Advertisement

ವಿದ್ಯಾವಂತರಿಗೇ ಅಧಿಕಾರ ಕೊಡಿ; ನಾವು ಯಾಕೆ ಮತ ಹಾಕಬೇಕು ?

03:46 PM Mar 25, 2019 | keerthan |

“ನಾವು ಯಾಕೆ ಮತ ಹಾಕಬೇಕು’ ಇದು ಯುವ ಹಾಗೂ ಉಳಿದ ಎಲ್ಲ ಅರ್ಹ ಮತದಾರರನ್ನು ಎ. 18ರ ಮತದಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವ ಉದಯವಾಣಿಯ ವಿಶೇಷ ಅಭಿಯಾನ. ಇದರಲ್ಲಿ ಜಿಲ್ಲೆಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳು/ ತರುಣ ಮತದಾರರು ಮತದಾನದ ಮಹತ್ವದ ಕುರಿತು ಬರೆಯುತಿದ್ದಾರೆ.ಬನ್ನಿ ಪ್ರಜಾತಂತ್ರವನ್ನು ಬೆಂಬಲಿಸೋಣ, ಮತದಾನ ಮಾಡೋಣ.

Advertisement

ಆಯ್ಕೆಯ ಸ್ವಾತಂತ್ರ್ಯ
ಮತ ಹಾಕುವುದು ಪ್ರತಿಯೊಬ್ಬ ಪ್ರಜೆಯ ಒಂದು ಆದ್ಯ ಕರ್ತವ್ಯ. ಇದರಿಂದ ಆತನು ತನ್ನ ಸ್ವಾತಂತ್ರ್ಯವನ್ನು ಗುರುತಿಸಿಕೊಳ್ಳಬಹುದು.ಮತದಾನವು ಪ್ರಜೆಗಳಿಗೆ ತಮ್ಮ ಆಯ್ಕೆಯ ಸ್ವಾತಂತ್ರ್ಯವನ್ನು ಖಾತ್ರಿಪಡಿಸುತ್ತದೆ. ಮತ ಹಾಕುವುದರಿಂದ ತಮಗೆ ಬೇಕಾದ ಸರಕಾರವನ್ನು ಅಧಿಕಾರಕ್ಕೆ ತರಲು ಅವಕಾಶ ವನ್ನು ಒದಗಿಸುತ್ತದೆ. ಮತದಾನವು ಒಂದು ಹೊಸ ಸರ್ಕಾರದ ಬದಲಾವಣೆಗೆಅವಕಾಶವನ್ನು ನೀಡುತ್ತದೆ.
ಶೈಲಿಕಾ ಅಮಿನ್‌, ವೈಕುಂಠ ಬಾಳಿಗಾ ಕಾಲೇಜು, ಉಡುಪಿ

ವಿದ್ಯಾವಂತರಿಗೇ ಅಧಿಕಾರ ಕೊಡಿ
ಮತದಾನ ಮೂಲಕ ನಾವು ನಮ್ಮ ಹಕ್ಕು ಹಾಗೂ ಬಾಧ್ಯತೆಗಳ ಬಗ್ಗೆ ಧ್ವನಿ ಎತ್ತಿ ಮಾತನಾಡುವ ಅವಕಾಶವನ್ನು ಪಡೆದುಕೊಂಡಿದ್ದೇವೆ. ಮತ ನೀಡದೆ ಯಾವುದೇ ಸರಕಾರದ ಕಾರ್ಯವೈಖರಿಯ ಬಗ್ಗೆ ಮಾತನಾಡುವುದು ಖಂಡಿತ ತಪ್ಪಾಗುತ್ತದೆ. ಅವಿದ್ಯಾವಂತ ರಾಜಕಾರಣಿಗಳಿಗೆ ಅಧಿಕಾರ ನೀಡಬಾರದು. ಅದರಿಂದ ಸಾರ್ವಜನಿಕ ವ್ಯವಸ್ಥೆ ನಶಿಸುತ್ತದೆ.
ಹರ್ಷಿಣಿ ಪೂಜಾರಿ, ವೈಕುಂಠ ಬಾಳಿಗಾ ಕಾಲೇಜು, ಉಡುಪಿ

