ಬೆಂಗಳೂರು: ವ್ಯಕ್ತಿಯೊಬ್ಬ ಪತ್ನಿಯ ಕುತ್ತಿಗೆಗೆ ಚಾಕುನಿಂದ ಇರಿದು ದಾರುಣವಾಗಿ ಹತ್ಯೆಗೈದಿರುವ ಘಟನೆ ರಾಜಾಜಿನಗರದ ರಾಮಮಂದಿರ ಬಳಿ ಬುಧವಾರ ತಡರಾತ್ರಿ ನಡೆದಿದೆ. ಪ್ರೀತಿ (38) ಕೊಲೆಯಾದ ಮಹಿಳೆ. ಈ ಸಂಬಂಧ ಆರೋಪಿ ಇರೇನ್(41) ಎಂಬಾತನನ್ನು ಬಂಧಿಸಲಾಗಿದೆ. ಮನೆ ಕೆಲಸದವರನ್ನು ನೇಮಿಸದ ವಿಚಾರವಾಗಿ ನಡೆದ ಕಲಹ ಕೊಲೆಯಲ್ಲಿ ಆಂತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಜರಾತ್ ಮೂಲದ ಇರೇನ್ ಮಹಾರಾಷ್ಟ್ರ ಮೂಲದ ಪ್ರೀತಿಯನ್ನು 18 ವರ್ಷಗಳ ಹಿಂದೆ ಮದುವೆಯಾಗಿದ್ದು, ದಂಪತಿಗೆ 15 ವರ್ಷದ ಪುತ್ರ ಇದ್ದಾನೆ. ರಾಜಾಜಿನಗರದ ರಾಮಮಂದಿರ ಬಳಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸವಾಗಿದ್ದಾರೆ. ಆರೋಪಿ ಕುರುಬರಹಳ್ಳಿಯ ಫುಡ್ ಕಾರ್ಖಾನೆಯೊಂದರಲ್ಲಿ ವ್ಯವಸ್ಥಾಪಕನಾಗಿದ್ದು, ಪ್ರೀತಿ ಗೃಹಿಣಿಯಾಗಿದ್ದರು.
ಈ ಮಧ್ಯೆ ಕಳೆದ ಮೂರು ತಿಂಗಳಿಂದ ಮನೆ ಕೆಲಸಕ್ಕೆ ಆರೋಪಿ ಇರೇನ್ ಯಾರನ್ನು ನೇಮಿಸಲು ಒಪ್ಪಿರಲಿಲ್ಲ. ಪ್ರೀತಿ, ಹೆಚ್ಚು ಕೆಲಸ ಮಾಡಲು ಸಾಧ್ಯವಿಲ್ಲ, ಕೆಲಸದಾಕೆಯನ್ನು ನೇಮಿಸುವಂತೆ ಇರೇನ್‌ಗೆ ಹೇಳುತ್ತಿದ್ದಳು. ಆದರೆ ಆರೋಪಿ ನಿರ್ಲಕ್ಷ್ಯ ಮಾಡಿದ್ದ. ಹೀಗಾಗಿ ದಂಪತಿ ನಡುವೆ ನಿತ್ಯ ಜಗಳ ನಡೆಯುತ್ತಿತ್ತು. ಇದೇ ವಿಚಾರವಾಗಿ ಬುಧವಾರ ಮಧ್ಯಾಹ್ನ ಕೂಡ ಗಲಾಟೆಯಾಗಿದ್ದು, ಕೋಪಗೊಂಡ ಪ್ರೀತಿ ಪತಿ ಮೇಲೆ ಹಲ್ಲೆ ನಡೆಸಿದ್ದಾರೆ.
ಇದರಿಂದ ಆಕ್ರೋಶಗೊಂಡ ಇರೇನ್ ಅಡುಗೆ ಮನೆಯಲ್ಲಿದ್ದ ಚಾಕುನಿಂದ ಪತ್ನಿಯ ಕುತ್ತಿಗೆ ಇರಿದಿದ್ದಾನೆ. ಪರಿಣಾಮ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಪ್ರೀತಿ ಮೃತಪಟ್ಟಿದ್ದಾರೆ. ಘಟನೆ ವೇಳೆ ಪುತ್ರ ಇರಲಿಲ್ಲ. ಸಂಜೆ ಮನೆಗೆ ಬಂದ ಪುತ್ರ ತಾಯಿ ಶವ ಕಂಡು ಗಾಬರಿಗೊಂಡು ಅರೆಪ್ರಜ್ಞಾಸ್ಥಿತಿಯಲ್ಲಿದ್ದಾನೆ ಎಂದು ಪೊಲೀಸರು ತಿಳಿಸಿದರು.
ಸಾಗಿಸಲು ಹೋಗಿ ಸಿಕ್ಕಿ ಬಿದ್ದ: ಪತ್ನಿಯನ್ನು ಹತ್ಯೆಗೈದ ಆರೋಪಿ ತಡರಾತ್ರಿ 11.30ರ ವರೆಗೂ ಮೃತ ದೇಹದ ಜತೆ ಮನೆಯೊಳಗೆ ಇದ್ದು, ಬಳಿಕ ಮೊದಲ ಮಹಡಿಯಿಂದ ನೆಲಮಾಳಿಗೆಗೆ ಮೃತ ದೇಹವನ್ನು ಎಳೆದು ತಂದಿದ್ದಾನೆ. ಕಾರಿನೊಳಗೆ ಹಾಕಿಕೊಳ್ಳಲು ಸಿದ್ಧತೆ ನಡೆಸಿದ್ದ. ಇದನ್ನು ಗಮನಿಸಿದ ಅಪಾರ್ಟ್‌ಮೆಂಟ್‌ನ ಅಕ್ಕ-ಪಕ್ಕದ ಮನೆಯವರು ಹಾಗೂ ಭದ್ರತಾ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿ, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ದಂಪತಿ ಸಂಬಂಧಿಕರು ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ್ದು, ಕಳೆದ 3-4 ವರ್ಷಗಳಿಂದ ತಮ್ಮ ಸಂಪರ್ಕಕ್ಕೆ ಇರಲಿಲ್ಲ ಎಂದು ಹೇಳಿದ್ದಾರೆ. ಕೃತ್ಯಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ತನಿಖೆ ನಡೆಯುತ್ತಿದೆ.
-ಚೇತನ್ ಸಿಂಗ್ ರಾಥೋಡ್, ಡಿಸಿಪಿ