Advertisement

ಪತ್ನಿ, ಮಗುವನ್ನು ಕೊಂದು ನೇಣಿಗೆ ಶರಣಾದ

11:56 AM Mar 01, 2017 | Team Udayavani |

ಬೆಂಗಳೂರು: ಪತ್ನಿ ಮತ್ತು ಎರಡೂವರೆ ವರ್ಷದ ಮಗುವನ್ನು ಕೊಂದ ಖಾಸಗಿ ಕಂಪನಿ ಉದ್ಯೋಗಿಯೊಬ್ಬ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಲಹಂಕ ನ್ಯೂಟೌಟ್‌ ಠಾಣಾ ಸರಹದ್ದಿನ ಸೋಮೇಶ್ವರ ನಗರದಲ್ಲಿ ನಡೆದಿದೆ. ಸೋಮೇಶ್ವರ ನಗರದಲ್ಲಿ ವಾಸವಿದ್ದ ಬಿಹಾರ ಮೂಲದ ದರ್ಬಾಂಗ ಜಿಲ್ಲೆಯ ಮೀನಾಕ್ಷಿ (30), ಅಮಿತ್‌ಕುಮಾರ್‌ ಝಾ (35) ಹಾಗೂ ದಂಪತಿಯ ಎರಡು ವರ್ಷದ ಹೆಣ್ಣು ಮಗು ಮಾನ್ಯ ಮೃತರು. 

Advertisement

ದಂಪತಿ ನಡುವೆ ಜಗಳ ನಡೆದಿದ್ದು, ಬಲವಂತವಾಗಿ ಮಗು­ವಿಗೆ ವಿಷ ಉಣಿಸಿ ಹತ್ಯೆ ಮಾಡಲಾಗಿದೆ. ಪತ್ನಿ ಮೀನಾಕ್ಷಿಗೂ ವಿಷ ನೀಡಿರುವ ಸಾಧ್ಯತೆ ಇದ್ದು, ಆಕೆಯ ಕುತ್ತಿಗೆ ಭಾಗದಲ್ಲಿ ಗಾಯಗಳಾಗಿವೆ. ಮೂಗಿನಿಂದ ರಕ್ತಬಂದಿದೆ. ಅಮಿತ್‌ ಝಾನ ಹೊಟ್ಟೆ ಹಾಗೂ ಎದೆ ಭಾಗಕ್ಕೆ ಚಾಕುವಿನಿಂದ ಇರಿದಿರುವ ಗಾಯಗಳು ಇದ್ದು, ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸಾಯಲು ಆತನೇ ಚಾಕುವಿನಿಂದ ತಿವಿದುಕೊಂಡನೇ ಅಥವಾ ಬೇರೆ ಯಾರಾದರೂ ಹಲ್ಲೆ ನಡೆಸಿದರಾ ಎಂಬುದು ತನಿಖೆಯಿಂದ ಗೊತ್ತಾಗ­ಬೇಕಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಮೀನಾಕ್ಷಿ ಮತ್ತು ಅಮಿತ್‌ಕುಮಾರ್‌ ಒಂದೇ ಊರಿನವರಾ­ಗಿದ್ದು, ಆರು ವರ್ಷಗಳಿಂದ ಯಲಹಂಕ ನ್ಯೂಟೌನ್‌ ಬಳಿಯ ಸೋಮೇಶ್ವರ ನಗರದಲ್ಲಿ ಜಯಪ್ಪ ಎಂಬುವರ 1ನೇ ಮಹಡಿಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು.  ದಂಪತಿಗಳಿಬ್ಬರು ಬಿ.ಟೆಕ್‌ ಪದವೀಧರರಾಗಿದ್ದಾರೆ. ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗದ­ಲ್ಲಿದ್ದ ಅಮಿತ್‌ ಕೆಳೆದ ಒಂದೂವರೆ ವರ್ಷದ ಹಿಂದೆ ಕೆಲಸ ಬಿಟ್ಟಿದ್ದರು. ಕೆಲಸ ತೊರೆದಿದ್ದ ಅಮಿತ್‌ ಕುಡಿತದ ಚಟಕ್ಕೆ ಬಿದ್ದಿದ್ದರು ಎನ್ನಲಾಗಿದೆ.

