Advertisement

Teachers ಯಾಕೆ ಜಿಜ್ಞಾಸುಗಳಾಗಬೇಕು?

11:37 PM Aug 21, 2023 | Team Udayavani |

ನಮ್ಮ ಸುತ್ತಮುತ್ತ ಸಂಭವಿಸುವ ವಿದ್ಯಮಾನಗಳೇ ಹಾಗೆ. ಕೆಲವೊಂದು ವಿದ್ಯಮಾನಗಳ ಪರಿಣಾಮಗಳು ನಮ್ಮನ್ನು “ಚಿಂತಿ’ಸುವಂತೆ ಮಾಡುತ್ತವೆ. ಹಾಗೆಯೇ, ಏಕಕಾಲಕ್ಕೆ ನಮ್ಮನ್ನು “ಚಿಂತೆ’ ಮತ್ತು “ಚಿಂತನೆ’ಗೀಡು ಮಾಡುವ ವಿದ್ಯಮಾನಗಳೂ ಸಾಕಷ್ಟಿವೆ. ನಾವು ಚಿಂತನೆಗೊಳಪಟ್ಟರೆ ಜಿಜ್ಞಾಸುಗಳಾಗುತ್ತೇವೆ. ಚಿಂತೆ ನಮ್ಮನ್ನು ಮುಪ್ಪಿನತ್ತ ತಳ್ಳುತ್ತದೆ. ಇವೆರಡರಲ್ಲಿ ಆಯ್ಕೆ ನಮಗೆ ಸೇರಿದ್ದು. ಜಿಜ್ಞಾಸುಗಳಾದರೆ ನಮ್ಮ ಜ್ಞಾನ, ವಿವೇಕ ಜಾಗೃತಗೊಳ್ಳುತ್ತದೆ. ಇನ್ನು ಶಿಕ್ಷಕರಂತೂ ಮೂಲತಃ “ಜಿಜ್ಞಾಸು’ಗಳು. ಜ್ಞಾನದ ತೃಷೆ ಅವರನ್ನು ಸದಾಕಾಲ ಬಾಧಿಸುತ್ತಿರಬೇಕು.

Advertisement

ಇತ್ತೀಚೆಗೆ ಆಕ್ಸ್‌ಫ‌ರ್ಡ್‌ನ ಮಾರ್ಟಿನ್‌ ಸ್ಕೂಲ್‌ ಕೈಗೊಂಡ ಸಂಶೋಧನೆ ಮತ್ತು ಅದು ಪ್ರಕಟಿಸಿದ ವರದಿ ಚಿಂತೆ ಮತ್ತು ಚಿಂತನೆಗೆ ಸಾಕಷ್ಟು ಎಡೆಮಾಡಿ ಕೊಟ್ಟಿದೆ. ವರದಿಯಲ್ಲಿ ಉಲ್ಲೇಖೀಸಿದಂತೆ, 2030ರ ಸುಮಾರಿಗೆ ಜಗತ್ತಿನಲ್ಲಿರುವ 30 ಪ್ರತಿಶತ ಉದ್ಯೋಗ ಗಳು ಪ್ರಸ್ತುತ ಚಾಲ್ತಿಯಲ್ಲಿರುವ ಉದ್ಯೋಗಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿರುವುದು ಮಾತ್ರವಲ್ಲದೆ, ಈಗ ಇರುವ 30 ಪ್ರತಿಶತ ಉದ್ಯೋಗಗಳ ಆವಶ್ಯಕತೆ 2030ರಲ್ಲಿ ಕಾಣಸಿಗುವುದು ಅಸಾಧ್ಯ. ಈ ದಿಢೀರ್‌ ಬೆಳವಣಿಗೆಗೆ ಮುಖ್ಯ ಕಾರಣ “ಕೃತಕ ಬುದ್ಧಿಮತ್ತೆ’ (Artificial Inteligence)ಯ ವ್ಯಾಪಕ ಬಳಕೆ ಮತ್ತು ಅದು ತಂದೊಡ್ಡಬಹುದಾದ ಅಡ್ಡ ಪರಿಣಾಮಗಳು. ಇದಕ್ಕೆ ಪೂರಕವಾಗಿ ಮೈಕ್ರೋಸಾಫ್ಟ್ ಬೆಂಬಲಿತ “ಮುಕ್ತ ಕೃತಕ ಬುದ್ಧಿಮತ್ತೆ’ಯ ಚಾಟ್‌ ಜಿಪಿಟಿ(ಇಜಚಠಿ ಎಕಖ)ಯನ್ನು ನಿಭಾಯಿಸುವ ನಿಟ್ಟಿನಲ್ಲಿ ರೂಪಿಸಲಾದ ನಿಯಮಾವಳಿಗಳು ಸೂಕ್ತ ಫ‌ಲವನ್ನು ನೀಡದೆ ಮುಂದುವರಿದ ದೇಶಗಳು ತೊಂದರೆಗಳನ್ನು ಅನುಭವಿಸುತ್ತಲಿವೆ. ಈ ವಿಧದ ತಂತ್ರಜ್ಞಾನಗಳು ಸರಳವೆಂದು ಕಂಡುಬಂದರೂ ಅವುಗಳು ತಂದೊಡ್ಡುವ ಅಡ್ಡ ಪರಿಣಾಮಗಳು ತೀರಾ ಸಂಕೀರ್ಣ. ಕ್ಷಣಕ್ಷಣಕ್ಕೆ ಬದಲಾಗುವ ಈ ರೀತಿಯ ವಿದ್ಯಮಾನಗಳನ್ನು ವಿದ್ಯಾರ್ಥಿಗಳಿಗೆ ಮನಮುಟ್ಟು ವಂತೆ ಜ್ಞಾನ, ವಿವೇಕ ಮತ್ತು ಕೌಶಲಗಳಿಂದ ಬೋಧಿಸುವುದು ಸಾಕಷ್ಟಿದೆ. ಈ ಹಿನ್ನೆಲೆಯಲ್ಲಿ ನೈಜ ಜ್ಞಾನ, ನಿಖರ ಕ್ರಿಯೆ, ಕೌಶಲ ಇವೇ ಮುಂತಾದ ವಿಚಾರಗಳ ಕುರಿತು ಶಿಕ್ಷಕರು ತಮ್ಮನ್ನು ತಾವು ಪುನಶ್ಚೇತನಗೊಳಿಸುವ ಅನಿವಾರ್ಯತೆಯೂ ಇದೆ.

