ಮುಂಬೈ: ಬರೋಬ್ಬರಿ ಆರು ವರ್ಷಗಳ ಬಳಿಕ ಐಪಿಎಲ್ ಪಂದ್ಯವಾಡಿದ ಪಂಜಾಬ್ ಕಿಂಗ್ಸ್ ಆಲ್ ರೌಂಡರ್ ರಿಷಿ ಧವನ್ ಎಲ್ಲರಿಗೂ ಅಚ್ಚರಿ ಮೂಡಿಸಿದರು. ಅದಕ್ಕೆ ಕಾರಣ ರಿಷಿ ಧವನ್ ಬೌಲಿಂಗ್ ವೇಳೆ ಫೇಸ್ ಶೀಲ್ಡ್ ಧರಿಸಿದ್ದು.
ಫೀಲ್ಡಿಂಗ್ ವೇಳೆ ಮಾಮೂಲಿಯಾಗಿಯೇ ಇದ್ದ ರಿಷಿ ಧವನ್ ಬೌಲಿಂಗ್ ಮಾಡುವಾಗ ಮಾತ್ರ ಫೇಸ್ ಶೀಲ್ಡ್ ಧರಿಸಿದ್ದರು. ಇದು ಎಲ್ಲರ ಅಚ್ಚರಿಗೆ ಕಾರಣವಾಯಿತು.
ರಣಜಿ ಟ್ರೋಫಿ ಕ್ರಿಕೆಟ್ ಆಡುವಾಗ ರಿಷಿ ಧವನ್ ಮುಖಕ್ಕೆ ಗಾಯವಾಗಿತ್ತು. ಇದರಿಂದ ಅವರು ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಹೀಗಾಗಿ ರಿಷಿ ಧವನ್ ಐಪಿಎಲ್ ಪಂದ್ಯದ ವೇಳೆ ಫೇಸ್ ಶೀಲ್ಡ್ ಬಳಸಿದ್ದಾರೆ ಎಂದು ವರದಿಯಾಗಿದೆ.
ದೇಶಿಯ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ತೋರಿದ ರಿಷಿ ಧವನ್ ರನ್ನು ಪಂಜಾಬ್ ಕಿಂಗ್ಸ್ ತಂಡ 55 ಲಕ್ಷ ರೂ ಬೆಲೆಗೆ ಖರೀದಿ ಮಾಡಿತ್ತು. ಅವರು ತಮ್ಮ ಕೊನೆಯ ಪಂದ್ಯವನ್ನು 2016ರ ಮೇ 21ರಂದು ಆಡಿದ್ದರು. ಅಂದು ಕೂಡ ಪಂಜಾಬ್ ತಂಡದ ಸದಸ್ಯನಾಗಿದ್ದರು. ಈ ಪಂದ್ಯ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ವಿರುದ್ಧ ವಿಶಾಖಪಟ್ಟಣಲ್ಲಿ ನಡೆದಿತ್ತು.
ಇದನ್ನೂ ಓದಿ:ರಾಜಸ್ಥಾನ್ ತಂಡದ ಕಪ್ಪು ಲುಂಗಿ ಡ್ಯಾನ್ಸ್!
ಪಂಜಾಬ್ ಕಿಂಗ್ಸ್ ಚೆನ್ನೈ ವಿರುದ್ಧದ ಪಂದ್ಯಕ್ಕೆ 3 ಪರಿವರ್ತನೆ ಮಾಡಿಕೊಂಡಿತು. ಶಾರೂಖ್ ಖಾನ್, ನಥನ್ ಎಲ್ಲಿಸ್ ಮತ್ತು ವೈಭವ್ ಅರೋರ ಅವರನ್ನು ಕೈಬಿಟ್ಟು ಭನುಕ ರಾಜಪಕ್ಸ, ಸಂದೀಪ್ ಶರ್ಮ ಮತ್ತು ರಿಷಿ ಧವನ್ ಅವರನ್ನು ಆಡಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಶಿಖರ್ ಧವನ್ ಬ್ಯಾಟಿಂಗ್ ಸಹಾಯದಿಂದ ನಾಲ್ಕು ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿದರೆ, ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 176 ರನ್ ಗಳಷ್ಟೇ ಗಳಿಸಿತು.