Advertisement
ಚಿಕ್ಕಂದಿನಿಂದಲೂ ಅಮ್ಮ ಒಂದು ಮುಂಜಾನೆ ಏಳುವಳು ಎಂದು ಗೊತ್ತು. ಸೂರ್ಯ ಮೇಲೆ ಬರೋ ಮುನ್ನವೇ ಅಡುಗೆಕೋಣೆಯ ಮಬ್ಬು ಕತ್ತಲಲ್ಲಿ ಚಿಮಿಣಿ ದೀಪ ಬೆಳಗುತ್ತಿತ್ತು. ಪಾತ್ರೆಗಳ ಸದ್ದು ಕೇಳುತ್ತಿತ್ತು. ಬೆಳಗ್ಗೆಯೇ ಎದ್ದು ಹೊರಡುವ ಅಪ್ಪನಿಗೆ ಬಿಸಿಬಿಸಿ ದೋಸೆ ರೆಡಿಯಾಗುತ್ತಿತ್ತು. ಎಲ್ಲರೂ ಗಾಢ ನಿದ್ದೆಯಲ್ಲಿ ಮುಳುಗಿದ್ದರೆ ಅವಳು ಗಾಢ ಕೆಲಸದಲ್ಲಿ ಮುಳುಗಿರುತ್ತಿದ್ದಳು. ಅವಳು ಎದ್ದು ಮನೆಯ ಅರ್ಧ ಕೆಲಸ ಮುಗಿಸಿದ ಮೇಲೆಯೇ ಮನೆಯಲ್ಲಿರುವ ಉಳಿದ ಮಂದಿಗೆ ಬೆಳಗಾಗೋದು.
Related Articles
Advertisement
ಇನ್ನು ಸಂಬಂಧಿಕರು, ಸ್ನೇಹಿತರ ಮದುವೆಗೆ ಹೋದಾಗಲ್ಲೆಲ್ಲ ಬೆಳಗ್ಗೆ ಬೇಗ ಎದ್ದು ರೆಡಿಯಾಗುವ ಪಾಡು ಇದ್ದಿದ್ದೇ. ಪೂಜೆ, ಭಜನೆ ಕಾರ್ಯಕ್ರಮಗಳಲ್ಲೂ ಬೆಳಗ್ಗೆ ಬೇಗ ಏಳಬೇಕಾದ ಅನಿವಾರ್ಯತೆ. ಈ ಎಲ್ಲ ಸಂದರ್ಭಗಳು ಹಲವರ ಪಾಲಿಗೆ ತುಂಬಾ ಕಷ್ಟಕರ. ಆದರೆ, ಅಮ್ಮ, ಆಕೆ ಪ್ರತಿನಿತ್ಯ ಬೆಳಗ್ಗೆ ಬೇಗ ಏಳುತ್ತಾಳೆ. ವರ್ಷಪೂರ್ತಿ ಮುಂಜಾನೆಯೇ ಏಳುವ ಅವಳಿಗೆ ಆ ಬಗ್ಗೆ ಯಾವ ಬೇಸರವೂ ಇಲ್ಲ.
ಮಳೆಗಾಲದಲ್ಲಿ ಹೊರಗಡೆ ಜೋರು ಮಳೆ ಸುರಿಯುತ್ತಿದ್ದರೆ, ಮತ್ತಷ್ಟು ಹೊದಿಕೆಯನ್ನು ಎಳೆದು ಮಲಗುವ ಆಸೆ ನಮಗೆ. ಆದರೆ, ಯಾವಾಗ ಕರೆಂಟ್ ಹೋಗುತ್ತೋ ಅನ್ನೋ ಭಯದಲ್ಲಿ ಅವಳಾಗಲೇ ಎದ್ದು, ಗ್ರೈಂಡರ್‌ಗೆ ಅಕ್ಕಿ ಹಾಕಿ ರುಬ್ಬಲು ಶುರು ಮಾಡಿರುತ್ತಾಳೆ. ಚಳಿಗಾಲದಲ್ಲಿ , “ಅಯ್ಯೋ ಚಳಿ’ ಎಂದು ನಾವು ಮಲಗಿದರೆ, ಅವಳಾಗಲೇ ಚಳಿಯಲ್ಲೇ ಚುರುಕಾಗಿ ಓಡಾಡಿಕೊಂಡು ಅರ್ಧ ಕೆಲಸ ಮುಗಿಸಿರುತ್ತಾಳೆ. ಜಗವೆಲ್ಲ ನಿದ್ದೆಯೆಂದು ಮಲಗಿದರೆ ಅವಳೊಬ್ಬಳು ಎದ್ದಿರುತ್ತಾಳೆ.
