Advertisement

ಪತ್ರಕರ್ತೆ ಗೌರಿ ಹತ್ಯೆಗೆ ವ್ಯಾಪಕ ಖಂಡನೆ

12:21 PM Sep 07, 2017 | |

ವಿಜಯಪುರ: ಪತ್ರಕರ್ತೆ ಗೌರಿ ಲಂಕೇಶ ಹತ್ಯೆಗೆ ವಿಜಯಪುರ ಜಿಲ್ಲೆಯಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು ವಿವಿಧ ಸಂಘಟನೆಗಳು ಘಟನೆಯನ್ನು ತೀವ್ರವಾಗಿ ಖಂಡಿಸುವ ಜೊತೆಗೆ ಹಂತಕರನ್ನು ತ್ವರಿತವಾಗಿ ಬಂಧಿಸುವಂತೆ ಆಗ್ರಹಿಸಿ ವಿವಿಧ ರೀತಿಯ ಪ್ರತಿಭಟನೆ ನಡೆಸಿದವು.

Advertisement

ಬುಧವಾರ ಬೆಳಗ್ಗೆ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸಭೆ ಸೇರಿದ ಪತ್ರಕರ್ತರು ಗೌರಿ ಲಂಕೇಶ ಅವರ ಹತ್ಯೆಯನ್ನು ತೀವ್ರವಾಗಿ ಖಂಡಿಸಿ, ಕೂಡಲೇ ಹಂತಕರನ್ನು ಬಂಧಿಸುವಂತೆ ಆಗ್ರಹಿಸಿದರು. ನಂತರ ಕೈಗೆ ಕಪ್ಪುಪಟ್ಟಿ ಧರಿಸಿ ಡಾ| ಅಂಬೇಡ್ಕರ್‌ ವೃತ್ತದಿಂದ ಜಿಲ್ಲಾ ಧಿಕಾರಿ ಕಚೇರಿವರೆಗೆ ಶೋಕ ಮೆರವಣಿಗೆ ನಡೆಸಿದರು.

ಈ ವೇಳೆ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರಫೀ ಭಂಡಾರಿ, ಹಿರಿಯ ಪತ್ರಕರ್ತರಾದ ಅನಿಲ ಹೊಸಮನಿ, ವಾಸುದೇವ
ಹೆರಕಲ್‌, ಬಾಬುರಾವ ಕುಲಕರ್ಣಿ ಮಾತನಾಡಿ, ಪತ್ರಕರ್ತೆ ಗೌರಿ ಲಂಕೇಶ ಅವರನ್ನು ಹತ್ಯೆ ಮಾಡಿರುವ ಕೃತ್ಯ ನಾಗರಿಕ ಸಮಾಜ ತಲೆ ತಗ್ಗಿಸುವಂತಿದೆ. ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಬಿಐ ತನಿಖೆಗೆ ವಹಿಸಬೇಕು. ಎರಡು ವರ್ಷಗಳ ಹಿಂದೆ ಡಾ| ಎಂ.ಎಂ. ಕಲಬುರ್ಗಿ, ದಾಬೋಳ್ಕರ ಹತ್ಯೆ ಘಟನೆಗೂ ಗೌರಿ ಲಂಕೇಶ ಹತ್ಯೆ ಘಟನೆಗೂ ಸಾಮ್ಯತೆ ಕಂಡು ಬರುತ್ತಿದೆ. ಇನ್ನಾದರೂ ಸರ್ಕಾರ ಹಂತರಕರನ್ನು ತ್ವರಿತವಾಗಿ ಬಂಧಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪತ್ರಕರ್ತರಾದ ರಾಜು ಕೊಂಡಗೂಳಿ, ಸೀತಾರಾಮ ಕುಲಕರ್ಣಿ, ಸಚೇಂದ್ರ ಲಂಬು, ದೇವೇಂದ್ರ ಹೆಳವರ, ರಾಹುಲ್‌ ಮಾನಕರ, ಮಹೇಶ ಶೆಟಗಾರ, ಫಿರೋಜ್‌ ರೋಜನದಾರ, ಸುಶಿಲೇಂದ್ರ ನಾಯಕ, ರಾಹುಲ್‌ ಅಪ್ಟೆ, ಸುನೀಲ ಗೋಡೆನವರ ಇದ್ದರು.

