Advertisement

ಸರ್ಕಾರದ ಜನ ವಿರೋಧಿ ನೀತಿಗೆ ವ್ಯಾಪಕ ಆಕ್ರೋಶ

01:48 PM Mar 29, 2022 | Team Udayavani |

ದಾವಣಗೆರೆ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನ, ಕಾರ್ಮಿಕ, ರೈತ ವಿರೋಧಿ  ನೀತಿ ಖಂಡಿಸಿ ಅಖೀಲ ಭಾರತ ಸಾರ್ವತ್ರಿಕ ಮುಷ್ಕರ ಕರೆ ಕೊಟ್ಟ ಹಿನ್ನೆಲೆಯಲ್ಲಿ ಸೋಮವಾರ ನಗರದಲ್ಲೂ ವಿವಿಧ ಸಂಘಟನೆಗಳಿಂದ ಮುಷ್ಕರ ನಡೆಯಿತು.

Advertisement

ರೈತ, ಕಾರ್ಮಿಕ, ಬ್ಯಾಂಕ್‌, ಎಲ್‌ಐಸಿ, ಬಿಸಿಯೂಟ, ಆಶಾ, ಅಂಗನವಾಡಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ಕಾರ್ಯಕರ್ತರು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನೇತೃತ್ವದಲ್ಲಿ ಬೆಳಿಗ್ಗೆ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ ಜಯದೇವ ವೃತ್ತದ ಲಾಯರ್ ರಸ್ತೆಯಲ್ಲಿ ಬಹಿರಂಗ ಸಭೆ ನಡೆಸಿ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಜಿಲ್ಲಾ ಸಂಚಾಲಕ ಆವರಗೆರೆ ಎಚ್‌.ಜಿ. ಉಮೇಶ್‌, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಜನ, ರೈತ, ಕಾರ್ಮಿಕ ವಿರೋಧಿ ನೀತಿ ಜಾರಿಗೆ ಬರುತ್ತಿರುವುದು ಖಂಡನೀಯ. ಕಾಂಗ್ರೆಸ್‌ 1992ರಲ್ಲಿ ಜಾರಿಗೊಳಿಸಿದ ಜಾಗತೀಕರಣ ನೀತಿಯನ್ನು ಬಿಜೆಪಿ ತೀವ್ರ ಗತಿಯಲ್ಲಿ ಜಾರಿಗೆ ತರುತ್ತಿರುವ ಪರಿಣಾಮ ಭಾರತದ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದೆ. ಶ್ರೀಮಂತರ ಸಂಖ್ಯೆ ಹೆಚ್ಚಾಗುತ್ತಿರುವಂತೆ ಬಡವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ನಿರುದ್ಯೋಗ ಸಮಸ್ಯೆ ಬೃಹದಾಕಾರವಾಗಿ ಬೆಳೆಯುತ್ತಿದೆ. ಆದ್ದರಿಂದ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ವಿರೋ ಧಿಸಿ ಮುಷ್ಕರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ. ರಾಘವೇಂದ್ರ ನಾಯರಿ ಮಾತನಾಡಿ, ಎಲ್ಲ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗದಿಗೊಳಿಸಬೇಕು. ವಿದ್ಯುಚ್ಛಕ್ತಿ ಮಸೂದೆ ಹಿಂಪಡೆಯಬೇಕು. ಯಾವುದೇ ರೂಪದಲ್ಲಿ ಖಾಸಗೀಕರಣ ಬೇಡ. ಆದಾಯ ತೆರಿಗೆ ಪಾವತಿಸದ ಕುಟುಂಬಗಳಿಗೆ ತಿಂಗಳಿಗೆ 7500 ರೂ. ಆಹಾರ ಹಾಗೂ ಆದಾಯ ಬೆಂಬಲ ಒದಗಿಸಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ನಗರಗಳಿಗೆ ವಿಸ್ತರಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಮುಷ್ಕರ ಹಮ್ಮಿಕೊಳ್ಳಲಾಗಿದೆ. ಮುಷ್ಕರ ಎರಡು ದಿನಗಳದ್ದಾಗಿದ್ದು ನಾಳೆಯೂ (ಮಾ. 29) ನಗರದಲ್ಲಿ ಮುಷ್ಕರ ನಡೆಸಲಾಗುವುದು ಎಂದರು.

ವಿವಿಧ ಸಂಘಟನೆಗಳ ಪ್ರಮುಖರಾದ ಆವರಗೆರೆ ಚಂದ್ರು, ಆನಂದರಾಜ್‌, ಮಂಜುನಾಥ ಕೈದಾಳೆ, ಬಿ. ಆನಂದಮೂರ್ತಿ, ವಿಶ್ವನಾಥ ತಿಪ್ಪೇಸ್ವಾಮಿ, ನಾಗರಾಜ ಎನ್‌. ಎಂ.ಬಿ. ಶಾರದಮ್ಮ, ಎ.ಕಿ. ಲಿಂಗರಾಜು, ಜಬೀನಾ ಖಾನಂ, ಎಸ್‌. ಜಯಪ್ಪ ಸೇರಿದಂತೆ ಇನ್ನಿತರರು ಮುಷ್ಕರದಲ್ಲಿ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next