Advertisement
ಈಗಿನ್ನೂ ಅಮೆರಿಕದಲ್ಲಿ ಕೋವಿಡ್ ಬಿಕ್ಕಟ್ಟು ಉಚ್ಛ್ರಾಯ ಸ್ಥಿತಿ ಮುಟ್ಟಿಲ್ಲ, ರೋಗ ಹರಡುವಿಕೆ ಗಂಭೀರ ಸ್ಥಿತಿ ಮುಟ್ಟಲು ಕೆಲವು ವಾರ ಆಗಬಹುದು ಎನ್ನುತ್ತಿದ್ದಾರೆ ಅಮೆರಿಕದ ಸ್ವಾಸ್ಥ್ಯ ಅಧಿಕಾರಿಗಳು. ಈ ಮಹಾಮಾರಿಯು ‘ಪ್ರಪಂಚದ ಅತಿ ಶ್ರೀಮಂತ ರಾಷ್ಟ್ರ’, ‘20 ಟ್ರಿಲಿಯನ್ ಡಾಲರ್ ಆರ್ಥಿಕತೆ’ಯೆಂಬ ಹೆಗ್ಗಳಿಕೆಯ ಅಮೆರಿಕದ ಆರೋಗ್ಯ ವ್ಯವಸ್ಥೆಯ ದೌರ್ಬಲ್ಯವನ್ನು, ಜನರ ಬೇಜವಾಬ್ದಾರಿತನದ ಗುಣವನ್ನು ಬಹಿರಂಗಗೊಳಿಸುತ್ತಿದೆ. ಇದರಿಂದ ಭಾರತದಂಥ ರಾಷ್ಟ್ರಗಳು ಪಾಠ ಕಲಿಯಲೇಬೇಕಿದೆ. ಇದೇ ವೇಳೆಯಲ್ಲೇ ಕೋವಿಡ್ 19 ವೈರಸ್ ವಿರುದ್ಧದ ಹೋರಾಟದಲ್ಲಿ ಕೆಲವು ದೇಶಗಳು ಮಾದರಿ ಹೆಜ್ಜೆ ಇಡುತ್ತಿವೆ.
ಆರಂಭದ ದಿನದಿಂದಲೂ ಮಾಸ್ಕ್, ಸೇರಿದಂತೆ ಸೂಕ್ತ ಸುರಕ್ಷತಾ ಪರಿಕರಗಳು ಅಮೆರಿಕದ ವೈದ್ಯಕೀಯ ಸಿಬಂದಿಗೆ ಸಿಗದ ಕಾರಣ, ಸಾವಿರಾರು ವೈದ್ಯರೀಗ ಸೋಂಕುಗ್ರಸ್ತರಾಗಿದ್ದಾರೆ. ದುರಂತವೆಂದರೆ, ಇವರ ಬಳಿ ವಿವಿಧ ಚಿಕಿತ್ಸೆ ಪಡೆದ ಅನೇಕರೀಗ ಸೋಂಕಿಗೆ ತುತ್ತಾಗಿದ್ದಾರೆ ಎನ್ನುತ್ತಾರೆ ಜಾನ್‌ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಮಾಲಿಕ್ಯೂಲರ್ ಸಂಶೋಧನಾಂಗದ ಪ್ರೊ. ಸ್ಟುವರ್ ಪೀಟರ್ಸನ್. “ಆರಂಭಿಕ ಸಮಯದಲ್ಲಿ ನ್ಯೂಯಾರ್ಕ್ ಸೇರಿದಂತೆ ಕೆಲವು ಪ್ರದೇಶಗಳಿಗೆ ಸೀಮಿತವಾಗಿದ್ದ ಸೋಂಕು ನೋಡನೋಡುತ್ತಿದ್ದಂತೆಯೇ ಅಮೆರಿಕದ 50 ರಾಜ್ಯಗಳಿಗೂ ಹರಡಿತು. ಏಕಾಏಕಿ ಆಸ್ಪತ್ರೆಗೆ ದೌಡಿಟ್ಟವರ ಸಂಖ್ಯೆ ಅಧಿಕವಾಯಿತು.
