ಸುಂದರ ಸ್ವಪ್ನದಲ್ಲಿ ಅಂದು ನೀನು ರಾಜನಾಗಿದ್ದೆ, ನಾನು ರಾಣಿಯಾಗಿದ್ದೆ. ಪ್ರೀತಿ ಎಂಬ ಹೂವಿನ ಸುತ್ತ ದುಂಬಿಗಳಂತೆ ಸುತ್ತುತ್ತಿದ್ದೆವು ನಾವು. ನಮ್ಮ ಮಧ್ಯೆ ಮೂಡಿದ ಸಣ್ಣ ಬಿರುಕು, ಆ ಹೂವನ್ನು ಬಾಡುವಂತೆ ಮಾಡಿಬಿಟ್ಟಿತು. ಕಾರಣ ನಾನಾ, ನೀನಾ?
ಹೇಳಿದ ನಾಲ್ಕು ಮಾತು, ಅದರಿಂದ ಆದ ನೋವು, ಮಾತು ಮುಗೀತಿದ್ದಂತೆಯೇ ನೀರು ತುಂಬಿದ ಕಂಗಳು, ಬೇಸರದ ಮುಖ ಭಾವ.. ಇವೆಲ್ಲವನ್ನು ನೆನಪಿಸಿಕೊಂಡರೆ, ಅಬ್ಟಾ! ಎಂಥ ಕಠೊರ ದಿನಗಳು ಅವು ಎಂಬ ಸಂಕಟ.
ಇಳಿಸಂಜೆಯ ವೇಳೆ ನಿನ್ನ ಕೈ ಹಿಡಿದು, ಹೆಜ್ಜೆಗೆ ಹೆಜ್ಜೆ ಸೇರಿಸಿ ನಡೆಯುತ್ತ, ಆಗಲೇ ಹಾಡುತ್ತ, ನಗುತ್ತ, ಮುನಿಸಿಕೊಳ್ಳುತ್ತ, ರಾಜಿಯಾಗುತ್ತ ನಡೆದ ಕ್ಷಣಗಳನ್ನು ನೆನಪಿಸಿಕೊಂಡರೆ, ನಿನ್ನೊಟ್ಟಿಗೆ ಕಳೆದ ಆ ದಿನಗಳೇ ನನ್ನ ಬಾಳಿನ ಮಧುರ ಕ್ಷಣಗಳು ಅನಿಸುತ್ತದೆ. ನನ್ನ ನೆನಪಿನ ಬುತ್ತಿಯಲ್ಲಿ ಆ ದಿನಗಳು ಎಂದಿಗೂ ಮಾಸಿ ಹೋಗವು.
ಆ ದಿನಗಳು ಮತ್ತೆಂದೂ ಮರುಕಳಿಸಲಾರವೇ? ಇಲ್ಲ ಎಂದು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆ ಕ್ಷಣಗಳನ್ನೆಲ್ಲ ನೆನಪಿಸಿಕೊಂಡು ಖುಷಿಪಡಲಾ ಅಥವಾ ಮುಂದೆಂದೂ ಆ ಖುಷಿ ನನ್ನದಾಗದೆಂದು ದುಃಖೀಸಲಾ? ಏನು ಮಾಡುವುದೆಂದು ತಿಳಿಯದೇ ಮನಸ್ಸು ಸ್ತಬ್ಧವಾಗಿದೆ. ನೋವು-ನಲಿವಿನ ಹಿಂದಿನ ದಿನಗಳನ್ನು ನೆನಪಿಸಿಕೊಂಡಾಗ, ಕಂಗಳು ಕಂಬನಿಯಿಂದ ಮಂಜಾಗುತ್ತಿವೆ. ನಿನ್ನ ನೆನಪುಗಳಿಗೆ ಸದ್ಯದಲ್ಲೇ ನವಮಾಸ ತುಂಬಲಿದೆ. ಜನ್ಮಕ್ಕೂ ಮುನ್ನ ಅದಕ್ಕೊಂದು ಹೆಸರಿಡುವ ಬಯಕೆಯಾಗುತ್ತಿದೆ.
ಒಂದಂತೂ ನಿಜ.. ನಟಿಸುವುದನ್ನು ಹೇಳಿಕೊಟ್ಟಿದ್ದು ನೀನೇ. ಈಗ, ಕರುಳು ಹಿಂಡಿದಂತಾಗುತ್ತಿದೆ. ಆದರೂ ಖುಷಿಯಾಗಿರುವಂತೆ ನಟಿಸುತ್ತಿದ್ದೇನೆ. ಅಷ್ಟೇ ಅಲ್ಲ, ಮಾತಿಗೊಮ್ಮೆ ವಿನಾಕಾರಣ ನಗುವುದನ್ನು ಕಲಿತಿದ್ದೇನೆ. ನಟಿಸುತ್ತಲೇ ಬದುಕುತ್ತೇನೆ, ಖುಷಿಯಾಗಿದ್ದಂತೆ!
-ರಮ್ಯಾ ಸಿ ಹೆಗಡೆ, ಶಿರಸಿ