ಪ್ರಸ್ತುತ ಟೀಂ ಇಂಡಿಯಾದ ವಿಕೆಟ್ ಕೀಪರ್ ಯಾರು ಎಂದರೆ ಪಕ್ಕನೆ ಒಂದು ಹೆಸರು ನೆನಪು ಬರುವುದಿಲ್ಲ. ಮಹೇಂದ್ರ ಸಿಂಗ್ ಧೋನಿಯಿಂದ ತೆರವಾದ ಸ್ಥಾನದಲ್ಲಿ ಯಾರೂ ಗಟ್ಟಿಯಾಗಿ ನೆಲೆ ನಿಂತಿಲ್ಲ. ರಿಷಭ್ ಪಂತ್, ಸಂಜು ಸ್ಯಾಮ್ಸನ್, ಕೆ ಎಲ್ ರಾಹುಲ್, ವೃದ್ಧಿಮಾನ್ ಸಹಾ.. ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತಿದೆ.
ಸರಿಯಾಗಿ ಎರಡು ದಶಕದ ಹಿಂದೆಯೂ ಟೀಂ ಇಂಡಿಯಾ ಪರಿಸ್ಥಿತಿ ಹೀಗೆಯೇ ಇತ್ತು. ಸರಿಯಾದ ವಿಕೆಟ್ ಕೀಪರ್ ಗಳು ಟೀಂ ಇಂಡಿಯಾದಲ್ಲಿ ಇರಲಿಲ್ಲ. ನಯನ್ ಮೋಗಿಯಾ ನಂತರ ಯಾವ ಕೀಪರ್ ಕೂಡಾ ವಿಕೆಟ್ ಹಿಂದೆ ತನ್ನ ಚಾಪು ಮೂಡಿಸಲಿಲ್ಲ. ವಿಕೆಟ್ ಕೀಪರ್ ಎಂದರೆ ಆತ ಕೇವಲ ಕೀಪರ್ ಮಾತ್ರ, ಬ್ಯಾಟಿಂಗ್ ಗೆ ಕಷ್ಟ ಎನ್ನುವ ಮಾತಿತ್ತು. ಅದಕ್ಕಾಗಿಯೇ ಬ್ಯಾಟ್ಸಮನ್ ಆಗಿದ್ದ ರಾಹುಲ್ ದ್ರಾವಿಡ್ ರಿಗೆ ನಾಯಕ ಗಂಗೂಲಿ ಕೀಪಿಂಗ್ ಗ್ಲೌಸ್ ನೀಡಿದ್ದು!
ನಯನ್ ಮೋಂಗಿಯಾ ನಂತರ ರಾಹುಲ್ ದ್ರಾವಿಡ್ ವರೆಗೆ ಆರು ಮಂದಿ ವಿಕೆಟ್ ಕೀಪರ್ ಗಳನ್ನು ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದರು. ಅವರುಗಳ ಪರಿಚಯ ಇಲ್ಲಿದೆ.
1 ಎಂ ಎಸ್ ಕೆ ಪ್ರಸಾದ್:
ಭಾರತೀಯ ಕ್ರಿಕೆಟ್ ನ ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದ ಎಂಎಸ್ ಕೆ ಪ್ರಸಾದ್ ಹಿಂದೆ ಟೀಂ ಇಂಡಿಯಾದಲ್ಲಿ ವಿಕೆಟ್ ಕೀಪರ್ ಆಗಿದ್ದರು ಎಂದು ಕೆಲವರಿಗೆ ಗೊತ್ತಿಲ್ಲ. ಪ್ರಸಾದ್ 1998ರಲ್ಲಿ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಪದಾರ್ಪಣೆ ಮಾಡಿದರು. ಟೀಂ ಇಂಡಿಯಾ ಪರ ಆಡಿದ್ದು ಕೇವಲ ಆರು ಟೆಸ್ಟ್ ಮತ್ತು 16 ಏಕದಿನ ಪಂದ್ಯಗಳನ್ನು ಮಾತ್ರ. ಸಾಧನೆಯೂ ಅಷ್ಟಕ್ಕಷ್ಟೇ. 2000ರಲ್ಲಿ ಆಸೀಸ್ ವಿರುದ್ಧ ಸಿಡ್ನಿ ಪಂದ್ಯದ ನಂತರ ಪ್ರಸಾದ್ ಟೀಂ ಇಂಡಿಯಾ ಜೆರ್ಸಿ ತೊಡಲಿಲ್ಲ.
