Advertisement

ಮೊಬೈಲೇಕೆ ಕನಸಲ್ಲಿ ಬರೋಲ್ಲ?

06:00 AM Jul 24, 2018 | |

ನಾವು ಯಾವುದರ ಬಗ್ಗೆ ಜಾಸ್ತಿ ಯೋಚಿಸುತ್ತೇವೋ, ಅದು ಕನಸಿನಲ್ಲಿ ಬರುತ್ತದೆ ಅಂತ ಹೇಳುತ್ತಾರೆ. ಹಾಗಾದ್ರೆ, ದಿನವಿಡೀ ಮೊಬೈಲ್‌ನಲ್ಲಿ ಮುಳುಗಿ ಹೋದರೂ, ಕನಸಿನಲ್ಲಿ ಮೊಬೈಲ್‌ ಕಾಣದಿರುವುದು ಆಶ್ಚರ್ಯವಲ್ಲವೆ?

Advertisement

ನಮ್ಮಲ್ಲಿ ಅನೇಕರಿಗೆ ಬೆಳಗೆದ್ದು ಕಣ್ಣು ಬಿಡುವ ಮೊದಲೇ ಮೊಬೈಲ್‌ ಕೈನಲ್ಲಿರಬೇಕು. ಅರೆ ತೆರೆದ ಕಣ್ಣಿನಿಂದಲೇ ಮೊಬೈಲ್‌ ಸ್ಕ್ರೀನ್‌ ದಿಟ್ಟಿಸುತ್ತಾ, ಮತ್ತಷ್ಟು ಹೊತ್ತು ಹಾಸಿಗೆಯಲ್ಲಿ ಹೊರಳುತ್ತಿರುತ್ತೇವೆ. ರಾತ್ರಿ ಮಲಗುವಾಗಲೂ ಅಷ್ಟೇ, ನಿದ್ದೆ ಬಂದು ಕಣ್ಣು ತೂಕಡಿಸಿದರೂ ಮೊಬೈಲ್‌ ಕೆಳಗಿಡುವುದಿಲ್ಲ. ಹೀಗೆ, ಮಲಗುವ ಮುಂಚೆ, ಎದ್ದ ನಂತರ ನಮ್ಮನ್ನು ಆಕ್ರಮಿಸಿಕೊಳ್ಳುವ ಮೊಬೈಲ್‌ ಯಾವತ್ತೂ ನಮ್ಮ ಕನಸಿನಲ್ಲಿ ಕಾಣಿಸಿಕೊಳ್ಳುವುದಿಲ್ಲವಂತೆ! 

   “ಹೌದಾ?’ ಅಂತ ಆಶ್ಚರ್ಯಪಟ್ಟುಕೊಳ್ಳಬೇಡಿ. ನಿಮ್ಮ ಕನಸಿನಲ್ಲಿ ಮೊಬೈಲ್‌, ಲ್ಯಾಪ್‌ಟಾಪ್‌ ಅಥವಾ ನೀವು ಬಳಸುವ ಗ್ಯಾಜೆಟ್‌ಗಳು ಕಾಣಿಸಿಕೊಂಡಿವೆಯಾ? “ಬಹುತೇಕರಿಗೆ ಕಾಣಿಸಿಕೊಳ್ಳುವುದಿಲ್ಲ’ ಎನ್ನುವ ಟ್ವೀಟ್‌ ಒಂದು ವೈರಲ್‌ ಆಗಿದ್ದು, ಹಲವರು- “ಹೌದೌದು ನಮ್ಮ ಕನಸಿನಲ್ಲಿಯೂ ಮೊಬೈಲ್‌ ಕಾಣಿಸಿಲ್ಲ’ ಅಂತ ಹೇಳಿದ್ದಾರೆ.