Related Articles
Advertisement
ಆರಂಭದಲ್ಲೇ ಗೊಂದಲಅಮೆರಿಕ ಅಧ್ಯಕ್ಷ ಟ್ರಂಪ್ ಐರೋಪ್ಯ ರಾಷ್ಟ್ರಗಳಿಂದ ಅಮೆರಿಕಕ್ಕೆ ಬರುವವರನ್ನು ನಿಲ್ಲಿಸಬೇಕೆಂಬ ಆದೇಶ ನೀಡಿದ್ದರಾದರೂ, ಆ ಆದೇಶವೂ ಸ್ಪಷ್ಟವಿರಲಿಲ್ಲ. ಈ ನಿಯಮ ದೇಶಕ್ಕೆ ಮರುಳುವ ಅಮೆರಿಕ ನಾಗರಿಕರಿಗೆ ಅಥವಾ ಅಮೆರಿಕಕ್ಕೆ ಬರುತ್ತಿರುವ ವಿದೇಶಿ ನಾಗರಿಕರಿಗೆ ಅನ್ವಯವಾಗುತ್ತದೋ, ಅಥವಾ ಇಬ್ಬರಿಗೋ? ಎನ್ನುವುದು ತಿಳಿಯದೇ, ಕೆಲ ದಿನ ಅಧಿಕಾರ ವರ್ಗಕ್ಕೂ ಗೊಂದಲವಿತ್ತು. ಈ ಗೊಂದಲ ಬಗೆಹರಿಸುವುದರೊಳಗೆ ಸಾವಿರಾರು ಜನ ವಿದೇಶಗಳಿಂದ ಅಮೆರಿಕದ ವಿಮಾನ ನಿಲ್ದಾಣಗಳಲ್ಲಿ ಬಂದಿಳಿದಿದ್ದರು. ನೋಡ ನೋಡುತ್ತಿದ್ದಂತೆಯೇ ಎಲ್ಲಾ ವಿಮಾನ ನಿಲ್ದಾಣಗಳಲ್ಲೂ ಜನಸಾಗರ ಸೇರಿತು. ಆ ಸಮಯದಲ್ಲಿ ಎಲ್ಲರ ಪರೀಕ್ಷೆ ಮಾಡಲು ಅಮೆರಿಕಕ್ಕೆ ಸಾಧ್ಯವಾಗಲೇ ಇಲ್ಲ. ಇವರೇ ಈಗ ದೇಶಾದ್ಯಂತ ರೋಗ ಹರಡಿರುವ ಸಾಧ್ಯತೆ ಇದೆ ಎನ್ನಲಾಗುತ್ತದೆ. ಕೋವಿಡ್ ಕಾರಣಕ್ಕಾಗಿ ಪಾರ್ಟಿ ನಿಲ್ಲಿಸಲ್ಲ!
ಹೇಗೆ ಅಮೆರಿಕನ್ನರು ಅಪಾಯದ ಸಮಯದಲ್ಲೂ ಅಸಡ್ಡೆ ತೋರುತ್ತಿದ್ದಾರೆ ಎನ್ನುವುದನ್ನು ಬಿಬಿಸಿಯ ವರದಿಗಾರ ಆ್ಯಂಥನಿ ಜರ್ಚರ್ ಹೇಳುವುದು ಹೀಗೆ: “ಅಮೆರಿಕದ ಫ್ಲೋರಿಡಾ ರಾಜ್ಯದ ಸಮುದ್ರ ತಟದಲ್ಲಿ ಬೇಸಿಗೆ ರಜೆಯ ನಿಮಿತ್ತ ಕಾಲೇಜು ಹುಡುಗರೆಲ್ಲ ಜಮಾಯಿಸಿದ್ದರು, ನ್ಯೂಯಾರ್ಕ್‌ನಲ್ಲಿ ಜನ ಮೆಟ್ರೋದಲ್ಲಿ ಕಿಕ್ಕಿರಿದು ತುಂಬಿದ್ದರು, ಲೂಸಿಯಾನಾದ ಚರ್ಚೊಂದರಲ್ಲಿ ಇತ್ತೀಚಿನವರೆಗೂ ಸಾವಿರಾರು ಸಂಖ್ಯೆಯಲ್ಲಿ ಜನ ಜಮೆಯಾಗುತ್ತಿದ್ದರು. ಈ ಚರ್ಚ್‌ನ ಪಾದ್ರಿ ಟೋನಿ ಸ್ಪೆಲ್ ಮೇಲೀಗ ಗುಂಪು ಸೇರಿಸಿದ್ದಕ್ಕಾಗಿ ಪ್ರಕರಣ ದಾಖಲಾಗಿದೆ. ಇದರ ಹೊರತಾಗಿಯೂ ಟೋನಿ ಅವರು ವಾಹಿನಿಯೊಂದರಲ್ಲಿ ಮಾತನಾಡುತ್ತಾ, “ಈ ಕೋವಿಡ್ ವೈರಸ್ ವಿಷಯ ರಾಜಕೀಯ ಪ್ರೇರಿತವಾಗಿದೆ. ನಾವು ಗುಂಪುಗೂಡಿ ಪ್ರಾರ್ಥನೆ ಮಾಡುವುದನ್ನು ಮುಂದುವರಿಸುತ್ತೇವೆ, ಯಾರು ಏನು ಬೇಕಾದರೂ ಅಂದುಕೊಳ್ಳಲಿ’ ಎಂದು ಹೇಳಿದ್ದರು. ಫ್ಲೋರಿಡಾದ ಸಮುದ್ರ ತಟದಲ್ಲಿ ಮದ್ಯ ಸೇವಿಸಿ ಅಡ್ಡಾಡುತ್ತಿದ್ದ ಯುವಕನನ್ನು ಪ್ರಶ್ನಿಸಿದಾಗ ಆತ ಹೇಳಿದ್ದಿಷ್ಟು- “ಒಂದು ವೇಳೆ ನನಗೆ ಕೋವಿಡ್ ಬಂದರೆ ಬರಲಿ. ಕೋವಿಡ್ ವೈರಸ್ ಗೆ ಹೆದರಿ ನಾನು ಪಾರ್ಟಿಯಂತೂ ನಿಲ್ಲಿಸೋಲ್ಲ.’ ಇದೇ ರೀತಿಯ ಧೋರಣೆ, ಅಮೆರಿಕದ ಅನೇಕ ಯುವಕರಲ್ಲಿ ಕಾಣಿಸುತ್ತಿದೆ” ಜರ್ಮನಿ: ದಿನಕ್ಕೆ 50 ಸಾವಿರ ಪರೀಕ್ಷೆ!
ಒಂದೆಡೆ ಅಮೆರಿಕದಂಥ ಜಾಗತಿಕ ಮಹಾಶಕ್ತಿ ಮತ್ತು ಇಟಲಿ, ಬ್ರಿಟನ್, ಫ್ರಾನ್ಸ್, ಸ್ಪೇನ್‌ನಂಥ ಐರೋಪ್ಯ ರಾಷ್ಟ್ರಗಳು ಕೋವಿಡ್ ತಡೆಗೆ ವಿಪರೀತ ಪರದಾಡುತ್ತಿರುವ ವೇಳೆಯಲ್ಲೇ… ಈ ರೋಗದ ವಿರುದ್ಧದ ಹೋರಾಟದಲ್ಲಿ ಬಹಳ ಸಕ್ರಿಯತೆ, ಯಶಸ್ಸು ತೋರಿಸುವಲ್ಲಿ ಜರ್ಮನಿ ಸದ್ಯಕ್ಕಂತೂ ಸಫಲವಾಗುತ್ತಿದೆ. ಅಲ್ಲಿ ಕೋವಿಡ್-19ನಿಂದಾಗಿ ಸಂಭವಿಸುತ್ತಿರುವ ಮರಣ ಪ್ರಮಾಣ 1 ಪ್ರತಿಶತಕ್ಕಿಂತಲೂ ಕಡಿಮೆಯಾಗಿದೆ. ಇಟಲಿ, ಬ್ರಿಟನ್ ಮತ್ತು ಸ್ಪೇನ್ ಟೆಸ್ಟ್ ಕಿಟ್‌ಗಳ, ಪ್ರಯೋಗಾಲಯಗಳ ಕೊರತೆಯನ್ನು ಎದುರಿಸುತ್ತಿರುವುದರಿಂದ, ಕೇವಲ ರೋಗ ಲಕ್ಷಣ ಕಾಣಿಸಿಕೊಂಡವರನ್ನಷ್ಟೇ ಪರೀಕ್ಷಿಸುತ್ತಿವೆ. ಇನ್ನು ಆ ರಾಷ್ಟ್ರಗಳ ವೈದ್ಯರು, ನರ್ಸ್‌ಗಳಿಗೂ ಸೂಕ್ತ ಸುರಕ್ಷಾ ಸೌಲಭ್ಯಗಳು ಇಲ್ಲದ ಕಾರಣ, ಇವರೆಲ್ಲರಿಂದ ರೋಗ ಹರಡುವಿಕೆ ಹೆಚ್ಚಾಗುತ್ತಿದೆ ಎಂಬ ಆರೋಪವೂ ಇದೆ. ಇದೇ ವೇಳೆಯಲ್ಲೇ ಜರ್ಮನಿ, ಪ್ರತಿದಿನ 50,000 ಜನರ ಪರೀಕ್ಷೆ ಮಾಡುತ್ತಿದೆ. ಕಟ್ಟುನಿಟ್ಟಾಗಿ ಲಾಕ್‌ಡೌನ್ ನಿಯಮಗಳನ್ನು ಜಾರಿಗೆ ತಂದಿದೆ. ನಿಯಮ ಉಲ್ಲಂಘಿಸುವವರಿಗೆ ಭಾರೀ ಪ್ರಮಾಣದಲ್ಲಿ ದಂಡ ಮತ್ತು ಜೈಲು ಶಿಕ್ಷೆ ವಿಧಿಸಲಾರಂಭಿಸಿದೆ. ಸದ್ಯಕ್ಕೆ, ತನಗೆ ವಾರಕ್ಕೆ 5 ಲಕ್ಷ ಜನರ ಪರೀಕ್ಷೆ ಮಾಡುವ ಸಾಮರ್ಥ್ಯವಿದೆ ಎಂದು ಜರ್ಮನ್ ಸರಕಾರ ಹೇಳುತ್ತಿದೆ. ಆದರೆ ವಿಜ್ಞಾನಿಗಳು ಕೋವಿಡ್ ಹರಡುವಿಕೆಯನ್ನು ಹತ್ತಿಕ್ಕಲು ದಿನಕ್ಕೆ 2 ಲಕ್ಷ ಜನರ ಪರೀಕ್ಷೆ ಮಾಡಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡುತ್ತಿದ್ದಾರೆ! ದ. ಕೊರಿಯಾ ಜಾಣತನ
ಪೂರ್ವ ಏಷ್ಯನ್ ರಾಷ್ಟ್ರ ದಕ್ಷಿಣ ಕೊರಿಯಾ ಕೂಡ ಕೋವಿಡ್ ವಿರುದ್ಧದ ಹೋರಾಟದಲ್ಲಿ ತನ್ನೆಲ್ಲ ಸಾಮರ್ಥ್ಯವನ್ನು ಒರೆಗೆ ಹಚ್ಚಿದೆ. ಜನವರಿ 10ರಂದು ಆ ದೇಶದಲ್ಲಿ ಮೊದಲ ಕೋವಿಡ್ ಪ್ರಕರಣ ಪತ್ತೆಯಾಗಿತ್ತು. ಸಾಕಷ್ಟು ಮಟ್ಟಿಗೆ ಅದು ಹಿಡಿತಕ್ಕೆ ಬಂದಿತ್ತಾದರೂ, ಕೇಸ್ 31 ಸಂಖ್ಯೆಯ ರೋಗಿಯೊಬ್ಬಳ ಬೇಜವಾಬ್ದಾರಿಯಿಂದಾಗಿ ಸಾವಿರಾರು ಜನರಿಗೆ ರೋಗ ಹರಡಿಬಿಟ್ಟಿತ್ತು. ಆದರೆ ಎಪ್ರಿಲ್ 4ರ ವೇಳೆಗೆ ಆ ದೇಶದಲ್ಲಿ 10 ಸಾವಿರ ಪ್ರಕರಣಗಳು ದಾಖಲಾಗಿದ್ದರೆ, ಅದರಲ್ಲಿ 6 ಸಾವಿರ ಜನ ಚೇತರಿಸಿಕೊಂಡಿದ್ದಾರೆ. 183 ರೋಗಿಗಳು ಮೃತಪಟ್ಟಿದ್ದಾರೆ. ಇಲ್ಲಿಯವರೆಗೂ ದ. ಕೊರಿಯಾ 4,43,273 ಜನರ ಪರೀಕ್ಷೆ ಮಾಡಿದೆ. ವೈದ್ಯಕೀಯ ಪರಿಕರಗಳ ಉತ್ಪಾದಕ ಕಂಪನಿ ತಯಾರಿಸಿದ Allplex 2019-nCoV Assay ಎಂಬ ಟೆಸ್ಟ್ ಕಿಟ್ ಮೂಲಕ ಇದುವರೆಗೂ 2,20000 ಪರೀಕ್ಷೆಗಳನ್ನು ನಡೆಸಲಾಗಿದೆ. ಅಂದರೆ, ಆ ದೇಶದ 50 ಪ್ರತಿಶತ ಪ್ರಕರಣಗಳನ್ನು Seegene ಕಂಪನಿಯ ಟೆಸ್ಟ್ ಕಿಟ್‌ನಿಂದಲೇ ಪತ್ತೆಹಚ್ಚಿದಂತಾಗಿದೆ.