ನವದೆಹಲಿ : ನನ್ನ ಪತ್ನಿ ಹೆಣ್ಣೇ ಅಲ್ಲ ಎಂದು ಹೋರಾಟಕ್ಕಿಳಿದು ವಿಚ್ಛೇದನಕ್ಕಾಗಿ ಸಲ್ಲಿಸಿದ ಅರ್ಜಿಯನ್ನು ಮಧ್ಯಪ್ರದೇಶ ಹೈಕೋರ್ಟ್ ತಳ್ಳಿ ಹಾಕಿದ ಬಳಿಕ ವ್ಯಕ್ತಿಯೊಬ್ಬ ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾನೆ.
ಅರ್ಜಿ ಸಲ್ಲಿಸಿದ ಬೆನ್ನಲ್ಲೇ ಪತ್ನಿಗೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದ್ದು, ಸುಳ್ಳು ವೈದ್ಯಕೀಯ ದಾಖಲೆಗಳನ್ನು ನೀಡಿ ವಂಚಿಸಿರುವುದಾಗಿ ಪತಿ ಹೇಳಿಕೊಂಡಿದ್ದು, ಆ ಕುರಿತಾಗಿ ವಿವರಗಳನ್ನು ಕೇಳಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂಎಂ ಸುಂದ್ರೇಶ್ ಅವರ ಪೀಠವು ಜುಲೈ 29, 2021 ರ ಮಧ್ಯಪ್ರದೇಶ ಹೈಕೋರ್ಟ್‌ನ ಗ್ವಾಲಿಯರ್ ಪೀಠದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಪತಿಯ ಅರ್ಜಿಗೆ ಉತ್ತರವನ್ನು ಸಲ್ಲಿಸುವಂತೆ ಪತ್ನಿಗೆ ಕೇಳಿದೆ.
ಅರ್ಜಿದಾರರ ವೈದ್ಯಕೀಯ ಇತಿಹಾಸದ ಕುರಿತು ಉಲ್ಲೇಖಿಸಿ ಗಮನ ಸೆಳೆದಿದ್ದು, ನನ್ನ ಪತ್ನಿಯ ದೇಹದಲ್ಲಿ ಪುರುಷರಿಗಿರುವ ಜನನಾಂಗವಿದ್ದು, ಆಕೆಯ ಹೆಣ್ಣು ಜನನಾಂಗ ಇರಬೇಕಾದ ಭಾಗ ಸಂಪೂರ್ಣ ಮುಚ್ಚಿಕೊಂಡಿದೆ. ಹೀಗಾಗಿ ಆಕೆ ಮಹಿಳೆ ಅಲ್ಲ ಎಂದು ಹೇಳಿಕೊಂಡಿದ್ದಾರೆ. ಪ್ರತಿವಾದಿಗೆ ನಾಲ್ಕು ವಾರಗಳಲ್ಲಿ ನೋಟಿಸ್ ಗೆ ಉತ್ತರಿಸಲು ನ್ಯಾಯಾಲಯ ಹೇಳಿದೆ.
2016 ರಲ್ಲಿ ದಂಪತಿಗೆ ವಿವಾಹವಾಗಿದ್ದು, ಮದುವೆಯ ನಂತರ, ಹೆಂಡತಿಯು ಋತುಚಕ್ರಕ್ಕೆ ಒಳಗಾಗಿದ್ದೇನೆ ಎಂಬ ನೆಪದಲ್ಲಿ ಕೆಲವು ದಿನಗಳವರೆಗೆ ದೇಹ ಸಂಬಂಧಕ್ಕೆ ಒದಗಿ ಬರಲಿಲ್ಲ, 6 ದಿನಗಳ ಅವಧಿಯ ನಂತರ ಹಿಂದಿರುಗಿದಾಗ ನನಗೆ ಆಕೆ ಹೆಣ್ಣಲ್ಲ ಎನ್ನುವ ವಿಚಾರ ತಿಳಿದಿದೆ ಎಂದು ದೂರು ಸಲ್ಲಿಸಿರುವ ವ್ಯಕ್ತಿ ಹೇಳಿಕೊಂಡಿದ್ದಾರೆ.
ಮಹಿಳೆಗೆ ಶಸ್ತ್ರಚಿಕಿತ್ಸೆ ಗೆ ಒಳಗಾಗುವಂತೆ ಸಲಹೆ ನೀಡಲಾಗಿತ್ತು, ಆದರೆ ಶಸ್ತ್ರಚಿಕಿತ್ಸೆಯ ಮೂಲಕ ಕೃತಕ ಯೋನಿಯನ್ನು ರಚಿಸಿದರೂ, ಗರ್ಭಿಣಿಯಾಗುವ ಸಾಧ್ಯತೆಯು ಅಸಾಧ್ಯ, ಆದರೂ ಗರ್ಭಪಾತ ಸಂಭವಿಸಬಹುದು ಎಂದು ವೈದ್ಯರು ಅರ್ಜಿದಾರರಿಗೆ ತಿಳಿಸಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಈ ವೈದ್ಯಕೀಯ ಪರೀಕ್ಷೆಯ ನಂತರ, ಅರ್ಜಿದಾರ ಪತಿ ಮೋಸ ಹೋಗಿದ್ದಾರೆಂದು ಭಾವಿಸಿ ಮತ್ತು ಮಗಳನ್ನು ಮರಳಿ ಕರೆದುಕೊಂಡು ಹೋಗುವಂತೆ ಪತ್ನಿಯ ತಂದೆಗೆ ಕರೆ ಮಾಡಿದ್ದರು.
ಶಸ್ತ್ರಚಿಕಿತ್ಸೆ ಮಾಡಿಕೊಂಡ ಬಳಿಕ ಪತಿಯ ಮನೆಗೆ ತಂದೆಯೊಂದಿಗೆ ಬಂದ ಮಹಿಳೆ ಬೆದರಿಕೆ ಹಾಕಿರುವುದಾಗಿ ಸ್ಥಳೀಯ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ಕೋರ್ಟ್ ನಲ್ಲಿ ವಿಚಾರಣೆಗೊಳಪಡುತ್ತಿದೆ.