ಚಾಮರಾಜನಗರ: ಪತ್ನಿ ಗ್ರಾಮ ಪಂಚಾಯತ್ ಎಲೆಕ್ಷನ್‌ನಲ್ಲಿ ಅವಿರೋಧವಾಗಿ ಆಯ್ಕೆಯಾದ ಬಳಿಕ ಆಕೆಯ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ದೊಡ್ಡರಾಯಪೇಟೆಯಲ್ಲಿ ನಡೆದಿದ್ದು, ಮಕ್ಕಳಾಗದ ಕಾರಣ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ತಂದೆ ದೂರಿನಲ್ಲಿ ತಿಳಿಸಿದ್ದಾರೆ.
ದೊಡ್ಡರಾಯಪೇಟೆ ಗ್ರಾಮದ ನಿಂಗರಾಜು (27) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತನ ಪತ್ನಿ ಗಗನಾ ಕೂಡ್ಲೂರು ಗ್ರಾಮ ಪಂಚಾಯಿತಿ ಸದಸ್ಯೆಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ದೊಡ್ಡರಾಯಪೇಟೆ ಗ್ರಾಮದ 2ನೇ ವಾರ್ಡ್ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾಗಿತ್ತು. ಆ ಸ್ಥಾನಕ್ಕೆ ನಿಂಗರಾಜು ಪತ್ನಿ ಗಗನಾ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಸೋಮವಾರ ಅವಿರೋಧ ಆಯ್ಕೆ ನಡೆದಿತ್ತು. ಈ ಸಂದರ್ಭದಲ್ಲಿ ನಿಂಗರಾಜು ಸಹ ಹಾಜರಿದ್ದು, ಪತ್ನಿಯ ಅವಿರೋಧ ಆಯ್ಕೆಯಿಂದ ಸಂಭ್ರಮ ಪಟ್ಟಿದ್ದರು ಎನ್ನಲಾಗಿದೆ. ಆದರೆ, ಮಂಗಳವಾರ ರಾತ್ರಿ ನಿಂಗರಾಜು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಇದನ್ನು ಗಮನಿಸಿದ ಮನೆಯವರು , ನೆರೆಹೊರೆಯವರ ಸಹಾಯದಿಂದ ನೇಣಿನಿಂದ ಇಳಿಸಿ, ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ನಿಂಗರಾಜು ಮೃತಪಟ್ಟರು.
ನಿಂಗರಾಜು ಅವರ ತಂದೆ ಬಸವರಾಜು ಈ ಸಂಬಂಧ ಪೂರ್ವ ಠಾಣೆಗೆ ನೀಡಿರುವ ದೂರಿನಲ್ಲಿ, ತಮ್ಮ ಪುತ್ರನಿಗೆ ಮದುವೆಯಾಗಿ 5 ವರ್ಷಗಳು ಕಳೆದರೂ ಮಕ್ಕಳಾಗಲಿಲ್ಲ ಎಂದು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ. ಪೊಲೀಸರು ತನಿಖೆ ನಡೆಸಿದ್ದಾರೆ.