ನೈಜ ಜ್ಞಾನ ಒಂದು ಶೋಧ!
ನೈಜ ಜ್ಞಾನದ ಬಗ್ಗೆ ಶಿಕ್ಷಕರಿಗೆ ಸ್ಪಷ್ಟ ಅರಿವಿರಬೇಕು. ಸೂಕ್ತ ಜ್ಞಾನವನ್ನು ಶೋಧನೆಯಿಂದ ಪಡೆದುಕೊಳ್ಳ ಬಹುದು. ಶಿಕ್ಷಕರು ತಮ್ಮ ವಿದ್ಯಾರ್ಥಿಗಳನ್ನು “ಸ್ವ-ಶೋಧ’ ಪ್ರಕ್ರಿಯೆಗೆ ಒಳಪಡಿಸಿದರೆ ಅವರಲ್ಲಿ ಹುದುಗಿರುವ ಜ್ಞಾನದ ಅನುಭವ ಅರಿವಿಗೆ ಬರುತ್ತದೆ. ಕಲಿಕೆಯ ಬಗ್ಗೆ ಇರುವ ನಿಷ್ಕಲ್ಮಶ ಪ್ರೀತಿ, ಜ್ಞಾನದ ಅರ್ಥೈಸುವಿಕೆಯನ್ನು ನೈಜವಾಗಿಸುತ್ತದೆ. ಸ್ವ-ಜ್ಞಾನ ವನ್ನು ಗಳಿಸುವ ಪ್ರಕ್ರಿಯೆಯಲ್ಲಿ ಸ್ವ-ಪ್ರಜ್ಞೆ ಮತ್ತು ಏಕಾಗ್ರತೆ ಪ್ರಮುಖ ಪಾತ್ರ ವಹಿಸುತ್ತವೆ. ಸ್ವ-ಪ್ರಜ್ಞೆ ಜ್ಞಾನದ ಮೂಲ. ಮಾನವೀಯ ಸಂಬಂಧಗಳ ವೃದ್ಧಿ, ಕಾರ್ಯಕ್ಷೇತ್ರದಲ್ಲಿ ಕ್ಷಮತೆಗೂ ಇದು ಅನಿವಾರ್ಯ! ಸ್ವ-ಜ್ಞಾನದ ಶೋಧಕ್ಕೆ ಏಕಾಗ್ರತೆ ಅತ್ಯಗತ್ಯ. ಏಕಾಗ್ರತೆ ಯನ್ನು ಸಂಸ್ಕರಿಸಿದರೆ ಅಭೂತಪೂರ್ವ ಯಶಸ್ಸನ್ನು ಸುಲಭದಲ್ಲಿ ಪಡೆಯಬಹುದು. ಇದು ತೀರಾ ಸಾಮಾನ್ಯ ಜ್ಞಾನ.

