ಬಾಗಲಕೋಟೆ: ಮಾಜಿ ಸಿಎಂ ಜಗದೀಶ ಶೆಟ್ಟರ ಅವರ ತಂದೆಯ ಕಾಲದಿಂದಲೂ ಜನಸಂಘದಿಂದ ಬಂದವರು. ಅವರೇಕೆ ನಮ್ಮ ಪಕ್ಷಕ್ಕೆ ಬಂದರು, ಏಕೆ ಮರಳಿ ಹೋದರು. ಅವರಿಗೆ ಯಾವ ಭಯವಿದೆ ಎಂಬುದು ಅವರೇ ಹೇಳಬೇಕು ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡಿ ಅಥವಾ ಇನ್ಯಾವುದೋ ಭಯದಿಂದ ಬಿಜೆಪಿ ಸೇರಿರಬಹುದು. ಇಡಿ, ಐಟಿ ಅಥವಾ ಮತ್ಯಾವ ಭಯ ಅವರಿಗೆ ಕಾಡಿದೆಯೋ ಗೊತ್ತಿಲ್ಲ ಎಂದರು. ಬಂದಿದ್ಯಾಕೋ, ಪುನಃ ಹೋಗಿದ್ಯಾಕೋ ಅಂತ ಅವರೇ ಜನತೆಯ ಮುಂದೆ ಹೇಳಬೇಕು. ಕೆಲವರು ಭಯದಿಂದ ಹೋಗಿರುತ್ತಾರೆ. ಇನ್ನೂ ಕೆಲವರು ಯಾವುದೇ ಭಯ ಇದ್ದರೂ ಹೋಗಲ್ಲ. ಶೆಟ್ಟರು, ಸ್ಪಷ್ಟವಾದ ನಿಲುವು ಹೇಳಿಲ್ಲ. ಎಲ್ಲವೂ ಅವರೇ ಸ್ಪಷ್ಟಪಡಿಸಬೇಕು ಎಂದರು.
ಲೋಕಸಭೆಗೆ ಅವಧಿಪೂರ್ವ ಚುನಾವಣೆ ನಡೆದರೂ ಎದುರಿಸಲು ಸಿದ್ಧರಿದ್ದೇವೆ. ಸಚಿವರಿಗೆ ಲೋಕಸಭೆ ಚುನಾವಣೆಗೆ ತಯಾರಿ ಮಾಡಿಕೊಳ್ಳಿ ಎಂದು ನಮ್ಮ ಪಕ್ಷದ ವರಿಷ್ಟರು ನನಗೆ ಹೇಳಿಲ್ಲ. ನಾನು ವಿಜಯಪುರಕ್ಕೆ ನಿಲ್ಲಬೇಕು ಅಂದುಕೊಂಡಿದ್ದೆ. ಅದು ಪಕ್ಷದ ಹಿರಿಯರ ತೀರ್ಮಾನಕ್ಕೆ ಬಿಟ್ಟಿದ್ದು ಎಂದು ತಿಳಿಸಿದರು.
ನನ್ನ ಮಗ ಚಿತ್ರದುರ್ಗ ಕ್ಷೇತ್ರದಿಂದ ಸ್ಪರ್ಧೆ ಬಯಸಿದ್ದಾನೆ. ಪಕ್ಷದ ಹೈಕಮಾಂಡ್‌ಗೆ ಟಿಕೆಟ್ ಕೂಡ ಹೇಳಿದ್ದಾನೆ. ಅದು ಅವನ ತೀರ್ಮಾನ. ಪಕ್ಷದ ಹಿರಿಯರು ಒಪ್ಪಿ, ಟಿಕೆಟ್ ಕೊಟ್ಟರೆ ಸ್ಪರ್ಧೆ ಮಾಡುತ್ತಾನೆ ಎಂದರು.
ನಾನು ಬಾಗಲಕೋಟೆ ಜಿಲ್ಲೆಯ ಉಸ್ತುವಾರಿ ಸಚಿವ. ಚಿತ್ರದುರ್ಗಕ್ಕೂ ನನಗೂ ಸಂಬಂಧವಿಲ್ಲ. ನಾನು ಬಾಗಲಕೋಟೆಗಿಂತ ಚಿತ್ರದುರ್ಗದಲ್ಲಿ ಹೆಚ್ಚು ಇರುತ್ತೇನೆ ಎಂಬ ಕಾಂಗ್ರೆಸ್ ಪಕ್ಷ ಅಧಿಕೃತ ಫೇಸಬುಕ್ ಫೇಜ್‌ನಲ್ಲಿ ಹಾಕಿರುವ ವಿಷಯ ನನಗೆ ಗೊತ್ತಿಲ್ಲ. ನೋಡಿದ ಬಳಿಕ ತಿಳಿಸುವೆ ಎಂದು ಹೇಳಿದರು.