ಕಲಬುರಗಿ: ಸರ್ಕಾರ ಬೀಳಲಿ ಅಂತಾ ನಾ ಹಗಲುಗನಸ್ಸು ಕಾಣುತ್ತಿಲ್ಲ. ಅವರವರೆ ಅಸಮಾಧಾನಗೊಂಡು ಸರ್ಕಾರ ಬೀಳಿಸ್ತಾರೆ ಎಂದು ಬಿಎಸ್ ಯಡಿಯೂರಪ್ಪ ಮತ್ತೆ ಭವಿಷ್ಯ ನುಡಿದಿದ್ದಾರೆ.
ಲೋಕಸಭೆ ಫಲಿತಾಂಶದ ಬಳಿಕ ಬಿಎಸ್‌ವೈ ಅವರನ್ನು ಸೈಡ್‌ಲೈನ್ ಮಾಡಲಾಗುತ್ತದೆ ಎಂಬ ಕೈ ನಾಯಕರ ಹೇಳಿಕೆ ವಿಚಾರವಾಗಿ ಸೋಮವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್‌ನವರಿಗೆ ನನ್ ಬಗ್ಗೆ ಯಾಕೆ ಚಿಂತೆ, ಅವರ ಬಗ್ಗೆ ಅವರೆ ಮೊದಲು ಚಿಂತೆ ಮಾಡಲಿ ಎಂದು ತಿರುಗೇಟು ನೀಡಿದರು.
ಲೋಕಸಭಾ ಚುನಾವಣೆ ಮತ್ತು ವಿಧಾನ ಸಭೆ ಉಪಚುನಾವಣೆಯ ನಂತ್ರ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಯಾಗಲಿದೆ. ಈ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಕಾಂಗ್ರೆಸ್ ನ 20 ಕ್ಕೂ ಹೆಚ್ಚು ಶಾಸಕರು ಸಮಾಧಾನಗೊಂಡಿದ್ದಾರೆ. ಮುಂದೇನಾಗುತ್ತದೋ ಕಾದು ನೋಡೋಣ.. ಫಲಿತಾಂಶದ ನಂತ್ರ ಏನು ಬೇಕಾದ್ರೂ ಆಗಬಹುದು ಎಂದರು.
ಆದ್ರೆ ಅಧಿಕಾರದ ಆಸೆಗಾಗಿ ಯಾವುದೇ ಕಾರಣಕ್ಕೂ ವಿಶ್ವಾಸ ದ್ರೋಹಿಗಳೊಂದಿಗೆ ಕೈಜೋಡಿಸಲಾರೆ. ಈ ಹಿಂದೆ ನನಗೆ ದ್ರೋಹ ಮಾಡಿರುವ ಜೆಡಿಎಸ್ ಜೊತೆ ಯಾವುದೇ ಕಾರಣಕ್ಕೂ ಹೊಂದಾಣಿಕೆ ಮಾಡಿಕೊಳ್ಳುವುದು ಸಾಧ್ಯವೇ ಇಲ್ಲ ಎಂದು ಹೇಳಿದರು.
ಜೂನ್ ನಲ್ಲಿ ಯಡಿಯೂರಪ್ಪ ಅಧಿಕಾರ ಅವಧಿ ಪೂರ್ಣಗೊಳ್ಳುವ ವಿಚಾರದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ನಾಯಕರು ಕೈಗೊಳ್ಳುವ ಕ್ರಮಕ್ಕೆ ಬದ್ಧರಾಗಿರುತ್ತೇವೆ. ರಾಜ್ಯಾಧ್ಯಕ್ಷ ಅಲ್ಲದಿದ್ದರೂ, ವಿರೋಧ ಪಕ್ಷದ ನಾಯಕನಾಗಂತೂ ಇದ್ದೇ ಇರ್ತೆನೆ. ನನ್ನ ಅವಧಿ, ಅಧ್ಯಕ್ಷಗಾದಿ ಬಗ್ಗೆ ಹೈಕಮಾಂಡ್ ತೀರ್ಮಾನಕ್ಕೆ ಬದ್ದ ಎಂದರು.