Advertisement

ಸಮುದ್ರ ಉಪ್ಪಾಗಿದ್ದೇಕೆ?

06:00 AM Jun 14, 2018 | |

ಬಹಳ ಹಿಂದೆ ಸಮುದ್ರದ ನೀರು ಸಿಹಿಯಾಗಿತ್ತಂತೆ. ಜನರು ವಾರಕ್ಕೊಮ್ಮೆ ದೋಣಿ ಮೂಲಕ ಸಮುದ್ರ ದಾಟಿ ದ್ವೀಪವೊಂದರಲ್ಲಿದ್ದ ಉಪ್ಪಿನ ಬೆಟ್ಟದಿಂದ ಉಪ್ಪನ್ನು ಹೊತ್ತುತರುತ್ತಿದ್ದರು. ಒಮ್ಮೆ ಹಳ್ಳಿಯಲ್ಲಿ ಉಪ್ಪು ಖಾಲಿಯಾಗಿತ್ತು. ಎಂದಿನಂತೆ ಬೆಟ್ಟಕ್ಕೆ ಹೋಗೋಣಎಂದರೆ ವಿಪರೀತ ಗಾಳಿ. ಸಣ್ಣ ಪುಟ್ಟ ದೋಣಿಗಳು ಮುಳುಗುವ ಅಪಾಯ ಹೆಚ್ಚಾಗಿತ್ತು. ಹಳ್ಳಿಯ ಮುಖಂಡರು ಸಭೆ ಸೇರಿದರು. ಎಲ್ಲರೂ ಚರ್ಚಿಸಿ ಊರ ಹೊರಗೆ ಕಾಡಿನಲ್ಲಿದ್ದ ರಾಕ್ಷಸನ ಸಹಾಯ ಪಡೆಯುವ ತೀರ್ಮಾನಕ್ಕೆ ಬಂದರು. ಅಂಗಾಲೋ ಎಂಬ ಆ ರಾಕ್ಷಸ, ದೈತ್ಯದೇಹಿ. ಆತ ನಡೆದರೆ ಭೂಮಿ ನಡುಗುತ್ತಿತ್ತು. ಅವನ ಕೈಗಳು ನಾಲ್ಕೆçದು ತೆಂಗಿನ ಮರಗಳಷ್ಟು ಉದ್ದವಾಗಿದ್ದವು. ಆದರೆ ಅಂಗಾಲೋ ಮೃದು ಸ್ವಭಾವದವನಾಗಿದ್ದ. ಹಳ್ಳಿಯವರು ಸಹಾಯ ಕೇಳಿದಾಗ ಅವನು ಒಪ್ಪಿದ. ಅದರಂತೆ ಅಂಗಾಲೊ ತನ್ನ ಕಾಲನ್ನು ಸಮುದ್ರದಲ್ಲಿಟ್ಟ. ಊರವರು ಅವನ ಕಾಲನ್ನು ಸೇತುವೆಯಾಗಿ ಬಳಸಿಕೊಂಡರು.

Advertisement

ಅದೇ ಸಮಯದಲ್ಲಿ ಅವನ ಹೆಬ್ಬೆರಳು ಕೆಂಪಿರುವೆಯ ಗೂಡಿನ ಮೇಲೆ ಬಿತ್ತು. ಇರುವೆಗಳು ಅವನ ಕಾಲುಗಳ ಮೇಲೆ ಹರಿದಾಡತೊಡಗಿದವು. ಅಂಗಾಲೋಗೆ ಇರುವೆಯೆಂದರೆ ಎಲ್ಲಿಲ್ಲದ ಭಯ. ಆದರೆ ಕಾಲು ಅಲುಗಾಡಿಸಿದರೆ ಅದರ ಮೇಲೆ ಉಪ್ಪು ಸಾಗಿಸುತ್ತಿದ್ದ ಹಳ್ಳಿಗರು ಸಮುದ್ರ ಪಾಲಾಗುವುದು ಖಚಿತವಾಗಿತ್ತು. ಹೀಗಾಗಿ ಹಳ್ಳಿಗರು ದ್ವೀಪ ತಲುಪುವವರೆಗೆ ಕಾದು ನಂತರ ಕಾಲನ್ನು ನೀರಿನಲ್ಲಿ ಮುಳುಗಿಸಿದ. ಇತ್ತ ಹಳ್ಳಿಗರು ಉಪ್ಪು ತೆಗೆದುಕೊಂಡು ವಾಪಸ್‌ ಮರಳಲು ಅಂಗಾಲೋಗಾಗಿ ಕಾದರು. ಈ ಬಾರಿ ಹಳ್ಳಿಗರು ದೊಡ್ಡ ಪ್ರಮಾಣದಲ್ಲಿ ಉಪ್ಪನ್ನು ತಂದಿದ್ದರು. ಅಂಗಾಲೋ ಬಂದು ಕಾಲನ್ನಿಟ್ಟ. ಹಳ್ಳಿಗರು ಅದರ ಮೇಲೆ ನಡೆಯುತ್ತಿದ್ದಾಗ ಕೆಂಪಿರುವೆಗಳು ಮತ್ತೆ ದಾಳಿ ನಡೆಸಿದವು. ಅಂಗಾಲೋ ಕಾಲು ಕೊಡವಿದ. ಇರುವೆ ಜೊತೆಗೆ ಉಪ್ಪು ಸಮುದ್ರ ಪಾಲಾಯಿತು. ನೀರಿನಲ್ಲಿ ಬಿದ್ದ ಹಳ್ಳಿಗರನ್ನು ತಾನೇ ರಕ್ಷಣೆ ಮಾಡಿದ. ಉಪ್ಪು ನೀರಿಗೆ ಬಿದ್ದಿದ್ದರಿಂದ ಸಮುದ್ರ ಆವತ್ತಿನಿಂದ ಉಪ್ಪಾಯಿತು.

ಡಾ. ಕೆ. ಎಸ್‌. ಚೈತ್ರಾ

Advertisement

Udayavani is now on Telegram. Click here to join our channel and stay updated with the latest news.

Next