Advertisement

ಬೆಂಗಳೂರಲ್ಲಿ ವೃಂದಾವನ ಏಕೆ?

10:18 PM Dec 29, 2019 | Lakshmi GovindaRaj |

ಬೆಂಗಳೂರು: ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳ ವೃಂದಾವನ ಉಡುಪಿಯಿಂದ ಸುಮಾರು 350 ಕಿ.ಮೀ ದೂರದ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವುದೇಕೆ ಎಂಬ ಕೌತುಕ ಎಲ್ಲರಲ್ಲೂ ಮನೆ ಮಾಡಿದೆ. ತಮ್ಮ ವೃಂದಾವನ ಇಲ್ಲೇ ಆಗಬೇಕು ಎಂದು ನಾಲ್ಕು ವರ್ಷ ಹಿಂದೆಯೇ ಶ್ರೀಗಳು ಬರೆದಿಟ್ಟಿದ್ದರು.

Advertisement

“ನಾನು ಮಕ್ಕಳೊಂದಿಗೇ ಇರಬೇಕು. ನಾನಿಲ್ಲ ಎಂಬ ಕೊರಗು ಮಕ್ಕಳನ್ನು ಎಂದಿಗೂ ಕಾಡಬಾರದು’ ಎಂಬ ಉದ್ದೇಶದಿಂದ ಶ್ರೀಗಳು ಕೃಷ್ಣೆ„ಕ್ಯರಾಗುವ ಮುನ್ನವೇ ಪೂರ್ಣಪ್ರಜ್ಞಾ ವಿದ್ಯಾಪೀಠದ ಆವರಣದಲ್ಲಿರುವ ಶ್ರೀಕೃಷ್ಣ ದೇವಸ್ಥಾನದಲ್ಲಿ ಅವರು ವಾಸವಿದ್ದ ಕೊಠಡಿ ಹಾಗೂ ಧ್ಯಾನ ಮಂದಿರದ ಮಧ್ಯದಲ್ಲಿರುವ ಜಾಗದಲ್ಲಿ ವೃಂದಾವನ ನಿರ್ಮಿಸಬೇಕು ಎಂದು ಮಠದ ಪುಸ್ತಕದಲ್ಲಿ ದಾಖಲಿಸಿದ್ದರು.

ವಿದ್ಯಾರ್ಥಿಗಳೊಂದಿಗೆ ಸಮಯ ಕಳೆಯುವುದೆಂದರೆ ಶ್ರೀಗಳು ಚ್ಚುಮೆಚ್ಚು. ಪ್ರವಾಸಕ್ಕೆ ಹೋಗುವಾಗಲೂ ಅಂತಿಮ ವರ್ಷದ ವಿದ್ಯಾರ್ಥಿಗಳು ಅವರ ಜತೆ ಹೋಗುತ್ತಿದ್ದರು. ಈ ವೇಳೆ ನಿತ್ಯದ ಪ್ರವಚನ, ಬೋಧನೆ ಮಾಡುತ್ತಿದ್ದರು.

“ನಾನು ಮಕ್ಕಳೊಂದಿಗೆ ಇಲ್ಲ ಎಂಬ ಕೊರಗು ಅವರನ್ನು ಕಾಡಬಾರದು ಎಂಬ ಉದ್ದೇಶದಿಂದಲೇ ನನ್ನ ವೃಂದಾವನವನ್ನು ನನ್ನ ಕನಸಿನ ಪೂರ್ಣಪ್ರಜ್ಞಾ ವಿದ್ಯಾಪೀಠದಲ್ಲಿ ನಿರ್ಮಿಸಬೇಕು’ ಎಂದು ಶ್ರೀಗಳು ತಮ್ಮ 85ನೇ ಜನ್ಮದಿನಾಚರಣೆ ಸಂದರ್ಭದಲ್ಲೇ ವಿದ್ಯಾರ್ಥಿಗಳಿಗೆ ಸೂಚಿಸಿದ್ದರು. ಸ್ವತಃ ಶ್ರೀಗಳೇ ಗುರುತಿಸಿದ್ದ ವಿದ್ಯಾಪೀಠದ ಕೃಷ್ಣ ಮಂದಿರದ ಸಮೀಪ ಶ್ರೀಗಂಧದ ಮರ ಇರುವ ಜಾಗದಲ್ಲೇ ಈಗ ವೃಂದಾವನ ನಿರ್ಮಾಣ ಮಾಡಲಾಗುತ್ತಿದೆ.

