ಯುಎಸ್ ಸೇರಿದಂತೆ ಹಲವು ಪ್ರಮುಖ ದೇಶಗಳ ನಿರ್ಬಂಧದ ನಡುವೆಯೂ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಮೇಲೆ ಯುದ್ಧ ಘೋಷಣೆ ಮಾಡಿದ್ದಾರೆ. ಇದನ್ನು ಅವರು ‘ಮಿಲಿಟರಿ ಕಾರ್ಯಾಚರಣೆ’ ಎಂದು ಕರೆದಿದ್ದಾರೆ. ಈಗಾಗಲೇ ಉಕ್ರೇನ್ ಮೇಲೆ ರಷ್ಯಾ ಯುದ್ದ ವಿಮಾನಗಳು ದಾಳಿ ಆರಂಭಿಸಿದೆ.
ಹಾಗಾದರೆ ತನ್ನ ನೆರೆಯ ದೇಶ ಉಕ್ರೇನ್ ಮೇಲೆ ರಷ್ಯಾ ಯಾಕೆ ಹಗೆತನ ಸಾಧಿಸುತ್ತಿದೆ? ಉಕ್ರೇನ್ ಜಾಗವನ್ನು ವಶಪಡಿಸಿಕೊಳ್ಳಲು ರಷ್ಯಾ ಯಾಕಿಷ್ಟು ಹವಣಿಸುತ್ತಿದೆ ಎನ್ನುವುದಕ್ಕೆ ಇಲ್ಲಿದೆ ಉತ್ತರ.
2021ರ ಜುಲೈನಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಕ್ರೆಮ್ಲಿನ್ ವೆಬ್‌ಸೈಟ್ ಗಾಗಿ ಬರೆದ ಲೇಖನದಲ್ಲಿ ಉಕ್ರೇನ್‌ನಲ್ಲಿ ರಷ್ಯಾ ಏನು ಬಯಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳ ಬಹುದು.
ಇದನ್ನೂ ಓದಿ:ರಷ್ಯಾ-ಉಕ್ರೇನ್ ಸಮರ: ಮಾರುಕಟ್ಟೆ ಭಾರೀ ಕುಸಿತ; ಬಿಎಸ್ಇ ಕನಿಷ್ಠ ಮಟ್ಟಕ್ಕೆ
ಇದರಲ್ಲಿ ಅಧ್ಯಕ್ಷ ಪುಟಿನ್ ರಷ್ಯನ್ನರು ಮತ್ತು ಉಕ್ರೇನಿಯನ್ನರನ್ನು “ಒಂದು ರಾಷ್ಟ್ರ” ಎಂದು ವಿವರಿಸಿದರು. 1991ರ ಡಿಸೆಂಬರ್ ರಲ್ಲಿ ಸೋವಿಯತ್ ಒಕ್ಕೂಟದ (ಯುಎಸ್ಎಸ್ಆರ್) ಪತನವನ್ನು “ಐತಿಹಾಸಿಕ ರಷ್ಯಾದ ವಿಘಟನೆ” ಎಂದು ಘೋಷಿಸಿದರು. ಉಕ್ರೇನ್ ನ ನಾಯಕರು “ರಷ್ಯನ್ ವಿರೋಧಿ ಯೋಜನೆ” ನಡೆಸುತ್ತಿದ್ದಾರೆ ಎಂದು ಪುಟಿನ್ ನಂಬಿದ್ದಾರೆ.
ಏಷ್ಯಾದಾದ್ಯಂತ ಹರಡಿರುವ ರಷ್ಯಾವನ್ನು ಹೊರತೆಗೆದರೆ ಉಕ್ರೇನ್ ಯುರೋಪಿನ ಅತಿದೊಡ್ಡ ದೇಶವಾಗಿದೆ. ವ್ಲಾಡಿಮಿರ್ ಪುಟಿನ್ ನೇತೃತ್ವದ ರಷ್ಯಾವು ಉಕ್ರೇನ್ ಈ ಹಿಂದಿನಿಂದಲೂ ತನ್ನ ಮೇಲೆ ಕಣ್ಣಿಟ್ಟಿದೆ. ಈಗಾಗಲೇ 2014 ರಲ್ಲಿ ಉಕ್ರೇನ್‌ನ ಪರ್ಯಾಯ ದ್ವೀಪವಾದ ಕ್ರೈಮಿಯಾವನ್ನು ರಷ್ಯಾ ಸ್ವಾಧೀನಪಡಿಸಿಕೊಂಡಿದೆ.