ಕರವೇ ಪ್ರತಿಭಟನೆ: ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದ ಮಹಾತ್ಮ ಗಾಂಧಿಧೀಜಿ ವೃತ್ತದಲ್ಲಿ ಸಭೆ ಸೇರಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಈ ವೇಳೆ ಸಂಘಟನೆ ಜಿಲ್ಲಾಧ್ಯಕ್ಷ ಎಂ.ಸಿ. ಮುಲ್ಲಾ ಮಾತನಾಡಿ, ವೈಚಾರಿಕ ಚಿಂತನೆಗಳನ್ನು ವರದಿ, ಲೇಖನಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಿದ್ದ ಗೌರಿ ಲಂಕೇಶ ಅವರ ಹತ್ಯೆ ಸಮಾಜದಲ್ಲಿ ಆಘಾತ ಉಂಟು ಮಾಡಿದೆ. ಡಾ| ಕಲಬುರ್ಗಿ ಅವರ ಹತ್ಯೆ ಬಳಿಕ ಎಚ್ಚೆತ್ತುಕೊಳ್ಳದ ಸರ್ಕಾರದ ನಿರ್ಲಕ್ಷದ ಪರಿಣಾಮ ಇದೀಗ ಗೌರಿ ಲಂಕೇಶ ಅವರನ್ನು ಕಳೆದುಕೊಳ್ಳುವ ದುಸ್ಥಿತಿ ಬಂದಿದೆ. ವೈಚಾರಿಕ ವಿರೋಧಗಳು ಹತ್ಯೆಯ ಹಂತಕ್ಕೆ ಬಂದು ನಿಲ್ಲುವ ಕೃತ್ಯ ಸಮಾಜಕ್ಕೆ ಮಾರಕವಾಗಿದೆ. ಸರ್ಕಾರ ಇನ್ನಾದರೂ ಹಂತಕರನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.

ಮಹಾದೇವ ರಾವಜಿ, ದಸ್ತಗೀರ ಸಾಲೋಟಗಿ, ಭಾರತ ಕೋಳಿ, ಫಯಾಜ್‌ ಕಲಾದಗಿ, ಸಾಯಬಣ್ಣ ಮಡಿವಾಳರ, ಮನೋಹರ ತಾಜವ, ಫೀದಾ ಕಲಾದಗಿ, ಎಚ್‌.ಎಸ್‌.ಕಬಾಡೆ, ಅನೀಸ್‌ ಮಣಿಯಾರ, ಅಕ್ರಂ ಮಾಶ್ಯಾಳಕರ, ದತ್ತಾತ್ರೆಯ ಪೂಜಾರಿ, ಖಾಜಾಭಾಯಿ ಬೇಪಾರಿ, ಜೇರಾಲ್ಡ್‌ ಡಿಸೋಜಾ ಪಾಲ್ಗೊಂಡಿದ್ದರು.

ಕತ್ತೆ ಮೆರವಣಿಗೆ: ಪತ್ರಕರ್ತೆ ಗೌರಿ ಲಂಕೇಶ ಹತ್ಯೆಯನ್ನು ತೀವ್ರವಾಗಿ ಖಂಡಿಸಿ ನಗರದ ಬಸವೇಶ್ವರ ವೃತ್ತದಲ್ಲಿ ಕತ್ತೆ ಮೆರವಣಿಗೆ ಮಾಡಿದ ಕರ್ನಾಟಕ ಜನಬೆಂಬಲ ವೇದಿಕೆ ಕಾರ್ಯಕರ್ತರು ಕೂಡಲೇ ಹಂತಕರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಸಂಘಟನೆ ಅಧ್ಯಕ್ಷ ಪ್ರಕಾಶ ಕೋಳಿ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಕುಂಬಾರ ಮಾತನಾಡಿ, ರಾಜ್ಯದಲ್ಲಿ ಚಿಂತಕರನ್ನು ಹತ್ಯೆ ಮಾಡುತ್ತಿರುವ ಹಂತಕರ ಬಂಧನ ಮಾಡದ ಸರ್ಕಾರವನ್ನು ಕತ್ತೆಗೆ ಹೋಲಿಸಿ, ಗೌರಿ ಲಂಕೇಶ ಅವರನ್ನು ಹತ್ಯೆ ಮಾಡಿ ಹಂತಕರನ್ನಾದರೂ ಬಂಧಿಸಿ ರಾಜ್ಯದಲ್ಲಿ ಸರ್ಕಾರ ಬದುಕಿದೆ ಎಂದು ಸಾಬೀತು ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೈಬೂಬು ಮುಲ್ಲಾ, ದೀಪಕ ಅಳಗುಂಡಿ, ಶರೀಫ ಸಾಹೇಬ, ಜಗದೀಶ ಲಚ್ಯಾಣ, ಬಸವರಾಜ ಹಿರೇಮಠ, ವಿರೇಶ ಹವಲ್ದಾರ ಮಠ, ಪಿಂಟು ಚವ್ಹಾಣ, ಹರೀಶ ಇಂಡಿ, ಕವಿತಾ ಹಿರೇಮಠ, ನಾಗರತ್ನ ನಾವಿ, ಮಹಾದೇವಿ ಮಠ, ಭಾಗ್ಯಶ್ರೀ ಬರಡೋಲ, ಭಾರತಿ ಭುಯ್ನಾರ, ಅಂಬಿಕಾ ರಾಠೊಡ, ಹೇಮಾ ಮಠ ಇದ್ದರು.

ಉಗ್ರ ಶಿಕ್ಷೆಗೆ ಆಗ್ರಹ: ಪತ್ರಕರ್ತೆ ಗೌರಿ ಲಂಕೇಶ ಅವರನ್ನು ಹತ್ಯೆ ಮಾಡಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಉಗ್ರ ಶಿಕ್ಷೆ ನೀಡಬೇಕು ಎಂದು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪರಿವರ್ತನೆ) ಆಗ್ರಹಿಸಿದೆ. ಸಂಘಟನೆ ಅಧ್ಯಕ್ಷ ಅಭಿಷೇಕ ಚಕ್ರವರ್ತಿ, ಸುನೀಲಕುಮಾರ ಉಕ್ಕಲಿ, ವೈ.ಎಚ್‌. ವಿಜಯಕರ, ಶಿವಪುತ್ರಪ್ಪ ತಳಭಂಡಾರಿ, ಮಲ್ಲಿಕಾರ್ಜುನ ಚಲವಾದಿ ಮಾತನಾಡಿ, ಶೋಷಿತರಿಗಾಗಿ ಅನ್ಯಾಯದ ವಿರುದ್ಧದ ಧ್ವನಿಯಾಗಿದ್ದ ಗೌರಿ ಲಂಕೇಶ ಎಂಬ ಧ್ವನಿಯನ್ನು ಕಳೆದುಕೊಂಡಿದ್ದೇವೆ. ಕನಿಷ್ಠ ಹಂತಕರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ರಾಕ್ಷಸರೂಪಿ ಹಂತಕರನ್ನು ಕೂಡಲೇ ಪತ್ತೆ ಹಚ್ಚಿ ಕಠಿಣ ಶಿಕ್ಷೆಗೊಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಚಿಂತನ ವೇದಿಕೆ: ಪತ್ರಕರ್ತೆ ಗೌರಿ ಲಂಕೇಶ ಅವರ ಹತ್ಯೆ ಪ್ರಜ್ಞಾವಂತ ಸಮೂಹಕ್ಕೆ ಹಾಗೂ ಪತ್ರಿಕೋದ್ಯಮಕ್ಕೆ ದೊಡ್ಡ
ಆಘಾತ ನೀಡಿದೆ ಎಂದು ಚಿಂತನ ಸಾಂಸ್ಕೃತಿಕ ಬಳಗದ ಪದಾ  ಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದು, ಹಂತಕರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

ವಿಚಾರವಾದಿ, ಚಿಂತಕರ ಮೇಲೆ ಈ ರೀತಿಯ ಘಟನೆಗಳು ಮರುಕಳಿಸುತ್ತಿರುವುದು ಸಮಾಜದಲ್ಲಿ ಆತಂಕ ಮೂಡಿಸಿದೆ.
ಡಾ| ಎಂ.ಎಂ. ಕಲಬುರ್ಗಿ ಅವರ ಹತ್ಯೆ ಪ್ರಕರಣದ ಬೆನ್ನಲ್ಲೇ ಮತ್ತೂಬ್ಬ ವಿಚಾರವಾದಿ ಗೌರಿ ಅವರ ಹತ್ಯೆ ನಡೆಸಿ, ದುಷ್ಕರ್ಮಿಗಳ ಅಟ್ಟಹಾಸ ನಡೆಸುತ್ತಿರುವ ಕೃತ್ಯ ಖಂಡನಾರ್ಹ. ಸರ್ಕಾರ ಕೂಡಲೇ ಪ್ರಕರಣದ ಸಮಗ್ರ ತನಿಖೆ ನಡೆಸಿ ಹಂತಕರನ್ನು ಬಂಧಿಸಿ, ಉಗ್ರ ಶಿಕ್ಷೆ ನೀಡಬೇಕು ಎಂದು ಚಿಂತನ ಸಾಂಸ್ಕೃತಿಕ ಬಳಗದ ಡಾ| ಮಹಾಂತೇಶ
ಬಿರಾದಾರ, ಸಂಗಮೇಶ ಬಬಲೇಶ್ವರ, ವಿಡಿಎ ಮಾಜಿ ಅಧ್ಯಕ್ಷ ಚಂದ್ರಕಾಂತ ಶೆಟ್ಟಿ, ಸೋಮನಾಥ ಕಳ್ಳಿಮನಿ, ಪ್ರಶಾಂತ ದೇಸಾಯಿ, ಸುರೇಶ ಗೊಣಸಗಿ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next