ಗುರುಕುಲದಲ್ಲಿ 280 ಮಕ್ಕಳಿಗೆ ವಿದ್ಯಾಭ್ಯಾಸ: ಪೂರ್ಣಪ್ರಜ್ಞಾ ವಿದ್ಯಾಪೀಠದ ಗುರುಕುಲದಲ್ಲಿ ಪ್ರಸಕ್ತ ವರ್ಷ 280 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 60 ಅಧ್ಯಾಪಕರಿದ್ದಾರೆ. ಈವರೆಗೆ ಸುಮಾರು 3 ಸಾವಿರಕ್ಕೂ ಹೆಚ್ಚು ಜನ ಗುರುಕುಲದಲ್ಲಿ ಶಿಕ್ಷಣ ಪಡೆದಿದ್ದಾರೆ.

Advertisement

ಶ್ರೀಗಳ ಚೇತರಿಕೆಗೆ ಪ್ರತಿದಿನ ಪಾರಾಯಣ: ಪೇಜಾವರ ಶ್ರೀಗಳು ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ದಿನದಿಂದ ಭಾನವಾರದವರೆಗೂ ಅವರು ಗುಣಮುಖರಾಗಲಿ ಎಂದು ಪೂರ್ಣಪ್ರಜ್ಞಾ ವಿದ್ಯಾಪೀಠದಲ್ಲಿ ಪಾರಾಯಣ ನಡೆಸಲಾಗಿತ್ತು. ಬೆಳಗ್ಗೆ 7ರಿಂದ 8.30, ಮಧ್ಯಾಹ್ನ 1ರಿಂದ 2, ಸಂಜೆ 6ರಿಂದ 8ರವರೆಗೆ ವೇದ ಪಂಡಿತರು ಪಾರಾಯಣ ನಡೆಸಿದರು. ಗುರುಕುಲದ ವಿದ್ಯಾರ್ಥಿಗಳು ಕೂಡ ಭಾಗವಹಿಸಿದ್ದರು.

ಶ್ರೀಗಂಧದ ಮರ ತುಳಸಿವನಕ್ಕೆ ಸ್ಥಳಾಂತರ: ಪೇಜಾವರ ಶ್ರೀಗಳ ಬೃಂದಾವನ ನಿರ್ಮಿಸುವ ಜಾಗದಲ್ಲಿದ್ದ ಶ್ರೀಗಂಧದ ಮರವನ್ನು ಬೃಂದಾವನ ನಿರ್ಮಾಣಕ್ಕಾಗಿ ಸಭಾಗೃಹದ ಹಿಂಭಾಗದಲ್ಲಿರುವ ತುಳಸಿ ವನಕ್ಕೆ ಸ್ಥಳಾಂತರ ಮಾಡಲಾಯಿತು.

ಮೈಸೂರೆಂದರೆ ಅಚ್ಚುಮೆಚ್ಚು: ಕೃಷ್ಣೆ„ಕ್ಯರಾದ ಉಡುಪಿಯ ಅಷ್ಟಮಠಗಳ ಹಿರಿಯ ಯತಿ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ಉಡುಪಿಯ ನಂತರ ಅರಮನೆಗಳ ನಗರಿ ಮೈಸೂರು ಎಂದರೆ ಹೆಚ್ಚು ಅಚ್ಚು ಮೆಚ್ಚು. ಕ್ರಾಂತಿಕಾರಿ ಸ್ವಾಮೀಜಿಗಳೆಂದೇ ಹೆಸರಾಗಿದ್ದ ವಿಶ್ವೇಶತೀರ್ಥರು ಧಾರ್ಮಿಕ ಕಾರ್ಯಗಳಿಗಷ್ಟೇ ಸೀಮಿತರಾಗಿರಲಿಲ್ಲ. ಧಾರ್ಮಿಕ ಕಾರ್ಯಗಳ ಜತೆ ಜತೆಗೆ ಸಮಾಜದ ಚಿಕಿತ್ಸಕರಾಗಿ ಅಸ್ಪೃಶ್ಯತೆ ನಿವಾರಣೆಗಾಗಿ ದಲಿತ ಕೇರಿಗಳಿಗೆ ಭೇಟಿ ನೀಡಿ ಸಮಾಜದಲ್ಲಿ ಸಾಮರಸ್ಯ ಉಂಟುಮಾಡಲು ಸದಾ ಶ್ರಮಿಸುತ್ತಿದ್ದರು.

