Advertisement

ಅಭಿವೃದ್ಧಿಯಲ್ಲಿ ನಂ.1 ಸಂಸದ ಸೋತದ್ದೇಕೆ?

01:48 PM May 25, 2019 | Suhan S |

ಚಾಮರಾಜನಗರ: ತನ್ನ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡ ರಾಜ್ಯದ ಸಂಸದರಲ್ಲಿ ನಂ. 1 ಎಂಬ ಹೆಗ್ಗಳಿಕೆ ಪಡೆದಿದ್ದ ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದ ಆರ್‌.ಧ್ರುವನಾರಾಯಣ ಅವರು ಸೋತದ್ದೇಕೆ ಎಂಬುದು ಕ್ಷೇತ್ರದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.

Advertisement

ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯನ್ನು ತನ್ನ ಕ್ಷೇತ್ರ ವ್ಯಾಪ್ತಿಯ ಎರಡು ಗ್ರಾಮಗಳಲ್ಲಿ ಜಾರಿಗೊಳಿಸಿದ ಸಾಧನೆ ಧ್ರುವನಾರಾಯಣ ಅವರದಾಗಿತ್ತು. ರಾಜ್ಯದ ಅನೇಕ ಬಿಜೆಪಿ ಸಂಸದರು ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಗೆ ಆಯ್ದುಕೊಂಡ ಒಂದು ಗ್ರಾಮವನ್ನೂ ಪೂರ್ತಿ ಮಾಡಿಲ್ಲ. ಹೀಗಿರುವಾಗ ಎಚ್.ಡಿ. ಕೋಟೆ ತಾಲೂಕಿನ ಬಿ. ಮಟಕೆರೆ ಗ್ರಾಮ ಪಂಚಾಯಿತಿಯನ್ನು ಆಯ್ದುಕೊಂಡು ಅಲ್ಲಿ ವಿವಿಧ ಕಾಮಗಾರಿ, ಯೋಜನೆಗಳನ್ನು ಪೂರ್ತಿ ಮಾಡಿ, ಚಾಮರಾಜನಗರ ತಾಲೂಕಿನ ದೊಡ್ಡಮೋಳೆ ಗ್ರಾಮವನ್ನು ಆಯ್ದುಕೊಂಡು ಅಲ್ಲಿಯೂ 7 ಕೋಟಿ ರೂ.ಗಳ ಕಾಮಗಾರಿ ಪೂರ್ಣಗೊಳಿಸಿದ್ದರು.

ಇದೊಂದು ನಿದರ್ಶನ ಮಾತ್ರ. ಧ್ರುವನಾರಾಯಣ ಅವರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕೆಲಸ ಮಾಡಿದ್ದರೆಂಬುದನ್ನು ಎಲ್ಲರೂ ಹೇಳುತ್ತಾರೆ. ಇಂಥ ಸಂಸದ ಸೋತದ್ದು ಹೇಗೆ ಎಂಬ ಬಗ್ಗೆಯೇ ಕ್ಷೇತ್ರದೆಲ್ಲೆಡೆ ಚರ್ಚೆಗಳಾಗುತ್ತಿವೆ.

ಅತಿಯಾದ ಆತ್ಮವಿಶ್ವಾಸ: ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡಿರುವುದರಿಂದ ಮತದಾರರು ತಮ್ಮನ್ನು ಕೈಬಿಡುವುದಿಲ್ಲ ಎಂಬ ಅತಿಯಾದ ಆತ್ಮವಿಶ್ವಾಸ ಧ್ರುವನಾರಾಯಣ ಅವರ ಸೋಲಿನ ಕಾರಣಗಳಲ್ಲೊಂದಾಗಿದೆ. ಈ ಆತ್ಮವಿಶ್ವಾಸದಿಂದಾಗಿ ಹಲವು ಲೋಪದೋಷಗಳನ್ನು ಲಘುವಾಗಿ ಪರಿಗಣಿಸಲಾಯಿತೆಂದು ಪಕ್ಷದ ಮುಖಂಡರು ಹೇಳುತ್ತಿದ್ದಾರೆ.

ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳಾದ ದಲಿತ ಮತಗಳು ಆ ವರ್ಗದ ಪ್ರಬಲ ನಾಯಕರಾದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸಪ್ರಸಾದ್‌ ಅವರಿಗೆ ಹಂಚಿಕೆ ಯಾದದ್ದು, ಬಿಎಸ್‌ಪಿ ಅಭ್ಯರ್ಥಿ ಶಿವಕುಮಾರ್‌ 87 ಸಾವಿರ ಮತಗಳನ್ನು ಪಡೆದದ್ದು ಕಾಂಗ್ರೆಸ್‌ಗೆ ಮುಳು ವಾಗಿದೆ. ಬಿಎಸ್‌ಪಿ ಕನಿಷ್ಟ 30 ಸಾವಿರದಷ್ಟು ಕಾಂಗ್ರೆಸ್‌ನ ಮತಗಳನ್ನು ಕಸಿದುಕೊಂಡಿದೆ. ಕಳೆದ ಚುನಾ ವಣೆಯಲ್ಲಿ ಅದು 37 ಸಾವಿರ ಮತಗಳನ್ನು ಪಡೆದಿತ್ತು. ಈ ಬಾರಿ 50 ಸಾವಿರ ಮತಗಳು ಹೆಚ್ಚಳವಾಗಿವೆ.

Advertisement

ಅಚ್ಚರಿ ಮೂಡಿಸಿದ ಉಪ್ಪಾರ ಮತಗಳ ಪಲ್ಲಟ!: ಈ ಫ‌ಲಿತಾಂಶದಲ್ಲಿ ಎಲ್ಲರನ್ನೂ ಅಚ್ಚರಿಗೊಳಿಸಿರುವ ಅಂಶವೆಂದರೆ ಕಾಂಗ್ರೆಸ್‌ನ ಇಡುಗಂಟು ಎಂದೇ ನಂಬಲಾಗಿರುವ ಉಪ್ಪಾರ ಸಮುದಾಯದ ಮತಗಳು ಬಿಜೆಪಿಗೆ ನಿರೀಕ್ಷಿಸಿರದ ಪ್ರಮಾಣದಲ್ಲಿ ಹೋಗಿರು ವುದು! ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಅವರ ಸಮುದಾಯದವರು ಕಾಂಗ್ರೆಸ್‌ ಬಿಟ್ಟು ಬೇರೆ ಪಕ್ಷಕ್ಕೆ ಓಟು ಹಾಕುವುದಿಲ್ಲ ಎಂಬುದು ಕ್ಲೀಷೆಯ ಮಾತಾ ಗಿತ್ತು. ಹೀಗಿರುವಾಗ ಈ ಬಾರಿ ಉಪ್ಪಾರರು ವಾಸಿಸುವ ಮೋಳೆಗಳ ಮತಗಟ್ಟೆಗಳಲ್ಲಿ ಬಿಜೆಪಿಗೆ ಹೆಚ್ಚಿನ ಸಂಖ್ಯೆಯ ಮತಗಳು ಹೋಗಿವೆ. ವಿಪರ್ಯಾಸವೆಂದರೆ ಧ್ರುವನಾರಾಯಣ ಅವರು ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಗೆ ಆಯ್ದುಕೊಂಡಿರುವ ದೊಡ್ಡಮೋಳೆಯಲ್ಲಿ (ಇಲ್ಲಿರು ವವರು ಸಂಪೂರ್ಣ ಉಪ್ಪಾರ ಸಮಾಜದ ವರು)ಕಾಂಗ್ರೆಸ್‌ಗಿಂತ ಬಿಜೆಪಿಗೆ ಹೆಚ್ಚಿನ ಮತಗಳು ಹೋಗಿವೆ!