2 ಸಬಾ ಕರೀಂ
1989ರ ವೆಸ್ಟ್ ಇಂಡೀಸ್ ಸರಣಿಗೆ ಆಯ್ಕೆಯಾದರೂ ಸಬಾ ಕರೀಂ ಗೆ ಆಡುವ ಅವಕಾಶ ಸಿಕ್ಕಿರಲಿಲ್ಲ. ನಂತರ ಟೀಂ ಇಂಡಿಯಾದ ಕರೆ ಪಡೆದಿದ್ದು 1996/97ರ ದಕ್ಷಿಣ ಆಫ್ರಿಕಾ ಸರಣಿಗೆ. ಅಂದರೆ ಬರೋಬ್ಬರಿ ಏಳು ವರ್ಷಗಳ ನಂತರ. ಆಫ್ರಿಕಾ ವಿರುದ್ಧ ಪದಾರ್ಪಣೆ ಮಾಡಿ ಉತ್ತಮ ಪ್ರದರ್ಶನ ತೋರಿದರೂ ತಂಡದಲ್ಲಿ ನಯನ್ ಮೋಂಗಿಯಾ ಇದ್ದಕಾರಣ ಕರೀಂ ಸ್ಥಾನ ಭದ್ರ ಪಡಿಸಲಾಗಲಿಲ್ಲ. ನಂತರ ಮತ್ತೆ ತಂಡಕ್ಕೆ ಬಂದ ಕರೀಂ 2000 ಇಸವಿಯ ಏಶ್ಯಾಕಪ್ ನಲ್ಲಿ ಕಣ್ಣಿಗೆ ಏಟು ಮಾಡಿಕೊಂಡರು. ಅಲ್ಲಿಗೆ ವೃತ್ತಿ ಜೀವನವೂ ಅಂತ್ಯವಾಯಿತು. 34 ಏಕದಿನ ಮತ್ತು ಒಂದು ಟೆಸ್ಟ್ ಪಂದ್ಯ ಆಡಿರುವ ಸಬಾ ಕರೀಂ ಸದ್ಯ ಕಾಮೆಂಟೇಟರ್ ಆಗಿದ್ದಾರೆ.
3 ವಿಜಯ್ ದಹಿಯಾ
ದಿಲ್ಲಿ ಮೂಲದ ವಿಕೆಟ್ ಕೀಪರ್ ವಿಜಯ್ ದಹಿಯಾ ಐಸಿಸಿ ನಾಕೌಟ್ ಟ್ರೋಫಿಯಲ್ಲಿ ಕೀನ್ಯಾ ವಿರುದ್ದ ಪದಾರ್ಪಣೆ ಮಾಡಿದ್ದರು. ಅದೇ ವರ್ಷ ಜಿಂಬಾಬ್ವೆ ವಿರುದ್ಧ ಟೆಸ್ಟ್ ಪದಾರ್ಪಣೆ ಮಾಡಿದ್ದರು. ಎರಡು ಟೆಸ್ಟ್ ಪಂದ್ಯಗಳಿಂದ ದಹಿಯಾ ಗಳಿಸಿದ್ದು ಕೇವಲ ಎರಡು ರನ್. 19 ಏಕದಿನ ಪಂದ್ಯವಾಡಿದ್ದ ವಿಜಯ್ ದಹಿಯಾ 216 ರನ್ ಗಳಿಸಿದ್ದರು. 2001ರ ಆಸೀಸ್ ವಿರುದ್ಧದ ಸರಣಿಯ ನಂತರ ದಹಿಯಾ ಹೆಸರು ಟೀಂ ಇಂಡಿಯಾದಲ್ಲಿ ಕೇಳಿ ಬರಲಿಲ್ಲ.