ಗೌರವ ಪುರಸ್ಕಾರ ದರ್ಶನ: ಪೇಜಾವರ ಶ್ರೀಗಳು ಡಿ.16 ಮತ್ತು 17ರಂದು ತಮ್ಮ 600 ಮಂದಿ ಶಿಷ್ಯರೊಂದಿಗೆ ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು. ಪೇಜಾವರ ಶ್ರೀಗಳಿಗೆ ಹೊರ ರಾಜ್ಯದಲ್ಲಿ ನಡೆದ ಅಂತಿಮ ವಿಶೇಷ ಪುರಸ್ಕಾರ ಇದಾಗಿದೆ. ಶ್ರೀಗಳು ತಮ್ಮ ಶಿಷ್ಯರೊಂದಿಗೆ ತಿರುಪತಿ ತಿಮ್ಮಪ್ಪ ಸ್ವಾಮಿಯ ದರ್ಶನ ವ್ಯವಸ್ಥೆಗಾಗಿ ತಿರುಮಲ ತಿರುಪತಿ ದೇವಸ್ಥಾನಂ ಸಮಿತಿಯು ಎಲ್ಲ ರೀತಿಯ ವ್ಯವಸ್ಥೆ ಮಾಡಿತ್ತು. ದರ್ಶನದ ನಂತರ ಗೌರವ ಪುರಸ್ಕಾರವನ್ನು ನೀಡಲಾಗಿತ್ತು.

ವಿದ್ಯಾಪೀಠಕ್ಕೆ ಅಂತಿಮ ಭೇಟಿ: ಶ್ರೀಗಳು ತಿರುಪತಿ ತಿಮ್ಮಪ್ಪ ದರ್ಶನದ ನಂತರ ನೇರವಾಗಿ ಅಲ್ಲಿಂದ ಬೆಂಗಳೂರಿನ ಪೂರ್ಣಪ್ರಜ್ಞಾ ವಿದ್ಯಾಪೀಠಕ್ಕೆ ಬಂದಿದ್ದರು. ಅಂದು ರಾತ್ರಿ ಇಲ್ಲಿಯೇ ತಂಗಿದ್ದು, ವಿದ್ಯಾರ್ಥಿಗಳು ಹಾಗೂ ತಮ್ಮ ಹಿರಿಯ ಕಿರಿಯ ಶಿಷ್ಯ ವರ್ಗದೊಂದಿಗೆ ಕೆಲಕಾಲ ಅಪೌಚಾರಿಕ ಮಾತುಕತೆ ಕೂಡ ನಡೆಸಿದ್ದರು. ವಿದ್ಯಾಪೀಠಕ್ಕೆ ಡಿ.17ಕ್ಕೆ ಬಂದಿರುವುದೇ ಅವರ ಕೊನೆಯ ಭೇಟಿಯಾಗಿದೆ ಎಂದು ಹಿರಿಯ ಶಿಷ್ಯರೊಬ್ಬರು ಮಾಹಿತಿ ನೀಡಿದರು.