ಮತ್ತೆ ಮುಳ್ಳು ಉಸ್ತುವಾರಿ ಸಚಿವರತ್ತಲೇ ತಿರುಗುತ್ತಿದೆ: ಅವರ ಸ್ವಕ್ಷೇತ್ರ ಚಾಮರಾಜನಗರದಲ್ಲಿ 9681 ಮತಗಳ ಮುನ್ನಡೆ ಬಿಜೆಪಿಗೆ ದೊರೆತಿದೆ. ತಮ್ಮ ಕ್ಷೇತ್ರದಲ್ಲೇ ಸಚಿವರು ಕಾಂಗ್ರೆಸ್‌ಗೆ ಲೀಡ್‌ ಕೊಡಿಸ ಲಾಗಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಉಸ್ತು ವಾರಿ ಸಚಿವರು ಮತ ಪ್ರಚಾರಕ್ಕೆ ಹೋದ ಸಂದರ್ಭ ದಲ್ಲಿ ಮೋಳೆಗಳಲ್ಲಿ ಮೋದಿ ಪರ ಘೋಷಣೆ ಕೂಗಿ ದ್ದನ್ನು ಸಚಿವರ ಪ್ರಬಲ ಬೆಂಬಲಿಗರೇ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಚಾರ ಮಾಡಿದ ಘಟನೆಗಳೂ ನಡೆದವು.

ಮತದಾನ ಕಡಿಮೆ: ಮುಸ್ಲಿಂ ಸಮುದಾಯದವರ ಮತಗಟ್ಟೆಗಳಲ್ಲಿ ಇಷ್ಟು ಬಾರಿಯೂ ಮತದಾನ ಪ್ರಮಾಣ ಅತಿ ಹೆಚ್ಚಿರುತ್ತಿತ್ತು. ಆದರೆ ಈ ಬಾರಿ ಶೇಕಡಾವಾರು ಮತದಾನ ಪ್ರಮಾಣ ಕಡಿಮೆಯಾಗಿದೆ. ಆ ಮತಗಳು ಕಾಂಗ್ರೆಸ್‌ಗೆ ಬರುವಂಥವು. ಮುಸ್ಲಿಮರ ಮೊಹಲ್ಲಾಗಳಲ್ಲಿ ಶೇಕಡಾವಾರು ಮತದಾನ ಹೆಚ್ಚಿದ್ದರೆ ಕಾಂಗ್ರೆಸ್‌ ಗೆಲುವಿಗೆ ಸಹಾಯಕವಾಗುತ್ತಿತ್ತು ಎಂದು ಪಕ್ಷದ ಮುಖಂಡರು ಹೇಳುತ್ತಿದ್ದಾರೆ.

ಗುಟ್ಟಾಗೇನೂ ಉಳಿದಿಲ್ಲ: ಮೈತ್ರಿ ಧರ್ಮ ಪಾಲನೆ ಮಾಡಬೇಕಾಗಿದ್ದ ಜೆಡಿಎಸ್‌ ಮುಖಂಡರು ಕೈಕೊಟ್ಟರು ಎಂಬುದು ಇನ್ನೊಂದು ಆರೋಪ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹನೂರು ಕ್ಷೇತ್ರದಲ್ಲಿ 40 ಸಾವಿರ ಮತಗಳನ್ನು ಪಡೆದಿದ್ದ ಮುಖಂಡರೊಬ್ಬರು ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ ಪರ ಪ್ರಚಾರ ಮಾಡದೇ ಬಿಜೆಪಿಗೆ ನೆರವು ನೀಡಿದರು ಎಂದು ಕಾಂಗ್ರೆಸ್‌ ವಲಯದಲ್ಲಿ ವ್ಯಾಪಕವಾಗಿ ಕೇಳಿಬ ರುತ್ತಿದೆ. ಅದೇ ರೀತಿ ಮೈಸೂರಿನ ಸಚಿವರೊಬ್ಬರು ತಮ್ಮ ಸಮುದಾಯದ ಮತಗಳನ್ನು ಬಿಜೆಪಿಗೆ ಹಾಕಿ ಸಿದ್ದಲ್ಲದೇ, ಚುನಾವಣೆಗೆ ಸಹಾಯವನ್ನೂ ಮಾಡಿದರು ಎಂಬುದು ಈಗ ಗುಟ್ಟಾಗೇನೂ ಉಳಿದಿಲ್ಲ.