ಸೂಕ್ತ ಅಭ್ಯರ್ಥಿ ಆಯ್ಕೆ ಕರ್ತವ್ಯ
ಮತದಾನ ಮಾಡುವುದು ನಮ್ಮೆಲ್ಲರ ಹಕ್ಕು ಹಾಗೂ ಕರ್ತವ್ಯ. ನಮ್ಮ ಎಲ್ಲ ಅಗತ್ಯಗಳನ್ನು ಈಡೇರಿಸಿಕೊಳ್ಳಲು ನಾವು ಸೂಕ್ತವಾದ ಅಭ್ಯರ್ಥಿಯನ್ನು ಮತದಾನ ಮಾಡುವುದರ ಮೂಲಕ ಆರಿಸಬೇಕು. ದೇಶದ ಅಭಿವೃದ್ಧಿ ಮತದಾರರ ಕೈಯಲ್ಲಿದೆ. ಮತ ಅಮೂಲ್ಯವಾದ ಕಾರಣ ನಾವು
ಮತದಾನ ಮಾಡದಿದ್ದರೆ ನಮ್ಮ ದೇಶಕ್ಕೆ ನಷ್ಟವಾಗುತ್ತದೆ. ಹಾಗಾಗಿ ಈ ಬಾರಿ  ಎಲ್ಲರೂ ತಪ್ಪದೇ ಮತದಾನ ಮಾಡಿ ಸೂಕ್ತವಾದ ಅಭ್ಯರ್ಥಿಯನ್ನು ಆಯ್ಕೆ ಮಾಡೋಣ.
ರಮ್ಯಾ ಬಿ.,ಎಂ.ಜಿ.ಎಂ. ಕಾಲೇಜು,ಉಡುಪಿ

ಮತ ಚಲಾವಣೆ, ರಾಷ್ಟ್ರ ಬದಲಾವಣೆ
ಅತ್ಯಂತ ಬಲಿಷ್ಠ ರಾಷ್ಟ್ರವಾಗಿ ಭಾರತ ಹೊರಹೊಮ್ಮಬೇಕು. ಇದಕ್ಕಾಗಿ ಪ್ರತಿಯೋರ್ವರು ಮತ ಚಲಾಯಿಸಬೇಕು. ದೇಶದ ಸಮಗ್ರ ಅಭಿವೃದ್ಧಿಗೆ ನಮ್ಮ ಮತ ನಿರ್ಣಾಯಕ. ಆದುದರಿಂದ ಈ ಪವಿತ್ರ ಕಾರ್ಯದಲ್ಲಿ ಪ್ರತಿಯೊಬ್ಬ ಪ್ರಜೆಯೂ ಪಾಲ್ಗೊಳ್ಳಬೇಕು. ರಾಷ್ಟ್ರದ ಬದಲಾವಣೆಗೆ ಮತದಾನವೇ ಮೂಲ ಅಸ್ತ್ರ. ಯುವ ಜನಾಂಗ ಇತರರಿಗೆ ಮತದಾನಕ್ಕೆ ಪ್ರೇರಣೆ ನೀಡಬೇಕು.
ಎಸ್‌. ರಂಜಿತ್‌ ಶೆಟ್ಟಿ ಬೆಳ್ವೆ, ಸ.ಪ್ರ.ದ. ಕಾಲೇಜು, ಶಂಕರನಾರಾಯಣ

Advertisement

ಮತದಾನದಿಂದ ಪ್ರಶ್ನಿಸುವ ಹಕ್ಕು
ಜವಾಬ್ದಾರಿಯುತ ಪ್ರಜೆಯಾಗಿ ಉತ್ತಮ ನಾಯಕರ ಆಯ್ಕೆಗಾಗಿ ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯ. ಮತದಾನ ಮಾಡುವುದರಿಂದ ದೇಶದ ಅಭಿವೃದ್ಧಿಗೂ ನಾವು ಕಾರಣವಾದಂತಾಗುತ್ತದೆ. ಯುವ ಜನರು ಮತದಾನ ಮಾಡದಿದ್ದರೆ ಭವಿಷ್ಯದಲ್ಲಿ ನಾವು ಪ್ರಶ್ನೆ ಮಾಡುವ ಹಕ್ಕನ್ನು ಕಳೆದುಕೊಳ್ಳುತ್ತೇವೆ. ಭ್ರಷ್ಟಾಚಾರ ಮುಕ್ತ ದೇಶವನ್ನಾಗಿಸಲು ಮತದಾನ ಮಾಡಬೇಕು. ಮತ ಹಾಕಿ ದೇಶದ ಅಭಿವೃದ್ಧಿಗೆ ಕಾರಣರಾಗೋಣ.
-ಶ್ರೇಯಾ ಪಾಲನ್‌,ವಿದ್ಯಾನಿಕೇತನ ಪ್ರ.ದರ್ಜೆ ಕಾಲೇಜು ಕಾಪು