ಪೇಜಾವರ ಶ್ರೀಗಳು ನಮ್ರತೆ, ದಯೆ ಮತ್ತು ಜ್ಞಾನದ ಸಾರಾಂಶವಾಗಿದ್ದರು. ಜನರು ಮತ್ತು ಸಮಾಜದ ಕಲ್ಯಾಣಕ್ಕಾಗಿ ಅವರ ನಿಸ್ವಾರ್ಥ ಕೊಡುಗೆಗಳು ಅಪಾರವಾದುದು.
-ಅಮಿತ್‌ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ

ಪೇಜಾವರ ಶ್ರೀಗಳು ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆ. ಸಮಾಜ ಕಲ್ಯಾಣಕ್ಕಾಗಿ ಅವರ ಶ್ರಮ ಅಪಾರವಾದುದು. ಈ ಮೂಲಕ ಶ್ರೀಗಳು ನಮಗೆಲ್ಲ ಸ್ಫೂರ್ತಿದಾಯಕರಾಗಿದ್ದಾರೆ.
-ಪ್ರಕಾಶ್‌ ಜಾಬ್ಡೇಕರ್‌, ಕೇಂದ್ರ ಸಚಿವ

ಭಾರತ ಇಂದು ಅತೀ ದೊಡ್ಡ ಸಂತನನ್ನು ಕಳೆದುಕೊಂಡಿದೆ. ಹಲವಾರು ಸಮುದಾಯಗಳಿಗೆ ಪೇಜಾವರ ಶ್ರೀಗಳು ಮಾರ್ಗದರ್ಶಕರಾಗಿದ್ದರು.
-ರಾಜನಾಥ್‌ ಸಿಂಗ್‌, ಕೇಂದ್ರ ರಕ್ಷಣಾ ಸಚಿವರು

ಪೇಜಾವರ ಶ್ರೀಗಳ ಜೀವನ, ಬೋಧನೆಗಳು, ವಿಚಾರಗಳು ಸಮಾಜಕ್ಕೆ ಸ್ಫೂರ್ತಿದಾಯಕವಾಗಿವೆ.
-ಯೋಗಿ ಆದಿತ್ಯನಾಥ್‌, ಉತ್ತರ ಪ್ರದೇಶ ಸಿಎಂ

ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ನಿಧನದ ಸುದ್ದಿ ಕೇಳಿ ಅಘಾತವಾಯಿತು. ಅವರ ನಿಧನಕೆೆR ಸಂತಾಪ ಸೂಚಿಸುತ್ತೇನೆ. ಈ ದುಃಖವನ್ನು ಭರಿಸುವ ಶಕ್ತಿ ಪ್ರಪಂಚದಾದ್ಯಂತ ಇರುವ ಅವರ ಭಕ್ತಾದಿಗಳಿಗೆ ನೀಡಲಿ. ಸ್ವಾಮೀಜಿ ನಿಧನ ದುಃಖ ತಂದಿದೆ.
-ರಾಹುಲ್‌ ಗಾಂಧಿ, ಕಾಂಗ್ರೆಸ್‌ ಮಾಜಿ ಅಧ್ಯಕ್ಷ

ಶ್ರೀ ವಿಶ್ವೇಶತೀರ್ಥ ಶ್ರೀಗಳು ಕೃಷ್ಣೆ„ಕ್ಯರಾದರು ಎಂಬ ವಿಷಯ ತೀವ್ರ ಆಘಾತವನ್ನುಂಟುಮಾಡಿದೆ. ಸಮಾಜದ ಅಸಮಾನತೆಗಳ ವಿರುದ್ಧ ಧ್ವನಿಯಾಗಿದ್ದ ಶ್ರೀಗಳ ಚಿಂತನೆಗಳು ನಮ್ಮೆಲ್ಲರಿಗೂ ಮಾದರಿ. ಶ್ರೀಗಳ ಭಕ್ತವೃಂದಕ್ಕೆ ಈ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
-ಎಚ್‌.ಡಿ.ದೇವೇಗೌಡ, ಮಾಜಿ ಪ್ರಧಾನಿ