ಚಾ.ನಗರ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿದ ಪ್ರಸಾದ್‌:

ಚಾ.ಜನಗರ ಲೋಕ ಸಭಾ ಕ್ಷೇತ್ರ ಕಾಂಗ್ರೆಸ್‌ನ ಭದ್ರ ಕೋಟೆ ಯಾಗಿದ್ದು, ಕಳೆದ ಎರಡು ಅವಧಿಯಿಂದ ಕಾಂಗ್ರೆಸ್‌ ಅಧಿಕಾರ ದಲ್ಲಿತ್ತು. ಈ ಬಾರಿ ಅದನ್ನು ತನ್ನ ವಶಕ್ಕೆ ಪಡೆಯುವುದಷ್ಟೇ ಅಲ್ಲದೇ, ಕ್ಷೇತ್ರದಲ್ಲಿ ಪ್ರಥಮ ಗೆಲುವನ್ನು ಬಿಜೆಪಿ ದಾಖಲಿಸಿದೆ.

ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಸಂಸದ ಆರ್‌. ಧ್ರುವನಾರಾಯಣ ಅಭಿವೃದ್ಧಿ ಕೆಲಸಗಳಲ್ಲಿ ದೇಶದ ಮೂರನೇ ಮತ್ತು ರಾಜ್ಯದ ಮೊದಲನೇ ಸಂಸದ ಎಂಬ ಹೆಗ್ಗಳಿಕೆ ಪಡೆದಿದ್ದರು. ಅಂಥವರು ಕ್ಷೇತ್ರದಲ್ಲಿ ಸೋಲನುಭವಿಸಲು ಪ್ರಮುಖ ಕಾರಣವಾದದ್ದು, ದೇಶಾದ್ಯಂತ ಎದ್ದ ಮೋದಿ ಅಲೆ. ಬಿಜೆಪಿ ಅಭ್ಯರ್ಥಿ ವಿ. ಶ್ರೀನಿವಾಸಪ್ರಸಾದ್‌ ವೈಯಕ್ತಿಕ ವರ್ಚಸ್ಸು.

ಶ್ರೀನಿವಾಸಪ್ರಸಾದ್‌ 1817 ಮತಗಳ ಅಂತರದ ಪ್ರಯಾಸದ ಗೆಲುವು ಸಾಧಿಸಿದ್ದಾರೆ. ಕ್ಷೇತ್ರದಲ್ಲಿ ಧ್ರುವರನ್ನು ಸೋಲಿಸುವುದು ಸುಲಭದ ಮಾತಾ ಗಿರಲಿಲ್ಲ. 18 ಸುತ್ತುಗಳಲ್ಲೂ ಮುಂದಿದ್ದ ಧ್ರುವ ಅವರನ್ನು ಕೊನೆಯ ನಾಲ್ಕು ಸುತ್ತುಗಳಲ್ಲಿ ಹಿಂದಿಕ್ಕಿ ಜಯವನ್ನು ಬಿಜೆಪಿ ತನ್ನದಾಗಿಸಿಕೊಂಡಿತು.

ಪ್ರಸಾದ್‌ ಗೆಲುವಿನ ತಂತ್ರ: ಕ್ಷೇತ್ರದಲ್ಲಿ ಐದು ಬಾರಿ ಗೆದ್ದು ಸಂಸದರಾಗಿದ್ದ ಶ್ರೀನಿವಾಸಪ್ರಸಾದ್‌ಗೆ ಕ್ಷೇತ್ರದ ಆಳ ಅಗಲ ಕರಗತವಾಗಿದೆ. ಧ್ರುÊ ಕ್ಷೇತ್ರದ ಮೂಲೆ ಮೂಲೆಗಳಿಗೂ ಹೋಗಿ ಮತಯಾ ಚಿಸಿದರೆ, ಶ್ರೀನಿವಾಸಪ್ರಸಾದ್‌ ಅವರು ಬಹಿರಂಗ ಪ್ರಚಾರಕ್ಕೆ ಹೆಚ್ಚು ಬಾರದೇ, ತಮ್ಮ ಅನುಭವದ ಬಲದಿಂದ ಗೆಲುವಿನ ತಂತ್ರಗಳನ್ನು ಪ್ರಯೋಗಿಸಿ ಯಶಸ್ವಿಯಾದರು.