  ನಾವು ಯಾವುದರ ಬಗ್ಗೆ ಜಾಸ್ತಿ ಯೋಚಿಸುತ್ತೇವೋ, ಅದು ಕನಸಿನಲ್ಲಿ ಬರುತ್ತದೆ ಅಂತ ಹೇಳುತ್ತಾರೆ. ಹಾಗಾಗಿ, ರಾತ್ರಿ ಮಲಗುವ ಮುನ್ನ ಒಳ್ಳೆಯದನ್ನೇ ಯೋಚಿಸಬೇಕು ಅನ್ನುವುದನ್ನೂ ಕೇಳಿದ್ದೇವೆ. ಕನಸುಗಳು ಯಾಕೆ ಬೀಳುತ್ತವೆ, ಕನಸಿನ ಅರ್ಥಗಳೇನು… ಇತ್ಯಾದಿಗಳ ಬಗ್ಗೆ ನಡೆದ ಸಂಶೋಧನೆಗಳು ಕೂಡ, ಒಳ ಮನಸ್ಸಿನ ಭಾವನೆ, ಕಲ್ಪನೆ, ಭಯ, ಆಲೋಚನೆಗಳು ಕನಸಿನ ರೂಪದಲ್ಲಿ ಕಾಣಿಸುತ್ತವೆ ಅಂತ ಹೇಳಿವೆ. ಹಾಗಾದ್ರೆ, ದಿನವಿಡೀ ಮೊಬೈಲ್‌ನಲ್ಲಿ ಮುಳುಗಿ ಹೋದರೂ, ಕನಸಿನಲ್ಲಿ ಮೊಬೈಲ್‌ ಕಾಣದಿರುವುದು ಆಶ್ಚರ್ಯವಲ್ಲವೆ?

  “ವೈ ವಿ ಡ್ರೀಮ್‌’ ಪುಸ್ತಕದ ಲೇಖಕಿ ಆಲಿಸ್‌ ರಾಬ್‌ ಹೇಳುವ ಪ್ರಕಾರ, “ನಿತ್ಯ ಜೀವನದ ಭಯ, ಒತ್ತಡಗಳನ್ನು ಕನಸುಗಳು ಸೂಚ್ಯವಾಗಿ ತಿಳಿಸುತ್ತವಂತೆ. ಕುತೂಹಲಕಾರಿಯಾದ ಇನ್ನೊಂದು ಅಂಶವೆಂದರೆ, ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರಿಗೆ ಬೀಳುತ್ತಿದ್ದ ಕನಸುಗಳೇ, ಈಗ ನಮಗೆ ಬೀಳುತ್ತಿರುವುದಂತೆ. ಅಂದರೆ, ಕಾಲ ಬದಲಾದರೂ ಕನಸು ಬದಲಾಗಿಲ್ಲ! ಮೊಬೈಲ್‌, ಕಂಪ್ಯೂಟರ್‌ ಲ್ಯಾಪ್‌ಟಾಪ್‌ಗ್ಳು ಆಧುನಿಕ ಸಂಶೋಧನೆಗಳಾಗಿರುವುದರಿಂದ, ಅವುಗಳಿಗೆ ನಮ್ಮ ಕನಸಿನಲ್ಲಿ ಜಾಗ ಇಲ್ಲ’ ಎನ್ನುತ್ತಾರೆ ಲೇಖಕಿ. 

Advertisement

   ಈ ಕುರಿತು ಇನ್ನೊಂದು ಸಮೀಕ್ಷೆ ನಡೆದಿದ್ದು, ಶೇ. 3.5ರಷ್ಟು ಮಹಿಳೆಯರು ಹಾಗೂ ಶೇ. 2.6 ಪುರುಷರು- ನಮ್ಮ ಕನಸುಗಳಲ್ಲಿ ಮೊಬೈಲ್‌ ಬರುತ್ತಿರುತ್ತದೆ ಅಂತ ಹೇಳಿದ್ದಾರೆ. ಇದಕ್ಕೆ ನೀವೇನಂತೀರಾ? ನಿಮ್ಮ ಕನಸಿನಲ್ಲಿ ಮೊಬೈಲ್‌ ಕಾಣಿಸಿದೆಯಾ?

