ನೀನೆಷ್ಟು ಸ್ವಾರ್ಥಿ?… ಒಮ್ಮೆ ಎಲ್ಲವನ್ನೂ ಕೊಟ್ಟು ಹೇಳದೆ ಕೇಳದೆ, ಸಣ್ಣ ದೊಂದು ಸೂಚನೆಯನ್ನೂ ನೀಡದೆ ಅದನ್ನು ಕಿತ್ತುಕೊಳ್ಳುತ್ತೀಯ. ಮತ್ತೆ ಕೆಲವೊಮ್ಮೆ, ಈ ಜಗತ್ತಿನಲ್ಲೇ ಯಾರಿಗೂ ಸಿಗಲಾರದು ಎಂಬಷ್ಟು ಸಂತಸವನ್ನು ನನಗೆ ಮಾತ್ರ ನೀಡುತ್ತೀಯ. ಖಂಡಿತ! ನನ್ನ ಲೈಫಿನಲ್ಲಿ ಆದದ್ದು ಕೂಡಾ ಅದೇ. ನಾನೇನು ತಪ್ಪು ಮಾಡಿದ್ದೆನೋ ತಿಳಿಯದು. ಮನದ ಮೂಲೆಯಲ್ಲಿ ಏನೋ ಒಂಥರಾ ದುಗುಡ, ಎಲ್ಲವನ್ನೂ ಎಲ್ಲರನ್ನೂ, ದೂರ ಮಾಡಿಕೊಂಡು ಹೊರಡಬೇಕು ಎಂಬ ಹುಚ್ಚು ಆಸೆ. ಮನಸಿನಲ್ಲಿ ಗೀಚಿದ ಭಾವನೆಗಳೆಂಬ ಅಕ್ಷರಗಳನ್ನು ಅಳಿಸಿ ಸುಮ್ಮನೆ ಎದ್ದು ನಡೆಯುವಾಸೆ. ಯಾರಿಗೆ ಯಾರೂ ಆಗದ ಈ ಕಾಲದಲ್ಲಿ, ಎಲ್ಲರೂ ನನ್ನವರೇ ಎಂದು ಹಚ್ಚಿಕೊಂಡಿದ್ದು ನನ್ನ ತಪ್ಪೇ? ನನ್ನ ಮುಗª ಮನಸಿನ ಸುಪ್ತ ಭಾವನೆಗಳನ್ನ ಬಿಟ್ಟು ಹೋಗುವವರಾದರೂ ಹೇಗೆ ತಿಳಿದಾರು ಅಲ್ಲವೇ? ನನ್ನ ಪಾಲಿಗೆ ನೀನು ಬರಿಯ ಗೆಳತಿ ಆಗಿರಲಿಲ್ಲ. ನನ್ನ ಧೈರ್ಯವಾಗಿದ್ದೆ. ಸಿಕ್ಕಾಪಟ್ಟೆ ಹೊಗಳ್ತಾ ಇದಾನೆ ಅಂತ ನೀನು ಅಂದುಕೊಂಡರೂ ಪರವಾಗಿಲ್ಲ. ನನ್ನ ಪ್ರಕಾರ, ನೀನು ನನ್ನ ಪಾಲಿನ ಪರೋಕ್ಷ ದೇವತೆಯಾಗಿದ್ದೆ. ನೀನು ಜೊತೆಗಿದ್ದೀಯ ಎಂಬ ಕಾರಣದಿಂದಲೇ ಯಾರನ್ನು ಬೇಕಾದರೂ, ಎಂಥ ಸಂದರ್ಭವನ್ನಾದರೂ ಎದುರಿಸುವ ಧೈರ್ಯ ಬಂತು. ಅಂಥದೊಂದು ಶಕ್ತಿ ನೀಡಿದ ನೀನು, ಪ್ರೀತಿ, ಸ್ನೇಹ, ಎಲ್ಲವನ್ನೂ ನನಗೆ, ಪರಮಾಪ್ತರು ಅಂದುಕೊಂಡು ನಾನು ಭಾವಿಸಿದ್ದ ಯಾರೆಲ್ಲ ದಿಢೀರನೆ ಬಿಟ್ಟು ಹೋದಾಗ ಅವರನ್ನು ಮರೆಯುವ ಶಕ್ತಿ ನನಗೇಕೆ ಕೊಡಲಿಲ್ಲ ನೀನು? ಸಾಧ್ಯವಾದರೆ ನಿನ್ನನ್ನೊಮ್ಮೆ ಕೇಳಿಬಿಡಬೇಕು, ನೀನು ಸಿಗುವೆಯಾ?
ಪಿ.ವಿ