4 ಸಮೀರ್ ದಿಘೆ
ಆಸ್ಟ್ರೇಲಿಯಾದಲ್ಲಿನ ತ್ರಿಕೋನ ಸರಣಿಗೆ ಟೀಂ ಇಂಡಿಯಾ ಕರೆ ಬರುವಾಗ 31 ವರ್ಷದ ಸಮೀರ್ ದಿಘೆ ಕ್ರಿಕೆಟ್ ನಿಂದ ದೂರವಾಗಿ ಅಮೇರಿಕಾ ದೇಶಕ್ಕೆ ವ್ಯಾಸಂಗಕ್ಕೆ ತೆರಳಿದ್ದರು. ಮತ್ತೆ ಮರಳಿದ ದಿಘೆ ಆಸೀಸ್ ನೆಲದಲ್ಲಿ ಉತ್ತಮವಾಗಿಯೇ ಆಡಿದ್ದರು. ನಂತರ ಐತಿಹಾಸಿಕ ಚೆನ್ನೈ ಟೆಸ್ಟ್ ನಲ್ಲಿ ಟೆಸ್ಟ್ ಪದಾರ್ಪಣೆ ಮಾಡಿದ ದಿಘೆ ಕೆಳ ಕ್ರಮಾಂಕದಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದರು. ಏಕದಿನದಲ್ಲೂ ಅಜೇಯ 94 ರನ್ ಸಿಡಿಸಿ ಭರವಸೆ ಮೂಡಿಸಿದ್ದ ಸಮೀರ್ ತನ್ನ ಪ್ರದರ್ಶನವನ್ನು ಮುಂದೆ ಉಳಿಸಲಿಲ್ಲ. ಟೀಂ ಇಂಡಿಯಾದಲ್ಲಿ ಸಮೀರ್ ಆಟ ಕೇವಲ ಆರು ಟೆಸ್ಟ್ ಮತ್ತು 23 ಏಕದಿನ ಪಂದ್ಯಗಳಿಗಷ್ಟೇ ಸೀಮಿತವಾಯ್ತು.
5 ದೀಪ್ ದಾಸ್ ಗುಪ್ತಾ
ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಸಬಾ ಕರೀಂ ಗಾಯಗೊಂಡಾಗ ಬಂಗಾಲದ ವಿಕೆಟ್ ಕೀಪರ್ ದೀಪ್ ದಾಸ್ ಗುಪ್ತಾ ಟೀಂ ಇಂಡಿಯಾ ಪದಾರ್ಪಣೆಯಾದರು. ಏಕದಿನ ಕ್ರಿಕೆಟ್ ನಲ್ಲಿ ವಿಫಲರಾದರೂ ಟೆಸ್ಟ್ ನಲ್ಲಿ ಮುಂದುವರಿದರು. ನಯನ್ ಮೋಂಗಿಯಾ ನಂತರ ಟೆಸ್ಟ್ ಶತಕ ಬಾರಿಸಿದ ಮೊದಲ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೂ ದೀಪ್ ದಾಸ್ ಗುಪ್ತಾ ಪಾತ್ರರಾಗಿದ್ದರು. ಆದರೆ ಸತತವಾಗಿ ಉತ್ತಮ ಪ್ರದರ್ಶನ ನೀಡಲು ವಿಫಲರಾದ ಗುಪ್ತಾ ತಂಡದಿಂದ ಹೊರಬಿದ್ದರು. ಎಂಟು ಟೆಸ್ಟ್ ಪಂದ್ಯವಾಡಿದ ದೀಪ್ ದಾಸ್ ಗುಪ್ತಾ ಸದ್ಯ ಕಮೆಂಟೇಟರ್ ಆಗಿ ಮಿಂಚುತ್ತಿದ್ದಾರೆ.
