Advertisement

ವೆಂಕಟೇಶ್ ಅಯ್ಯರ್ ಗೆ ಯಾಕೆ ಬೌಲಿಂಗ್ ನೀಡಿಲ್ಲ?: ಕಾರಣ ಹೇಳಿದ ಧವನ್

01:09 PM Jan 20, 2022 | Team Udayavani |

ಪಾರ್ಲ್: ಟೆಸ್ಟ್ ಸರಣಿ ಸೋಲಿನ ಬಳಿಕ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲೂ ಸೋಲನುಭವಿಸಿದೆ. ಬೊಲ್ಯಾಂಡ್ ಪಾರ್ಕ್ ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಯುವ ಪ್ರತಿಭೆ ವೆಂಕಟೇಶ್ ಅಯ್ಯರ್ ಏಕದಿನ ತಂಡಕ್ಕೆ ಪದಾರ್ಪಣೆ ಮಾಡಿದರು. ಆಲ್ ರೌಂಡರ್ ಕೋಟಾದಲ್ಲಿ ಆಡಿದ ವೆಂಕಟೇಶ್ ಒಂದೇ ಒಂದೇ ಓವರ್ ಬೌಲಿಂಗ್ ಮಾಡದೇ ಇದ್ದಿದ್ದು ಮಾತ್ರ ಚರ್ಚೆಗೆ ಕಾರಣವಾಗಿದೆ.

Advertisement

ಮಧ್ಯಮ ಗತಿಯ ವೇಗದ ಬೌಲಿಂಗ್ ಮಾಡಬಲ್ಲ ವೆಂಕಟೇಶ್ ಅಯ್ಯರ್ ಐಪಿಎಲ್ ನಲ್ಲಿ ಗಮನ ಸೆಳೆದಿದ್ದರು. ಹಾರ್ದಿಕ್ ಪಾಂಡ್ಯ ತಂಡದಲ್ಲಿರದ ಕಾರಣ ಬುಧವಾರದ ಪಂದ್ಯದಲ್ಲಿ ಆಲ್ ರೌಂಡರ್ ಆಗಿ ಅಯ್ಯರ್ ಅವರನ್ನು ಸೇರಿಸಲಾಗಿತ್ತು. ಆದರೆ ಅಯ್ಯರ್ ಗೆ ನಾಯಕ ರಾಹುಲ್ ಒಂದೂ ಓವರ್ ನೀಡಲಿಲ್ಲ.

ಕಾಮೆಂಟೇಟರ್ಸ್, ಮಾಜಿ ಆಟಗಾರರು ಈ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬವುಮಾ ಮತ್ತು ಡ್ಯೂಸನ್ ನಡುವೆ ಜೊತೆಯಾಟ ನಡೆಯುತ್ತಿದ್ದರೂ ಆಲ್ ರೌಂಡರ್ ಆಗಿರುವ ವೆಂಕಟೇಶ್ ಗೆ ಯಾಕೆ ಬೌಲಿಂಗ್ ನೀಡಿಲ್ಲ ಎಂಬ ಪ್ರಶ್ನೆ ಎತ್ತಿದ್ದರು.

ಆರಂಭಿಕ ಆಟಗಾರ ಶಿಖರ್ ಧವನ್ ಅವರು ಈ ಪ್ರಶ್ನೆಗೆ ಉತ್ತರಿಸಿದ್ದಾರೆ. ಸ್ಪಿನ್ನರ್‌ ಗಳು ಉತ್ತಮ ಪ್ರದರ್ಶನ ನೀಡಿದ್ದರಿಂದ ತಂಡಕ್ಕೆ ಅಯ್ಯರ್ ಬೌಲಿಂಗ್ ಸೇವೆ ಅಗತ್ಯ ಬೀಳಲಿಲ್ಲ ಎಂದು ಧವನ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:ಮೊದಲ ಏಕದಿನ ಪಂದ್ಯದ ಸೋಲಿಗೆ ಇವರೇ ಕಾರಣ ಎಂದ ನಾಯಕ ರಾಹುಲ್

Advertisement

“ಪಿಚ್ ನಲ್ಲಿ ಸ್ಪಿನ್ನರ್ ಗಳಿಗೆ ನೆರವು ಸಿಗುತ್ತಿತ್ತು. ಹೀಗಾಗಿ ಚಾಹಲ್ – ಅಶ್ವಿನ್ ಬೌಲಿಂಗ್ ಮುಂದುವರಿಸಿದರು. ವಿಕೆಟ್ ಬೇಕಾದ ಸಮಯದಲ್ಲಿ ಪ್ರಮುಖ ಬೌಲರ್ ಗಳ ಕರೆ ನೋಡಬೇಕಾಗುತ್ತದೆ. ಅಲ್ಲದೆ ಕೊನೆಯ ಸ್ಲಾಗ್ ಓವರ್ ಗಳಲ್ಲಿ ಪ್ರಮಖ ವೇಗದ ಬೌಲರ್ ಗಳು ಬೌಲಿಂಗ್ ಮಾಡುವ ಅವಶ್ಯಕತೆಯಿದೆ. ಹೀಗಾಗಿ ಮೊದಲ ಪಂದ್ಯದಲ್ಲಿ ಅಯ್ಯರ್ ಗೆ ಬೌಲಿಂಗ್ ನೀಡಿಲ್ಲ” ಎಂದು ಧವನ್ ಹೇಳಿದರು.

ಬೊಲ್ಯಾಂಡ್ ಪಾರ್ಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ ತಂಡ 4 ವಿಕೆಟ್ ಕಳೆದುಕೊಂಡು 296 ರನ್ ಗಳಿಸಿದರೆ ಭಾರತ ತಂಡ 8 ವಿಕೆಟ್ ಕಳೆದುಕೊಂಡು 265 ರನ್ ಮಾಡಲಷ್ಟೇ ಶಕ್ತವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next