ತಂತ್ರಜ್ಞಾನದ ವ್ಯಾಪಕ ಬಳಕೆಯಿಂದಾಗಿ ನಮ್ಮನ್ನು ನಾವು ಎಲ್ಲೆಂದರಲ್ಲಿ, ಯಾರೊಡನೆ ಬೇಕಾದರೂ ನಿಮಿಷಾರ್ಧದಲ್ಲಿ ಸಂಪರ್ಕಿಸಲು ಸಾಧ್ಯವಾದರೂ, ವ್ಯಕ್ತಿ ವೈಯಕ್ತಿಕವಾಗಿ ತನ್ನಲ್ಲಿ ತಾನು ಸಂಪರ್ಕವನ್ನು ಕಳೆದುಕೊಳ್ಳುತ್ತಿದ್ದಾನೆ. ಇದು ನಿಜಕ್ಕೂ ಖೇದಕರ! ಏಕಾಗ್ರತೆಯ ಕೊರತೆ ಇದಕ್ಕೆ ಮುಖ್ಯ ಕಾರಣ. ತಪ್ಪು ಪುರಾವೆಗಳನ್ನು ಆಕರ್ಷಣೀಯವಾಗಿ ನೈಜವೆಂದು ತೋರ್ಪಡಿಸಿ ಏಕಾಗ್ರತೆಯನ್ನು ಭಂಗಪಡಿಸುವ ಹಲವಾರು ಚಟುವಟಿಕೆಗಳು ಸಮಾಜದಲ್ಲಿ ನಡೆಯು ತ್ತಿವೆ. ನಮ್ಮ ಯುವ ಪೀಳಿಗೆ ಇದಕ್ಕೆ ತತ್‌ಕ್ಷಣ ಬಲಿಬೀಳುತ್ತಾರೆ. ಶಿಕ್ಷಕರು ನಮ್ಮ ವಿದ್ಯಾರ್ಥಿಗಳ ಏಕಾಗ್ರತೆಯನ್ನು ಕ್ಷಣ, ಕ್ಷಣಕ್ಕೆ ವೃದ್ಧಿಸುವತ್ತ ಸದಾ ಕಾಲ ಪ್ರಯತ್ನಿಸಬೇಕು, ವ್ಯಕ್ತಿಯ ಎಲ್ಲ ಸಾಧನೆಗಳಿಗೆ ಏಕಾಗ್ರತೆ ಅತ್ಯಗತ್ಯ. ನಾವು ಗಳಿಸುವ ಜ್ಞಾನವೂ ಏಕಾಗ್ರತೆಯ ಪ್ರಗತಿಯೇ ಆಗಿದೆ. ಇಂದಿನ ಜಂಜಾಟದ ಯಾಂತ್ರಿಕ ಬದುಕಿನಲ್ಲಿ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಮತ್ತು ಸ್ವ-ಪ್ರಜ್ಞೆಯನ್ನು ಬಿತ್ತಿ, ಬೆಳೆಸುವ ಕೈಂಕರ್ಯದಲ್ಲಿ ಶಿಕ್ಷಕರು ಹೆಚ್ಚು, ಹೆಚ್ಚು ತಲ್ಲೀನರಾಗಬೇಕು. ಇಂದಿನ ಪರಿಸ್ಥಿತಿಯಲ್ಲಿ ಶಿಕ್ಷಕರ ಮುಂದಿರುವ ಒಂದು ದೊಡ್ಡ ಸವಾಲು ಇದೇ ಆಗಿದೆ.