ನಾನು ಅನೇಕ ಸಲ ಶ್ರೀಗಳನ್ನು ಭೇಟಿ ಮಾಡಿದ್ದೇನೆ, ನನ್ನ ಜೊತೆ ಆತ್ಮೀಯವಾಗಿ ಮಾತಾಡುತ್ತಿದ್ದರು. ಧಾರ್ಮಿಕ, ರಾಜಕೀಯ ವಿಚಾರ ಚರ್ಚೆ ಮಾಡುತಿದ್ದರು. ರಂಜಾನ್‌ ವೇಳೆ ಇಫ್ತಾರ್‌ ಕೂಟ ಏರ್ಪಡಿಸಿದ್ದರು. ನಮ್ಮ ಮತ್ತು ಅವರ ನಡುವೆ ರಾಜಕೀಯ, ವೈಚಾರಿಕ ಭಿನ್ನಾಭಿಪ್ರಾಯವಿತ್ತು. ಆದರೆ ಧಾರ್ಮಿಕ ಭಿನ್ನಾಭಿಪ್ರಾಯ ಇರಲಿಲ್ಲ.
-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

ಪರಿಶಿಷ್ಟರ ಕೇರಿಯಲ್ಲಿ ಪಾದಯಾತ್ರೆ, ಮಠದ ಆವರಣದಲ್ಲಿ ರಂಜಾನ್‌ ಆಚರಣೆ, ಮಡೆಸ್ನಾನ ನಿಷೇಧ ಮತ್ತಿತರ ಆದರ್ಶ ನಡೆಗಳ ಮೂಲಕ ಸಮಾಜಕ್ಕಷ್ಟೇ ಅಲ್ಲದೇ ಧಾರ್ಮಿಕ ಕ್ಷೇತ್ರಕ್ಕೂ ಮಾದರಿಯಾದವರು. ಅಂಥ ಶ್ರೀಗಳ ಅಗಲಿಕೆಯಿಂದ ಬರಿ ಕನ್ನಡನಾಡಷ್ಟೇ ಅಲ್ಲ ಇಡೀ ದೇಶವೇ ಅದರಲ್ಲೂ ಧಾರ್ಮಿಕ ಜಗತ್ತು ಬಡವಾಗಿದೆ.
-ಡಿ.ಕೆ.ಶಿವಕುಮಾರ್‌, ಮಾಜಿ ಸಚಿವ

ಸನಾತನ ಹಿಂದೂ ಧರ್ಮದ ಪ್ರಬಲ ಪ್ರತಿಪಾದಕರಾಗಿ ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿಯಲ್ಲಿಯೇ ಭವ್ಯವಾದ ಶ್ರೀ ರಾಮ ಮಂದಿರ ನಿರ್ಮಾಣವಾಗಬೇಕೆಂದು ಶ್ರೀಗಳು ಗಟ್ಟಿ ಧ್ವನಿಯಲ್ಲಿ ಆಗ್ರಹಿಸಿದ್ದರು. ತಮ್ಮ ಮೂರನೆಯ ಪರ್ಯಾಯದ ಅವಧಿಯಲ್ಲಿ, ರಂಜಾನ್‌ ಆಚರಣೆಯನ್ನು ಉಡುಪಿಯ ರಾಜಾಂಗಣದಲ್ಲಿ ನಡೆಸಿ ಸರ್ವಧರ್ಮ ಸಮಭಾವಕ್ಕೆ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದರು.
-ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಸಭಾಧ್ಯಕ್ಷರು

ಪೂಜ್ಯ ಸ್ವಾಮೀಜಿ ಧಾರ್ಮಿಕ ಮತ್ತು ರಾಜಕಾರಣವನ್ನು ಅತ್ಯಂತ ಹತ್ತಿರಕ್ಕೆ ತಂದ ಶ್ರೇಷ್ಠ ಸಂತ. ಅವರನ್ನು ಕಳೆದುಕೊಂಡ ನಾಡು ಬಡವಾಗಿದೆ. ಆ ಹಿರಿಯ ಸಂತನ ಆತ್ಮಕ್ಕೆ ಭಗವಂತ ಸದ್ಗತಿ ನೀಡಲಿ. ಅಷ್ಟಮಠಗಳ ಬಗ್ಗೆಯೂ ನನಗೆ ಅಪಾರ ಪ್ರೀತಿ ಇದೆ. ಅದರಲ್ಲೂ ಪೇಜಾವರ ಸ್ವಾಮೀಜಿ ಮಠದ ಬಗ್ಗೆ ಹೆಚ್ಚು ಶ್ರದ್ಧೆ ಇದೆ.
-ಹಂಸಲೇಖ, ಸಂಗೀತ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next