ದಲಿತ ಮತಗಳ ಹಂಚಿಕೆ:ಕ್ಷೇತ್ರದಲ್ಲಿ ಮೊದಲ ಸ್ಥಾನದಲ್ಲಿರುವ ದಲಿತ ಮತಗಳು ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳಾಗಿದ್ದವು. ರಾಜ್ಯದ ಅಗ್ರಪಂಕ್ತಿಯ ದಲಿತ ನಾಯಕರಾಗಿರುವ ಶ್ರೀನಿವಾಸ ಪ್ರಸಾದ್‌ ಬಿಜೆಪಿಯವರಾದರೂ ಸಹ ತಮ್ಮ ಶಕ್ತಿಯಿಂದ ದಲಿತ ಮತಗಳನ್ನು ಗಣನೀಯ ಪ್ರಮಾಣದಲ್ಲಿ ಪಡೆಯುವಲ್ಲಿ ಯಶಸ್ವಿಯಾದರು. ಇದು ಹೆಚ್ಚಿನ ಪ್ಲಸ್‌ ಪಾಯಿಂಟ್.

ಬಿಎಸ್‌ಪಿ ಹೆಚ್ಚಿನ ಮತಗಳನ್ನು ಕಸಿದಿದ್ದು: ಬಿಎಸ್‌ ಪಿ ಅಭ್ಯರ್ಥಿ ನಿರೀಕ್ಷೆಗಿಂತ ಹೆಚ್ಚು ಮತ ಪಡೆದದ್ದು ಸಹ ಕಾಂಗ್ರೆಸ್‌ಗೆ ಮುಳು ವಾಯಿತು. ಬಿಎಸ್‌ಪಿಯ ಶಿವಕು ಮಾರ್‌ 87,631 ಮತಗಳನ್ನು ಪಡೆ ದರು. ಕಳೆದ ಬಾರಿ ಬಿಎಸ್‌ಪಿ 34 ಸಾವಿರ ಮತ ಪಡೆದಿತ್ತು. ಬಿಎಸ್‌ಪಿ ಕಸಿದುಕೊಂಡಿರುವ ಮತ ಗಳಲ್ಲಿ ಹೆಚ್ಚಿನವು ಕಾಂಗ್ರೆಸ್‌ ಬರಬೇಕಾಗಿದ್ದ ಮತಗಳು.

ಉಪ್ಪಾರ ಮತಗಳ ಪಲ್ಲಟ: ಕ್ಷೇತ್ರದಲ್ಲಿ ಪುಟ್ಟರಂಗಶೆಟ್ಟಿ ಶಾಸಕರಾದ ನಂತರ ಉಪ್ಪಾರ ಸಮುದಾಯದ ಮತಗಳು ಕಾಂಗ್ರೆಸ್‌ ಬಿಟ್ಟು ಬೇರೆ ಪಕ್ಷಕ್ಕೆ ಹೋಗುತ್ತಿರಲಿಲ್ಲ. ಈ ಬಾರಿ ಉಪ್ಪಾರ ಮತಗಳು ಗಮನಾರ್ಹ ಪ್ರಮಾಣದಲ್ಲಿ ಬಿಜೆಪಿಗೆ ಹೋಗಿವೆ. ಉಪ್ಪಾರ ಸಮುದಾಯದ ಮತಗಟ್ಟೆ ಗಳಲ್ಲಿ ಬಿಜೆಪಿಗೆ ಹೆಚ್ಚಿನ ಮತಗಳು ಹೋಗಿ ಕಾಂಗ್ರೆಸ್‌ಗೆ ಕಡಿಮೆ ಮತಗಳು ಬಂದಿರುವ ನಿದರ್ಶನಗಳೂ ಇವೆ. ಅದೇ ಸಮುದಾಯದ ಉಸ್ತುವಾರಿ ಸಚಿವರಿದ್ದರೂ ಉಪ್ಪಾರರ ಮತಗಳನ್ನು ಇಡುಗಂಟಾಗಿ ಉಳಿಸಿಕೊಳ್ಳುವಲ್ಲಿ ಅವರು ಸಫ‌ಲರಾಗಲಿಲ್ಲ. ಮೋದಿಯವರ ಪ್ರಭಾವದಿ ಂದಾಗಿ ಉಪ್ಪಾರರು ಹಾಕಿದ ಮತಗಳು ಶ್ರೀನಿವಾಸ ಪ್ರಸಾದ್‌ಗೆ ವರವಾಗಿವೆ.