ನೈಜ ಕ್ರಿಯೆ ಹೇಗಿರುತ್ತದೆ?
ಬಹಳ ಸರಳವಾಗಿ ಹೇಳುವುದಾದರೆ, ನಮ್ಮ ಚಿಂತನೆ, ಭಾವನೆ, ಮಾತು ಮತ್ತು ನಾವು ಎಸಗುವ ಕಾರ್ಯಚಟುವ‌ಟಿಕೆಗಳ ನಡುವೆ ನಾವು ಸದಾಕಾಲ ಅವಿನಾಭಾವ ಸಂಬಂಧ ಕಲ್ಪಿಸಿದರೆ ನಮ್ಮ ಕ್ರಿಯೆ, ನೈಜ ಅಥವಾ ನಿಖರ ಕ್ರಿಯೆಯಾಗಿ ರೂಪುಗೊಳ್ಳುತ್ತದೆ. ಇಲ್ಲಿ ನಮ್ಮ ಸ್ವ-ಪ್ರಜ್ಞೆ ಉತ್ತುಂಗ ಸ್ಥಿತಿಯಲ್ಲಿರುತ್ತದೆ. ನಿಖರವಾದ ಕ್ರಿಯೆ ಅನುಷ್ಠಾನಗೊಳ್ಳಲು ಆ ಕ್ರಿಯೆಯ ಹಿಂದಿನ ಆಶಯ ಮತ್ತು ಆ ಕ್ರಿಯೆ ತಂದೊಡ್ಡಬಹುದಾದ ದೀರ್ಘಾವಧಿಯ ಪರಿಣಾಮಗಳ ಬಗ್ಗೆ ತಾರ್ಕಿಕ-ವಿವಿಧ ಆಯಾಮಗಳ ಅಧ್ಯಯನ ಅನಿವಾರ್ಯ. ಕೋವಿಡ್‌ ಅನಂತರದ ಜಗತ್ತು ಪ್ರತಿಯೊಂದರಲ್ಲೂ ನೈಜತೆ, ನಿಖರತೆ ಮತ್ತು ವಾಸ್ತವತೆಯನ್ನು ಹುಡುಕಲಾರಂಭಿಸಿರುವುದು ಇಲ್ಲಿ ಉಲ್ಲೇಖಾರ್ಹ! ಮಾತಲ್ಲಿ ನೈಜತೆ, ಕ್ರಿಯೆಯಲ್ಲಿ ನಿಖರತೆಯನ್ನು ಜನಮಾನಸ ಹೆಚ್ಚು ಇಷ್ಟಪಡುತ್ತದೆ. ಕೃತಕ ಆಕರ್ಷಣೆ, ಮಾತಲ್ಲೇ ಕಾಲ ಕಳೆಯುವ, ಕೆಲಸದಲ್ಲಿ ಹರಕೆ ಸಲ್ಲಿಸುವ ಮಂದಿ ಮೂಲೆಗುಂಪಾಗುತ್ತಿದ್ದಾರೆ! ಜನರಿಗೆ ಪಥ್ಯವಾಗದ್ದು ಜನಮಾನಸದಲ್ಲಿ ಉಳಿಯಲಸಾಧ್ಯ.

Advertisement

ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರು ಹೆಚ್ಚು, ಹೆಚ್ಚು ಜ್ಞಾನದಾಹಿಗಳಾಗಿ, ವಿವೇಕ ಸಂಪನ್ನತೆಯೊಂದಿಗೆ ಕೌಶಲವನ್ನು ಮೈಗೂಡಿಸುವ ಮೂಲಕ ಹೆಚ್ಚು ನಿಖರತೆ ಪಡೆಯುತ್ತಾರೆ. ವಾಸ್ತವತೆಯ ಸುಂದರ ಚಿತ್ರಣ ಅವರಲ್ಲಿ ಮೂಡುತ್ತದೆ.