ದೇಶದ ದಕ್ಷಿಣ ಭಾಗದಲ್ಲಿ ರಷ್ಯಾ ಮಾತನಾಡುವ ಪ್ರತ್ಯೇಕತಾವಾದಿಗಳ ರೂಪದಲ್ಲಿ ಉಕ್ರೇನ್ ತನ್ನೊಳಗೆ ಆತಂಕ ಹೊಂದಿದೆ. ಇದರರ್ಥ ರಷ್ಯಾವು ಉಕ್ರೇನ್ ನಲ್ಲಿ ತನಗೆ ಆಂತರಿಕ ಬೆಂಬಲವನ್ನು ಹೊಂದಿದೆ.
ವಿವಾದದ ಮೂಲ ನ್ಯಾಟೋ
ತನ್ನ ನೆರೆಹೊರೆಯಲ್ಲಿ ಉತ್ತರ ಅಟ್ಲಾಂಟಿಕ್ ಒಪ್ಪಂದದ ಸಂಘಟನೆಯ (ನ್ಯಾಟೋ) ವಿಸ್ತರಣೆಗೆ ರಷ್ಯಾದ ಅಸಮ್ಮತಿಯೇ ಪ್ರಸ್ತುತ ಉಕ್ರೇನ್ ಬಿಕ್ಕಟ್ಟಿನ ಮೂಲವಾಗಿದೆ. ಈ ಪ್ರದೇಶದಲ್ಲಿ 1990 ರ ದಶಕದ ಉತ್ತರಾರ್ಧದಿಂದ ನ್ಯಾಟೋ ಕ್ಷಿಪ್ರ ವಿಸ್ತರಣೆಯಿಂದ ರಷ್ಯಾ ಬೆದರಿಕೆಯನ್ನು ಅನುಭವಿಸುತ್ತಿದೆ.
ಇದನ್ನೂ ಓದಿ:ರಷ್ಯಾದ 5 ವಿಮಾನಗಳು, ಹೆಲಿಕ್ಯಾಪ್ಟರ್ ಹೊಡೆದುರುಳಿಸಿದ ಉಕ್ರೇನ್
ಏನಿದು ನ್ಯಾಟೋ
ನ್ಯಾಟೋ (NATO) ಎಂದರೆ ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್. ಎರಡನೆಯ ಮಹಾಯುದ್ಧದ ನಂತರ ಇದನ್ನು ಸ್ಥಾಪಿಸಲಾಯಿತು. ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್ಡಮ್, ಬೆಲ್ಜಿಯಂ, ಕೆನಡಾ, ಡೆನ್ಮಾರ್ಕ್, ಫ್ರಾನ್ಸ್, ಐಸ್ಲ್ಯಾಂಡ್, ಇಟಲಿ, ಲಕ್ಸೆಂಬರ್ಗ್, ನೆದರ್ಲ್ಯಾಂಡ್ಸ್, ನಾರ್ವೆ, ಪೋರ್ಚುಗಲ್, ಹಂಗೇರಿ, ಜೆಕ್ ರಿಪಬ್ಲಿಕ್, ಪೋಲೆಂಡ್, ಬಲ್ಗೇರಿಯಾ, ಎಸ್ಟೋನಿಯಾ, ಲಾಟ್ವಿಯಾ, ಲಿಥುವೇನಿಯಾ, ರೊಮೇನಿಯಾ, ಸ್ಲೊವೇನಿಯಾ, ಅಲ್ಬೇನಿಯಾ, ಕ್ರೊಯೇಷಿಯಾ ದೇಶಗಳು ಇದರಲ್ಲಿವೆ.
ಯುದ್ಧ ಮತ್ತು ಆರ್ಥಿಕ ನಿರ್ಬಂಧಗಳ ಅಪಾಯದ ನಡೆ ಯಾಕೆ?
ರಷ್ಯಾದ ಸರ್ಕಾರದ ಚುಕ್ಕಾಣಿ ಹಿಡಿದ ತನ್ನ ಸಂಪೂರ್ಣ ರಾಜಕೀಯ ವೃತ್ತಿಜೀವನದಲ್ಲಿ ವ್ಲಾಡಿಮಿರ್ ಪುಟಿನ್ ನ್ಯಾಟೋ ವಿಸ್ತರಣೆಯನ್ನು ವಿರೋಧಿಸಿದ್ದಾರೆ. ನಿರ್ದಿಷ್ಟವಾಗಿ ಯುಎಸ್ ಪ್ರಾಬಲ್ಯದ ನ್ಯಾಟೋ ಮತ್ತು ಯುರೋಪಿಯನ್ ಒಕ್ಕೂಟದ ಕಡೆಗಿನ ಉಕ್ರೇನ್ ಹೆಜ್ಜೆಗಳನ್ನು ಪುಟಿನ್ ವಿರೋಧಿಸುತ್ತಿದ್ದಾರೆ.