ಬದುಕಿನ ಕನಸಿಗೆ ಮೊಬೈಲ್‌ ಬ್ರೇಕ್‌!
ಕನಸಿನಲ್ಲಿ ಮೊಬೈಲ್‌ ಕಾಣಿಸದೇ ಇರುವುದು ನಿಜವಿರಬಹುದೇನೋ. ಆದರೆ, ಬದುಕಿನ ಅನೇಕ ಕನಸುಗಳನ್ನು ಮೊಬೈಲ್‌ ಕಮರಿಸುತ್ತಿರುವುದನ್ನು ಅಲ್ಲಗಳೆಯುವಂತಿಲ್ಲ.  

1. ಗಂಡ- ಹೆಂಡತಿ ಸಂಬಂಧದಲ್ಲಿ ಮೊಬೈಲ್‌ ವಿಲನ್‌ ಆಗಿ ಕಾಡುತ್ತಿರುತ್ತದೆ. “ಯಾವಾಗಲೂ ಮೊಬೈಲ್‌ನಲ್ಲೇ ಮುಳುಗಿರುತ್ತಾರೆ’ ಅನ್ನೋ ಕಂಪ್ಲೇಂಟ್‌ ಸರ್ವೇಸಾಮಾನ್ಯ. ಫೇಸ್‌ಬುಕ್‌ ವಿಷಯದಲ್ಲಿ ಜಗಳವಾಗಿ, ಗಂಡ- ಹೆಂಡತಿ ಆತ್ಮಹತ್ಯೆ ಮಾಡಿಕೊಂಡು ಘಟನೆಯೂ ಇತ್ತೀಚೆಗೆ ನಡೆದಿದೆ.

2.  ವಾಹನ ಚಲಾಯಿಸುವಾಗ ಮೊಬೈಲ್‌ ಬಳಸಿ, ರಸ್ತೆಯಲ್ಲೇ ಜೀವ ಚೆಲ್ಲಿದವರಿದ್ದಾರೆ. 

3. ಓದುವ ಸಮಯವನ್ನು ವ್ಯರ್ಥ ಮಾಡುತ್ತಾ, ಮೊಬೈಲ್‌ನಲ್ಲಿ ಮುಳುಗಿ, ಭವಿಷ್ಯದ ಕನಸನ್ನು ಕೈಯ್ನಾರೆ ಚಿವುಟಿಕೊಳ್ಳುತ್ತಿರುವವರ ದೊಡ್ಡ ಸಮೂಹವೇ ಇದೆ.

4. ಮೊಬೈಲ್‌ ಒಂದು ಗೀಳಾಗಿ (ಅಡಿಕ್ಷನ್‌) ಯುವ ಜನತೆ ಬೇರೆ ಬೇರೆ ರೀತಿಯ ಮಾನಸಿಕ ತೊಂದರೆಗಳಿಗೆ ಸಿಲುಕುತ್ತಿದ್ದಾರೆ.

5. ಆಟ, ಓಟ, ಪಾಠವನ್ನು ಎಂಜಾಯ್‌ ಮಾಡಬೇಕಾದ ಸಣ್ಣ ಮಕ್ಕಳು ಮೊಬೈಲ್‌ ದಾಸರಾಗಿ, ಹೊರಾಂಗಣ ಆಟೋಟಗಳಿಂದ ವಂಚಿತರಾಗುತ್ತಿದ್ದಾರೆ. 

6. ಕಣ್ಣು, ಕಿವಿ, ಬಾಯಿ ಎಲ್ಲ ಇದ್ದರೂ, ಯಾವುದನ್ನೋ ನೋಡದ, ಕೇಳದ, ಮಾತಾಡದಂಥ ವೈಕಲ್ಯಕ್ಕೆ ಮೊಬೈಲ್‌ ನಮ್ಮನ್ನು ತಂದಿಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next