ಬಾಗಲಕೋಟೆ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದ 75 ವರ್ಷದ ಪತ್ನಿಹಾಗೂ ಸಹೋದರ ಈಗ ಗುಣಮುಖರಾಗಿದ್ದು, ಅವರನ್ನು ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮಥ ವೃದ್ಧನಿಗೆ ಸೋಂಕು ಖಚಿತವಾದ ಬೆನ್ನಲ್ಲೇ ಮನೆಯವರಿಗೆ ಪರೀಕ್ಷೆ ನಡೆಸಲಾಗಿತ್ತು. ಆಗ ಆತನ ಪತ್ನಿ ಮತ್ತು ಸಹೋದರನಿಗೆ ಸೋಂಕು ದೃಢವಾಗಿತ್ತು. ಅವರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.
14 ದಿನಗಳ ಬಳಿಕ ಎರಡು ಬಾರಿ ಅವರ ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿಯಲ್ಲಿ ನೆಗಟಿವ್ ಬಂದಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತಿದೆ ಎಂದರು. ಆಸ್ಪತ್ರೆಯಿಂದ ಬಿಡುಗಡೆಗೊಂಡರೂ ಸಹ ಅವರನ್ನು ಮುಂದಿನ 14 ದಿನಗಳ ಕಾಲ ಹೋಂ ಕ್ವಾರಂಟೈನ್ ನಲ್ಲಿ ಇರುವಂತೆ ಸೂಚಿಸಲಾಗಿದೆ.
ಸಸಿ ಕೊಟ್ಟರು; ಕಣ್ಣೀರು ಹಾಕಿ ತೆರಳಿದರು :
ಜಿಲ್ಲಾ ಕೋವಿಡ್-19 ಆಸ್ಪತ್ರೆಯಿಂದ ಬಿಡುಗಡೆಗೊಂಡ ಇಬ್ಬರಿಗೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಪ್ರಕಾಶ ಬಿರಾದಾರ ಸಸಿ ನೀಡಿ, 14 ದಿನ ಕಡ್ಡಾಯವಾಗಿ ಹೋಂ ಕ್ವಾರಂಟೈನಲ್ಲಿರುವ ತಿಳಿಸಿದರು. ಚಿಕಿತ್ಸೆ ನೀಡಿದ ವೈದ್ಯರು, ನರ್ಸಗಳು, ಆಸ್ಪತ್ರೆಯ ದಾದಿಯರೂ ಅವರನ್ನು ಹಾರೈಸಿದರು. ಈ ವೇಳೆ ಮನೆಗೆ ತೆರಳುತ್ತಿದ್ದ ಇಬ್ಬರೂ, ನಮ್ಮನ್ನು ಕಾಪಾಡಿದ ನಿಮಗೆ ದೇವರು ಚೆನ್ನಾಗಿ ಇಟ್ಟಿರಲಿ ಎಂದು ಕಣ್ಣೀರು ಸುರಿಸಿದರು. ಬಳಿಕ ನಗು ಮಗು ವಿಶೇಷ ಅಂಬ್ಯುಲೆನ್ಸ್ ಮೂಲಕ ಮನೆಗೆ ತೆರಳಿದರು.