ಉಕ್ರೇನ್ ದೇಶವನ್ನು ತನ್ನ ತೆಕ್ಕೆಗೆ ತರಲು ನ್ಯಾಟೋದ ಪ್ರಯತ್ನ ನಡೆಸುತ್ತಿದೆ. 30 ದೇಶಗಳ ಮಿಲಿಟರಿ ಒಕ್ಕೂಟವಾದ ನ್ಯಾಟೋಗೆ ಉಕ್ರೇನ್ ಸೇರುವುದಿಲ್ಲ ಎಂದು ರಷ್ಯಾ ಸ್ಪಷ್ಟ ಭರವಸೆ ಬಯಸಿದೆ ಎನ್ನುತ್ತಾರೆ ಪುಟಿನ್
ಉಕ್ರೇನ್ ನಲ್ಲಿ ರಷ್ಯಾ: ಪ್ರತ್ಯೇಕತಾವಾದ
ಯುಎಸ್ಎಸ್ಆರ್ ಮಾಜಿ ಸದಸ್ಯ ಉಕ್ರೇನ್ ರಷ್ಯಾದೊಂದಿಗೆ ಆಳವಾದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಹೊಂದಿದೆ. ಆದರೆ ಆರ್ಥಿಕತೆ ಮತ್ತು ಭೌಗೋಳಿಕ ರಾಜಕೀಯದಲ್ಲಿ, ಉಕ್ರೇನ್ ಹೆಚ್ಚು ಅಭಿವೃದ್ಧಿ ಹೊಂದಿದ ಪಶ್ಚಿಮದ (ಯೂರೋಪ್) ಕಡೆಗೆ ತಿರುಗಲು ಸಿದ್ಧವಾಗಿದೆ. ಇದು ರಷ್ಯಾ ಅಸಮಾಧಾನಕ್ಕೆ ಕಾರಣವಾಗಿದೆ. ರಷ್ಯನ್ ಭಾಷೆ ಮಾತನಾಡುವ ಹೆಚ್ಚಿನ ಸಂಖ್ಯೆಯ ಉಕ್ರೇನಿಯನ್ ಜನರು ರಷ್ಯಾಕ್ಕಾಗಿ ಮೃದು ಧೋರಣೆ ಹೊಂದಿದ್ದಾರೆ ಎಂದು ಹೇಳಲಾಗುತ್ತದೆ. ಪುಟಿನ್ ಈ ಆಂತರಿಕ ಬೆಂಬಲದ ಆಧಾರದ ಮೇಲೆ ಬಹಳಷ್ಟು ವಿಶ್ವಾಸ ಹೊಂದಿದ್ದಾರೆ.