ಮೀನಾಕ್ಷಿ ಅವರು ಕಳೆದ ಎರಡು ವರ್ಷಗಳಿಂದ ಯಲಹಂಕ ನ್ಯೂಟೌನ್‌ನ ಡೈರಿ ವೃತ್ತದ ಬಳಿ “ಶೀಮ್‌ ರಾಕ್‌’ ಎಂಬ ಹೆಸರಿನ ಪ್ರೀ ನರ್ಸರಿ ಶಾಲೆ ನಡೆಸುತ್ತಿದ್ದರು.  ನಿತ್ಯ ಶಾಲೆಗೆ ಬರುತ್ತಿದ್ದ ಮೀನಾಕ್ಷಿ ಅವರು ಸೋಮವಾರ ಶಾಲೆಗೆ ಬಂದಿಲ್ಲ. ಶಾಲೆಯವರು ಮೀನಾಕ್ಷಿ ಅವರ ಮೊಬೈಲ್‌ ಫೋನ್‌ಗೆ ಹಲವು ಮಾಡಿದರೂ ಕರೆ ಸ್ವೀಕರಿಸಿಲ್ಲ. ಅನುಮಾನ­ಗೊಂಡ ಶಿಕ್ಷಕಿ ಅಕ್ಷತಾ ಎಂಬುವವರು  ಶಾಲೆಯ ಸಹಾಯಕಿಯನ್ನು ಮನೆ ಬಳಿ ಕಳಿಸಿ ನೋಡಿಕೊಂಡು ಬರುವಂತೆ ಹೇಳಿದ್ದಾರೆ. 

ಒಳಗಿನಿಂದ ಡೋರ್‌ ಲಾಕ್‌: ಶಾಲೆಯ ಸಹಾಯಕಿ ಚನ್ನಮ್ಮ ಮೀನಾಕ್ಷಿ ಅವರ ಮನೆ ಬಳಿ ತೆರಳಿ ಬಾಗಿಲು ತಟ್ಟಿದ್ದು, ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬಳಿಕ ಶಿಕ್ಷಕಿ ಅಕ್ಷತಾ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಅಲ್ಲಿಯೇ ಇದ್ದ ಮನೆಯ ಮಾಲೀಕರಿಗೂ ವಿಷಯ ತಿಳಿಸಿದ್ದಾರೆ. ಪಕ್ಕದ ಮನೆಯ ಮಹಡಿಯ ಮೇಲೇರಿ ರೂಮ್‌ನ ಕೊಠಡಿಯ ಕಿಟಕಿ ಒಡೆದು ನೋಡಿದಾಗ ಅಮಿತ್‌ ಝಾ ನೇಣು ಹಾಕಿಕೊಂಡಿರುವುದು ಕಂಡಿದೆ.

Advertisement

ಪಕ್ಕದಲ್ಲಿನ ಬೆಡ್‌ ಮೇಲೆ ಮೀನಾಕ್ಷಿ ಮತ್ತು ಶವ ಇರುವುದು ಕಂಡಿದ್ದು, ಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಶವಗಳನ್ನು ಅಂಬೇಡ್ಕರ್‌ ಆಸ್ಪತ್ರೆಗೆ ಸಾಗಿಸಿದ್ದಾರೆ. ಫೆ.27 ರಂದು ರಾತ್ರಿ ಘಟನೆ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಸತ್ಯಾಂಶ ತಿಳಿಯಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಫೇಸ್‌ಬುಕ್‌ನಿಂದ ಸಂಬಂಧಿಗಳ ಪತ್ತೆ
ಬೆಂಗಳೂರು: ಮೃತ ದಂಪತಿಗಳ ಮಾಹಿತಿ, ಸಂಬಂಧಿಗಳ ಬಗ್ಗೆ ಪೊಲೀಸರಿಗೆ ಆರಂಭದಲ್ಲಿ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ. ಆದರೆ, ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನ ನೆರವಿನಿಂದ ಪೊಲೀಸರು ಅವರ ಸಂಬಂಧಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.  

ಮನೆ ಮಾಲೀಕ ಮತ್ತು ಪ್ರೀ ನರ್ಸರಿ ಶಾಲೆಯಲ್ಲಿ ಶಿಕ್ಷಕಿಯನ್ನು ಪ್ರಶ್ನಿಸಿದ್ದ ಪೊಲೀಸರಿಗೆ ಅವರ ಬಳಿ ಯಾವ ಮಾಹಿತಿಯೂ ಸಿಕ್ಕಿರಲಿಲ್ಲ.  ತನಿಖಾಧಿಕಾರಿ ಪೈಕಿ ಒಬ್ಬರು ಮೃತ ಅಮಿತ್‌ ಮತ್ತು ಮೀನಾಕ್ಷಿ ಫೇಸ್‌ಬುಕ್‌ನ ಅಕೌಂಟ್‌ನಲ್ಲಿರುವ ಝಾ ಎಂಬುವವರಿಗೆ ಘಟನೆ ವಿವರಿಸಿ ಸಂದೇಶ ಕಳುಹಿಸಿದ್ದರು.

