳು ರಚಿಸಿದ ಕಲಾಚಿತ್ರಗಳ ಮಾರಾಟದಿಂದ ಸಂಗ್ರಹವಾದ ಹಣವನ್ನು ಕೈದಿಗಳ ಕಲ್ಯಾಣ ನಿಧಿಗೆ ಬಳಸಲಾಗುವುದು ಎಂದು ಕಾರಾಗೃಹ ಇಲಾಖೆಯ ಮಹಾನಿರೀಕ್ಷಕರಾದ ರಾಜವರ್ಧನ ಸಿನ್ಹಾ ತಿಳಿಸಿದರು.
ಕೈದಿಗಳಲ್ಲಿ ರಚನಾತ್ಮಕ ಕಲಿಕೆಯ ಹವ್ಯಾಸವನ್ನು ಬೆಳೆಸುವ ಮತ್ತು ಈ ಮೂಲಕ ಅವರನ್ನು ಮಾನಸಿಕ ಒತ್ತಡ, ಖನ್ನತೆಯಿಂದ ಮುಕ್ತಗೊಳಿಸುವ ಉದ್ದೇಶದಿಂದ ಕಾರಾಗೃಹಗಳಲ್ಲಿ ಇಂತಹ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಾ ಬರಲಾಗಿದೆ ಎಂದರು.
ಚಿಂತನ್ ಉಪಾಧ್ಯಾಯ ಜೈಲಿನಲ್ಲಿ ಹಲವಾರು ವರ್ಣಚಿತ್ರಗಳನ್ನು ರಚಿಸಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಚಿತ್ರಕಲಾ ಪ್ರದರ್ಶನಗಳಲ್ಲಿ ಈ ಚಿತ್ರಗಳನ್ನು ಪ್ರದರ್ಶನಕ್ಕಿಡಲಾಗುವುದು. ಜೈಲಿನಲ್ಲಿ ನಡೆಸಲಾಗುವ ಚಿತ್ರಕಲಾ ಕಾರ್ಯಾಗಾರಗಳಲ್ಲಿ ಚಿಂತನ್ ಉಪಾಧ್ಯಾಯ ಅವರೇ ಪ್ರಮುಖ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ ಎಂದು ಥಾಣೆ ಜೈಲಿನ ಅಧೀಕ್ಷಕರಾದ ನಿತಿನ್ ವಯಚಾಲ್ ತಿಳಿಸಿದರು.