ಕುಟುಂಬದಷ್ಟೇ ದೇಶವೂ ಮುಖ್ಯ
ನಮ್ಮನ್ನು ಯಾರು ಆಳಬೇಕು ಎಂದು ಚುನಾಯಿಸುವ ಹಕ್ಕು ನಮಗಿದೆ. ಒಂದು ಮತದಿಂದ ಏನೂ ಬದಲಾಗದು ಎಂದು ಎಲ್ಲರೂ ಕುಳಿತರೆ ದೇಶದ ಸ್ಥಿತಿ ಅವನತಿಯತ್ತ ಸಾಗಲಿದೆ. ಇಂದು ದೇಶದಲ್ಲಿ ಪಕ್ಷದ ಗೆಲುವನ್ನು ಶೇ 20 ರಷ್ಟು ಜನ ನಿರ್ಧರಿಸುತ್ತಿದ್ದಾರೆ. ಹೀಗಾಗಬಾರದು. ಕುಟುಂಬದಷ್ಟೇ ದೇಶವೂ ಮುಖ್ಯ. ನಮಗಾಗಿ ಮತ ಚಲಾಯಿಸಬೇಕು. ಪ್ರಜಾಪ್ರಭುತ್ವವನ್ನು ಸುಭದ್ರವಾಗಿಡಲು ಮತ ಚಲಾಯಿಸಲೇ ಬೇಕು.
ಪೂಜಾಶ್ರೀ,ಡಾ| ಶಂಕರ ಅಡ್ಯಂತಾಯ ಕಾಲೇಜು, ನಿಟ್ಟೆ

ಮತದಾನ ರಾಷ್ಟ್ರದ ಅಡಿಪಾಯ
ಮತದಾನವು ನಾಳೆಯ ನಾಯಕರನ್ನು ಆಯ್ಕೆ ಮಾಡುತ್ತದೆ. ಮತದಾನ ನಾಗರಿಕತ್ವದ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಅನೇಕ ಜನರು ಯೋಚಿಸುವುದು ಒಂದು ಮತವು ಬದಲಾವಣೆ ಮಾಡುವುದಿಲ್ಲವೆಂದು ಅದರೆ ರಾಷ್ಟ್ರ ಅಡಿಪಾಯಕ್ಕೆ ಇದೇ ಮುಖ್ಯ.ಇದು  ಪ್ರತಿಯೊಬ್ಬರ ಜನ್ಮಸಿದ್ಧ ಹಕ್ಕು.
ಮೆಲ್‌ರಿನ್‌ ಗ್ರೇಸಿಲ್ಲಾ ಪಿರೇರಾ, ಡಾ| ಶಂಕರ ಅಡ್ಯಂತಾಯ ಕಾಲೇಜು, ನಿಟ್ಟೆ

ಅಭಿವೃದ್ಧಿಯತ್ತ ಸಾಗಲು ನಮ್ಮ ಮತ
ಸ್ವತಂತ್ರ ಭಾರತದ ಸ್ವತಂತ್ರ ಪ್ರಜೆಗಳು ನಾವು. ನಮ್ಮ ದೇಶ ಸಂಪೂರ್ಣವಾಗಿ
ಇನ್ನೂ ಅಭಿವೃದ್ಧಿಗೊಂಡಿಲ್ಲ, ಸಮಸ್ಯೆಗಳನ್ನು ಬಗೆಹರಿಸಲು ಮತ್ತು ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು, ಸೂಕ್ತವಾದ ವ್ಯಕ್ತಿಯನ್ನು ಆರಿಸಬೇಕು. ಅದಕ್ಕಾಗಿ ಮತದಾನದ ಹಕ್ಕನ್ನು ಪಡೆದವರು ದಯವಿಟ್ಟು ತಮ್ಮ ಅಮೂಲ್ಯವಾದ ಮತವನ್ನು ಸೂಕ್ತ ವ್ಯಕ್ತಿಗೆ ನೀಡಿ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವಲ್ಲಿ ಪಾತ್ರ ವಹಿಸೋಣ.
ವರುಣ್‌ ಕುಮಾರ್‌, ಮಿಲಾಗ್ರಿಸ್‌ ಕಾಲೇಜು, ಕಲ್ಯಾಣಪುರ

Advertisement

Udayavani is now on Telegram. Click here to join our channel and stay updated with the latest news.

Next