ಇದರ ಆಧಾರದಲ್ಲಿ ಮಂಗಳವಾರ ಸಂಜೆ ವೇಳೆಗೆ ಮೃತ ಅಮಿತ್‌ನ ಸಂಬಂಧಿ ಅಭಿಷೇಕ್‌ ಝಾ ಎನ್ನುವರು ಪೊಲೀಸರಿಗೆ ಕರೆ ಮಾಡಿದ್ದಾರೆ. ಘಟನೆ ಬಗ್ಗೆ ತಿಳಿದು ಬಿಹಾರದಲ್ಲಿ ನೆಲೆಸಿರುವ ಅಮಿತ್‌ ಕುಟುಂಬಸ್ಥರಿಗೆ ಸುದ್ದಿ ತಲುಪಿಸಿದ್ದಾರೆ. ಇನ್ನೂ ಮೀನಾಕ್ಷಿ ಅಣ್ಣ ದೆಹಲಿಯಲ್ಲಿದ್ದು, ತಾಯಿ ಬಿಹಾರದಲ್ಲಿದ್ದಾರೆ. ಅವರಿಗೂ ವಿಷಯ ತಿಳಿಸಿದ್ದು, ಬುಧವಾರ ಬೆಳಗ್ಗೆ ನಗರಕ್ಕೆ ಬರಲಿದ್ದಾರೆ.

ಕುಡಿಯದಂತೆ ಬುದ್ಧಿ ಹೇಳಿದ್ರು
ಪ್ರಾರಂಭದಲ್ಲಿ ದಂಪತಿ ಅನ್ಯೋನ್ಯವಾಗಿದ್ದರು. ಇತ್ತೀಚೆಗೆ ಅಮಿತ್‌ ಝಾ ಕುಡಿದು ಮನೆಗೆ ಬರುತ್ತಿದ್ದರಲ್ಲದೆ, ದಂಪತಿ ನಡುವೆ ಆಗ್ಗಾಗ್ಗೆ ಜಗಳ ನಡೆಯುತ್ತಿತ್ತು. ಒಂದೆರೆಡು ಬಾರಿ ಮನೆಯ ಮಾಲೀಕರು ದಂಪತಿಯನ್ನು ಕರೆದು ತಿಳಿ ಹೇಳಿದ್ದರಲ್ಲದೆ, ಅಮಿತ್‌ಗೆ ಕುಡಿಯದಂತೆ ಬುದ್ಧಿ ಮಾತು ಹೇಳಿದ್ದರು. ಇಷ್ಟಾದರೂ ಆತ ಮದ್ಯ ಸೇವಿಸುವುದನ್ನು ಬಿಟ್ಟಿರಲಿಲ್ಲ. ಮೀನಾಕ್ಷಿ ಒಳ್ಳೆಯವರು, ಯಾರೊಂದಿಗೆ ಮಾತನಾಡುತ್ತಿರಲಿಲ್ಲ. ತಾನಾಯ್ತು, ತನ್ನ ಕೆಲಸವಾಯ್ತು ಎಂದಿದ್ದರು. ಯಾರ ಸಹಾವಾಸಕ್ಕೂ ಹೋಗುತ್ತಿರಲಿಲ್ಲ ಎಂದು ನೆರೆಮನೆಯ ವನಜಾಕ್ಷಿ ತಿಳಿಸಿದ್ದಾರೆ. 

ಪ್ರಾಪರ್ಟಿ ಮಾರಬೇಕು
ಶಾಲೆಯಲ್ಲಿ 18 ಮಕ್ಕಳಿದ್ದು, ಇಬ್ಬರು ಶಿಕ್ಷಕರು ಹಾಗೂ ಸಹಾಯಕಿರು ಕೆಲಸ ಮಾಡುತ್ತಿದ್ದಾರೆ. ಮೀನಾಕ್ಷಿ ನಿತ್ಯ ಮಧ್ಯಾಹ್ನದ ಬಳಿಕ ಶಾಲೆಗೆ ಬರುತ್ತಿದ್ದರು. ನಿತ್ಯ ಬೆಳಗ್ಗೆ ಸಮಯದಲ್ಲಿ ಕರೆ ಮಾಡಿ ಶಾಲೆಗೆ ಬಂದಿರುವ ಮಕ್ಕಳ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಆದರೆ ಸೋಮವಾರ ಕರೆ ಕೂಡ ಮಾಡಿರಲಿಲ್ಲ.

ಭಾನುವಾರ ತಡರಾತ್ರಿ 10.20ಕ್ಕೆ ಮೀನಾಕ್ಷಿ ಅವರು ತಮ್ಮ ಮೊಬೈಲ್‌ನಿಂದ ವಾಟ್ಸಪ್‌ ಮಾಡಿದ್ದು, ಪ್ರಾಪರ್ಟಿ ಮಾರಾಟ ಮಾಡಬೇಕು. ಪ್ರಾಪರ್ಟಿ ಕೊಳ್ಳುವರು ಯಾರಾದರೂ ಇದ್ದಾರಾ? ಎಂದು ಕೇಳಿದ್ದರು. ಯಾವ ಪ್ರಾಪರ್ಟಿ ಎಂಬುದರ ಬಗ್ಗೆ ಮಾಹಿತಿ ಇರಲಿಲ್ಲ. ಬಳಿಕ ಅವರು ಯಾವುದೇ ಸಂದೇಶ ಕಳುಹಿಸಿಲ್ಲ ಎಂದು ಶಾಲೆಯ ಶಿಕ್ಷಕಿ ಅಕ್ಷತಾ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next