ಅಪರೂಪಕ್ಕೊಮ್ಮೆ ಅಮ್ಮ ಹುಷಾರಿಲ್ಲವೆಂದರೆ ಮುಗಿಯಿತು, ಮನೆಯಲ್ಲೆಲ್ಲ ಅಲ್ಲೋಲಕಲ್ಲೋಲ. ಒಂದೆರಡು ದಿನ ಬೆಳಗ್ಗೆ ಬೇಗ ಎದ್ದು ತಿಂಡಿ ರೆಡಿ ಮಾಡಲು ಉಳಿದವರು ಒದ್ದಾಡುತ್ತಾರೆ. ಯಾರು ಬೇಕಾದರೂ ಮಾಡಿಕೊಳ್ಳಲಿ, ಅನ್ನೋ ನಿಲುವಿಗೂ ಬಂದು ಬಿಡುತ್ತಾರೆ. ಅಮ್ಮ ಅದ್ಹೇಗೆ ಯಾವುದೇ ಕಷ್ಟವಿಲ್ಲದೆ, ಯಾರನ್ನೂ ದೂರದೆ ಪ್ರತಿನಿತ್ಯ ಬೆಳಗ್ಗೆ ಅಲಾರಂ ಇಲ್ಲದೆಯೂ ಎದ್ದು ಬಿಡುತ್ತಾಳೆ ಅನ್ನೋದು ಇವತ್ತಿಗೂ ಅಚ್ಚರಿ.
ಅವಳು ವರ್ಷಪೂರ್ತಿ ಒಂದು ಮುಂಜಾನೆ ಏಳುತ್ತಾಳೆ. ಅವಳಿಗಾಗಿ ಅಲ್ಲ, ಬೆಳಗ್ಗೆ ಬೇಗ ಆಫೀಸಿಗೆ ಹೊರಡುವ ಗಂಡನಿಗಾಗಿ, ಸ್ಕೂಲಿಗೆ ರೆಡಿಯಾಗುವ ಮಕ್ಕಳಿಗಾಗಿ, ಅಪರೂಪಕ್ಕೆ ಮನೆಗೆ ಬರುವ ಅತಿಥಿಗಳನ್ನು ಆದರಿಸುವುದಕ್ಕಾಗಿ. ಆದರೆ, ಅದಕ್ಕಾಗಿ ಅವಳು ಯಾರ ಬಗ್ಗೆಯೂ ಬೇಸರಪಡುವುದಿಲ್ಲ. ತನ್ನ ನಿತ್ಯ ಕಾಯಕವೆಂಬಂತೆ ಮಾಡುತ್ತಲೇ ಇರುತ್ತಾಳೆ.
ಅದಕ್ಕಾಗಿಯೇ ಅಮ್ಮ ಎಂದರೆ ಅಕ್ಕರೆ, ಅಮ್ಮ ಎಂದರೆ ಆದರ, ಅಮ್ಮ ಅಂದರೆ ಅಗಾಧ, ಅಮ್ಮ ಎಂದರೆ ಆಸರೆ, ಅಮ್ಮ ಎಂದರೆ ಅನೂಹ್ಯ ಸಂಬಂಧ. ಅಮ್ಮ ಎಂದರೆ ಯಾವತ್ತೂ ಅರಿಯಲಾಗದ ಅದ್ಭುತ.
ವಿನುತಾ ಪೆರ್ಲ