ಬೆಂಗಳೂರು: ಬದುಕಿರುವ ಪತಿ ಮೃತಪಟ್ಟಿದ್ದಾರೆ ಎಂದು ಅವರ ಮರಣ ಪ್ರಮಾಣ ಪತ್ರ ಮಾಡಿಸಿಕೊಂಡು “ವಿಧವಾ ವೇತನ’ ಪಿಂಚಣಿ ಪಡೆದಿರುವ ಪ್ರಕರಣ ಮಾಗಡಿ ರಸ್ತೆ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಪತ್ನಿ ಮಾಡಿರುವ ಮರಣ ಪ್ರಮಾಣ ಪತ್ರ ಸಿಕ್ಕಿದ ಬಳಿಕ ಶಾಕ್‌ಗೆ ಒಳಗಾದ ಪತಿಯೇ ಪತ್ನಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಭಾಸ್ಕರ್ ಎಂಬುವವರು ನೀಡಿರುವ ದೂರಿನ ಅನ್ವಯ ಆತನ ಪತ್ನಿ ಸುಜಾತಾ ಹಾಗೂ ಮತ್ತಿತರರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಭಾಸ್ಕರ್ ಹಾಗೂ ಸುಜಾತಾ ಅವರಿಗೆ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ವೈಮನಸ್ಸು ಉಂಟಾಗಿತ್ತು. ಹೀಗಾಗಿ, ಎರಡು ವರ್ಷದ ಹಿಂದೆ ಭಾಸ್ಕರ್ ಮನೆ ಬಿಟ್ಟು ಹೋಗಿದ್ದು ಪುನಃ ವಾಪಸ್ ಆಗಿರಲಿಲ್ಲ. ಇದೇ ಸಮಯದಲ್ಲಿ ಪತಿ ಭಾಸ್ಕರ್ ಮೃತಪಟ್ಟಿದ್ದಾರೆ ಎಂದು ಸುಜಾತಾ ಅವರು ಬಿಬಿಎಂಪಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ನಕಲಿ ದಾಖಲೆಗಳನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ ಭಾಸ್ಕರ್ ಮೃತಪಟ್ಟಿರುವುದಾಗಿ ಮರಣ ಪ್ರಮಾಣ ಪತ್ರವನ್ನು 2019ರಲ್ಲಿ ಪಡೆದುಕೊಂಡಿದ್ದಾರೆ. ಬಳಿಕ ಸರ್ಕಾರದಿಂದ ಸಿಗುವ ವಿಧವಾ ವೇತನ ಪಿಂಚಣಿಯನ್ನೂ ಸಹ ಒಂದುವರ್ಷಕ್ಕೂ ಅಧಿಕ ಕಾಲ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ:ನೂರು ಕೇಸಾದರೂ ಎದುರಿಸುವೆ : ಸಿದ್ದರಾಮಯ್ಯಗೆ ಬಿಎಸ್‌ವೈ ತಿರುಗೇಟು
ಕೆಲತಿಂಗಳ ಹಿಂದೆ ಭಾಸ್ಕರ್ ಅವರು ಪುನಃ ಮನೆಗೆ ಬಂದಿದ್ದು, ಮನೆಯಲ್ಲಿ ಕೆಲವು ದಾಖಲೆಗಳನ್ನು ಹುಡುಕುತ್ತಿದ್ದಾಗ ಅವರಿಗೆ ಅವರ “ಮರಣ ಪ್ರಮಾಣ ಪತ್ರ’ ಸಿಕ್ಕಿದ್ದು ಆತಂಕಕ್ಕೆ ಒಳಗಾಗಿದ್ದಾರೆ. ಈ ಕುರಿತು ಪತ್ನಿಯನ್ನು ಪ್ರಶ್ನಿಸಿದಾಗ ಇದೇ ವಿಚಾರಕ್ಕೆ ಜಗಳ ನಡೆದಿದೆ. ಅಂತಿಮ ವಾಗಿ ಭಾಸ್ಕರ್ ಅವರು, ಪತ್ನಿ ಸುಜಾತಾ ಹಾಗೂ ಈ ಕೃತ್ಯದಲ್ಲಿ ಶಾಮೀಲಾದವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣದ ತನಿಖೆ ನಡೆಸಲಾಗುತ್ತಿದೆ.
ಮಹಿಳೆ ಪತಿಯ ಮರಣಪ್ರಮಾಣ ಪತ್ರ ಪಡೆದು ಪಿಂಚಣಿ ಪಡೆದುಕೊಂಡಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಆದರೆ, ಆಕೆಗೆ ಜೀವಂತ ಇರುವ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಸಲ್ಲಿಸಿದ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೆ ಮರಣ ಪ್ರಮಾಣ ಪತ್ರ ಮಾಡಿಕೊಟ್ಟ ಬಿಬಿಎಂಪಿ ಸಿಬ್ಬಂದಿಯನ್ನೂ ಪತ್ತೆಹಚ್ಚಬೇಕಿದೆ. ಈ ಕುರಿತು ಸಂಬಂಧಪಟ್ಟ ಪಾಲಿಕೆ ವ್ಯಾಪ್ತಿಯ ಬಿಬಿಎಂಪಿ ಕಚೇರಿಗೆ ಪತ್ರ ಬರೆದು ಮಾಹಿತಿ ಪಡೆಯಲು ನಿರ್ಧರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಇದನ್ನೂ ಓದಿ:ಎಸ್ಪಿ ಆಪ್ತ ಎಂದು ಹೇಳಿಕೊಂಡು ಹಣ ಕೇಳಿದ ಭೂಪ: 8.50 ಲಕ್ಷ ಕೊಟ್ಟ ಪಿಎಸ್ಐ!