ಪುಟಿನ್ ಅವರ ಮಾತಿನ ಪ್ರಕಾರ, ರಷ್ಯಾ ಬಹಳ ಸಮಯದವರೆಗೆ ತಾಳ್ಮೆಯಿಂದಿತ್ತು. 2014 ರಲ್ಲಿ ಉಕ್ರೇನಿಯನ್ನರು ರಷ್ಯಾದ ಪರವಾಗಿದ್ದ ತಮ್ಮ ಅಧ್ಯಕ್ಷರನ್ನು ಪದಚ್ಯುತಗೊಳಿಸಿದಾಗ ರಷ್ಯಾ ಕ್ಷಣಕಾಲ ತಾಳ್ಮೆ ಕಳೆದುಕೊಂಡಿತ್ತು. ಕ್ರೈಮಿಯಾವನ್ನು ವಶಪಡಿಸಿಕೊಳ್ಳುವ ಮೂಲಕ ರಷ್ಯಾ ಪ್ರತೀಕಾರ ತೀರಿಸಿಕೊಂಡಿತ್ತು. ಪೂರ್ವ ಉಕ್ರೇನ್‌ನಲ್ಲಿ ದೊಡ್ಡ ಪ್ರಮಾಣದ ಪ್ರದೇಶವನ್ನು ವಶಪಡಿಸಿಕೊಂಡಿದ್ದ ಪ್ರತ್ಯೇಕತಾವಾದಿಗಳನ್ನು ರಷ್ಯಾ ಬೆಂಬಲಿಸಿತು. ಬಂಡುಕೋರರು ಮತ್ತು ಉಕ್ರೇನಿಯನ್ ಮಿಲಿಟರಿ ನಡುವಿನ ಸಂಘರ್ಷದಲ್ಲಿ 14,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಮಿನ್ಸ್ಕ್ ಒಪ್ಪಂದ
ಮಿನ್ಸ್ಕ್ ಒಪ್ಪಂದವನ್ನು (ಬೆಲಾರಸ್ ನ ರಾಜಧಾನಿಯ ಹೆಸರಿನ ಒಪ್ಪಂದ) 2015 ರಲ್ಲಿ ಹಗೆತನವನ್ನು ಕೊನೆಗೊಳಿಸಲು ಮತ್ತು ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳಿಂದ ನಿಯಂತ್ರಿಸಲ್ಪಡುವ ಪ್ರದೇಶಗಳಲ್ಲಿ ಆಡಳಿತದಲ್ಲಿ ಸ್ವಾಯತ್ತತೆಯನ್ನು ನೀಡಲು ಸಹಿ ಹಾಕಲಾಯಿತು. ಆದರೆ ಮಿನ್ಸ್ಕ್ ಒಪ್ಪಂದವನ್ನು ಎಂದಿಗೂ ಜಾರಿಗೆ ತರಲಾಗಿಲ್ಲ ಎಂದು ರಷ್ಯಾ ದೂರಿದೆ.
ನ್ಯಾಟೋದಿಂದ ರಷ್ಯಾ ಏನು ಬಯಸುತ್ತಿದೆ?
ಹೆಚ್ಚುವರಿಯಾಗಿ ನ್ಯಾಟೋ ಈ ಪ್ರದೇಶದಲ್ಲಿ ಮತ್ತಷ್ಟು ವಿಸ್ತರಿಸುವುದಿಲ್ಲ ಎಂದು ಯೂರೋಪ್ ನಿಂದ ಕಾನೂನು ಬದ್ಧವಾಗಿ ಒಪ್ಪಂದವನ್ನು ರಷ್ಯಾ ಬಯಸುತ್ತದೆ. “ನಮಗೆ ಉಕ್ರೇನ್ ಎಂದಿಗೂ ನ್ಯಾಟೋ ಸದಸ್ಯನಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳುವುದು ಸಂಪೂರ್ಣವಾಗಿ ಕಡ್ಡಾಯವಾಗಿದೆ” ಎಂದು ರಷ್ಯಾ ಹೇಳಿದೆ.
ಯುರೋಪ್‌ನಲ್ಲಿ 1997 ರ ಪೂರ್ವದ ಮಿಲಿಟರಿ ಸ್ಥಿತಿಯನ್ನು ನ್ಯಾಟೋ ಮರುಸ್ಥಾಪಿಸಬೇಕು ಎಂಬ ರಷ್ಯಾದ ಬೇಡಿಕೆಯ ಮತ್ತೊಂದು ಅಂಶವಾಗಿದೆ. ಇದರರ್ಥ ಇಷ್ಟೆಲ್ಲಾ ವರ್ಷಗಳಲ್ಲಿ ನ್ಯಾಟೋ ರಚಿಸಿದ ಮಿಲಿಟರಿ ಮೂಲಸೌಕರ್ಯವನ್ನು ಕಿತ್ತುಹಾಕುವುದಾಗಿದೆ.
ನ್ಯಾಟೋ ಒಕ್ಕೂಟವು ರಷ್ಯಾದ ಗಡಿಗಳ ಬಳಿ ಶಸ್ತ್ರಾಸ್ತ್ರಗಳನ್ನು ನಿಯೋಜಿಸಬಾರದು ಎಂದು ರಷ್ಯಾ ಒತ್ತಾಯಿಸುತ್ತದೆ. ಇದರರ್ಥ ಮಧ್ಯ ಯುರೋಪ್, ಪೂರ್ವ ಯುರೋಪ್ ಮತ್ತು ಬಾಲ್ಟಿಕ್ ಪ್ರದೇಶದಿಂದ ನ್ಯಾಟೋ ಮಿಲಿಟರಿ ಶಕ್ತಿಯಾಗಿ ಹಿಂದೆ ಹೋಗಬೇಕು.