ಬದುಕಿನ ಅರ್ಥ ಮನಗಂಡಲ್ಲಿ ಬದುಕು ಅರ್ಥ ಪೂರ್ಣವಾಗುತ್ತದೆ. ಶಿಕ್ಷಕರು ತಮ್ಮ ಭಾವೀ ಪೀಳಿಗೆ ಯನ್ನು ಸಶಕ್ತೀಕರಣಗೊಳಿಸಿ ಅವರು ತಮ್ಮ ಸ್ವ-ಪ್ರಜ್ಞೆ ಮತ್ತು ಶೋಧದಿಂದ ಸಂಪಾದಿಸಿದ ನೈಜ ಜ್ಞಾನ ಮತ್ತು ನೈಜ ಕ್ರಿಯೆಯೊಂದಿಗೆ ಕಾರ್ಯಪ್ರವೃತ್ತರಾದಲ್ಲಿ ಅರ್ಥಪೂರ್ಣ ಯಶಸ್ಸು ಅವರ ಪಾಲಾಗುವುದರಲ್ಲಿ ಎರಡು ಮಾತಿಲ್ಲ. ಜ್ಞಾನ ಮತ್ತು ಕ್ರಿಯೆ ಜತೆಜತೆಯಾಗಿ ಸಾಗುವ ಪ್ರಕ್ರಿಯೆಗಳು. ಶಿಕ್ಷಕರಿಗೆ ಈ ಒಳಗುಟ್ಟು ಸ್ಪಷ್ಟವಾಗಿ ತಿಳಿದಿರಬೇಕು. ಈ ಬಗ್ಗೆ ಶಿಕ್ಷಕರಿಗೆ ಅರಿವಿಲ್ಲ ದಿದ್ದರೆ ವಿದ್ಯಾರ್ಥಿಗಳನ್ನು ವಾಸ್ತವಕ್ಕೆ ಸಜ್ಜು ಗೊಳಿಸುವುದು ಅಸಾಧ್ಯ. ಈ ಎಲ್ಲ ವಿಚಾರಗಳ ಬಗ್ಗೆ ಏನೂ ಅರಿಯದ, ಸ್ವ-ಪ್ರಜ್ಞೆಯ ಅರಿವಿಲ್ಲದ, ಜ್ಞಾನ ಶೋಧ ಪ್ರಕ್ರಿಯೆ ತಿಳಿವಳಿಕೆಯಿಲ್ಲದ ವಿದ್ಯಾರ್ಥಿಗಳಿಗೆ ತಾವು ಊಹಿಸಲೂ ಅಸಾಧ್ಯವಾದ, ಕಂಡರಿಯದ ವಿಭಿನ್ನ ವಾಸ್ತವವನ್ನು ಸೃಷ್ಟಿಸಿ, ಪರಿಚಯಿಸುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಅನ್ನುವುದನ್ನು ಮರೆಯುವ ಹಾಗಿಲ್ಲ. ಬದುಕಿನಿಂದ ಬಾಳ್ವೆ ರೂಪಿಸುವ, ಪ್ರಕೃತಿಯಿಂದ ಸಂಸ್ಕಾರ ರೂಪಿಸುವ, ಶೋಧದಿಂದ ಜ್ಞಾನಗಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿ ಗಳನ್ನು ತರಬೇತಿಗೊಳಿಸುವ ಕಾಯಕಕ್ಕೆ ಶಿಕ್ಷಕರು ತಮ್ಮನ್ನು ತಾವು ಮುಡಿಪಾಗಿರಿಸಬೇಕು. ನಮ್ಮ ಶಿಕ್ಷಣ ಎತ್ತ ಸಾಗುತ್ತಿದೆ ಎಂದು ಪ್ರಶ್ನಿಸುವ ಮೊದಲು ಶಿಕ್ಷಕರು ಸ್ವಾರ್ಥರಹಿತವಾಗಿ, ಅಹಂ ಇಲ್ಲದೆ ಎಷ್ಟು ಪ್ರಾಮಾಣಿ ಕತೆ ಮತ್ತು ಬದ್ಧತೆಯಿಂದ ಜವಾಬ್ದಾರಿಯುತವಾಗಿ ಸೇವೆಗೈಯುತ್ತಿದ್ದೇವೆ ಅನ್ನುವ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಹಾಗಾದರೆ ಮಾತ್ರ, ಸುಂದರ ಅಕ್ಷರ ರೂಪದಲ್ಲಿರುವ “ರಾಷ್ಟ್ರೀಯ ಶಿಕ್ಷಣ ನೀತಿ’ ವಾಸ್ತವತೆಯ ಹೊಳಪಿನಿಂದ ಕಂಗೊಳಿಸಲು ಸಾಧ್ಯ, ಮಾತ್ರವಲ್ಲದೆ ನಮ್ಮ ದೇಶ ಪ್ರಗತಿಪಥದಲ್ಲಿ ಸದೃಢ ಹೆಜ್ಜೆ ಇಡಲು ಇದೊಂದು ಭದ್ರ ಬುನಾದಿಯೂ ಆಗಬಹುದು.

-ಡಾ| ಸುಧೀರ್‌ರಾಜ್‌ ಕೆ., ನಿಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next