6 ಅಜಯ್ ರಾತ್ರ
2000ನೇ ಇಸವಿಯ ಅಂಡರ್-19 ವಿಶ್ವಕಪ್ ಗೆದ್ದ ತಂಡದ ಸದಸ್ಯನಾಗಿದ್ದ ಅಜಯ್ ರಾತ್ರ ಅದ್ಭುತ ಅಥ್ಲೀಟ್ ಆಗಿದ್ದರು. ಮೈದಾನದಲ್ಲಿ ಮಿಂಚಿನ ವೇಗದಲ್ಲಿ ಓಡುತ್ತಿದ್ದ ಅಜಯ್ ರಾತ್ರ ಟೀಂ ಇಂಡಿಯಾ ಪರ ಕೆಲ ಅದ್ಭುತ ಪ್ರದರ್ಶನ ನೀಡಿದರು. 2002ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಪದಾರ್ಪಣೆ ಮಾಡಿದ ರಾತ್ರ, ಭರ್ಜರಿ ಶತಕ ಬಾರಿಸಿದ್ದರು. ಈ ಮೂಲಕ ಟೆಸ್ಟ್ ಶತಕ ಬಾರಿಸಿದ ಅತೀ ಕಿರಿಯ ಭಾರತೀಯ ಕೀಪರ್ ಎಂಬ ನೆಗಳ್ತಗೆ ಪಾತ್ರರಾದರು. ಸಣ್ಣ ಪ್ರಾಯದಲ್ಲೇ ಭರವಸೆ ಮೂಡಿಸಿದ್ದ ರಾತ್ರ ತನ್ನ ಪ್ರದರ್ಶನದ ಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ವಿಫಲರಾದರು. ಹೀಗಾಗಿ ಆರು ಟೆಸ್ಟ್ 12 ಏಕದಿನಕ್ಕೆ ರಾತ್ರ ಕ್ರಿಕೆಟ್ ಜೀವನ ಅಂತ್ಯವಾಯಿತು.
ವಿಕೆಟ್ ಕೀಪರ್ ನಿಖರ ಪ್ರದರ್ಶನದ ಕೊರತೆಯಿಂದ ಬ್ಯಾಟ್ಸಮನ್ ಆಗಿದ್ದ ರಾಹುಲ್ ದ್ರಾವಿಡ್ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿಭಾಯಿಸಿದರು. ನಂತರ ಪಾರ್ಥೀವ್ ಪಟೇಲ್, ದಿನೇಶ್ ಕಾರ್ತಿಕ್ ಬಂದರೂ ಅವರೂ ಹೇಳಿಕೊಳ್ಳುವ ಪ್ರದರ್ಶನ ನೀಡಲಿಲ್ಲ. 2004ರಲ್ಲಿ ಟೀಂ ಇಂಡಿಯಾಗೆ ಎಂಟ್ರಿಕೊಟ್ಟ ಮಹೇಂದ್ರ ಸಿಂಗ್ ಧೋನಿ ನಂತರ ಕೀಪಿಂಗ್ ಗ್ಲೌಸ್ ಯಾರ ಕೈಸೇರದಂತೆ ಸ್ಥಾನ ಭದ್ರಪಡಿಸಿಕೊಂಡರು. ಈಗ ಧೋನಿ ಯುಗ ಬಹುತೇಕ ಮುಗಿದಿದೆ. ಐತಿಹಾಸ ಮರುಕಳಿಸಿದೆ!
ಕೀರ್ತನ್ ಶೆಟ್ಟಿ ಬೋಳ