ಜೆಡಿಎಸ್‌ ಒಳೇಟು: ಕ್ಷೇತ್ರದಲ್ಲಿ ಜೆಡಿಎಸ್‌ ಓಟುಗಳು ಕಾಂಗ್ರೆಸ್‌ಗೆ ಬಾರದೇ ಬಿಜೆಪಿಗೆ ಬಂದದ್ದು ಅದರ ಗೆಲುವಿಗೆ ಕಾರಣವಾಯಿತು. ಹನೂರು ಕ್ಷೇತ್ರದಲ್ಲಿ ಜೆಡಿಎಸ್‌ ಮುಖಂಡ ಮಂಜುನಾಥ್‌ ಬಿಜೆಪಿ ಪರ ಕೆಲಸ ಮಾಡಿದ್ದು ಗುಟ್ಟಾಗೇನೂ ಉಳಿಯಲಿಲ್ಲ. ವರುಣಾ ಸೇರಿದಂತೆ ಒಕ್ಕಲಿಗ ಮತಗಳಿರುವೆಡೆ ಆ ಪಕ್ಷದ ಪ್ರಬಲ ಒಕ್ಕಲಿಗ ಸಚಿವರೊಬ್ಬರು ಬಿಜೆಪಿಗೆ ಮತ ಕೊಡಿಸಿ ದ್ದು ಪ್ರಸಾದ್‌ ಗೆಲುವಿಗೆ ಪೂರಕವಾಯಿತು.

ಕ್ಷೇತ್ರದಲ್ಲಿ 2‌ನೇ ಅತಿ ಹೆಚ್ಚು ಸಂಖ್ಯೆಯಲ್ಲಿರುವ ಲಿಂಗಾಯತ ಸಮುದಾಯ ಒಗ್ಗಟ್ಟಿನಿಂದ ಬಿ.ಎಸ್‌. ಯಡಿಯೂರಪ್ಪ ಅವರ ಮುಖ ನೋಡಿ ಬಿಜೆಪಿಯನ್ನು ಬೆಂಬಲಿಸಿತು. ಲಿಂಗಾಯತರ ಸಾಲಿಡ್‌ ಮತಗಳು, ದಲಿತರ ಮತಗಳು ಪ್ರಸಾದ್‌ರ ಹೆಸರಿನಿಂದ ದೊರೆತದ್ದು, ಬಿಎಸ್‌ಪಿ ಮತಗಳನ್ನು ಕಿತ್ತದ್ದು, ಜೆಡಿಎಸ್‌ ಅಸಹಕಾರ, ಅಲ್ಲದೇ ತಿ. ನರಸೀಪುರ ಕ್ಷೇತ್ರದಲ್ಲಿ ಮಾಜಿ ಸಚಿವರೊಬ್ಬರು ಕಾಂಗ್ರೆಸ್‌ ವಿರುದ್ಧ ಕೆಲಸ ಮಾಡಿದ್ದು ಇವೆಲ್ಲ ಬಿಜೆಪಿ ಗೆಲುವಿಗೆ ಸಹಕಾರಿಯಾದವು.

● ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next